ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂಸಿಯಂನಲ್ಲಿ ಮರ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಾನವನ ಜೀವನ ಕ್ರಮದಂತೆ ಮರಗಳ ಬೆಳವಣಿಗೆ ವಿಧಾನವೂ ಭಿನ್ನ, ವೈವಿಧ್ಯತೆಯಿಂದ ಕೂಡಿದೆ. ಬೇರೆ ಬೇರೆ ಪ್ರದೇಶಗಳಿಗೆ ಅನುಗುಣವಾಗಿ ಅವುಗಳ ರಚನೆ, ಆಕಾರಗಳಲ್ಲೂ ವ್ಯತ್ಯಾಸ ಕಾಣಬಹುದು.

ಅವುಗಳಿಗೂ ಅನೇಕ . ಇದರಿಂದ ಬೃಹದಾಕಾರದ ಮರಗಳೂ ಧರೆಗುರುಳುತ್ತವೆ. ಹೀಗೆ ದೇಶ ವಿಕೀಟ, ರೋಗ ಬಾಧೆ ಕಾಡುತ್ತದೆದೇಶಗಳ ಮರಗಳ ಕುರಿತು ಇನ್ನೂ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯಬೇಕೆಂದರೆ ಬೆಂಗಳೂರಿನ ಮಲ್ಲೇಶ್ವರದ `ಮರ ಮ್ಯೂಸಿಯಂ~ಗೆ ಒಮ್ಮೆ ಭೇಟಿ ನೀಡಬೇಕು.

ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ಇದನ್ನು ಆರಂಭಿಸಿದ್ದು, ದೇಶದಲ್ಲಿ ಮೊದಲ ಮರ ಮ್ಯೂಸಿಯಂ ಎಂಬ ಹೆಗ್ಗಳಿಕೆ ಪಡೆದಿದೆ. ಮರಮುಟ್ಟುಗಳ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುವುದು ಇದರ ಉದ್ದೇಶ. ಹೀಗಾಗಿ ಇಲ್ಲಿ ವಿವಿಧ ಪ್ರದೇಶಗಳ ಮರಗಳು, ಅವುಗಳ ಗುಣಮಟ್ಟ ಇತ್ಯಾದಿ ಮಾಹಿತಿಗಳ ಕಣಜವೇ ಇದೆ.

ಇಲ್ಲಿ 300ಕ್ಕೂ ಹೆಚ್ಚು ವಿಧದ ಮರಗಳಿವೆ. ಆಂಧ್ರ ಪ್ರದೇಶದ ತೇಗ, ರಾಜಸ್ತಾನದ ಅಕೇಶಿಯಾ ಚುಂದ್ರಾ, ಬಾಂಬ್ಯಾಕ್ಸ್ ಸೆಬಿಯಾ, ಬಿಜಾಸಾಲ್, ಆಫ್ರಿಕದ ಶ್ರೀಗಂಧ, ಅಂಡಮಾನ್ ಪಡೌಕ್ ಹೀಗೆ ಅನೇಕ ಕಡೆಗಳಿಂದ ತಂದಿರುವ ಅಪರೂಪದ ಗಮನ ಸೆಳೆಯುತ್ತವೆ.

ಮರಮುಟ್ಟುಗಳು ಕೇವಲ ಮರಗೆಲಸದವರ ಉತ್ಪನ್ನವಲ್ಲ, ಇದು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಮಾನವನ ಅವಿಭಾಜ್ಯ ಅಂಗ ಎಂಬುದನ್ನು ತಿಳಿಸುವ ಉದ್ದೇಶದಿಂದ ಈ ಮ್ಯೂಸಿಯಂ ಆರಂಭಿಸಿರುವುದಾಗಿ ಹೇಳುತ್ತಾರೆ ಮರ ವಿಜ್ಞಾನಿ ಪಂಕಜ್ ಅಗರ್‌ವಾಲ್.

780 ವರ್ಷಗಳಷ್ಟು ಹಳೆಯ ತೇಗದ ಮರದ ಬುಡವೊಂದು ಇದೀಗ ಮ್ಯೂಸಿಯಂನ ಪ್ರಮುಖ ಆಕರ್ಷಣೆ. ಈ ಮರದ ಕಾಂಡದಲ್ಲಿನ ಒಳ ಭಾಗದ ಪದರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೃತ್ತಾಕಾರದಲ್ಲಿ 780 ಗೆರೆಗಳು ಇರುವುದನ್ನು ಕಾಣಬಹುದು. ಆ ಮೂಲಕ ಆ ಮರದ ಆಯಸ್ಸನ್ನು ಗುರ್ತಿಸಬಹುದು.

ಡೆಹ್ರಾಡೂನ್‌ನಲ್ಲಿ ಇದೇ ರೀತಿಯ ಮರ ಮ್ಯೂಸಿಯಂ ಇದೆ. ಆದರೆ ಅಲ್ಲಿ ಮರಗಳ ಬಗ್ಗೆ ಪೂರ್ಣ ವಿವರಣೆ ತಿಳಿಸಿಲ್ಲ. ಬರೀ ಮಾದರಿಗಳನ್ನಷ್ಟೇ ಸಂಗ್ರಹಿಸಲಾಗಿದೆ ಎನ್ನುತ್ತಾರೆ ಅಗರ್‌ವಾಲ್.

ಮೂರು ವರ್ಷಗಳ ಶ್ರಮದ ಫಲವಾಗಿ, 13 ಲಕ್ಷರೂ ವೆಚ್ಚದಲ್ಲಿ ಈ ಮ್ಯೂಸಿಯಂ ನಿರ್ಮಾಣವಾಗಿದೆ. ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ನಿರ್ದೇಶಕ ಎಸ್.ಸಿ. ಜೋಶಿ ಅವರ ಮಾರ್ಗದರ್ಶನದಲ್ಲಿ ವಿಜ್ಞಾನಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಮ್ಯೂಸಿಯಂ ರೂಪುಗೊಳ್ಳಲು ಶ್ರಮಿಸಿದ್ದಾರೆ.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಪರ್ಯಾಯವಾಗಿ ಉತ್ಪನ್ನವೊಂದನ್ನು ಕಂಡು ಹಿಡಿದಿದ್ದಾರೆ. ಶೇ 50ರಷ್ಟು ಮರದ ತ್ಯಾಜ್ಯ ಹಾಗೂ ಶೇ 50ರಷ್ಟು ಪ್ಲಾಸ್ಟಿಕ್ ಬಳಸಿ ತಯಾರಿಸಿದ (ವುಡ್ ಪಾಲಿಮರ್ ಕಾಂಪೋಸಿಟ್ ) ಉತ್ಪನ್ನಗಳನ್ನು ಮಾದರಿಯಾಗಿ ಇಡಲಾಗಿದೆ.

ಅಕೇಶಿಯಾ ಮರದ ಸಣ್ಣ ಸಣ್ಣ ಹಲಗೆಗಳನ್ನು ಕೂಡಿಸಿ, ಅಂಟಿಸುವ ಮೂಲಕ ಬೃಹತ್ ಹಲಗೆಯನ್ನು ಸಿದ್ಧಪಡಿಸಿದ್ದಾರೆ. ಇದಕ್ಕೆ ಫಿಂಗರ್ ಜಾಯಿಂಟ್ ಎಂದು ಕರೆಯುತ್ತಾರೆ. ಇದನ್ನು ಒಳಾಂಗಣ ಕ್ರೀಡಾಂಗಣ, ಸಭಾಂಗಣಗಳಲ್ಲಿ ಗೋಡೆಗಳ ಹಾಗೆ ಉಪಯೋಗಿಸಬಹುದು.

ಅತೀ ತೂಕವುಳ್ಳ ಅಕೇಶಿಯಾ ಚಾಂದ್ರಾ ಮರದ ತುಂಡು, ಥರ್ಮಾಕೂಲ್‌ನಷ್ಟು ಹಗುರವೆನಿಸುವ ಬಾಲ್ಸಾ ಮರದ ತುಂಡುಗಳು ಸೇರಿದಂತೆ ವಿವಿಧ ಬಣ್ಣಗಳನ್ನು ಹೊಂದಿರುವ ಮರದ ತುಣುಕುಗಳು ಗಮನ ಸೆಳೆಯುತ್ತವೆ.

ಅರಣ್ಯದಲ್ಲಿ ವಿದ್ಯುತ್ ಸಂಪರ್ಕ ಬಳಕೆ ಹೇಗಿರಬೇಕು ಎಂಬುದನ್ನು ಅನಾವರಣಗೊಳಿಸುವ ಪ್ರಾತ್ಯಕ್ಷಿಕೆಯನ್ನು ಮ್ಯೂಸಿಯಂನಲ್ಲಿ ಕಾಣಬಹುದು. ಈ ಮೂಲಕ ಸಾರ್ವಜನಿಕರಿಗೆ ಅರಣ್ಯದ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿದೆ.

ಅಂಡಮಾನ್ ಪಡೌಕ್, ಬರ್ಮಾ ಟೀಕ್, ಆಫ್ರಿಕನ್ ಟೀಕ್, ಗಂಧದ ಮರದ ಮುಟ್ಟುಗಳ ಮಾದರಿಗಳು ಹಾಗೂ ಬೇರೆ ಬೇರೆ ಪ್ರದೇಶಗಳಲ್ಲಿ ಬೆಳೆದ ತೇಗದ (ಸಾಗವಾನಿ) ತುಂಡುಗಳ ಮಾದರಿಗಳಿವೆ.

ಅವುಗಳಲ್ಲಿ ಹೆಚ್ಚು ಬೆಲೆ ಬಾಳುವ ಹಾಗೂ ಕಡಿಮೆ ಬೆಲೆಯ ಮರಗಳನ್ನು ಗುರ್ತಿಸಲು ಅವುಗಳ ನಮೂನೆಗಳನ್ನು ನೋಡಬಹುದು. ಮರಮುಟ್ಟು ವ್ಯಾಪಾರಿಗಳಿಂದ ಸುಲಭವಾಗಿ ಮೋಸಹೋಗುವ ಸಾರ್ವಜನಿಕರಿಗೆ ಅವುಗಳ ಬಗ್ಗೆ ತಿಳಿವಳಿಕೆ ಮೂಡಿಸುವುದು ಇದರ ಉದ್ದೇಶವಾಗಿದೆ.

ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ತಿರುಪತಿ ದೇವಸ್ಥಾನದ ಪ್ರದಕ್ಷಿಣಾ ಗೋಪುರಕ್ಕೆ ಉಪಯೋಗಿಸಿದ ಹೊನ್ನೆಮರದ ತುಂಡನ್ನು ಮ್ಯೂಸಿಯಂನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಜೊತೆಗೆ ಸಂಗೀತ ಪರಿಕರಗಳಿಗೆ ಪರಂಪರಾಗತವಾಗಿ ಉಪಯೋಗಿಸಿಕೊಂಡು ಬರುತ್ತಿರುವ ಮರಗಳು, ವಿಶ್ವದಲ್ಲೇ ಅತೀ ಹೆಚ್ಚು ಎತ್ತರಕ್ಕೆ ಬೆಳೆಯುವ ಮರಗಳ ಸಚಿತ್ರ ವಿವರ ಇಲ್ಲಿ ಲಭ್ಯವಿದೆ.

ಇಲ್ಲಿನ ಮತ್ತೊಂದು ಆಕರ್ಷಣೆ ಎಂದರೆ 50 ವಿಧದ ಮರಗಳ ಬೀಜಗಳ ಸಂಗ್ರಹವನ್ನು ಇಲ್ಲಿ ನೋಡಬಹುದು. ನೀಲಗಿರಿ, ಬಿದಿರು ಹಾಗೂ ಎಣ್ಣೆಕಾಳಿಗಾಗಿ ಬಳಕೆಯಾಗುವ ಹೊಂಗೆ, ಬೇವು, ಜತ್ರೋಪಾ ಮತ್ತು ಔಷಧೀಯ ಗುಣವುಳ್ಳ ಮರಗಳ ಬೀಜಗಳ ಸಂಗ್ರಹವನ್ನು ಕಾಣಬಹುದು.

ಕೀಟಗಳ ಮಾಹಿತಿ: ಈ ಸಂಗ್ರಹಾಲಯದಲ್ಲಿ ಮರಗಳ ಕುರಿತ ಮಾಹಿತಿಯಷ್ಟೇ ಅಲ್ಲದೇ ಅವುಗಳನ್ನು ಅವಲಂಬಿಸಿರುವ ಸಾವಿರಾರು ಕೀಟಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಮರಗಳನ್ನು ಕೊರೆಯುವ ಮೂಲಕ ಬದುಕು ಕಟ್ಟಿಕೊಳ್ಳುವ ಕೀಟಗಳು ಮತ್ತು ಮರಗಳಲ್ಲಿ ಉತ್ಪತಿಯಾಗುವ ವಿವಿಧ ರಾಸಾಯನಿಕ ಅಂಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮ್ಯೂಸಿಯಂ ತೆರೆದಿರುತ್ತದೆ. ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT