ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಸೃಷ್ಟಿ ರಾಷ್ಟ್ರಪತಿ ಭವನ

Last Updated 7 ಜುಲೈ 2012, 19:30 IST
ಅಕ್ಷರ ಗಾತ್ರ

ಕೆಂಪು ಮರಳುಗಲ್ಲಿನ ಈ ಸೌಧದ ಹೊರಗಿನ ರೂಪ ಥಟ್ಟನೆ ಮನಸೆಳೆಯುವಂತಹದ್ದಲ್ಲ. ಒಳಗೆ ಅಡಿಯಿಟ್ಟ ನಂತರ ಒಂದೊಂದಾಗಿಯೇ ತೆರೆದುಕೊಳ್ಳುತ್ತಾ ಹೋಗುವ ಅಂತರಂಗದ ಸೌಂದರ್ಯ ಮರಳು ಮಾಡದೆ ಬಿಡುವಂತಹದ್ದೂ ಅಲ್ಲ.
 
ವಿಶಾಲ ಹಜಾರಗಳು, ಎತ್ತರದ ಬೋದಿಗೆಗಳು, ಅಮೃತಶಿಲೆಯ ನೆಲ, ಅದನ್ನಪ್ಪಿಕೊಂಡ ಬೆಲೆಬಾಳುವ ಪರ್ಷಿಯನ್-ಕಾಶ್ಮೀರಿ ನೆಲಗಂಬಳಿ. ಅಪರೂಪದ ತೈಲಚಿತ್ರಗಳು, ದೀಪದ ಗೊಂಚಲು, ಫ್ರೆಂಚ್ ಕಿಟಕಿಗಳು, ಬರ್ಮಾ ಟೀಕ್‌ನ ಪೀಠೋಪಕರಣಗಳು, ಹಿಂದೂ-

ಮೊಗಲ್-ಜೈನ್ ವಾಸ್ತುಶಿಲ್ಪಗಳ ಪ್ರಭಾವದ ಕಟಾಂಜನಗಳು, ಛಜ್ಜಾಗಳು ಛತ್ರಿಗಳು, ಜಾಲರಿಗಳು, ಚೌಕ ಶಿಖರಗಳು, ಕಲ್ಲುಗಂಟೆಗಳು, 340 ಕೋಣೆಗಳು, ಸುಮಾರು 20 ಸಾವಿರ ಚದರ ಅಡಿ ವಿಸ್ತೀರ್ಣ... ಬ್ರಿಟನ್ ಕಂಡ ಅತ್ಯಂತ ಪ್ರತಿಭಾವಂತ ವಾಸ್ತುಶಿಲ್ಪಿ ಎಂಬ ಹೆಗ್ಗಳಿಕೆಯ ಎಡ್ವಿನ್ ಲೂಟಿನ್ಸ್ ಎಂಬ `ಮಯ~ ನಿರ್ಮಿಸಿದ ಮಾಯಾಲೋಕ ಇದು.
 
ಬ್ರಿಟಿಷರ ಕಾಲದ ವೈಸರಾಯ್ ಹೌಸ್, ಈಗ `ರಾಷ್ಟ್ರಪತಿ ಭವನ~.
`ಇಂಗ್ಲೆಂಡಿನ ದೊರೆಗಳಿಗಿಂತ ಭಾರತದ ಬ್ರಿಟಿಷ್ ಆಡಳಿತಾಧಿಕಾರಿಗಳು ಹೆಚ್ಚು ಸಾಮ್ರಾಜ್ಯಶಾಹಿಗಳು~ ಎಂದು ಲೂಟಿನ್ಸ್ ಪತ್ನಿ ಎಮಿಲಾ  `ವೈಸ್‌ರಾಯ್ ಹೌಸ್~ ನೋಡಿ ಉದ್ಗರಿಸಿದ್ದರಂತೆ.

5ನೇ ಜಾರ್ಜ್ ಕಾಲದಲ್ಲಿ ಬ್ರಿಟಿಷ್ ರಾಜಧಾನಿಯನ್ನು ಕೊಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲು ನಿರ್ಧರಿಸಿದ ನಂತರ ನಿರ್ಮಾಣಗೊಂಡ `ನ್ಯೂ ಡೆಲ್ಲಿ~ ಎಂಬ ಹೊಸ ನಗರದಲ್ಲಿ ವೈಸ್‌ರಾಯ್‌ಗಳು ವಾಸಕ್ಕೆ ಕಟ್ಟಿಸಿದ ಐಷಾರಾಮಿ ನಿವಾಸ ಇದು.

ಜಾರ್ಜ್ ಆದೇಶದ ಮೇರೆಗೆ ಆಗಿನ ವೈಸ್‌ರಾಯ್ ಲಾರ್ಡ್ ಹರ್ಡಿಂಗ್ಸ್ ಅವರು ವಾಸ್ತು ಶಿಲ್ಪಿ ಲೂಟಿನ್ಸ್‌ಗೆ ಒಪ್ಪಿಸಿದ ಕೆಲಸವೇ ಹಾಗಿತ್ತು. `ವಿಶ್ವದ ಯಾವುದೇ ಅರಮನೆ~ಯನ್ನು ನಾಚಿಸುವಂತಿರಬೇಕು ಎನ್ನುವುದು ದೊರೆಯ ಆದೇಶ. ಇಂತಹ ಶಕ್ತಿಶಾಲಿ ಬ್ರಿಟಿಷ್ ದೊರೆಗಳಿಗಾದರೂ ಒಳಪ್ರವೇಶಿಸಿದ 18 ವರ್ಷಗಳಲ್ಲಿಯೇ ಅದನ್ನು ಬಿಟ್ಟು ತೊಲಗಬೇಕಾಗುತ್ತದೆ ಎಂದು ಎಲ್ಲಿ ಗೊತ್ತಿತ್ತು?

ಯುದ್ಧ ಮಾಡದೆ ಗೆದ್ದ `ಅರಮನೆ~ ವಿಶ್ವದಲ್ಲಿ ಇದೊಂದೇ ಇರಬೇಕು. ಇದರಿಂದಾಗಿಯೇ ಗೆದ್ದ `ಅರಮನೆ~ಯನ್ನು ಏನು ಮಾಡುವುದೆನ್ನುವ ಜಿಜ್ಞಾಸೆ ರಾಷ್ಟ್ರನಾಯಕರನ್ನು ದೇಶಕ್ಕೆ ಸ್ವಾತಂತ್ರ್ಯ ಪಡೆದ ನಂತರ ಕಾಡಿದ್ದುಂಟು. `ಸಾರ್ವಜನಿಕರಿಗಾಗಿ ಆಸ್ಪತ್ರೆ ಮಾಡಿ~ ಎಂದಿದ್ದರು ಮಹಾತ್ಮ ಗಾಂಧೀಜಿ.

ಎಡ್ವಿನ್ ಲೂಟಿನ್ಸ್‌ನ `ನ್ಯೂಡೆಲ್ಲಿ~ ಎಂಬ ಶ್ರಿಮಂತ ನಗರ ನಿರ್ಮಾಣದ ಕಲ್ಪನೆಯನ್ನು ಜವಾಹರಲಾಲ ನೆಹರೂ ಪ್ರಾರಂಭದಲ್ಲಿಯೇ ವಿರೋಧಿಸಿದ್ದರು. ಸ್ವಾತಂತ್ರ್ಯಪಡೆದ ನಂತರ ಸಮಾನತೆಯ ಅಸ್ತಿವಾರದ ಮೇಲೆ ಪ್ರಜಾಪ್ರಭುತ್ವದ ಸೌಧ ಕಟ್ಟಲು ಹೊರಟವರನ್ನು ಅಣಕಿಸುವಂತಿತ್ತು ರಾಜವೈಭೋಗದ ಪ್ರತೀಕದಂತೆ ತಲೆಎತ್ತಿ ನಿಂತಿದ್ದ ವೈಸ್‌ರಾಯ್ ಹೌಸ್.
 
ಬ್ರಿಟಿಷರು ಕಾಲುಕಿತ್ತರೂ ಸಾಮ್ರಾಜ್ಯಶಾಹಿಯ ಪಳೆಯುಳಿಕೆಯಂತೆ ಉಳಿದುಕೊಂಡ ವೈಸ್‌ರಾಯ್ ಹೌಸ್ ಕೊನೆಗೆ ರಾಷ್ಟ್ರಪತಿ ಭವನವಾಗಿ ಹೋಯಿತು.ದೂರದ ವಿಜಯ ಚೌಕದಿಂದ ನೋಡಿದರೆ ಕಣ್ಣಿಗೆ ಬೀಳುವುದು ರಾಷ್ಟ್ರಪತಿ ಭವನದ ಕಂಚಿನ ಗುಮ್ಮಟದ ಭಾಗ ಮಾತ್ರ. ಸಾಂಚಿಗೆ ಹೋಗಿದ್ದವರಿಗೆ ಎಲ್ಲೋ ಈ ಮಾದರಿಯ ಗುಮ್ಮಟವನ್ನು ನೋಡಿದ್ದೆವೆಲ್ಲ ಎಂದು ಅನಿಸದೆ ಇರದು.
 
ಈ ಗುಮ್ಮಟಕ್ಕೆ ಪ್ರೇರಣೆ 1400 ವರ್ಷಗಳಷ್ಟು ಹಿಂದಿನ ಸಾಂಚಿಯ ಸ್ತೂಪ. ಎಡ್ವಿನ್ ಲೂಟಿನ್ಸ್‌ಗೆ ಭಾರತೀಯ ಶಿಲ್ಪದ ಬಗ್ಗೆ ಬಹಳ ಗೌರವ ಇರಲಿಲ್ಲವಾದರೂ ಸಾಂಚಿ ಸ್ತೂಪವನ್ನು ಮಾತ್ರ ಬಹಳ ಮೆಚ್ಚಿಕೊಂಡಿದ್ದರಂತೆ. ಆದರೆ ತಪ್ಪಿಯೂ ತಾನು ವಿನ್ಯಾಸಗೊಳಿಸಿದ ಗುಮ್ಮಟಕ್ಕೆ ಸಾಂಚಿ ಸ್ತೂಪ ಪ್ರೇರಣೆ ಎಂದು ಅವರು ಹೇಳಿಕೊಂಡಿಲ್ಲ.

`ನನಗೆ ಪ್ರೇರಣೆ ರೋಮ್‌ನ ಪ್ಯಾಂಥೋಯನ್~ ಎಂದೇ ಆತ್ಮಕತೆ ಯಲ್ಲಿ ಅವರು ಬರೆದುಕೊಂಡಿದ್ದಾರೆ. ಈ ಗುಮ್ಮಟ ಮಾತ್ರವಲ್ಲ `ರಾಜಪಥದಲ್ಲಿ ನಿಂತರೆ ಇಡೀ ವೈಸ್‌ರಾಯ್ ಭವನ ಕಣ್ಣಿಗೆ ಕಾಣಿಸಬೇಕು. ಭವನದ ದರ್ಬಾರ್‌ಹಾಲ್‌ನ ಸಿಂಹಾಸನದಲ್ಲಿ ಕೂತ ವೈಸ್‌ರಾಯ್‌ಗೆ ರಾಜಪಥದ ಸಮಗ್ರ ನೋಟ ಸಿಗಬೇಕು~ ಎನ್ನುವುದು ಲೂಟಿನ್ಸ್‌ನ ಯೋಜನೆ ಆಗಿತ್ತು. ಅದಕ್ಕಾಗಿ ರೈಸಿನಾಹಿಲ್ಸ್‌ನ ತುದಿಯಲ್ಲಿಯೇ ವೈಸ್‌ರಾಯ್ ಭವನ ನಿರ್ಮಿಸಲು ಅವರು ನಕ್ಷೆ ತಯಾರಿಸಿದ್ದರು.

ಆದರೆ ಸಹೋದ್ಯೋಗಿ ಬಕೆರೋ ಅದನ್ನು ಒಪ್ಪದಿದ್ದ ಕಾರಣ ಮೂಲ ನಿವೇಶನದಿಂದ ಸುಮಾರು 400ಯಾರ್ಡ್ ಹಿಂದಕ್ಕೆ ವೈಸ್‌ರಾಯ್ ಭವನ ನಿರ್ಮಾಣ ಆಯಿತು. ಅದರ ಜಾಗದಲ್ಲಿ ಎದುರುಬದುರಾಗಿ ಸೆಕ್ರೆಟರಿಯೆಟ್‌ಗಳು (ಪ್ರಧಾನ ಮಂತ್ರಿ ಮತ್ತು ಹಣಕಾಸು, ಗೃಹ, ರಕ್ಷಣೆ ಮೊದಲಾದ ಸಚಿವರ ಖಾತೆ ಇರುವ ಈಗಿನ ಸೌತ್ ಮತ್ತು ನಾರ್ತ್ ಬ್ಲಾಕ್‌ಗಳು) ತಲೆ ಎತ್ತಿದವು.

ಮೂಲನಕ್ಷೆ ಪ್ರಕಾರ ನಿರ್ಮಾಣ ನಡೆಯದ್ದಕ್ಕಾಗಿ ಲೂಟಿನ್ಸ್ ಸಿಡಿಮಿಡಿಗೊಂಡಿದ್ದರು. ಈ ಘಟನೆಯನ್ನು `ಬಕೆರ್ಲೂ (ವಾಟರ್ಲೂ ಎನ್ನುವ ಅರ್ಥದಲ್ಲಿ) ಎಂದು ಆತ್ಮಕತೆಯಲ್ಲಿ ಅವರು ಬಣ್ಣಿಸಿದ್ದಾರೆ. ಬಕೆರೊ ಎಡವಿದ್ದು ನಿಜ, ಲೂಟಿನ್ಸ್ ಯೋಜನೆಯಂತೆಯೇ ವೈಸ್‌ರಾಯ್ ಭವನ ನಿರ್ಮಾಣ ಗೊಂಡಿದ್ದರೆ ರೈಸಿನಾ ಹಿಲ್‌ನ ಶಿಖರದಲ್ಲಿರುವ ರಾಷ್ಟ್ರಪತಿ ಭವನವನ್ನು ಪೂರ್ಣರೂಪದಲ್ಲಿ ವಿಜಯ ಚೌಕದಿಂದ ಅಲ್ಲ ರಾಜಪಥದಿಂದಲೇ ಕಾಣಬಹುದಿತ್ತು.

ರಾಜಪಥದಿಂದ ಹಾದು ಬಂದು ಎಡಬಲದ ನಾರ್ತ್ ಮತ್ತು ಸೌತ್ ಬ್ಲಾಕ್‌ಗಳನ್ನು ದಾಟಿ ಈ ಭವನದ ಒಳಹೊಕ್ಕರೆ ಮೊದಲು ಕಣ್ಣು ಸೆಳೆವುದು ವಿಶಾಲವಾದ ಅಂಗಳದಲ್ಲಿ ತಲೆ ಎತ್ತಿ ನಿಂತಿರುವ 145 ಅಡಿ ಎತ್ತರದ ಜೈಪುರ ಸ್ಥಂಭ. ಅದರ ತುದಿಯಲ್ಲಿ ಆರು ಭುಜಗಳ ನಕ್ಷತ್ರ ಹೊಂದಿರುವ ಕಮಲದ ಹೂ.
 
ಇದು ಆ ಕಾಲದ ಜೈಪುರದ ಸರ್ ಸವಾಯಿ ಮಾದೋಸಿಂಗ್ ಕೊಡುಗೆ. ಮುಂಭಾಗದ ಮೆಟ್ಟಿಲು ಹತ್ತಿ ಹೋದರೆ ಹನ್ನೆರಡು ಬೋದಿಗೆಗಳು ಕಾವಲು ಕಾಯುತ್ತಿರುವ ವಿಶಾಲ ಹಜಾರ. ಈ ಬೋದಿಗೆಗಳ ಮೇಲ್ಭಾಗದಲ್ಲಿ ಮರದ ಬಳ್ಳಿಗಳ ಮೂಲಕ ಹೆಣೆದ ಕಲ್ಲುಗಂಟೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮತ್ತೆ ಯಾವುದೋ ದೇವಾಲಯ ನೆನಪಾದೀತು.

ಇದು ಲೂಟಿನ್ಸ್ ಮೂಡಬಿದರೆಯ ಜೈನ ದೇವಾಲಯದ ಕಲ್ಲುಗಂಟೆ ಗಳಿಂದ ಪ್ರೇರಣೆ ಪಡೆದು ವಿನ್ಯಾಸಗೊಳಿಸಿದ್ದು. ನಂತರದ ದಿನಗಳಲ್ಲಿ ಹಲವಾರು ಖ್ಯಾತ ವಾಸ್ತುಶಿಲ್ಪಿಗಳು ಇದನ್ನು ಉಲ್ಲೇಖಿಸಿದರೂ ಲೂಟಿನ್ಸ್ ಮಾತ್ರ ಒಪ್ಪಿಕೊಂಡಿ ರಲಿಲ್ಲ. `ನಿಜವಾದ ಗಂಟೆ ಬಾರಿಸುವುದರಿಂದ ಬ್ರಿಟಿಷ್ ಸಾಮ್ರಾಜ್ಯ ಪತನಗೊಳ್ಳಬಹುದು.

ಅದಕ್ಕೆ ಕಲ್ಲಿನ ಗಂಟೆ~ ಎಂದು ಲೂಟಿನ್ಸ್ ಆಪ್ತರ ಜತೆ ಲಘುವಾಗಿ ಹೇಳಿಕೊಂಡ್ದ್ದಿದರಷ್ಟೆ. ಕಲ್ಲುಗಂಟೆ ದನಿ ಹೊರಡಿಸದಿದ್ದರೂ ಬ್ರಿಟಿಷ್ ಸಾಮ್ರಾಜ್ಯ ಮಾತ್ರ ಉಳಿಯಲಿಲ್ಲ~. ಹೊರ ಹಜಾರ ದಾಟಿ ಒಳಪ್ರವೇಶಿಸಿದರೆ ತೆರೆದುಕೊಳ್ಳುವುದು ದರ್ಬಾರ್ ಹಾಲ್. ಮೇಲೆ ವಿಶಾಲವಾಗಿ ಚಾಚಿಕೊಂಡ ಗುಮ್ಮಟ.
 
ಕೆಳಗೆ ಭಾರತದ ಮೂಲೆಮೂಲೆಗಳಿಂದ ಆಯ್ದು ತಂದ ಶ್ರೇಷ್ಠದರ್ಜೆಯ ಅಮೃತಶಿಲೆಗಳ ನೆಲ. ಛಾವಣಿಯಿಂದ ಜೋತಾಡುತ್ತಿರುವ ಸುಮಾರು ಎರಡು ಟನ್ ತೂಕದ ತೂಗುದೀಪಗಳ ಗೊಂಚಲು. ಮಬ್ಬುಬೆಳಕಲ್ಲಿ ನಕ್ಷತ್ರಗಳಿಂದ ಕಂಗೊಳಿಸುವ ಬಾನಿನಡಿಯಲ್ಲಿ ನಿಂತ ಅನುಭವ.
 
ಗುಮ್ಮಟದ ಒಳಭಾಗದ ತೈಲಚಿತ್ರಗಳನ್ನು ಬಿಡಿಸಬೇಕೆನ್ನುವ ಪ್ರಯತ್ನ ಲೂಟಿನ್ಸ್ ಒಪ್ಪದ ಕಾರಣ ಈಡೇರಲಿಲ್ಲವಂತೆ. ಇಲ್ಲಿದ್ದ 5ನೇ ಜಾರ್ಜ್ ಕೂತಿದ್ದ 604 ಕಿಲೋ ತೂಕದ ಬೆಳ್ಳಿ ಸಿಂಹಾಸನವನ್ನು ಈಗ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ. ಆ ಸ್ಥಳದಲ್ಲಿ ಅಮೃತಶಿಲೆಯ ಬುದ್ಧನ ಭವ್ಯಮೂರ್ತಿ ಇರಿಸಲಾಗಿದೆ.

ಸಿಂಹಾಸನದ ಹಿಂಭಾಗ ದಲ್ಲಿದ್ದ ಕಡುಕೆಂಪು ಬಣ್ಣದ ಪರದೆ ಈಗಲೂ ಇದೆ. 70 ವರ್ಷಗಳಿಂದ ಅದಕ್ಕೆ ನೀರು ಸೋಕಿಲ್ಲ. ಬ್ರಿಟಿಷರ ಕಾಲದಲ್ಲಿ ವೈಸ್‌ರಾಯ್ ತನ್ನ ಪತ್ನಿ ಜತೆ ಕೂರುತ್ತಿದ್ದ ಸಿಂಹಾಸನಗಳಿದ್ದ ಕಾರಣಕ್ಕೆ ಇದನ್ನು `ಪಟ್ಟದ ಕೋಣೆ~ ಎಂದೂ ಕರೆಯಲಾಗುತ್ತಿತ್ತು.

ದರ್ಬಾರ್ ಸಭಾಂಗಣವನ್ನು ಸುತ್ತುವರಿದಿರುವ ಮೆಟ್ಟಿಲುಗಳು ಖಾಸಗಿ ಕೋಣೆಗಳತ್ತ ಕೊಂಡೊಯ್ಯುತ್ತದೆ. ಅಲ್ಲಿರುವುದು 54 ಮಲಗುವ ಕೋಣೆಗಳು ಜತೆಗೆ ಅತಿಥಿ ಗೃಹ, ವೈಸ್‌ರಾಯ್‌ನ ನಾಲ್ಕು ಮಾಳಿಗೆಗಳ ಪ್ರತ್ಯೇಕ ನಿವಾಸಸ್ಥಾನವನ್ನು ಈಗ `ಅಶೋಕಾ ಹಾಲ್~ ಎಂದು ಕರೆಯಲಾಗುತ್ತದೆ.

ಈ ಭಾಗವನ್ನು ಪರಸ್ಪರ ಜೋಡಿಸುವ ಸುಮಾರು ಒಂದೂವರೆ ಕಿ.ಮೀ. ಉದ್ದದ ಕಾರಿಡಾರ್‌ನಲ್ಲಿ ಅಲೆದಾಡಿದರೆ ದಾರಿತಪ್ಪಿಹೋಗುವ ಸಾಧ್ಯತೆ ಹೆಚ್ಚು. `ಇನ್ನೊಬ್ಬ ಮಹಾತ್ಮ~ನೆಂದೇ ಹೇಳಲಾಗುತ್ತಿದ್ದ ಈ ಹೌಸ್‌ನ ಮೊದಲ ನಿವಾಸಿ ವೈಸ್‌ರಾಯ್ ಲಾರ್ಡ್ ಇರ್ವಿನ್ ಎಷ್ಟೋ ಬಾರಿ ತನ್ನ ಮಲಗುವ ಕೋಣೆ ಸೇರಿಕೊಳ್ಳಲಾಗದೆ

ಗಲಿಬಿಲಿಗೀಡಾಗುತ್ತಿದ್ದರಂತೆ. ವೈಸ್‌ರಾಯ್‌ನ ಐಷಾರಾಮಿ ಬೆಡ್‌ರೂಮ್ ಕಂಡು ಬೆರಗಾದ ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಸರಳಜೀವಿ ಚಕ್ರವರ್ತಿ ರಾಜಗೋಪಾಲಾಚಾರಿ ಅಲ್ಲಿರಲು ಇಷ್ಟಪಡದೆ ಪಕ್ಕದ ಅತಿಥಿಗೃಹದಲ್ಲಿದ್ದು ಬಿಟ್ಟಿದ್ದರು. ನಂತರದ ಎಲ್ಲ ರಾಷ್ಟ್ರಪತಿಗಳು ಅದನ್ನೇ ಅನುಸರಿಸಿಕೊಂಡು ಬರಬೇಕಾಯಿತು.
ಅಶೋಕ ಹಾಲ್ ರಾಷ್ಟ್ರಪತಿ ಭವನದ `ಆಭರಣದ ಪೆಟ್ಟಿಗೆ~.

ಇದು ವೈಸ್‌ರಾಯ್ ಕಾಲದ ಬಾಲ್ ರೂಮ್. ಮರದ ಹಲಗೆಗಳ ನೆಲದ ಈ ಸಭಾಂಗಣದ ಮಧ್ಯಭಾಗದಲ್ಲಿ ನೃತ್ಯವೇದಿಕೆಯ ಕುರುಹುಗಳು ಈಗಲೂ ಇವೆ. ಎಡಬಲಗಳಲ್ಲಿ ನೃತ್ಯಗಾತಿಯರಿಗೆ ಸುಧಾರಿಸಿಕೊಳ್ಳಲು ನೇಪಥ್ಯ ಇದೆ. ಇಲ್ಲಿನ ನೆಲವನ್ನು ತಬ್ಬಿಕೊಂಡ ಹಾಸುಗಂಬಳಿ ಪರ್ಷಿಯಾದ 16-17ನೇ ಶತಮಾನದ ಶಹಾ ಅಬ್ಬಾಸ್ ಸಂಗ್ರಹದ್ದೆಂದು ಹೇಳಲಾಗಿದೆ.

ಲೂಟಿನ್ಸ್ ವೈಯಕ್ತಿಕ ಆಸಕ್ತಿಯಿಂದ ಹುಡುಕಾಡಿ ಖಾಸಗಿ ಸಂಗ್ರಹಗಳಿಂದ ಇದನ್ನು ಆಯ್ದು ತಂದಿದ್ದರಂತೆ. ಭವನದ ಬೇರೆ ಯಾವ ಕೋಣೆಯ ಛಾವಣಿಯಲ್ಲಿ ಕಾಣದ ತೈಲಚಿತ್ರಗಳು ಅಶೋಕಾ ಸಭಾಂಗಣದಲ್ಲಿ ಕಾಣಬಹುದು. ಲೂಟಿನ್ಸ್‌ನ ವಿರೋಧದ ಹೊರತಾಗಿಯೂ ವೈಸ್‌ರಾಯ್ ವೆಲಿಂಗ್ಟನ್ ಪತ್ನಿ ಪಟ್ಟುಹಿಡಿದದ್ದು ಇದಕ್ಕೆ ಕಾರಣ.

ಇಟಲಿಯ ಖ್ಯಾತ ಕಲಾವಿದ ಕೆನೆಬೆಲ್ಲಾ ಮಾರ್ಗದರ್ಶನದಲ್ಲಿ ಭಾರತದ 12 ಕಲಾವಿದರು ಬಿಡಿಸಿರುವ ಚಿತ್ರದಲ್ಲಿ ದೇಶದ ಪ್ರಮುಖ ಭಾಗಗಳಲ್ಲಿ ಹಾದುಹೋಗಲಾದ ರಾಜನ ಮೆರವಣಿಗೆಯ ದೃಶ್ಯಾವಳಿ ಇದೆ. ಗೋಡೆಮೇಲೆ ನೇತುಹಾಕಲಾಗಿರುವ ಬೃಹತ್‌ಗಾತ್ರದ ತೈಲ ಚಿತ್ರಗಳಿವೆ. ಪ್ರಧಾನಿ ಮತ್ತು ಸಂಪುಟದ ಸದಸ್ಯರಿಗೆ ರಾಷ್ಟ್ರಪತಿಗಳು ಪ್ರಮಾಣವಚನ ಬೋಧಿಸುವ ಈ ಸಭಾಂಗಣಕ್ಕೆ ಸ್ವತಂತ್ರ ಭಾರತದಲ್ಲಿಯೂ ವಿಶೇಷ ಸ್ಥಾನಮಾನ ಇದೆ.

ದರ್ಬಾರ್ ಹಾಲ್‌ನ ವಿರುದ್ಧ ದಿಕ್ಕಿನ ಮೊದಲ ಮಾಳಿಗೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಇದು ವೈಸ್‌ರಾಯ್‌ನ  ಖಾಸಗಿ ಔತಣಕೂಟದ ಕೋಣೆಯಾಗಿತ್ತಂತೆ. ವೆಂಕಟರಾಮನ್ ರಾಷ್ಟ್ರಪತಿಯಾಗಿದ್ದ ಕಾಲದಲ್ಲಿ ಇದಕ್ಕೆ ಚಾಲನೆ ನೀಡಲಾಯಿತು.

ಅಲ್ಲಿಯವರೆಗೆ ದಾಸ್ತಾನು ಮಳಿಗೆ ಸೇರಿದ್ದ ಐದನೇ ಜಾರ್ಜ್‌ನ ಮೂರ್ತಿ, ಆತ ಕೂರುತ್ತಿದ್ದ ಬೆಳ್ಳಿ ಸಿಂಹಾಸನದಿಂದ ಹಿಡಿದು ಬ್ರಿಟಿಷ್ ಆಳ್ವಿಕೆಯ ಗತನೆನಪುಗಳು ಮರುಕಳಿಸುವಂತೆ ಮಾಡುವ ದೊರೆಯ ಕಿರೀಟದ ಬೆಳ್ಳಿ ಪಡಿಯಚ್ಚು, ಎಲ್ಲ ವೈಸ್‌ರಾಯ್ ಮತ್ತು ಗವರ್ನರ್ ಜನರಲ್‌ಗಳ ತೈಲಚಿತ್ರಗಳು, ವೇಷಭೂಷಣ, ಆಯುಧಗಳು, ಆಭರಣಗಳು ಇತ್ಯಾದಿ ವಸ್ತುಗಳನ್ನು ಇಲ್ಲಿ ಜೋಡಿಸಿಡಲಾಗಿದೆ.

ವಿದೇಶಿ ಗಣ್ಯರು ನೀಡುವ ಬೆಲೆಬಾಳುವ ಉಡುಗೊರೆಗಳ ಸಂಗ್ರಹ ಕೂಡಾ ಇದೆ. ಇಂಡೋನೇಷ್ಯಾದ ಅಧ್ಯಕ್ಷರು ನೀಡಿದ್ದ ಲವಂಗಗಳನ್ನು ಜೋಡಿಸಿ ತಯಾರಿಸಿದ್ದ ದೋಣಿಯೊಂದು ಇಲ್ಲಿದೆ. ಒಳಗಿರುವ ಚಿತ್ರಕಲಾ ಗ್ಯಾಲರಿ ವಿನ್ಯಾಸಗೊಳಿಸಿದವರು ಭಾರತೀಯರಾದ ಕೆ.ಟಿ.ರವೀಂದ್ರನ್.

ಒಂದು ಕಾಲದ ಕ್ಯಾಬಿನೆಟ್ ರೂಮ್ ಈಗ ಕಮಿಟಿ ರೂಮ್. ಬ್ರಿಟಿಷ್ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಲು ಇಲ್ಲಿ ಸಭೆ ನಡೆಸುತ್ತಿತ್ತಂತೆ. 1947ರ ಜೂನ್ 3ರಂದು ದೇಶ ವಿಭಜನೆಯ ಒಪ್ಪಂದಕ್ಕೆ ಸಹಿ ಬಿದ್ದದ್ದು ಇದೇ ಕೋಣೆಯಲ್ಲಿ. ಇಕ್ಕೆಲಗಳಲ್ಲಿ ಪುಸ್ತಕ ಜೋಡಿಸಿಟ್ಟ ಕಪಾಟುಗಳು, ಅವುಗಳ ಮೇಲ್ಭಾಗದಲ್ಲಿ ಭಾರತವನ್ನು ವಿಶ್ವದ ಬೇರೆಬೇರೆ ದೇಶಗಳೊಂದಿಗೆ ಜೋಡಿಸುವ ನೆಲ-ಜಲ-ವಾಯುಮಾರ್ಗಗಳ ಚಿತ್ರಗಳಿವೆ.

ವೈಸ್‌ರಾಯ್ ಕಾಲದ ವಿಶಾಲವಾದ ಡೈನಿಂಗ್ ಹಾಲ್ ಈಗ ವಿದೇಶಿ ಗಣ್ಯರ ಉಪಚಾರಕ್ಕೆ ಮೀಸಲಾಗಿದೆ. ಸುಮಾರು ನೂರುಮಂದಿ ಒಟ್ಟಿಗೆ ಕುಳಿತು ಊಟಮಾಡಲು ಸಾಧ್ಯ ಇರುವ ಈ ಹಾಲ್‌ನ ಗೋಡೆಯ ಮೇಲೆ ಹಿಂದಿನ ರಾಷ್ಟ್ರಪತಿಗಳೆಲ್ಲರ ತೈಲಚಿತ್ರಗಳಿವೆ.

ಊಟದ ಮೇಜಿನ ಮೇಲೆ ರಾಷ್ಟ್ರೀಯ ಪಕ್ಷಿ ನವಿಲಿನ ರೂಪದಲ್ಲಿ ನ್ಯಾಪ್‌ಕಿನ್‌ಗಳನ್ನು ಮಡಿಚಿಡುವುದು ರೂಢಿ. ಇಲ್ಲಿದ್ದ ಹಳೆಯ ಚರ್ಮದ ಕುರ್ಚಿಗಳ ಬದಲಿಗೆ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ರಾಜಸ್ತಾನಿ ಶೈಲಿಯ ಆಸನಗಳನ್ನು ತರಿಸಿದ್ದರು. ವಿದೇಶಿ ಗಣ್ಯರಿಗೆ ಇಲ್ಲಿಯೇ ಔತಣಕೂಟ.

ಭವನದ ದಕ್ಷಿಣದ ಭಾಗ ಅತಿಥಿಗಳಿಗೆ ಮೀಸಲು. ಅಲ್ಲಿ ದ್ವಾರಕಾ ಮತ್ತು ನಲಂದಾ ಎಂಬ ಎರಡು ಅತಿಥಿಗೃಹಗಳಿವೆ. ಮೊದಲನೆಯದ್ದು ಬೇರೆ ದೇಶಗಳ ಅಧ್ಯಕ್ಷ-ಪ್ರಧಾನಿಗಳ ವಾಸಕ್ಕೆ. ಎರಡನೆಯದು ಅವರ ಕುಟುಂಬ ವರ್ಗಕ್ಕೆ. ಊಟ, ಮನರಂಜನೆ, ಕಿರುಸಭಾಂಗಣವನ್ನೊಳಗೊಂಡ ಈ ನಿವಾಸದ ಪೀಠೋಪಕರಣಗಳು ಬರ್ಮಾದಿಂದ ತಂದಿದ್ದ ತೇಗದ ಮರದ್ದು. ನೆಲಗಂಬಳಿ ಕಾಶ್ಮೀರದ್ದು.

ಒಳ ಅಲಂಕಾರಗಳೆಲ್ಲ ಬ್ರಿಟಿಷ್ ಪ್ರಭಾವಿತ. ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಕಾಲದಲ್ಲಿ ಸೇರ್ಪಡೆಯಾದ ಶೋಕೇಸ್ ಒಂದೇ ಇಲ್ಲಿ ಹೊಸತು. ಅದರ ಪಕ್ಕದಲ್ಲಿ ಔಪಚಾರಿಕ ಭೇಟಿಯ ಕೋಣೆಗಳಿವೆ. ಉತ್ತರದ ಡ್ರಾಯಿಂಗ್ ರೂಮ್‌ನಲ್ಲಿ ವಿದೇಶದ ಗಣ್ಯರನ್ನು ಸಂಧಿಸುತ್ತಾರೆ. ಪಕ್ಕದಲ್ಲಿಯೇ ಇರುವ ಇನ್ನೊಂದು ಸಭಾಂಗಣದ ರಾಜ್ಯಪಾಲರ ಸಭೆಗೆ ಮೀಸಲು.

ಇಷ್ಟು ಮಾತ್ರವಲ್ಲ, ಗಾಲ್ಫ್ ಮೈದಾನ, ಈಜುಕೊಳ, ಸ್ಕ್ವಾಷ್ ಮತ್ತು ಟೆನಿಸ್‌ಕೋರ್ಟ್, ಏಕ ಕಾಲದಲ್ಲಿ ಒಂದು ಸಾವಿರ ಮಂದಿಗೆ ಅಡಿಗೆ ಮಾಡಬಹುದಾದ ಅಡಿಗೆ ಮನೆ. ಲಾಂಡ್ರಿ, ಕ್ಷೌರಿಕನ ಅಂಗಡಿ, ಅಂಚೆ ಕಚೇರಿ ಕೂಡಾ ಒಳಗಿವೆ. ರಾಷ್ಟ್ರಪತಿ ಸೆಕ್ರೆಟರಿಯೇಟ್‌ನ 350 ಸಿಬ್ಬಂದಿ, ಮನೆಯೊಳಗಿನ ಕೆಲಸಕ್ಕೆ 220 ನೌಕರರು, 50 ಸದಸ್ಯರ ಅಡಿಗೆ ತಂಡ, ತೋಟದಲ್ಲಿ ಕೆಲಸ ಮಾಡಲು 165 ಕಾರ್ಮಿಕರು, ಕೇವಲ ಸ್ವಚ್ಛತಾಕಾರ್ಯಕ್ಕೆ 150 ಕಾರ್ಮಿಕರು.

60 ಕಚೇರಿ ಅಟೆಂಡರ್‌ಗಳು ವಿದ್ಯುತ್‌ದೀಪ ಮತ್ತು ಹವಾನಿಯಂತ್ರಣ ವ್ಯವಸ್ಥೆಯ ನಿರ್ವಹಣೆಗೆ ಡಜನ್‌ಗಟ್ಟಲೆ ಎಲೆಕ್ಟ್ರಿಷಿಯನ್ಸ್, ತೋಟದಲ್ಲಿ ಹಕ್ಕಿ ಓಡಿಸಲು 150 ಕೆಲಸದಾಳುಗಳು...! ಸತ್ತಮೇಲಿನ ಸ್ವರ್ಗ ನೋಡಿದವರ‌್ಯಾರು? ಸ್ವತಂತ್ರಭಾರತದಲ್ಲಿ ಈವರೆಗೆ ಹದಿಮೂರು ಮಂದಿ ಜೀವಂತವಿರುವಾಗಲೇ ಸ್ವರ್ಗಸುಖ ಅನುಭವಿಸಿದ್ದಾರೆ. ಈಗ ಹದಿನಾಲ್ಕನೆಯವರ ಸರದಿ.

ರಾಷ್ಟ್ರಪತಿ ಭವನದ ವೈಭವಕ್ಕೆ ಮಾರುಹೋಗುವವರು ಈ `ಕಲ್ಲಿನ ಅರಮನೆ~ಗೆ ಗಾಂಧೀಜಿ ತನ್ನ ಮೊದಲ ಭೇಟಿ ಸಂದರ್ಭದಲ್ಲಿ ಮೌನವಾಗಿಯೇ ವ್ಯಕ್ತಪಡಿಸಿದ್ದ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳಬೇಕು.
 
ವೈಸ್‌ರಾಯ್ ಲಾರ್ಡ್ ಇರ್ವಿನ್ ಭೇಟಿಗೆಂದು ಮೊದಲ ಬಾರಿ ವೈಸ್‌ರಾಯ್ ಭವನ ಪ್ರವೇಶಿಸಿದ್ದ ಗಾಂಧೀಜಿ ಒಮ್ಮೆ ಸುತ್ತಲೂ ಕಣ್ಣುಹಾಯಿಸಿ ನೇರವಾಗಿ ಇರ್ವಿನ್ ಕೂತ ಸಿಂಹಾಸನದ ಎದುರು ನೆಲದಲ್ಲಿ ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟರಂತೆ.

ವೈಸ್‌ರಾಯ್‌ನ ನಾಯಿ ಬಂದು `ಅಪರೂಪದ ವಸ್ತು~ ಎಂಬಂತೆ ಮೂಸಿ ನೋಡಿ ಹೋಗಿತ್ತಂತೆ. ಬರಿ ನೆಲದಲ್ಲಿ ಕೂತಿದ್ದ ಆ ಬೈರಾಗಿ ಎದುರಿನ ಸಿಂಹಾಸನದಲ್ಲಿ ಕೂತಿದ್ದ `ದೊರೆ~ಯನ್ನು ಕೆಳಗುರುಳಿಸಿದ ಕತೆ ಈಗ ಇತಿಹಾಸದ ಭಾಗ.

ಸಾಮ್ರಾಜ್ಯಶಾಹಿ ಮನಸಿನ ಮಹಾನ್ ಶಿಲ್ಪಿ
ರಾಷ್ಟ್ರಪತಿ ಭವನ, ಸೌತ್ ಮತ್ತು ನಾರ್ತ್ ಬ್ಲಾಕ್, ಸಂಸತ್ ಭವನ, ಇಂಡಿಯಾಗೇಟ್, ರಾಜಪಥ, ತೀನ್‌ಮೂರ್ತಿ ಭವನ, ನಾರ್ತ್ ಮತ್ತು ಸೌತ್ ಅವೆನ್ಯೂ (ಈಗಿನ ಸಂಸದರ ವಸತಿ ಸಂಕೀರ್ಣ), ಕನ್ನಾಟ್‌ಪ್ಲೇಸ್‌ಗಳನ್ನು ಒಳಗೊಂಡ ಸುಮಾರು 2400 ಎಕರೆ ಪ್ರದೇಶವೇ `ನ್ಯೂಡೆಲ್ಲಿ~.

ಇದನ್ನು ವಿನ್ಯಾಸಗೊಳಿಸಿ ನಿರ್ಮಿಸಿದ ವಾಸ್ತುಶಿಲ್ಪಿ ಎಡ್ವರ್ಡ್ ಲೇಂಡ್ಲೀರ್ ಲೂಟಿನ್ಸ್. ವಾಸ್ತುಶಿಲ್ಪದ ವಿಷಯದಲ್ಲಿ ಪಕ್ಕಾ ಸಂಪ್ರದಾಯವಾದಿ. ಇಟಲಿಯ ಶಿಲ್ಪಶಾಸ್ತ್ರ ಅತನಿಗೆ ಆದರ್ಶ. ಭಾರತಕ್ಕೆ ಕಾಲಿಡುವವರೆಗೆ ಇಲ್ಲಿನ ವಾಸ್ತುಶಿಲ್ಪದ ಬಗ್ಗೆ ಆತನಿಗೆ ಅಭಿಮಾನ ಇರಲಿಲ್ಲ. ಆದರೆ ಅದನ್ನು ತಿಳಿದ ನಂತರವೂ ಅಭಿಮಾನ ವ್ಯಕ್ತಪಡಿಸಿದ್ದು ಕಡಿಮೆ.

ವೈಸ್‌ರಾಯ್ ಭವನವನ್ನು ಕಂಡ ಭಾರತೀಯರು ತಮ್ಮನ್ನು ಗುರುತಿಸಿಕೊಳ್ಳುವ ರೀತಿಯಲ್ಲಿ ಸ್ಥಳೀಯ ವಾಸ್ತುಶಿಲ್ಪದ ಛಾಯೆ ಇರಬೇಕೆಂಬ ಬಯಕೆ ಬ್ರಿಟಿಷ್ ದೊರೆಗೆ ಇತ್ತಂತೆ. ಒಲ್ಲದ ಮನಸ್ಸಿನಿಂದ ಇದನ್ನೊಪ್ಪಿಕೊಂಡ ಲೂಟಿನ್ಸ್ ದೊರೆಯ ಬಯಕೆಯನ್ನು ನೆರವೇರಿಸಿದ. ಆದರೆ ಎಲ್ಲಿಯೂ ಅದನ್ನು ಬಾಯಿಬಿಟ್ಟು ಹೇಳಲಿಲ್ಲ.

ಬೌದ್ಧ ಕಟಾಂಜನಗಳು, ಹಿಂದೂ ಮತ್ತು ಜಿನದೇವಾಲಯದ ಕಲ್ಲುಗಂಟೆಗಳು ಮತ್ತು ಛತ್ರಿಗಳು, ಮೊಘಲರ ಕಾಲದ ಕಲ್ಲಿನ ಜಾಲರಿಗಳು ಹಾಗೂ ದೆಹಲಿಯ ಕಡುಬೇಸಿಗೆಯನ್ನು ಗಮನಿಸಿ ನಿರ್ಮಿಸಿದ ಕಲ್ಲು ಚಪ್ಪಡಿಯ ಛಜ್ಜಾಗಳು... ಹುಡುಕುತ್ತಾ ಹೋದರೆ ರಾಷ್ಟ್ರಪತಿ ಭವನದಲ್ಲಿ ಭಾರತೀಯ ವಾಸ್ತುಶಿಲ್ಪದ ನೆರಳು ಕಾಣುವುದು ಕಷ್ಟವಲ್ಲ.

ನ್ಯೂಡೆಲ್ಲಿಯ ವಿನ್ಯಾಸ ಲೂಟಿನ್ಸ್‌ದ್ದಾದರೂ ಭವನ ನಿರ್ಮಾಣದ ಹೆಚ್ಚಿನ ಕಾಮಗಾರಿ ಮಾಡಿದ್ದು ಹಾರೂನ್-ಅಲ್-ರಷೀದ್ ಎಂಬ ಮುಸ್ಲಿಮ್ ಗುತ್ತಿಗೆದಾರ. ಹೊರಹಜಾರ ನಿರ್ಮಿಸಿದ್ದು ಸುಜಾನ್‌ಸಿಂಗ್, ಸೋಬಾ ಸಿಂಗ್. ಲೂಟಿನ್ಸ್ ಆತ್ಮಕಥೆಯಲ್ಲಿ ಇದನ್ನೆಲ್ಲ ಬರೆದಿಲ್ಲ. ಅಲ್ಲಿಯೂ ಆತ ಸ್ಮರಿಸಿದ್ದು ಇಟಲಿಯ ವಾಸ್ತುಶಿಲ್ಪದ ಸ್ಫೂರ್ತಿಯನ್ನು. ಎಂಥ ಮಹಾನ್ ಶಿಲ್ಪಿ, ಅದೆಂಥ ಸಾಮ್ರಾಜ್ಯಶಾಹಿ ಮನಸ್ಸು.

ಸರ್ವ ಋತು ಚೆಲುವಿನಮೊಘಲ್ ಉದ್ಯಾನ

ಉತ್ತರ ಭಾರತದ ಐಷಾರಾಮಿ ಉದ್ಯಾನಗಳೆಲ್ಲ ಮೊಘಲರ ಕೊಡುಗೆ. ಹಿಂದೂ ಮತ್ತು ಬೌದ್ಧರ ಕಾಲದಲ್ಲಿಯೂ ಉದ್ಯಾನಗಳು ನಿರ್ಮಾಣಗೊಂಡಿದ್ದರೂ ಅವುಗಳಲ್ಲಿ ಬಹಳಷ್ಟು ಈಗ ಉಳಿದಿಲ್ಲ. ಮೊಘಲ್ ದೊರೆಗಳು ಉದ್ಯಾನಗಳಲ್ಲಿಯೇ ಬಿಡುವಿನ ಕಾಲ ಕಳೆದವರು. ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ಆ ದಿನಗಳಲ್ಲಿ ದೊರೆಗಳು ಉದ್ಯಾನಗಳ ತಂಪು ಹಸಿರಿನ ಮೊರೆಹೋಗುತ್ತಿದ್ದರು.

ರಾಷ್ಟ್ರಪತಿ ಭವನಕ್ಕೊಂದು ಉದ್ಯಾನ ನಿರ್ಮಿಸುವ ಯೋಚನೆ ಬಂದಾಗ ಎಡ್ವಿನ್ ಲೂಟಿನ್ಸ್‌ಗೆ ನೆನಪಾಗಿದ್ದು ಮೊಘಲರ ಉದ್ಯಾನಗಳು. ಇದಕ್ಕಾಗಿ ಪಾಕಿಸ್ತಾನ ಮತ್ತು ಕಾಶ್ಮೀರಕ್ಕೂ ಅವರು ಭೇಟಿ ನೀಡಿದ್ದರು.

ಅದೇ ಶೈಲಿಯನ್ನು ಅನುಸರಿಸಿ ನಿರ್ಮಿಸಿದ ಕಾರಣಕ್ಕಾಗಿ ಉದ್ಯಾನಕ್ಕೆ `ಮೊಘಲ್ ಗಾರ್ಡನ್~ ಎಂದು ಹೆಸರಿಟ್ಟಿದ್ದರು ಲೂಟಿನ್ಸ್.ಹದಿಮೂರು ಎಕರೆಯಲ್ಲಿ ಹರಡಿರುವ

ಮೊಘಲ್‌ಗಾರ್ಡನ್‌ನ ಮುಖ್ಯ ಉದ್ಯಾನದ ವಿಸ್ತೀರ್ಣ ಸುಮಾರು 35 ಸಾವಿರ ಚದರ ಅಡಿ. ಸಮಾನ ನಾಲ್ಕುಭಾಗಗಳಾಗಿ ವಿಂಗಡಿಸುವ ಕಾಲುವೆಗಳು ಇದರ ವೈಶಿಷ್ಟ್ಯ.
 
ದಿನದ ಬೇರೆಬೇರೆ ಹೊತ್ತಿನಲ್ಲಿ ರಾಷ್ಟ್ರಪತಿ ಭವನದ ಪ್ರತಿಬಿಂಬ ಕಾಲುವೆ ನೀರಲ್ಲಿ ಕಾಣಬಹುದು. ಕಾಲುವೆಗಳ ಸಂಗಮಗಳಲ್ಲಿ ಸದಾ ಚಿಮ್ಮುತ್ತಿರುವ ತಾವರೆಯಾಕಾರದ ಕಾರಂಜಿಗಳ ಹಾಡು, ಕೊಳದ ನೀರಲ್ಲಿ ತೇಲಿಬಿಟ್ಟಿರುವ ಹಲಗೆಗಳಲ್ಲಿ ಹಾಕಿರುವ ಕಾಳು ತಿನ್ನಲು ಬರುವ ಹಕ್ಕಿಗಳ ಚಿಲಿಪಿಲಿಯ ಹಿಮ್ಮೇಳ.
 
ಸುತ್ತಲೂ ಆವರಿಸಿಕೊಂಡಿರುವ ಹೂವಿನ ಕಂಪು. ಪ್ರಕೃತಿಯ ಮಡಿಲು ಎಂದರೆ ಇದೇ ಇರಬೇಕು ಎನ್ನುವಂತಹ ವಾತಾವರಣ. ಕೇಂದ್ರಭಾಗದಲ್ಲಿರುವ ಹುಲ್ಲುಹಾಸಿನಲ್ಲಿಯೇ ಈಗ ವರ್ಷಕ್ಕೆರಡು ಬಾರಿ ಜನವರಿ 26 ಮತ್ತು ಆಗಸ್ಟ್ 15ರಂದು ರಾಷ್ಟ್ರಪತಿಗಳು `ಎಟ್‌ಹೋಮ್~ ಕೂಟ ನಡೆಸುವುದು. ವೈಸ್‌ರಾಯ್‌ಗಳ ಕಾಲದಲ್ಲಿ ಇಲ್ಲಿ ಅತಿಥಿಗಳ ಚಹಾಕೂಟ ನಡೆಯುತ್ತಿತ್ತಂತೆ.

ಮೊಘಲ್‌ಗಾರ್ಡನ್ ತನ್ನ ಗುಲಾಬಿ ತೋಟಕ್ಕಾಗಿ ಲೋಕಪ್ರಸಿದ್ಧ. ಸುಮಾರು 400 ಜಾತಿಯ ಗುಲಾಬಿ ಗಿಡಗಳು ಇಲ್ಲಿ ವರ್ಷದ ಎಲ್ಲ ಋತುಗಳಲ್ಲಿಯೂ ಹೂ ಬಿಟ್ಟು ನಿಂತಿರುತ್ತವೆ. ಪ್ರತಿಯೊಂದು ಜಾತಿ ಗುಲಾಬಿ ಗಿಡಕ್ಕೆ ಪ್ರತ್ಯೇಕ ಹೆಸರು ನೀಡಲಾಗಿದೆ. ಭೀಮ, ಅರ್ಜುನ, ಮದರ್ ಥೆರೆಸಾ, ರಾಜಾರಾಮ್ ಮೋಹನ್ ರಾಯ್, ರಾಣಿ ಎಲಿಜಬೆತ್, ಅಬ್ರಾಹಂ ಲಿಂಕನ್ ಹೆಸರುಗಳು ಗುಲಾಬಿ ಗಿಡಗಳಿಗಿವೆ.

ಹಸಿರು ಗುಲಾಬಿಯಿಂದ ಹಿಡಿದು ಕಪ್ಪು ಕಡುಛಾಯೆ ಹೊಂದಿರುವ ಓಕ್ಲಾಹೋಮಾ ಗುಲಾಬಿವರೆಗಿನ ತಳಿವೈವಿಧ್ಯಗಳನ್ನು ಇಲ್ಲಿ ಕಾಣಬಹುದು. ಹನ್ನೆರಡು ಅಡಿ ಎತ್ತರದ ಗೋಡೆಗಳ ಮಧ್ಯೆ `ಪರ್ದಾ~ ಗಾರ್ಡನ್ ಮೊಘಲರ ಅನುಕರಣೆ. ಉತ್ತರ ಮತ್ತು ದಕ್ಷಿಣದ ತುದಿಗಳಲ್ಲಿ ಎರಡು ಟೆರೇಸ್ ಗಾರ್ಡನ್‌ಗಳಿವೆ. ಪಶ್ಚಿಮದ ತುದಿಯಲ್ಲಿ `ಬಟರ್‌ಫ್ಲೈ ಗಾರ್ಡನ್~ ಇದೆ.

ದೇಶದಲ್ಲಿಯೇ ಅತ್ಯುತ್ತಮವೆನ್ನಲಾದ ಬೊನ್ಸಾಯ್ ಇಲ್ಲಿ ಲಭ್ಯ.
ರಾಷ್ಟ್ರಪತಿಗಳಾದವರೆಲ್ಲರೂ ತಮ್ಮದೇ ರೀತಿಯಲ್ಲಿ ಇದನ್ನು ಬೆಳೆಸಿದ್ದಾರೆ. ಇದರಿಂದಾಗಿಯೇ ಇಲ್ಲಿ ನೆದರ್‌ಲ್ಯಾಂಡ್‌ನ ಟೂಲಿಪ್ಸ್, ಬ್ರೆಜಿಲ್‌ನ ಆರ್ಕಿಡ್ಸ್, ಫ್ರಾನ್ಸ್‌ನ ಆಲೀವ್ಸ್, ಚೀನಾದ ವಾಟರ್ ಲಿಲ್ಲಿ, ಜಪಾನ್‌ನ ಚೆರ‌್ರಿ ಬ್ಲಾಸಮ್ ಮಾತ್ರವಲ್ಲ ಖಜುರಾಹೋದ ಬೋಗನ್‌ವಿಲ್ಲಾ, ಚೆನ್ನೈನ ಮಲ್ಲಿಗೆ ಗಿಡಗಳು... ಹೀಗೆ ದೇಶವಿದೇಶ ಪ್ರಸಿದ್ಧ ಹೂವಿನ ತಳಿಗಳನ್ನು ಹೊಂದಿರುವ ಹೆಗ್ಗಳಿಕೆ ಮೊಘಲ್ ಗಾರ್ಡನ್‌ನದ್ದು.
 
ಎಪಿಜೆ ಅಬ್ದುಲ್ ಕಲಾಮ್ ಅಪರೂಪದ ಔಷಧ ಗುಣದ ಸಸ್ಯಗಳ `ಹರ್ಬಲ್ ಗಾರ್ಡನ್~ ನಿರ್ಮಿಸಿದ್ದಾರೆ. ಪ್ರತಿವರ್ಷ ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಮಾತ್ರ ಮೊಘಲ್ ಗಾರ್ಡನ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ. ಈ ವರ್ಷ ಭೇಟಿ ನೀಡಿದವರ ಸಂಖ್ಯೆ ಆರು ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT