ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್ ಸ್ವಚ್ಛತೆ: ಕಾರ್ಮಿಕರ ಬಳಕೆ

ಮಹಾನಗರ ಪಾಲಿಕೆಯಿಂದ ಸುರಕ್ಷಾ ಕ್ರಮಗಳ ಉಲ್ಲಂಘನೆ?
Last Updated 2 ಜುಲೈ 2013, 6:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮ್ಯಾನ್‌ಹೋಲ್ ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನು ಬಳಸಬಾರದು ಎಂದು ಸೂಚನೆ ಇದ್ದರೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಹೊಸೂರು-ಗೋಕುಲ ರಸ್ತೆ ಸೇರುವ ವೃತ್ತದಲ್ಲಿನ  ಮ್ಯಾನ್‌ಹೋಲ್ ಸ್ವಚ್ಛತಾ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದುದು ಸೋಮವಾರ ಕಂಡುಬಂದಿತು.

ಮ್ಯಾನ್‌ಹೋಲ್ ಒಳಗೆ ಇಳಿದಿದ್ದ ಕಾರ್ಮಿಕ ಸೋಮು ಲಮಾಣಿಗೆ ಮೇಲೆ ನಿಂತಿದ್ದ ಇತರೆ ಕಾರ್ಮಿಕರು ಮಾರ್ಗದರ್ಶನ ಮಾಡುತ್ತಾ ದುರಸ್ತಿ ಕಾರ್ಯದಲ್ಲಿ ನೆರವಾಗಿದ್ದರು.

`ಮೊದಲು ಕಾಮಗಾರಿಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಕೆಲಸ ಮಾಡಲು ನಿರಾಕರಿಸಿದ್ದರು. ಅದಕ್ಕೆ ನಾನು ಒಪ್ಪಿಕೊಂಡು ಕಳೆದ ಮೂರು ದಿನಗಳಿಂದ ಒಳಚರಂಡಿ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವೆ' ಎಂದು ಗುತ್ತಿಗೆದಾರ ಮಂಜುನಾಥ ಪಂಚಪುತ್ರರ ಪ್ರತಿಕ್ರಿಯಿಸಿದರು.
`ಮ್ಯಾನ್‌ಹೋಲ್‌ನಲ್ಲಿ ಕಸ ಕಟ್ಟಿಕೊಂಡು ಕೊಳಚೆ ನೀರು ಸರಾಗವಾಗಿ ಹರಿಯುತ್ತಿರಲಿಲ್ಲ. ಗುತ್ತಿಗೆದಾರರ ಸೂಚನೆ ಮೇರೆಗೆ ಒಳಗೆ ಇಳಿದು ಕಸ ತೆಗೆದು ನೀರು ಹರಿದು ಹೋಗುವಂತೆ ಮಾಡಿದ್ದೇನೆ. ಕಸ ಕಟ್ಟಿಕೊಳ್ಳಲು ಕಾರಣವಾಗಿದ್ದ ಗುಂಡಿಗಳನ್ನು ಮರಳು ಚೀಲ ಹಾಕಿ ಮುಚ್ಚಿದ್ದೇನೆ' ಎಂದು ಕೆಲಸ ಮುಗಿಸಿ ಮೇಲೆ ಬಂದ ಕಾರ್ಮಿಕ ಸೋಮು ಹೇಳಿದರು.

ಶಿಕ್ಷಾರ್ಹ ಅಪರಾಧ: `1993ರ ಸಫಾಯಿ ಕರ್ಮಾಚಾರಿ ಕಾಯ್ದೆ ಅನ್ವಯ ಮ್ಯಾನ್‌ಹೋಲ್‌ಗಳನ್ನು ಯಂತ್ರಗಳನ್ನು ಮಾತ್ರ ಬಳಸಿ ಸ್ವಚ್ಛಗೊಳಿಸಬೇಕು. ಈ ಕಾರ್ಯಕ್ಕೆ ಕಾರ್ಮಿಕರನ್ನು ಬಳಸುವುದು ಶಿಕ್ಷಾರ್ಹ ಅಪರಾಧ' ಎನ್ನುತ್ತಾರೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅಶೋಕ ಚಲವಾದಿ.

`ಎರಡು ತಿಂಗಳ ಹಿಂದಷ್ಟೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಿಕಾ ವರದಿ ಗಮನಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ನೊಟೀಸ್ ನೀಡಲಾಗಿತ್ತು. ಮ್ಯಾನ್‌ಹೋಲ್ ಸ್ವಚ್ಛತೆಗೆ ಕಾರ್ಮಿಕರನ್ನು ಬಳಸದಂತೆ ಕೇಂದ್ರ ಕಾರ್ಮಿಕ ಇಲಾಖೆ ಮಾಧ್ಯಮಗಳಲ್ಲಿ ಸಾಕಷ್ಟು ಬಾರಿ ಜಾಹೀರಾತು ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ಜೊತೆಗೆ ಸ್ಥಳೀಯ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದೆ' ಎನ್ನುವ ಚಲವಾದಿ, `ಅದು ಪುನರಾವರ್ತನೆಯಾಗುತ್ತಿರುವುದು ಖೇದಕರ. ಆ ಬಗ್ಗೆ ಪರಿಶೀಲನೆ ನಡೆಸಿ ಕೇಂದ್ರದ ಸಫಾಯಿ ಕರ್ಮಚಾರಿ ಆಯೋಗಕ್ಕೆ ವರದಿ ಕಳುಹಿಸುವುದಾಗಿ' ತಿಳಿಸಿದರು.

`ಮ್ಯಾನ್‌ಹೋಲ್‌ಗಳಲ್ಲಿ ಸ್ವಚ್ಛತೆ  ಕೈಗೊಳ್ಳಲು ಮಹಾನಗರ ಪಾಲಿಕೆಗೆ ಯಂತ್ರಗಳನ್ನು ಪೂರೈಸಲಾಗಿದೆ.  ಯಾವುದೇ ಕಾರ್ಮಿಕರು ಅದರೊಳಗೆ ಇಳಿದು ಕೆಲಸ ಮಾಡುವುದು ಸರಿಯಲ್ಲ.  ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ' ಎಂದು ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸಮೀರ್‌ಶುಕ್ಲಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT