ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಆಸ್ತಿ ತನಿಖೆಗೆ ರೇವಣ್ಣ ಆಗ್ರಹ

Last Updated 2 ಫೆಬ್ರುವರಿ 2011, 19:15 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದವರು ಕಳೆದ 50 ತಿಂಗಳಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಬುಧವಾರ ಇಲ್ಲಿ ಆಗ್ರಹಿಸಿದರು.

ಶಿವಮೊಗ್ಗ, ಬೆಂಗಳೂರು ಸುತ್ತಮುತ್ತ ಯಡಿಯೂರಪ್ಪ ತಮ್ಮ ಹೆಸರಿನಲ್ಲಿ ಅಷ್ಟೇ ಅಲ್ಲದೆ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನ್‌ಕುಮಾರ್, ಪುತ್ರಿ ಉಮಾದೇವಿ, ಪ್ರೇರಣಾ ಎಜುಕೇಷನ್ ಟ್ರಸ್ಟ್ ಸೇರಿದಂತೆ ವಿವಿಧ ಹೆಸರುಗಳಲ್ಲಿ ಜಮೀನು ಖರೀದಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ಕಾನೂನುಬಾಹಿರವಾಗಿ ಆಸ್ತಿ ಮಾಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲದಿದ್ದರೆ ನಾನೇ ದಾಖಲೆ ಸಮೇತ ಬಹಿರಂಗಪಡಿಸುತ್ತೇನೆ.

ಐದು ಕೋಟಿ ರೂಪಾಯಿ ಬಹುಮಾನ ನನಗೇ ನೀಡಲಿ, ಅದನ್ನು ಅಂಗವಿಕಲ ಮಕ್ಕಳ ಕಲ್ಯಾಣಕ್ಕೆ ನೀಡುತ್ತೇನೆ’ ಎಂದು ಸವಾಲು ಹಾಕಿದರು.

ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪುಹಣದ ಬಗ್ಗೆ ಮಾತನಾಡುವ ಮೊದಲು, ಯಡಿಯೂರಪ್ಪ ಮಾಡಿರುವ ಕಪ್ಪುಹಣವನ್ನು ಬಹಿರಂಗಪಡಿಸುವಂತೆ ಸೂಚನೆ ನೀಡಬೇಕು. ರಾಷ್ಟ್ರೀಯ ಮುಖಂಡರು ಯಡಿಯೂರಪ್ಪಗೆ ಶರಣಾಗಿದ್ದಾರೆ. ಆಪರೇಷನ್ ಕಮಲದ ಹಾಗೆ ಬಿಜೆಪಿಯ ರಾಷ್ಟ್ರೀಯ ಮುಖಂಡರನ್ನು ಖರೀದಿಸಿದ್ದಾರೆ. ಹೀಗಾಗಿ ಅವರಿಗೆ ನೈತಿಕತೆ ಇಲ್ಲ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ನೀಡಿರುವ ದೂರು ಆಧರಿಸಿ ತಮ್ಮ ಕುಟುಂಬದ ಆಸ್ತಿಗಳ ಬಗ್ಗೆ ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದು, ಅದನ್ನು ಸ್ವಾಗತಿಸುತ್ತೇವೆ. ಅವರ ಅಳಿಯ ಸೋಹನ್‌ಕುಮಾರ್ ಹಾಗೆ ತನಿಖೆ ನಡೆಸಬೇಡಿ ಎಂದು ನಾವು ಅರ್ಜಿ ಹಾಕುವುದಿಲ್ಲ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT