ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ 10462 * ಬಿಜೆಪಿಗೆ ಆಘಾತ * ಬಿಎಸ್‌ವೈ ಸೆರೆಮನೆಗೆ * ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ ಆರೋಪವುಳ್ಳ ಖಾಸಗಿ ದೂರಿಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ಇದೇ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲು ಸೇರಿದ್ದಾರೆ. ಅವರೀಗ `ಕೈದಿ ನಂಬರ್ 10462~.

ವಕೀಲರಾದ ಸಿರಾಜಿನ್ ಬಾಷಾ ಅವರು ಸಲ್ಲಿಸಿರುವ ಎರಡು ಮತ್ತು ಮೂರನೇ ಖಾಸಗಿ ದೂರುಗಳಿಗೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರಿಗೆ ಜಾಮೀನು ನೀಡಲು ನಿರಾಕರಿಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ, ಉಳಿದ ಎಲ್ಲ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದೆ. ಕೃಷ್ಣಯ್ಯ ಶೆಟ್ಟಿ ಅವರನ್ನು ಆದೇಶ ಪ್ರಕಟಣೆ ವೇಳೆಯೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಸಂದರ್ಭದಲ್ಲಿ ಗೈರು ಹಾಜರಾಗಿದ್ದ ಯಡಿಯೂರಪ್ಪ ಅವರ ಬಂಧನಕ್ಕೆ ವಾರೆಂಟ್ ಜಾರಿ ಮಾಡಲಾಯಿತು. ಸಂಜೆ 4.45ಕ್ಕೆ ನ್ಯಾಯಾಲಯಕ್ಕೆ ಶರಣಾದ ಅವರನ್ನು, ಇದೇ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ನಿಗದಿಯಂತೆ ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭಿಸಿದರು. ಪ್ರಕರಣದ ವಿಚಾರಣೆ ಆರಂಭವಾಗುತ್ತಿದ್ದಂತೆ ಯಡಿಯೂರಪ್ಪ ಅವರ ಖುದ್ದು ಹಾಜರಿಗೆ ವಿನಾಯಿತಿ ಕೋರಿ ಅವರ ವಕೀಲರು ಅರ್ಜಿ ಸಲ್ಲಿಸಿದರು. ಬೆನ್ನು ನೋವು ಮತ್ತು ಸಂಧಿನೋವಿನ ಕಾರಣದಿಂದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗು ತ್ತಿಲ್ಲ ಎಂದು ಅರ್ಜಿಯಲ್ಲಿ ಅವರು ತಿಳಿಸಿದರು.

ಆದರೆ, ಖುದ್ದು ಹಾಜರಿಯಿಂದ ವಿನಾಯಿತಿ ಕೋರುವ ಅರ್ಜಿಯನ್ನು ಮಾನ್ಯ ಮಾಡದ ನ್ಯಾಯಾಧೀಶರು 20 ನಿಮಿಷಗಳಿಗೂ ಹೆಚ್ಚು ಕಾಲ ಎರಡೂ ಪ್ರಕರಣಗಳ ಪ್ರತ್ಯೇಕ ಜಾಮೀನು ಅರ್ಜಿಗಳಿಗೆ ಸಂಬಂಧಿಸಿದ ಆದೇಶದ ಪ್ರತಿಗಳಿಗೆ ಸಹಿ ಮಾಡಿದರು. ಮಧ್ಯಾಹ್ನ 12 ಗಂಟೆಗೆ ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ಆದೇಶ ಪ್ರಕಟಿಸಿದ ಅವರು, ಯಡಿಯೂರಪ್ಪ ಮತ್ತು ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವುದಾಗಿ ತಿಳಿಸಿದರು.

ಯಡಿಯೂರಪ್ಪ ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಸೇರಿದಂತೆ ಎರಡೂ ಪ್ರಕರಣಗಳ ಉಳಿದ 22 ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಯಾವುದೇ ಷರತ್ತು ಉಲ್ಲಂಘಿಸಿದಲ್ಲಿ ಜಾಮೀನು ರದ್ದುಮಾಡುವ ಎಚ್ಚರಿಕೆಯನ್ನೂ ನೀಡಿದೆ.

ಅಂಬುಲೆನ್ಸ್‌ನಲ್ಲಿ ಜೈಲಿಗೆ: ಕೃಷ್ಣಯ್ಯ ಶೆಟ್ಟಿ ಅವರ ಜಾಮೀನು ಅರ್ಜಿ ತಿರಸ್ಕರಿಸಿ ಆದೇಶ ಹೊರಡಿಸಿದ ನ್ಯಾಯಾಧೀಶರು, ಅ. 22ರವರೆಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿಯೂ ಪ್ರಕಟಿಸಿದರು.

ನ್ಯಾಯಾಲಯದಲ್ಲೇ ಹಾಜರಿದ್ದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ಅವರಿಗೆ ಆದೇಶಿಸಿದರು. ಬಳಿಕ ಲೋಕಾಯುಕ್ತ ಪೊಲೀಸರು ಕೃಷ್ಣಯ್ಯ ಶೆಟ್ಟಿ ಅವರನ್ನು ವಶಕ್ಕೆ ಪಡೆದರು.

ನ್ಯಾಯಾಲಯದಲ್ಲಿ ಬಂಧನದಲ್ಲಿದ್ದ ಅವಧಿಯಲ್ಲಿ ಮಧ್ಯಾಹ್ನ 1.30ರ ವೇಳೆಗೆ ಕೃಷ್ಣಯ್ಯ ಶೆಟ್ಟಿ ಕುಸಿದುಬಿದ್ದರು.

ನಂತರ ಅವರನ್ನು ಅಂಬುಲೆನ್ಸ್‌ನಲ್ಲಿ ಕಾರಾಗೃಹಕ್ಕೆ ಕರೆದುಕೊಂಡು ಹೋಗುವಂತೆ ಆದೇಶಿಸಿದ ನ್ಯಾಯಾಧೀಶರು, ಕಾರಾಗೃಹದಲ್ಲೇ ಸೂಕ್ತ ಚಿಕಿತ್ಸೆಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಅಂಬುಲೆನ್ಸ್‌ನಲ್ಲೇ ಕೃಷ್ಣಯ್ಯ ಶೆಟ್ಟಿ ಅವರನ್ನು ಜೈಲಿಗೆ ಕರೆದೊಯ್ಯಲಾಯಿತು.

ಪೊಲೀಸರ ಕೈಗೆ ಸಿಗಲಿಲ್ಲ: ಎರಡೂ ಪ್ರಕರಣಗಳಲ್ಲಿ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬೆನ್ನಲ್ಲೇ ಯಡಿಯೂರಪ್ಪ ಬಂಧನಕ್ಕೆ ನ್ಯಾಯಾಧೀಶರು ವಾರೆಂಟ್ ಜಾರಿಮಾಡಿದರು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಲೋಕಾಯುಕ್ತ ಡಿವೈಎಸ್‌ಪಿಗಳಾದ ಪ್ರಸನ್ನ ವಿ.ರಾಜು ಮತ್ತು ಅಬ್ದುಲ್ ಅಹದ್ ಅವರಿಗೆ ಆದೇಶ ನೀಡಿದರು. ನಂತರ ಸಂಜೆ ಯಡಿಯೂರಪ್ಪ ಅವರು ಶರಣಾಗುವವರೆಗೂ ನಾಟಕೀಯ ಬೆಳವಣಿಗೆಗಳು ನಡೆದವು.

ನ್ಯಾಯಾಲಯದ ಆದೇಶ ಹಿಡಿದ ಲೋಕಾಯುಕ್ತ ಪೊಲೀಸ್ ತಂಡಗಳು ನೇರವಾಗಿ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ತೆರಳಿದವು. ಆದರೆ, ಆ ವೇಳೆಗೆ ಯಡಿಯೂರಪ್ಪ ಅಲ್ಲಿರಲಿಲ್ಲ.

ಬಂಧನದ ವಾರೆಂಟ್ ಕುರಿತು ಮಾಹಿತಿ ನೀಡಿದ ತನಿಖಾ ತಂಡಕ್ಕೆ, `ಅವರು ಇಲ್ಲಿ ಇಲ್ಲ~ ಎಂಬ ಉತ್ತರ ದೊರೆಯಿತು. ಅಂತಿಮವಾಗಿ ಇಡೀ ಮನೆಯನ್ನು ತಪಾಸಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಯಡಿಯೂರಪ್ಪ ಅಲ್ಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡರು.

ಬಳಿಕ ರಾಜಮಹಲ್ ವಿಲಾಸ್ ಎರಡನೇ ಹಂತದಲ್ಲಿರುವ ಯಡಿಯೂರಪ್ಪ ಅವರ ನಿವಾಸ `ಧವಳಗಿರಿ~ಗೆ ತೆರಳಿದ ಲೋಕಾಯುಕ್ತ ಪೊಲೀಸರ ತಂಡ ಅಲ್ಲಿಯೂ ಶೋಧ ಕಾರ್ಯ ನಡೆಸಿತು. ಅಲ್ಲಿಯೂ ಬಿಎಸ್‌ವೈ ಇರಲಿಲ್ಲ. ಅವರ ಬೆಂಬಲಿಗರು, ಆಪ್ತರ ಕಡೆಯಿಂದಲೂ ಯಡಿಯೂರಪ್ಪ ಇರುವಿಕೆ ಕುರಿತು ಮಾಹಿತಿ ದೊರೆಯಲಿಲ್ಲ. ಆರೋಪಿಯ ಜಾಡು ಪತ್ತೆಯಾಗದ ಹಿನ್ನೆಲೆಯಲ್ಲಿ ಮತ್ತಷ್ಟು ಕಡೆ ಶೋಧ ನಡೆಸಲು ನಿರ್ಧರಿಸಿದ ಅಧಿಕಾರಿಗಳು, ಅಲ್ಲಿಂದ ಬೇರೆ ಬೇರೆ ಕಡೆ ಹೊರಟರು.

ದಿಢೀರ್ ಶರಣಾದರು: ಆದರೆ, ಸಂಜೆ 4 ಗಂಟೆಗೆ ಯಡಿಯೂರಪ್ಪ ಅವರೇ ನ್ಯಾಯಾಲಯಕ್ಕೆ ಹಾಜರಾಗಿ, ಶರಣಾಗುತ್ತಾರೆ ಎಂಬ ಮಾಹಿತಿ ನ್ಯಾಯಾಲಯದಲ್ಲಿ ಹರಿದಾಡಿತು. 4.30ಕ್ಕೆ ನ್ಯಾಯಾಲಯದ ಆವರಣಕ್ಕೆ ಬಂದ ಅವರು, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಸ್.ಆರ್.ವಿಶ್ವನಾಥ್ ಮತ್ತಿತರರ ಜೊತೆ ವಿಶೇಷ ನ್ಯಾಯಾಲಯ ಪ್ರವೇಶಿಸಿದರು.

ಸಂಜೆ 4.45ಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಶರಣಾದರು. ಯಡಿಯೂರಪ್ಪ ಅವರಿಗೆ ಅ.22ರವರೆಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ನ್ಯಾಯಾಧೀಶರು ಪ್ರಕಟಿಸಿದರು. ಅವರಿಗೆ ಹಲವು ರೀತಿಯ ಆರೋಗ್ಯದ ಸಮಸ್ಯೆಗಳು ಇರುವುದರಿಂದ ಸೂಕ್ತ ಚಿಕಿತ್ಸೆ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಕಾರಾಗೃಹದ ಅಧಿಕಾರಿಗಳಿಗೆ ಆದೇಶಿಸಲು ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯಕ್ ಮನವಿ ಸಲ್ಲಿಸಿದರು. ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಯಡಿಯೂರಪ್ಪ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುವಂತೆ ಕಾರಾಗೃಹದ ಅಧಿಕಾರಿಗಳಿಗೆ ಆದೇಶಿಸಿದರು.

ಬಿಗಿಭದ್ರತೆಯಲ್ಲಿ ಕಾರಾಗೃಹಕ್ಕೆ: ವಿಶೇಷ ನ್ಯಾಯಾಲಯದಿಂದ ಯಡಿಯೂರಪ್ಪ ಅವರನ್ನು ಕರೆತಂದ ಲೋಕಾಯುಕ್ತ ಡಿವೈಎಸ್‌ಪಿ ಅಬ್ದುಲ್ ಅಹದ್ ಮತ್ತು ಪ್ರಸನ್ನ ವಿ.ರಾಜು ನೇತೃತ್ವದ ಲೋಕಾಯುಕ್ತ ಪೊಲೀಸ್ ತಂಡ, ಕೆಲಕಾಲ ಅವರನ್ನು ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣದ ಮೂರನೇ ಮಹಡಿಯಲ್ಲಿರುವ 19ನೇ ಕೊಠಡಿಯಲ್ಲಿ ಕುಳ್ಳಿರಿಸಿದರು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಆದೇಶದ ಪ್ರತಿ ಪಡೆದ ಬಳಿಕ ಅವರನ್ನು ಲಿಫ್ಟ್ ಮೂಲಕ ಕೆಳಕ್ಕೆ ಕರೆತಂದು, ಬೊಲೆರೋ ವಾಹನದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ದರು.

ಯಡಿಯೂರಪ್ಪ ಅವರನ್ನು ಕಾರಾಗೃಹಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಮೈಸೂರು ಬ್ಯಾಂಕ್ ವೃತ್ತದಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದವರೆಗಿನ ಮಾರ್ಗದಲ್ಲಿ ಇತರೆ ವಾಹನಗಳ ಸಂಚಾರವನ್ನು ನಿಯಂತ್ರಿಸಲಾಗಿತ್ತು. ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಕಲ್ಪಿಸಿದ್ದರಿಂದ ಯಡಿಯೂರಪ್ಪ ಅವರನ್ನು ಕರೆದೊಯ್ದ ಪೊಲೀಸ್ ವಾಹನ ಕಡಿಮೆ ಅವಧಿಯಲ್ಲಿ ಕಾರಾಗೃಹ ತಲುಪಿತು.

ಈ ಅವಧಿಯಲ್ಲಿ ಮಾರ್ಗದುದ್ದಕ್ಕೂ ಬಿಗಿಭದ್ರತೆ ಕಲ್ಪಿಸಲಾಗಿತ್ತು.

ಪ್ರತ್ಯೇಕ ವಿಚಾರಣೆ: ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಎರಡು ಮತ್ತು ಮೂರನೇ ಖಾಸಗಿ ದೂರುಗಳ ವಿಚಾರಣೆಯನ್ನು ಇದೇ 19 ಮತ್ತು 22ಕ್ಕೆ ಮುಂದೂಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT