ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಕೆಂಡಾಮಂಡಲ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೆಚ್ಚುವರಿಯಾಗಿ ಎರಡು ನಿಗಮ- ಮಂಡಳಿಗಳ ಉಸ್ತುವಾರಿ ವಹಿಸಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆರಳಿಸಿದೆ. ತೀವ್ರ ಅಸಮಾಧಾನಗೊಂಡಿರುವ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಬುಧವಾರ ಬೆಳಿಗ್ಗೆ ನಗರಕ್ಕೆ ಬಂದ ಅವರು, ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, `ಮುಂದಿನ ಚುನಾವಣೆ ವೇಳೆಗೆ ಜೆಡಿಎಸ್ ಸೇರಲಿರುವ ಜಾರಕಿಹೊಳಿ ಅವರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು ಸರಿಯಲ್ಲ. ಈ ವಿಷಯದಲ್ಲಿ ಶೆಟ್ಟರ್ ಮನಬಂದಂತೆ ವರ್ತಿಸಿದ್ದು, ಅವರಿಗೆ ಸರ್ಕಾರ ಉಳಿಸಿಕೊಳ್ಳುವ ಇಚ್ಛೆ ಇದ್ದಂತೆ ಇಲ್ಲ. ಸದ್ಯದಲ್ಲೇ ಆಪ್ತ ಸಚಿವರ ಸಭೆ ಕರೆದು ಈ ಕುರಿತು ಚರ್ಚಿಸಲಾಗುವುದು~ ಎಂದು ಗುಡುಗಿದರು.

`ಸಚಿವರಾದ ಎಂ.ಪಿ. ರೇಣುಕಾಚಾರ್ಯ, ರೇವುನಾಯಕ ಬೆಳಮಗಿ ಮತ್ತು ರಾಜುಗೌಡ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡುವಂತೆ ಮಾಡಿದ್ದ ಸಲಹೆಗೆ ಶೆಟ್ಟರ್ ಸ್ಪಂದಿಸಿಲ್ಲ. ಯಾರ ಜತೆಯೂ ಸಮಾಲೋಚಿಸದೆ ಏಕಾಏಕಿ ಜಾರಕಿಹೊಳಿ ಅವರಿಗೆ ಹೆಚ್ಚಿನ ಖಾತೆ ಕೊಟ್ಟಿದ್ದಾರೆ. ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸಲು ಕೂಡಲೇ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು~ ಎಂದೂ ಆಗ್ರಹಪಡಿಸಿದರು.

`ಜಾರಕಿಹೊಳಿ ಜೆಡಿಎಸ್ ಸೇರುವುದು ಖಚಿತ. ಇದು ಪಕ್ಷದ ನಾಯಕರಿಗೂ ಗೊತ್ತಿದೆ. ಆದರೆ ಕೇಂದ್ರದ ವರಿಷ್ಠರ ಮಾತು ಕೇಳಿ, ನಿಷ್ಠರನ್ನು ಕಡೆಗಣಿಸಲಾಗಿದೆ. ಜಾರಕಿಹೊಳಿ ಅವರ ಕೈಬಲಪಡಿಸುವ ಉದ್ದೇಶದಿಂದ ಕೇಂದ್ರ ನಾಯಕರು ಈ ರೀತಿ ಮಾಡಿರಬಹುದು~ ಎಂದು ಹೇಳಿದರು.

`ನಾನು ಬಿಜೆಪಿ ತೊರೆಯಲು ನಿರ್ಧರಿಸಿರುವ ಕಾರಣ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ, ಒಂದಂತೂ ಸತ್ಯ. ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರ ಪುನಃ ರಚಿಸುವ ಕನಸು ಕೈಗೂಡುವುದಿಲ್ಲ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ~ ಎಂದರು.

ಶೆಟ್ಟರ್‌ಗೆ ಆಸಕ್ತಿ ಇಲ್ಲ: `ಶೆಟ್ಟರ್ ನೇತೃತ್ವದ ಸರ್ಕಾರ ಏಪ್ರಿಲ್‌ವರೆಗೂ ಇರಬೇಕು ಎಂಬುದು ನಮ್ಮ ಇಚ್ಛೆ. ಆದರೆ ಶೆಟ್ಟರ್ ಅವರಿಗೇ ಆ ಬಗ್ಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಅವರೂ ಡಿ.ವಿ.ಸದಾನಂದಗೌಡರ ಹಾದಿಯನ್ನೇ ತುಳಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರಿಂದ ಎದುರಾಗುವ ಸಮಸ್ಯೆಗೆ ಅವರೇ ಹೊಣೆ ಹೊರಬೇಕಾಗುತ್ತದೆ~ ಎಂದು ಎಚ್ಚರಿಸಿದರು.

ವಿ.ಧನಂಜಯ ಕುಮಾರ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದರಲ್ಲಿ ವಿಶೇಷ ಏನೂ ಇಲ್ಲ. ಅವರೇ ಬಿಜೆಪಿ ತೊರೆಯಲು ನಿರ್ಧರಿಸಿದ್ದರು. ಆದರೆ, ನವದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಿದ ಅವರಿಗೆ ಕೂಡಲೇ ಬಾಕಿಯಿರುವ ಭತ್ಯೆ ನೀಡದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಶೆಟ್ಟರ್ ಕ್ರಮ ಕೈಗೊಳ್ಳಬೇಕು ಎಂದರು.

ಬರಪೀಡಿತ ಪ್ರದೇಶಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಪರಿಹಾರ ಕಾರ್ಯಗಳು ಸ್ಥಗಿತಗೊಂಡಿವೆ. `ಭಾಗ್ಯಲಕ್ಷ್ಮಿ~ ಬಾಂಡ್ ವಿತರಣೆ ನಿಂತು ಹೋಗಿದೆ. ಅಂಗವಿಕಲರು, ವಿಧವೆಯರು ಹಾಗೂ ವೃದ್ಧರಿಗೆ ಮೂರು ತಿಂಗಳಿಂದ ಗೌರವಧನ ನೀಡಿಲ್ಲ. ಮುಖ್ಯಮಂತ್ರಿ ಶೆಟ್ಟರ್ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಯಡಿಯೂರಪ್ಪ ಎಚ್ಚರಿಸಿದರು.

ಹತ್ತು ಖಾತೆ ಕೊಡಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕೆ.ಎಸ್.ಈಶ್ವರಪ್ಪ ಅವರನ್ನೇ ಮುಂದುವರಿಸಲು ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಕುರಿತು ಕೇಳಿದಾಗ `ಅವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಜತೆಗೆ ಹೆಚ್ಚುವರಿಯಾಗಿ ಇನ್ನೂ 10 ಖಾತೆಗಳನ್ನು ನೀಡಲಿ~ ಎಂದು ವ್ಯಂಗ್ಯವಾಡಿದರು.

`ಬಿಜೆಪಿಯಲ್ಲಿ ಜನರಿಲ್ಲದ ಕಾರಣ ಅವರಿಗೆ ಮತ್ತಷ್ಟು ಜವಾಬ್ದಾರಿ ನೀಡಬೇಕು. ವಿನಾಶಕಾಲೇ ವಿಪರೀತ ಬುದ್ಧಿ. ಅವರ ತಲೆ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ~ ಎಂದರು.

`ನಮ್ಮ ಕುಟುಂಬ ಒಡೆತನದ ಟ್ರಸ್ಟ್‌ಗೆ ದೇಣಿಗೆ ಪಡೆದ ಪ್ರಕರಣದಲ್ಲಿ ಸಿಬಿಐ ನನ್ನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದನ್ನು ಸ್ವಾಗತಿಸುತ್ತೇನೆ. ಕಾನೂನು ಹಾಗೂ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವವಿದೆ. ಈ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರುವ ವಿಶ್ವಾಸ ಇದೆ~ ಎಂದು ಹೇಳಿದರು.

ಬೆಂಬಲ: ಬಿಜೆಪಿ ತೊರೆಯುವ ಯಡಿಯೂರಪ್ಪ ನಿರ್ಧಾರಕ್ಕೆ ನನ್ನ ಪೂರ್ಣ ಬೆಂಬಲ ಇದೆ ಎಂದು ತುಮಕೂರು ಸಂಸದ ಜಿ.ಎಸ್.ಬಸವರಾಜು ಸ್ಪಷ್ಟಪಡಿಸಿದ್ದಾರೆ. ಯಡಿಯೂರಪ್ಪ ನಿವಾಸದಲ್ಲಿ ನಡೆದ ತುಮಕೂರು ಜಿಲ್ಲಾ ಪ್ರಮುಖರ ಸಭೆಯ ಬಳಿಕ ಅವರು ಮಾತನಾಡಿದರು. `ಯಡಿಯೂರಪ್ಪ ಬಿಜೆಪಿ ತೊರೆಯುವುದು ನಿಶ್ಚಿತ. ನಾವೆಲ್ಲರೂ ಅವರೊಂದಿಗೆ ಇರುತ್ತೇವೆ~ ಎಂದರು.

ರೇಣುಕಾಚಾರ್ಯ ಕೋಪ
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರಿಗೆ (ಬಾಲಚಂದ್ರ ಜಾರಕಿಹೊಳಿ) ಹೆಚ್ಚುವರಿ ಜವಾಬ್ದಾರಿ ನೀಡಿರುವುದು ಸರಿಯಲ್ಲ ಎಂದು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಆಕ್ಷೇಪಿಸಿದ್ದಾರೆ.
ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು `ಪಕ್ಷವಿರೋಧಿ ಕೆಲಸ ಮಾಡಿದವರಿಗೆ ಮಣೆ ಹಾಕಿರುವುದು ಸರಿಯಲ್ಲ. ಮುಖ್ಯಮಂತ್ರಿ ಶೆಟ್ಟರ್ ಯಾರದೋ ಒತ್ತಡಕ್ಕೆ ಮಣಿದು ಈ ರೀತಿ ಮಾಡಿರುವ ಸಾಧ್ಯತೆ ಇದೆ~ ಎಂದು ಹೇಳಿದರು.

ಸಮುದ್ರ ಮಥನ
`ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆ ನನಗೆ ತುಂಬ ನೋವು ಉಂಟು ಮಾಡಿದೆ. ಇದರಿಂದ ಬೇಸರವೂ ಆಗಿದೆ...~ ಹೀಗೆ ಹೇಳಿದ್ದು ಇಂಧನ ಸಚಿವೆ ಶೋಭಾ ಕರಂದ್ಲಾಜೆ.

`ನಮ್ಮನ್ನು ಹಾಳು ಮಾಡುವುದಕ್ಕೆ ಜೆಡಿಎಸ್ ಅಥವಾ ಕಾಂಗ್ರೆಸ್ಸಿಗರು ಬೇಕಾಗಿಲ್ಲ. ನಮ್ಮವರೇ ಸಾಕು~ ಎಂದು ಪರೋಕ್ಷವಾಗಿ ಪಕ್ಷದ ಮುಖಂಡರ ವಿರುದ್ಧವೇ ಟೀಕೆ ಮಾಡಿದ ಅವರು, `ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ~ ಎಂದರು.

`ಪಕ್ಷದಲ್ಲಿ ಸಮುದ್ರ ಮಥನ ನಡೆಯುತ್ತಿದೆ. ಈ ಸಂದರ್ಭದಲ್ಲಿ ವಿಷವಾದರೂ ಬರಬಹುದು; ಅಮೃತವಾದರೂ ಬರಬಹುದು~ ಎಂದು ಹೇಳಿದ ಅವರು, ಯಡಿಯೂರಪ್ಪ ಸ್ಥಾಪಿಸಲು ಉದ್ದೇಶಿಸಿರುವ ಹೊಸ ಪಕ್ಷದ ಬಗ್ಗೆ ಪ್ರತಿಕ್ರಿಯೆ ನೀಡಲಾರೆ ಎಂದರು.

`ಕೇಂದ್ರದ ಮಾಜಿ ಸಚಿವ ಧನಂಜಯಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದು ಕೂಡ ನೋವು ತಂದಿದೆ. ಬಿಜೆಪಿ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಧನಂಜಯಕುಮಾರ್ ಅವರು ಮಂಗಳೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ಅವರು ಮೊದಲು ಸ್ಪರ್ಧಿಸಿದ್ದಾಗ ನಾವೆಲ್ಲ ಕಾಲೇಜಿನಲ್ಲಿ ಓದುತ್ತಿದ್ದೆವು. ಬಿಜೆಪಿ ಪರ ಪ್ರಚಾರಕ್ಕೆ ಮನೆಯಿಂದ ಬುತ್ತಿಕಟ್ಟಿಕೊಂಡು ಹೋಗಿದ್ದು ಇನ್ನೂ ನೆನಪಿದೆ. ಅಂತಹವರನ್ನು ಪಕ್ಷದಿಂದ ಹೊರಹಾಕಿದ್ದು ಬೇಸರ ಉಂಟುಮಾಡಿದೆ~ ಎಂದು ಹೇಳಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT