ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ನಮ್ಮ ಆಸ್ತಿ: ಕುಂಬ್ಳೆ

Last Updated 21 ಫೆಬ್ರುವರಿ 2011, 6:55 IST
ಅಕ್ಷರ ಗಾತ್ರ

ಶಿವಮೊಗ್ಗ: ಯಕ್ಷಗಾನ ನಮ್ಮ ಆಸ್ತಿ. ಅದನ್ನು ರಕ್ಷಿಸಿಡುವ ಬದಲು ಹಾಳುಮಾಡುತ್ತಿದ್ದೇವೆ ಎಂದು ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್ ವಿಷಾದಿಸಿದರು. ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಸಾಯಿಕಲಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಹಿಳಾ ಯಕ್ಷಗಾನ ಕಾರ್ಯಾಗಾರ ‘ಯಕ್ಷ ಸಂಪದ’ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಸಂಸ್ಕೃತಿ ಬಿಂಬಿಸುವ ಯಕ್ಷಗಾನದ ಉತ್ತರಾಧಿಕಾರಿಗಳು ನಾವು. ಆದರೆ, ಅದು ನಮ್ಮ ಕೈತಪ್ಪಿ ಹೋಗುತ್ತಿದೆ. ಕಾಸರಗೋಡಿನಲ್ಲಿ ಮಲಯಾಳಿಗಳು ಯಕ್ಷಗಾನದ ಪರೀಕ್ಷೆ ಬರೆದು, ಮಲಯಾಳದಲ್ಲಿ ಭಾಷಾಂತರಿಸಿ, ವಿವಿಧೆಡೆ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ಆ ಭಾಗದಲ್ಲಿ ಮಲಯಾಳಿಯೊಂದಿಗೆ ಸ್ಪರ್ಧಿಸಲಾಗದೇ, ಕನ್ನಡಿಗರು ಭೂಮಿ ಮಾರಾಟ ಮಾಡಿ, ವಲಸೆ ಹೋಗುತ್ತಿದ್ದಾರೆ ಆತಂಕ ವ್ಯಕ್ತಪಡಿಸಿದರು.

ಪ್ರದರ್ಶನದ ಶೈಲಿ ಬದಲಾಗಲಿ: ಯಕ್ಷಗಾನ ಚಿಂತಕ ಜಿ.ಎಸ್. ಭಟ್ ಮಾತನಾಡಿ, ಯಕ್ಷಗಾನ ಈಚೆಗೆ ರಾಷ್ಟ್ರೀಯ ಲಕ್ಷಣಗಳನ್ನು ರೂಢಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ಯಕ್ಷಗಾನವೂ ಅದೇ ಅಂಗೋಪಾಂಗಗಳ ಅಸಮತೋಲನ ಪ್ರದರ್ಶಿಸಿ, ವಿಜೃಂಭಿಸುವುದರಲ್ಲಿ ಅರ್ಥವಿಲ್ಲ. ವಿವಿಧ ಬಗೆಯ ಶೋಕ ಭಾವದ, ನಾಜೂಕು ನೃತ್ಯಗಳನ್ನೂ ಒಗ್ಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಯಕ್ಷಗಾನ ಪ್ರದರ್ಶನದ ಶೈಲಿಯಲ್ಲಿ ಬದಲಾವಣೆ ಆಗಬೇಕಿದೆ. ಅಂದಾಗ ಅದು ಭಿನ್ನವಾಗಿ ಕಾಣಬಹುದು ಎಂದು ಅಭಿಪ್ರಾಯಪಟ್ಟ ಅವರು, ಯಕ್ಷಗಾನ ಎನ್ನುವುದು ಸಾವಯವ ಸಮಗ್ರೀಕೃತ ಶಿಲ್ಪದಂತೆ ಎಲ್ಲವನ್ನೂ ಒಳಗೊಂಡಿರುವಂತಹದ್ದು. ಕೇವಲ ಮನರಂಜನೆಗೆ ಅಲ್ಲ; ಜೀವನ ವ್ಯಾಖ್ಯಾನವನ್ನು ಹೇಳುತ್ತದೆ ಎಂದು ವಿಶ್ಲೇಷಿಸಿದರು.

ಭಾಗವತ ಹೊಸ್ತೋಟ ಮಂಜುನಾಥ, ಉಡುಪಿಯ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯಯು. ಭಾಸ್ಕರ್ ಕಾಮತ್, ಮಲೆನಾಡು ಕನ್ನಡ ಸಂಘದ ಟ್ರಸ್ಟಿ ಎಸ್.ಆರ್. ಕವಿತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಘುರಾಮ್ ದೇವಾಡಿಗ ಉಪಸ್ಥಿತರಿದ್ದರು. ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಅಧ್ಯಕ್ಷತೆ ವಹಿಸಿದ್ದರು. ಸಾಯಿಕಲಾ ಪ್ರತಿಷ್ಠಾನದ ಸಂಚಾಲಕ ಯು.ಎಂ. ಐತಾಳ್ ಸ್ವಾಗತಿಸಿದರು. 

ಪ್ರತ್ಯೇಕತೆ ಸಲ್ಲದು: ನಂತರ, ನಡೆದ ಗೋಷ್ಠಿಯಲ್ಲಿ ಯಕ್ಷಗಾನ ಕಲಾವಿದೆ ಡಾ.ಪ್ರಜ್ಞಾ ಮತ್ತಿಹಳ್ಳಿ ‘ಮಹಿಳಾ ಯಕ್ಷಗಾನ-ಅವಲೋಕನ ಮತ್ತು ಮುನ್ನೋಟ’ ಕುರಿತು ಮಾತನಾಡಿ, ಮಹಿಳಾ ಮತ್ತು ಪುರುಷ ಯಕ್ಷಗಾನ ಎಂದು ಪ್ರತ್ಯೇಕ ಮಾಡುವುದು ಬೇಡ. ಅಲ್ಲದೇ, ಮಹಿಳೆಯರಿಗಾಗಿ ಪಾಲು ಕೊಡುವುದೂ ಬೇಡ. ಒಟ್ಟಾಗಿ ಕಲೆ ಬೆಳೆದು ಬರಲಿ ಸಾಕು ಎಂದು ಸೂಚ್ಯವಾಗಿ ಹೇಳಿದರು.

ವಿಭ್ರಾಂತ ಸ್ಥಿತಿಯಲ್ಲಿ ನಾವಿದ್ದೇವೆ. ವೇದಿಕೆಯಲ್ಲಿ ಸಾಕಷ್ಟು ಮಾತನಾಡುತ್ತೇವೆ. ಆದರೆ, ಅದಕ್ಕೆ ಬದ್ಧರಾಗುವುದಿಲ್ಲ. ಇದರಿಂದ ನಿರ್ಣಯಗಳು ಹಾಗೇ ಉಳಿದುಕೊಳ್ಳುತ್ತವೆ ಎಂದರು.ಗೌರಿ ಶ್ರೀನಿವಾಸ, ಶಾರದಾ ಶಂಭು ಹೆಗಡೆ, ಸೌಮ್ಯಾ ಗೊಟಕಾರ್, ಕಿರಣ್ ಪೈ, ವರದಾ ಮಧುಸೂದನ್ ಉಪಸ್ಥಿತರಿದ್ದರು.ನಂತರ, ಬೆಂಗಳೂರಿನ ಯಕ್ಷಕಲಾ ಅಕಾಡೆಮಿಯ ಮಹಿಳಾ ಕಲಾವಿದರಿಂದ ‘ವೀರ ವೃಷಸೇನ’ ಯಕ್ಷಗಾನ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT