ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷ ಸಾಹಸಿ ವಿದ್ಯಾ ಕೋಳ್ಯೂರು

ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪ್ರಶಸ್ತಿ ಪುರಸ್ಕೃತೆ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಈ ಪ್ರತಿಭಾವಂತೆ 2005ರಲ್ಲಿ ಕಟ್ಟಿದ `ಯಕ್ಷ ಮಂಜೂಷಾ' ತಂಡ ಯಕ್ಷಗಾನವನ್ನು ದೇಶವಿದೇಶಗಳಲ್ಲಿ ಪರಿಚಯಿಸಿದೆ. ದೇಶದ 19 ರಾಜ್ಯಗಳಲ್ಲಿ ಹಾಗೂ ಅಮೆರಿಕದ ಪ್ರಮುಖ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದೆ.

ಹಾಡುಗಾರಿಕೆ, ವೇಷಭೂಷಣ, ಸಂಭಾಷಣೆ, ನೃತ್ಯಾಭಿನಯ, ಭಾವಾಭಿನಯ... ಹೀಗೆ ರಂಗಕಲೆಯ ಸರ್ವಾಂಗಗಳನ್ನು ಒಳಗೊಂಡು ಪರಿಪೂರ್ಣ ಕಲೆ ಎಂದೇ ಖ್ಯಾತವಾದ ಯಕ್ಷಗಾನ ಕೇವಲ ಕರಾವಳಿಯ ಅಭಿಮಾನಿಗಳ ಹೃದಯದಲ್ಲಿ ಬಂಧಿಯಾಗಿಲ್ಲ; ಅದರ ಕಂಪು ಎಂದೋ ಸಾಗರದ ಸೀಮೆಯನ್ನು ದಾಟಿದೆ. ಕೋಟ ಶಿವರಾಮ ಕಾರಂತರ ಬಳಿಕ ಈ ಕಲೆಯನ್ನು ದೇಶವಿದೇಶಗಳಲ್ಲಿ ಪರಿಚಯಿಸುವ ಸಾಹಸಕ್ಕೆ ಮುಂದಾದವರಲ್ಲಿ ವಿದ್ಯಾ ಕೋಳ್ಯೂರು ಅವರು ಪ್ರಮುಖರು. ಗಂಡುಕಲೆ ಎಂದೇ ಕರೆಸಿಕೊಂಡ ಯಕ್ಷಗಾನಕ್ಕೆ ತೊಡಿಸಿದ್ದ ಪ್ರಾದೇಶಿಕತೆಯ ಸಂಕೋಲೆಯನ್ನು ಮುರಿಯುವಲ್ಲಿ ಅವರು ಪುರುಷರನ್ನೂ ಮೀರಿಸುವಂತೆ ದುಡಿದಿದ್ದಾರೆ. 


ಟೀಕೆ ಟಿಪ್ಪಣಿಗಳನ್ನು ಮೆಟ್ಟಿನಿಂತು, ಸಮರ್ಥ ಕಲಾವಿದರ ತಂಡವನ್ನು ಕಟ್ಟಿಕೊಂಡು, ಸ್ವತಃ ಸಾರಥಿಯಾಗಿ ಯಕ್ಷಗಾನವನ್ನು ದೇಶವಿದೇಶಗಳಿಗೆ ಕೊಂಡೊಯ್ದ ದಿಟ್ಟ ಮಹಿಳೆ ವಿದ್ಯಾ ಕೋಳ್ಯೂರು. ಯಕ್ಷಗಾನದ ಪಾರಂಪರಿಕ ಶ್ರೀಮಂತಿಕೆಗೆ ಭಂಗ ಉಂಟಾಗದಂತೆ ಎಚ್ಚರವಹಿಸಿ, ಹೋದ ಕಡೆಗಳಲ್ಲಿ ಕಲಾ ರಸಿಕರಿಂದ ಕರತಾಡನದ ಸ್ವಾಗತವನ್ನು ಪಡೆಯುತ್ತಿರುವ ಸಾಹಸಿ ಅವರು. ಈ ಕಲಾಸೇವೆಯನ್ನು ಪರಿಗಣಿಸಿದ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2011ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ವಿದ್ಯಾ ಕೋಳ್ಯೂರು ಅವರನ್ನು ಆಯ್ಕೆಮಾಡಿದೆ.

ತೆಂಕುತಿಟ್ಟಿನ ಖ್ಯಾತ ಸ್ತ್ರೀವೇಷಧಾರಿ ರಾಮಚಂದ್ರ ರಾವ್- ಯಶೋದಾ ಕೋಳ್ಯೂರು ದಂಪತಿಯ ಏಕೈಕ ಮಗಳಾಗಿರುವ ವಿದ್ಯಾ, 7ನೇ ವರ್ಷಕ್ಕೆ `ಲವ-ಕುಶ ಕಾಳಗ' ಪ್ರಸಂಗದ ಲವನಾಗಿ ರಂಗಸ್ಥಳ ಏರಿದರು. ಆ ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಯಕ್ಷಗಾನದ ಪುಂಡುವೇಷಗಳಲ್ಲಿ ಪುರುಷರಷ್ಟೇ ಸಮರ್ಥವಾಗಿ ಅಬ್ಬರಿಸಿದ ಅವರು, ಸ್ತ್ರೀಪಾತ್ರಗಳಿಗೆ ಮಹಿಳಾ ಸಂವೇದನೆಯನ್ನೂ ಬೆರೆಸಿ ಹೊಸ ಆಯಾಮ ನೀಡಿದ್ದಾರೆ. ಸ್ತ್ರೀ ವೇಷಧಾರಿ ಪುರುಷರಿಗೆ ನಿಲುಕದ ಭಾವಲೋಕವನ್ನು ಕಟ್ಟಿಕೊಟ್ಟಿದಾರೆ.

ಯಕ್ಷ ಪರ್ಯಟನೆ
  ಶಂಕರನಾರಾಯಣ ಟಿ. ಅವರಿಂದ ಯಕ್ಷ ವಿದ್ಯೆ ಅಭ್ಯಾಸ ಮಾಡಿದ ವಿದ್ಯಾ, ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿರುವಾಗಲೇ ಕಲಾವಿದೆಯರ ಹವ್ಯಾಸಿ ತಂಡ ಕಟ್ಟಿಕೊಂಡು `ಯಕ್ಷ ಪರ್ಯಟನೆ'ಗೆ ಹೊರಟರು. ಈ ತಂಡ ಅಲ್ಪಕಾಲದಲ್ಲೇ ಮುಂಬೈ, ದೆಹಲಿ, ಪುಣೆ ಮೊದಲಾದ ಕಡೆ ಪ್ರದರ್ಶನ ನೀಡುವಷ್ಟು ಎತ್ತರಕ್ಕೆ ಬೆಳೆಯಿತು. ಒಂಬತ್ತು ವರ್ಷ ಈ ತಂಡವನ್ನು ಮುನ್ನಡೆಸಿದರು.


ಖ್ಯಾತ ವಯಲಿನ್ ವಾದಕ ಮೈಸೂರಿನ ಎಚ್.ಎನ್.ಭಾಸ್ಕರ್ ಅವರನ್ನು ಮದುವೆಯಾಗಿದ್ದರಿಂದ ಕಲಾಸೇವೆಗೆ ಮತ್ತಷ್ಟು ಉತ್ತೇಜನ ಸಿಕ್ಕಿತು ಎನ್ನುತ್ತಾರೆ ವಿದ್ಯಾ. `ಯಕ್ಷಗಾನದ ಖ್ಯಾತ ಸ್ತ್ರೀವೇಷಧಾರಿಯ ಮಗಳಾಗಿದ್ದರೂ, ಯಕ್ಷಗಾನ ಕಲಿಯುವುದಕ್ಕೆ ತಂದೆಗಿಂತ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದ್ದು, ಗಂಡನ ಮನೆಯಲ್ಲಿ. ಗಂಡ, ಅತ್ತೆ ರಾಜಲಕ್ಷಿ ಹಾಗೂ ಮಾವ ಎಚ್.ಕೆ.ನರಸಿಂಹಮೂರ್ತಿ ಅವರು ಪುರುಷ ಕಲಾವಿದರ ತಂಡ ಕಟ್ಟಲು ಹುರಿದುಂಬಿಸಿದ್ದರು' ಎಂದು ಅವರು ಸ್ಮರಿಸಿದರು.

ವಿದ್ಯಾ ಅವರು 2005ರಲ್ಲಿ ಕಟ್ಟಿದ `ಯಕ್ಷ ಮಂಜೂಷಾ' ತಂಡ ಯಕ್ಷಗಾನವನ್ನು ದೇಶವಿದೇಶಗಳಲ್ಲಿ ಪರಿಚಯಿಸಿದೆ. ದೇಶದ 19 ರಾಜ್ಯಗಳಲ್ಲಿ ಹಾಗೂ ಅಮೆರಿಕದ ಪ್ರಮುಖ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿದೆ. ವರ್ಷಂಪ್ರತಿ ಹೊರರಾಜ್ಯಗಳಲ್ಲಿ ನೀಡುವ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಿದೆ. ದೇಶದ ಪ್ರಮುಖ ಬ್ಯಾಂಕ್‌ಗಳು `ಯಕ್ಷಾ ಮಂಜೂಷಾ'ದ ಕಲಾಸೇವೆಗೆ ಬೆನ್ನುಲುಬಾಗಿ ನಿಂತಿವೆ.

`ದೆಹಲಿಯ ಕರ್ನಾಟಕ ಸಂಘದ ಕಾಯದರ್ಶಿಯಾಗಿದ್ದ ಸರವು ಕೃಷ್ಣ ಭಟ್ ಅವರ ಕೋರಿಕೆ ಮೇರೆಗೆ  2005ರಲ್ಲಿ ಸರ್ಪಂಗಳ ಈಶ್ವರ ಭಟ್ ಅವರು ಭಾಷಾಂತರಿಸಿದ `ಪಂಚವಟಿ' ಪ್ರಸಂಗವನ್ನು ಕೇವಲ 42 ದಿನಗಳಲ್ಲಿ ಹಿಂದಿಯಲ್ಲಿ ಸಿದ್ಧಪಡಿಸಿದೆವು. ಪುತ್ತಿಗೆ ರಘುರಾಮ ಹೊಳ್ಳರು ಹಿಂದಿಯಲ್ಲೂ ಭಾಗವತಿಕೆಯನ್ನು ಸೊಗಸಾಗಿ ನಿರ್ವಹಿಸಿದರು. ಪ್ರಥಮ ಪ್ರಯೋಗ ಯಶಸ್ವಿಯಾಯಿತು' ಎಂದು ಮೆಲುಕು ಹಾಕುತ್ತಾರೆ ವಿದ್ಯಾ. 

`ಪಂಚವಟಿ, ಮಹಾಮಹಿಷ ಮರ್ಧಿನಿ, ಭಸ್ಮಾಸುರ ಮೋಹಿನಿ, ಶಾಂಭವಿ ವಿಜಯ, ಭೀಷ್ಮ ಪ್ರತಿಗ್ಯಾ ಎಂಬ ಐದು ಪ್ರಸಂಗಗಳನ್ನು ಹಿಂದಿ ಭಾಷೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಈ ಪ್ರಸಂಗಗಳು 300ಕ್ಕೂ ಅಧಿಕ ಪ್ರದರ್ಶನಗೊಂಡಿವೆ. ತಂಡದ ಕಲಾವಿದರು ಹೆಚ್ಚು ಕಲಿತವರಲ್ಲ. ಸಂಭಾಷಣೆಯನ್ನು ಕನ್ನಡದಲ್ಲಿ ಬರೆದು ಕಲಿತು ಪ್ರದರ್ಶನ ನೀಡುತ್ತಾರೆ. ಪರಭಾಷೆಯ ಸಂಭಾಷಣೆಯಲ್ಲಿ ಶೇ 80ರಷ್ಟು ಪರಿಪೂರ್ಣತೆ ಸಾಧಿಸಿದ್ದೇವೆ. ಭಾಷೆಯ ತೊಡಕೂ ಸ್ವಲ್ಪ ಮಟ್ಟಿಗೆ ಇದೆ' ಎನ್ನುತ್ತಾರೆ ವಿದ್ಯಾ.

`ಯಕ್ಷ ಮಂಜೂಷಾ' ತಂಡ 2012ರಲ್ಲಿ ವಿಶ್ವಪರ್ಯಟನೆ ಆರಂಭಿಸಿತು. ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರ್ ಆಂಡ್ ರಿಸರ್ಚ್ (ಐಸಿಸಿಆರ್) ಸಂಸ್ಥೆಯ ಸಹಯೋಗದಿಂದ 70 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡ ತಂಡ ಅಲ್ಲಿನ 9 ರಾಜ್ಯಗಳಲ್ಲಿ ಪ್ರದರ್ಶನ ನೀಡಿದೆ. ಚಿನ್ಮಯಾನಂದ ಮಿಷನ್‌ನ ಆಹ್ವಾನದ ಮೇರೆಗೆ.


ಈ ವರ್ಷ ಜುಲೈ 21ರಿಂದ ಮತ್ತೆ ಅಮೆರಿಕ ಪ್ರವಾಸ ಕೈಗೊಂಡಿದೆ. ಈ ಬಾರಿ ಪ್ರದರ್ಶನ ನೀಡುವುದರ ಜತೆ ಅಲ್ಲಿನ 46 ಮಂದಿ ಅಮೆರಿಕದ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸುವ ಪ್ರಯತ್ನವೂ ನಡೆದಿದೆ.

ಗೃಹಿಣಿಯ ಒತ್ತಡಗಳ ನಡುವೆಯೂ ವಿದ್ಯಾ ಅವರು ಈ ಸಾಧನೆ ಮಾಡಿದ್ದಾರೆ ಎನ್ನುವುದು ಮುಖ್ಯ. ಅವರಿಗೆ 11 ವರ್ಷದ ಪೃಥ್ವಿ ಎಂಬ ಮಗಳೂ ಇದ್ದಾಳೆ. ಕಲಾಸೇವೆಯ ಜತೆಗೆ ವಿದ್ಯಾ ಅವರು ದೆಹಲಿಯಲ್ಲಿ `ವಿ.ಕೆ ಕ್ರಿಯೇಷನ್ಸ್' ಎಂಬ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ.
ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರದಾನ ಸಮಾರಂಭ ಶನಿವಾರ ದೆಹಲಿಯಲ್ಲಿ ನಡೆದಿದೆ. `ಯಕ್ಷ ಮಂಜೂಷಾ' ತಂಡವು ಇದೇ 9ರಂದು ಭಾರತಕ್ಕೆ ಮರಳುವುದರಿಂದ ಪ್ರಶಸ್ತಿಯನ್ನು ಸ್ವೀಕರಿಸುವುದು ವಿದ್ಯಾ ಅವರಿಗೆ ಸಾಧ್ಯವಾಗಿಲ್ಲ.

ಪತಿಯ ಜತೆಗೆ ಪ್ರಶಸ್ತಿ
ಖ್ಯಾತ ಕಲಾವಿದರಾದ ಪತಿ ಎಚ್.ಎನ್.ಭಾಸ್ಕರ್ ಅವರೂ ಕರ್ನಾಟಕ ಸಂಗೀತದ ವಯಲಿನ್ ಪ್ರಕಾರದಲ್ಲಿ 2011ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿರುವುದು ವಿದ್ಯಾ ಅವರ ಖುಷಿಯನ್ನು ಇಮ್ಮಡಿಗೊಳಿಸಿದೆ. ಕಲಾಸೇವೆಗೆ ಸರ್ಕಾರದಿಂದ ಕಿಂಚಿತ್ತೂ ಸಹಕಾರ ದೊರೆಯದ ಬಗ್ಗೆ ವಿದ್ಯಾ ಅವರಿಗೆ ಬೇಸರವಿದೆ. `ಐಸಿಸಿಆರ್‌ನಿಂದ ಅಮೆರಿಕ ಪ್ರವಾಸಕ್ಕೆ ಆರ್ಥಿಕ ನೆರವು ಸಿಕ್ಕಿದ್ದು ಬಿಟ್ಟರೆ, ಸರ್ಕಾರದಿಂದ ಚಿಕ್ಕಾಸಿನ ನೆರವು ಸಿಕ್ಕಿಲ್ಲ. ಯಕ್ಷಗಾನವನ್ನು ದೇಶವಿದೇಶದಲ್ಲಿ ಪ್ರಚುರಪಡಿಸಿದ ತೃಪ್ತಿ ಇದೆ. ಇನ್ನಷ್ಟು ಜನರಿಗೆ ಈ ಕಲೆಯನ್ನು ತಲುಪಿಸುವ ಹೆಬ್ಬಯಕೆ ನನ್ನದು' ಎನ್ನುತ್ತಾರೆ ವಿದ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT