ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಜಮಾನರ ಕುಟುಂಬ!

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ವಿಶ್ವಪ್ರಸಿದ್ಧ ಮೈಸೂರು ಅರಮನೆಯಿಂದ ಸ್ವಲ್ಪವೇ ದೂರದಲ್ಲಿರುವ ಪ್ರದೇಶ ಇಟ್ಟಿಗೆಗೂಡು. ಈ ಸ್ಥಳದ ಒಂದು ಚಿಕ್ಕ ಓಣಿಯ ಆ ಮನೆಯೊಳಗೆ ಕಾಲಿಟ್ಟರೆ ಗರಡಿ ಮಟ್ಟಿಯ ಸೊಗಡು ಮನ ತುಂಬುತ್ತದೆ.

ಕಳೆದ ನಾಲ್ಕು ತಲೆಮಾರುಗಳಿಂದ ಗರಡಿಯ ಮಣ್ಣನ್ನು ತಿಲಕ ಇಟ್ಟುಕೊಂಡು ಬಾಳುತ್ತಿರುವ ಕುಸ್ತಿ ಕುಟುಂಬ ಇದು. ಈ ಕುಟುಂಬದ ಮೂರು ತಲೆಮಾರಿನ ಹಿರಿಯರು ಗರಡಿಯ ಯಜಮಾನರಾದವರು. ಇದನ್ನು `ಯಜಮಾನರ ಕುಟುಂಬ~ ಎಂದೇ ಕರೆಯಬಹುದು.
 
(ಗರಡಿಯ ಮುಖ್ಯ ತರಬೇತುದಾರರನ್ನು ಯಜಮಾನ ಎನ್ನುತ್ತಾರೆ)  ಸದ್ಯ ಮೈಸೂರು ಜಿಲ್ಲಾ ಗರಡಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಯಜಮಾನ, ಪೈಲ್ವಾನ್ ಎಸ್. ಮಹಾದೇವ್ ಅವರ ಮನೆಯಿದು.

ಮಹಾದೇವ ಅವರ ಅಜ್ಜ ಯಜಮಾನ್ ಪೈಲ್ವಾನ್ ಅಂಕೆಗೌಡರು, ತಂದೆ ಯಜಮಾನ್, ಪೈಲ್ವಾನ್ ಶಿವನಂಜಪ್ಪನವರು ಮೈಸೂರಿನ ಕುಸ್ತಿ ಪರಂಪರೆಗೆ ನೀಡಿದ ಕೊಡುಗೆ ಅನನ್ಯ. ಅದರಲ್ಲೂ ಪೈಲ್ವಾನ್ ಶಿವನಂಜಪ್ಪನವರಿಂದಲೇ ಮೈಸೂರು ದಸರಾ ಕುಸ್ತಿಗೆ ಒಂದು ವಿಶೇಷ ಸ್ಥಾನಮಾನ ಸಿಕ್ಕಿದ್ದು. ಸದ್ಯ ಅವರ ಪುತ್ರ ಮಹಾದೇವ್ ಗರಡಿ ಸಂಘದ ಅಧ್ಯಕ್ಷರಾಗಿದ್ದಾರೆ.

ಮೈಸೂರು ಗರಡಿ ಸಂಘದ ಸಂಸ್ಥಾಪಕರಲ್ಲಿ ಶಿವನಂಜಪ್ಪನವರೂ ಪ್ರಮುಖರು. 1947ರಲ್ಲಿ ಗರಡಿ ಸಂಘವನ್ನು ಸಾಹುಕಾರ ಚೆನ್ನಯ್ಯನವರು, ಶ್ರೀನಿವಾಸ ಗರಡಿಯ ಹನಮಂತಣ್ಣವರು, ನಜರಬಾದ್ ಹತ್ತು ಜನಗಳ ಗರಡಿಯ ದೊಡ್ಡತಿಮ್ಮಣ್ಣವರು, ಉಸ್ಥಾದ್ ಬೋರಯ್ಯ ಅವರೊಂದಿಗೆ ಶಿವನಂಜಪ್ಪನವರು ಸ್ಥಾಪಿಸಿದರು.

ಆರಂಭದಲ್ಲಿ ಚನ್ನಯ್ಯನವರು ಅಧ್ಯಕ್ಷರಾಗಿದ್ದರು. ಮಾಜಿ ಮಂತ್ರಿ ಪುಟ್ಟಸ್ವಾಮಯ್ಯ ಕಾರ್ಯದರ್ಶಿಯಾಗಿದ್ದರು. 1952ರಲ್ಲಿ ಯಜಮಾನ್ ಶಿವನಂಜಪ್ಪ ಪ್ರಧಾನ ಕಾರ್ಯದರ್ಶಿಯಾದರು. ಇವರ ಪ್ರಯತ್ನದಿಂದಲೇ ಕುಸ್ತಿ ಸ್ಪರ್ಧೆಗಳಿಗಾಗಿ ಗರಡಿಯೂ ಆರಂಭವಾಯಿತು.

ತಂದೆಯ ಪ್ರೇರಣೆ: ಕುಸ್ತಿ ಕ್ಷೇತ್ರದಲ್ಲಿ ಅಪ್ಪನ ಸಾಧನೆ ನೋಡುತ್ತಿದ್ದ ಮಹಾದೇವ ಅವರಿಗೂ ಮಟ್ಟಿ ಅಂಕಣ ಕೈಬೀಸಿ ಕರೆಯಿತು. 1964ರಲ್ಲಿ ಇಟ್ಟಿಗೆಗೂಡು ಹತ್ತು ಜನಗಳ ಗರಡಿಯಲ್ಲಿ ಅಭ್ಯಾಸ ಆರಂಭಿಸಿದರು. ಆರು ವರ್ಷ ಕಠಿಣ ತರಬೇತಿ ಪಡೆದ ಅವರು ಮೈಸೂರು, ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸ್ಪರ್ಧೆಗಳಲ್ಲಿ ಸೆಣಸಿದರು. ಒಟ್ಟು ಹತ್ತು ವರ್ಷ ಸ್ಪರ್ಧೆಗಳಲ್ಲಿ ಅನುಭವ ಗಳಿಸಿದ ನಂತರ 1980ರಲ್ಲಿ ಕಣದಿಂದ ಹೊರಗುಳಿದರು.

1979ರಲ್ಲಿಯೇ ಗರಡಿ ಸಂಘದ ವ್ಯವಸ್ಥಾಪಕ ಕಾರ್ಯದರ್ಶಿಯಾಗಿ, 83ರಲ್ಲಿ ಕಾರ್ಯದರ್ಶಿಯಾಗಿದ್ದರು. 1991ರಿಂದ ಇಲ್ಲಿಯವರೆಗೂ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
 
ಗರಡಿಯಲ್ಲಿ   `ಯಜಮಾನ್~ ಆಗಿದ್ದರು. 2006ರಲ್ಲಿ ಅನಾರೋಗ್ಯದ ಕಾರಣದಿಂದ ಗರಡಿಯಿಂದ ದೂರ ಉಳಿದರೂ ಗರಡಿ ಸಂಘವನ್ನು ದಿವಂಗತ ಸಾಹುಕಾರ ಚೆನ್ನಯ್ಯನವರ ಮೊಮ್ಮಗ ಚಂದ್ರಪ್ರಕಾಶ್ ಅಧ್ಯಕ್ಷತೆಯಲ್ಲಿ ಮುನ್ನಡೆಸುತ್ತಿದ್ದಾರೆ. ಅವರ ಸಹೋದರ ಚಂದ್ರಶೇಖರ ಕೂಡ ಕುಸ್ತಿಪಟು.

ಅಪ್ಪನ ಮೀರಿಸಿದ ಮಕ್ಕಳು: ಯಜಮಾನ್ ಪೈಲ್ವಾನ್ ಮಹಾದೇವ ಇಬ್ಬರು ಪುತ್ರರಾದ ಪ್ರವೀಣಕುಮಾರ್ ಮತ್ತು ಸುಪುತ್ರರು ತಮ್ಮ ಅಜ್ಜ, ಅಪ್ಪನನ್ನೂ ಮೀರಿಸಿ ಬೆಳೆದರು.

ತಂದೆಯು ಮಣ್ಣಿನಂಕಣದ ಕುಸ್ತಿಯಲ್ಲಿ ಮಾತ್ರ ಮಿಂಚಿದ್ದರೆ, ಪುತ್ರರಿಬ್ಬರೂ ಆಧುನಿಕ ಮ್ಯಾಟ್ ಕುಸ್ತಿಯಲ್ಲಿಯೂ ರಾಷ್ಟ್ರಮಟ್ಟದಲ್ಲಿ ಮಿಂಚಿದರು. ಇವರಿಬ್ಬರ ತರಬೇತಿಯೂ ಆರಂಭದಲ್ಲಿ ಇಟ್ಟಿಗೆಗೂಡಿನ ಗರಡಿಯಲ್ಲಿಯೇ ಆದರೂ, ನಂತರ ಮೈಸೂರು ಜಿಲ್ಲಾ ಗರಡಿ ಸಂಘದಲ್ಲಿ  ತರಬೇತಿ ಪಡೆದರು.

1992ರಲ್ಲಿ ರಾಜ್ಯಮಟ್ಟದ  ಕುಸ್ತಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ಅಭಿಯಾನ ಆರಂಭಿಸಿದ್ದರು.

ಇವರ ಕಿರಿಯ ಸಹೋದರ ಸುಪುತ್ರ ಓದು ಮತ್ತು ಕುಸ್ತಿ ಎರಡರಲ್ಲೂ ಮುಂದೆ. ಸದ್ಯ ಎಂಬಿಎ ಮುಗಿಸಿ ನೌಕರಿಯ ಹುಡುಕಾಟದಲ್ಲಿದ್ದಾರೆ. ತಮ್ಮ ಎಂಟನೇ ವಯಸ್ಸಿನಲ್ಲಿಯೇ ಅಪ್ಪ ಮತ್ತು ಅಣ್ಣನೊಂದಿಗೆ ಗರಡಿ ತರಬೇತಿಗೆ ಹೋದವರು ಹಿಂದಿರುಗಿ ನೋಡಿಲ್ಲ. 27 ಕೆಜಿ ವಿಭಾಗದಲ್ಲಿ ಇವರ ಮೊದಲ ಕುಸ್ತಿ ಸ್ಪರ್ಧೆ ಆರಂಭವಾಗಿತ್ತು. ರಾಜ್ಯ ಮಟ್ಟದಲ್ಲಿ ಎರಡು ಬೆಳ್ಳಿ ಮತ್ತು 2 ಕಂಚಿನ ಪದಕ ಗಳಿಸಿದವರು. ಎರಡು ವರ್ಷ ಹರಿಯಾಣ ಮತ್ತು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಇವರ ಚಿಕ್ಕಪ್ಪ ಚಂದ್ರಶೇಖರ ಅವರ ಮಗ ಎಂ.ಎ. ನಯನಕುಮಾರ್ ಕೂಡ ಕುಸ್ತಿಪಟು. ಮುಧೋಳದಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ಮಕ್ಕಳ ಕುಸ್ತಿ ಸಾಧನೆಯ ಬಗ್ಗೆ ಅಪಾರ ಹೆಮ್ಮೆ ಇಡುವ ಮಹಾದೇವ ಅವರಿಗೆ ಕುಟುಂಬದ ಕುಸ್ತಿ ಯಜಮಾನಿಕೆಯನ್ನು ಮುಂದುವರೆಸುವ ಹಂಬಲವಿದೆ. ಆದರೆ ಮಗ ಪ್ರವೀಣಕುಮಾರ ಅವರಿಗೆ ಮುಂದಿನ ಪೀಳಿಗೆಯನ್ನು ಕುಸ್ತಿಪಟುಗಳನ್ನಾಗಿ ಮಾಡುವ ಯೋಚನೆಯಿಲ್ಲ. ನೌಕರಿ, ಜೀವನ ಭದ್ರತೆ ಸಿಗದ ಕುಸ್ತಿ ಕ್ರೀಡೆಯಿಂದ ಲಾಭವಿಲ್ಲ ಎನ್ನುವ ಅವರ ಮಾತುಗಳಲ್ಲಿ ಕ್ರೀಡಾ ಕ್ಷೇತ್ರದ ಅವ್ಯವಸ್ಥೆಯನ್ನು ಅನುಭವಿಸಿದ ನೋವಿದೆ.

ಇದನ್ನು ಒಪ್ಪದ ಮಹಾದೇವ ಅವರು, `ಕುಸ್ತಿಯಿಂದ ನೌಕರಿ ಸಿಗದಿದ್ದರೆ ಬೇಡ. ಉತ್ತಮ ಆರೋಗ್ಯ, ದೇಹಸಂಪತ್ತು ಸಿಗುವುದು ಖಚಿತ. ಜೀವನದಲ್ಲಿ ಶಿಸ್ತು ಮುಖ್ಯ ಅದನ್ನು ಕುಸ್ತಿ ಲಿಸುತ್ತದೆ. ನಾನು ಮಾತ್ರ ನನ್ನ ಮೊಮ್ಮಕ್ಕಳಿಗೂ ಕುಸ್ತಿ ಕಲಿಸುತ್ತೇನೆ~ ಎನ್ನುತ್ತಾರೆ. ಅವರು ಈಗಾಗಲೇ ತಮ್ಮ ಪುತ್ರಿಯ ಐದು ವರ್ಷದ ಮಗ ವಚನ್‌ಗೂ ಕುಸ್ತಿ ವ್ಯಾಯಾಮ ಕಲಿಸಲು ಆರಂಭಿಸಿದ್ದಾರೆ. ಇಂತಹ ಹಿರಿಯರ ಆಶಾಭಾವನೆಯೊಂದೇ ಕುಸ್ತಿಗೆ ಬಲ ತುಂಬಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT