ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಬಂಧನಕ್ಕೆ ವಾರೆಂಟ್

Last Updated 15 ಅಕ್ಟೋಬರ್ 2011, 6:35 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಸರ್ಕಾರಿ ಭೂಮಿ ಡಿ ನೋಟಿಫಿಕೇಷನ್ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ನೀರಾಕರಿಸಿ ಅವರ ಬಂಧನಕ್ಕೆ ಆದೇಶಿಸಿತು.

ಜೊತೆಗೆ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇತರ ಹದಿನಾಲ್ಕು ಜನ ಆರೋಪಿತರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ.ಸುಧೀಂದ್ರ ರಾವ್ ಅವರು, ಅವರಿಗೆ ಷರತ್ತುಬದ್ಧ ಜಾಮೀನು ನೀಡಿದರು.

ನ್ಯಾಯಾಲಯದ ಆದೇಶದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ  ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ತಕ್ಷಣ ಬಂಧಿಸಲಾಯಿತು. ಅನಾರೋಗ್ಯದ ಕಾರಣದಿಂದ ನ್ಯಾಯಾಲಯಕ್ಕೆ ಬಾರದೇ ಮನೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ  ನ್ಯಾಯಾಲಯ ಬಂಧನದ ವಾರೆಂಟ್ ಹೊರಡಿಸಿದೆ.

ಈ ಹಗರಣದಲ್ಲಿ ಆರೋಪಿಗಳಾಗಿರುವ ಅವರ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಸೋಹನಕುಮಾರ್, ಶಾಸಕರಾದ ಹೇಮಚಂದ್ರ ಸಾಗರ್ ಹಾಗೂ ಉದ್ಯಮಿ ಪ್ರವೀಣ್ ಚಂದ್ರ ಸೇರಿದಂತೆ 14 ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

ಕಿಕ್ಕಿರಿದು ತುಂಬಿದ್ದ ನ್ಯಾಯಾಲಯದಲ್ಲಿ ತಮ್ಮ ಆದೇಶವನ್ನು ಪ್ರಕಟಿಸಿದ  ಲೋಕಾಯುಕ್ತ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್ ಅವರು, ಜಾಮೀನು ಪಡೆದವರಿಗೆ ತಲಾ ಐದು ಲಕ್ಷ ರೂಪಾಯಿ ಭದ್ರತಾ ಠೇವಣಿ ಇಡಬೇಕು, ದಾಖಲೆಗಳನ್ನು ತಿದ್ದಬಾರದು ಮತ್ತು ದೇಶ ಬಿಟ್ಟು ಹೊರಗೆ ಹೋಗಬಾರದು ಎಂದು ಷರತ್ತು ವಿಧಿಸಿದ್ದಾರೆ.

ಬಂಧಿತ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರದಲ್ಲಿರುವ ಜೈಲಿಗೆ ಸ್ಥಳಾಂತರಿಸಲಾಗಿದೆ. ಅವರನ್ನು ಅ 22ರ ವರೆಗೆ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಂಧಿಸಲು ಲೋಕಾಯುಕ್ತ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT