ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಪ್ರವಾಸಕ್ಕೆ ಸಮಜಾಯಿಷಿ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಶಾಸಕರ ಆಹ್ವಾನದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ತುಮಕೂರಿನಲ್ಲಿ ಗುರುವಾರ ನಡೆಯಲಿರುವ ಕಾರ್ಯಕ್ರಮ ಕೂಡ ಅದರ ಒಂದು ಭಾಗ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಬುಧವಾರ ಇಲ್ಲಿ ಹೇಳಿದರು.

ಪಕ್ಷದ ನಗರ ಘಟಕದ ಕಾರ್ಯಕಾರಿಣಿ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು `ತುಮಕೂರಿನ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ. ಆದರೂ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದ ಯೋಜನೆಗಳ ಶಂಕುಸ್ಥಾಪನೆ/ ಉದ್ಘಾಟನೆಗೆ ಅವರನ್ನು ಶಾಸಕರು ಆಹ್ವಾನಿಸಿದ್ದು, ಇದೊಂದು ಸಹಜವಾದ ಪ್ರಕ್ರಿಯೆ~ ಎಂದು ಹೇಳಿದರು.

ಯಾವ ಕಾರ್ಯಕ್ರಮಗಳಿಗೆ ಯಾರು ಹೋಗಬೇಕು ಎಂಬುದರ ಬಗ್ಗೆ ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.

ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಸಚಿವರು, ಶಾಸಕರ ಹೇಳಿಕೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಈಶ್ವರಪ್ಪ ನಿರಾಕರಿಸಿದರು. `ಈ ಸಂದರ್ಭದಲ್ಲಿ ಯಾವುದಕ್ಕೂ ಉತ್ತರ ಇಲ್ಲ. ಸೂಕ್ತ ಸಂದರ್ಭದಲ್ಲಿ ಆ ಬಗ್ಗೆ ವಿವರಣೆ ನೀಡುವೆ~ ಎಂದಿದ್ದಾರೆ.

ಹಿರಿಯರ ವೇದಿಕೆ ಇಲ್ಲ: `ಬಿಜೆಪಿಯಲ್ಲಿ ಯಾವ ಹಿರಿಯರ ವೇದಿಕೆಯೂ ಇಲ್ಲ. ವೇದಿಕೆ ಹೆಸರಿನಲ್ಲಿ ಮುಜುಗರದ ಹೇಳಿಕೆಗಳನ್ನು ನೀಡುತ್ತಿರುವ ಬಿ.ಬಿ.ಶಿವಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳಲ್ಲಿ ಉತ್ತರ ನಿರೀಕ್ಷಿಸಲಾಗಿದೆ. ಉತ್ತರ ಬಂದ ನಂತರ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಈಶ್ವರಪ್ಪ ಹೇಳಿದರು.

ಯಡಿಯೂರಪ್ಪ ಅವರನ್ನು ಪಕ್ಷದಿಂದ ವಜಾ ಮಾಡಬೇಕೆನ್ನುವ ಹಿರಿಯರ ವೇದಿಕೆಯ ಆಗ್ರಹದ ಕುರಿತು ಕೇಳಿದ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.

ಸದ್ಯದಲ್ಲೇ ಅಭ್ಯರ್ಥಿ ಅಂತಿಮ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ಹುಡುಕಾಟ ಆರಂಭಿಸಿದೆ. ಸದ್ಯದಲ್ಲೇ ಎರಡೂ ಜಿಲ್ಲೆಗಳ ಪಕ್ಷದ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು. ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡಲಾಗುವುದು. ಒಂದೆರಡು ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರವಾಗಲಿದೆ ಎಂದರು.

ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸುನಿಲ್ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಪ್ರಾಣೇಶ್, ಕೇಶವ್ ಸೇರಿದಂತೆ ಇತರರ ಹೆಸರುಗಳು ಕೇಳಿಬರುತ್ತಿದೆ ಎಂದು ಈಶ್ವರಪ್ಪ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT