ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕಾನೂನು ತಿಳಿಯಲಿ: ಎನ್.ಸಂತೋಷ್ ಹೆಗ್ಡೆ ತಿರುಗೇಟು

Last Updated 26 ಮೇ 2012, 19:20 IST
ಅಕ್ಷರ ಗಾತ್ರ

ಬೆಂಗಳೂರು: `ಅವರಿಗೆ ಬಹಳ ಆಕ್ರೋಶವಿದೆ. ಹೀಗಾಗಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವರು ಹೇಳಿಕೆ ನೀಡುವ ಮುನ್ನ ಸ್ವಲ್ಪ ಕಾನೂನು ತಿಳಿದುಕೊಳ್ಳುವುದು ಒಳ್ಳೆಯದು~ ಎಂದು ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಹೇಳದೇ ತಿರುಗೇಟು ನೀಡಿದರು.

ಲೋಕಾಯುಕ್ತರ ನೇಮಕಕ್ಕೆ ಆಗ್ರಹಿಸಿ ಹೋರಾಟ ರೂಪಿಸಲು `ಕರ್ನಾಟಕ ಜಾಗೃತಿ ಜನಾಂದೋಳನ~ ಸಂಘಟನೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

`ಕಾನೂನಿನ ಪ್ರಕಾರ ಜನ ಸೇವಕರು ಅಥವಾ ಅಧಿಕಾರಿಗಳು ಯಾವುದೇ ರೂಪದಲ್ಲಿ ಲಂಚ ಪಡೆಯುವುದು ತಪ್ಪು. ಪಡೆದ ಲಂಚಕ್ಕೆ ಪ್ರತಿಯಾಗಿ ಸಹಾಯ ಮಾಡಿದ್ದಾರೆಯೇ ಇಲ್ಲವೇ ಎಂಬುದು ಅಷ್ಟು ಮುಖ್ಯವಲ್ಲ~ ಎಂದು ಅವರು ಹೇಳಿದರು.

`ಗಣಿ ಕಂಪೆನಿಗೆ ಯಾವುದೇ ಸಹಾಯ ಮಾಡಿಲ್ಲ ಎಂದು ಅವರು (ಬಿಎಸ್‌ವೈ) ಹೇಳುತ್ತಾರೆ. ಇಲ್ಲಿ ಬಂಗಾರು ಲಕ್ಷ್ಮಣ್ ಪ್ರಕರಣವನ್ನು ಅವರು ಗಮನಿಸಬೇಕು. ಅವರು ಯಾವುದೇ ಕಂಪೆನಿಗೆ ಸಹಾಯ ಮಾಡಿರಲಿಲ್ಲ. ಸಹಾಯ ಮಾಡಲು ಕಂಪೆನಿಯೇ ಇರಲಿಲ್ಲ. ಅವರು ಶಿಕ್ಷೆಗೆ ಒಳಗಾಗಲು ಮಾರುವೇಷದ ಕಾರ್ಯಾಚರಣೆಯೇ ಸಾಕಾಯಿತು~ ಎಂದು ಅವರು ಮಾರ್ಮಿಕವಾಗಿ ನುಡಿದರು.

`ಬಂಡವಾಳವಿಲ್ಲದ ಬಳ್ಳಾರಿಯ ಒಂದು ಗಣಿ ಕಂಪೆನಿ ರೂ10 ಕೋಟಿ  ಸಾಲ ಪಡೆದು, ಅದನ್ನು ಶಿವಮೊಗ್ಗದ ವಿದ್ಯಾಸಂಸ್ಥೆಗೆ ದೇಣಿಗೆಯಾಗಿ ನೀಡುತ್ತದೆ. ಆ ಕಂಪೆನಿಯ ಗಣಿಗಾರಿಕೆ ಮಂಜೂರಾತಿ ಅರ್ಜಿ ಆಗಿನ ಮುಖ್ಯಮಂತ್ರಿ ಮುಂದೆ ಇರುತ್ತದೆ. ರಾಚೇನಹಳ್ಳಿಯಲ್ಲಿ ಡಿನೋಟಿಫಿಕೇಷನ್ ಮಾಡಿದ ರೂ 2 ಕೋಟಿ ಮಾರುಕಟ್ಟೆ ಮೌಲ್ಯದ ಜಮೀನನ್ನು ಅದೇ ಕಂಪೆನಿ ರೂ 20 ಕೋಟಿಗೆ ಖರೀದಿಸುತ್ತದೆ~ ಎಂದ ಅವರು, `ಸಿಬಿಐ ವಿಚಾರಣೆ ನಡೆಯುತ್ತಿದೆ. ತಪ್ಪು ಯಾರದ್ದು ಎಂಬುದು ಬೆಳಕಿಗೆ ಬರಲಿದೆ~ ಎಂದರು.

`ಅಕ್ರಮ ಗಣಿಗಾರಿಕೆ ಬಗ್ಗೆ ನಾನು ನೀಡಿದ 26 ಸಾವಿರ ಪುಟಗಳ ವರದಿಯು ಒಂದೆರಡು ದಿನದಲ್ಲಿ ತಯಾರಾದದ್ದಲ್ಲ. ಅಕ್ರಮವಾಗಿ ಹಣ ವರ್ಗಾಯಿಸಿಕೊಳ್ಳಲು ಮಾಡಿಕೊಂಡಿದ್ದ 40 ಲಕ್ಷ ಬ್ಯಾಂಕ್ ಖಾತೆಗಳಲ್ಲಿನ ವ್ಯವಹಾರಗಳನ್ನು ತನಿಖಾ ತಂಡ ಪರಿಶೀಲಿಸಿದೆ. 797 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದೇವೆ. ಇದೆಲ್ಲವೂ ಒಂದೆರಡು ದಿನದಲ್ಲಿ ಆಗುವ ಕೆಲಸವೇ?~ ಎಂದು ಅವರು ಪ್ರಶ್ನಿಸಿದರು.

`ನನ್ನ ಗ್ರಹಿಕೆ ಸ್ಪಷ್ಟವಾಗಿದೆ.  ನಾನು ಯಾವುದೇ ಜಾತಿ ಮತ ನೋಡದೇ ಕರ್ತವ್ಯ ನಿರ್ವಹಿಸಿದ್ದೇನೆ. ಈಗ ಆರೋಪಿ ಸ್ಥಾನದಲ್ಲಿರುವ ಮಾಜಿ ಮುಖ್ಯಮಂತ್ರಿಗೂ ನನಗೂ ಯಾವುದೇ ಹಗೆತನ ಇಲ್ಲ. ನನ್ನ ವರದಿಯಲ್ಲಿ ಅವರಿಗೆ ಶಿಕ್ಷೆ ನೀಡಿ ಎಂದು ನಾನು ಹೇಳಿರಲಿಲ್ಲ. ತನಿಖೆ ನಡೆಸುವಂತೆ ಹೇಳಿದ್ದೆ. ಅವರ ಹಿಂದಿದ್ದ ಮಾಜಿ ಮುಖ್ಯಮಂತ್ರಿಗಳ ವಿರುದ್ಧವೂ ತನಿಖೆ ಮಾಡುವಂತೆ ಶಿಫಾರಸು ಮಾಡಿದ್ದೆ~ ಎಂದು ಸಂತೋಷ್ ಹೆಗ್ಡೆ ಅವರುತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT