ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ವಿಚಾರಣೆ 13 ಕ್ಕೆ ಮುಂದಕ್ಕೆ

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲರಾದ ಸಿರಾಜಿನ್ ಬಾಷಾ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯ ಇದೇ 13ಕ್ಕೆ ಮುಂದೂಡಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರರಾವ್ ಅವರು ಬಾಷಾ ಸಲ್ಲಿಸಿದ್ದ ಎರಡು ಮತ್ತು ಮೂರನೇ ದೂರುಗಳ ವಿಚಾರಣೆಯನ್ನು ಬುಧವಾರ ಏಕಕಾಲಕ್ಕೆ ನಡೆಸಿದರು. ಯಡಿಯೂರಪ್ಪ, ಅವರ ಪುತ್ರರಾದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್‌ಕುಮಾರ್, ಶಾಸಕರಾದ ಡಾ.ಹೇಮಚಂದ್ರ ಸಾಗರ್, ಎಸ್.ಎನ್.ಕೃಷ್ಣಯ್ಯಶೆಟ್ಟಿ ಸೇರಿದಂತೆ ಎಲ್ಲ ಆರೋಪಿಗಳೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಖಾಸಗಿ ದೂರಿನ ವಿಚಾರಣೆಯಲ್ಲಿ ಪ್ರಾಸಿಕ್ಯೂಟರ್ ಆಗಿ ಯಾರು ವಾದಿಸಬೇಕು ಎಂಬ ವಿವಾದದ ಬಗ್ಗೆ ಬುಧವಾರ ವಿಚಾರಣೆ ನಡೆಯಿತು. ಅರ್ಜಿದಾರರ ವಕೀಲರಾಗಿರುವ ಸಿ.ಎಚ್.ಹನುಮಂತರಾಯ ಅವರು ತಾವೇ ಪ್ರಾಸಿಕ್ಯೂಟರ್ ಸ್ಥಾನವನ್ನೂ ನಿರ್ವಹಿಸುವುದಾಗಿ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ ಪರ ವಕೀಲರು, `ಅರ್ಜಿದಾರರ ಪರ ವಕೀಲರೇ ಪ್ರಾಸಿಕ್ಯೂಟರ್ ಹುದ್ದೆಯನ್ನೂ ನಿರ್ವಹಿಸಲು ಅವಕಾಶ ಇಲ್ಲ~ ಎಂದು ವಾದಿಸಿದರು.

ಖಾಸಗಿ ದೂರುಗಳ ವಿಚಾರಣೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಮಾತ್ರವೇ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಇದೆ. ಇತರೆ ನ್ಯಾಯಾಲಯಗಳಲ್ಲಿ ಸರ್ಕಾರದಿಂದ ನಾಮನಿರ್ದೇಶಿತ ಪಿಪಿ ಇರುತ್ತಾರೆ. ಆದರೆ, ಈ ನ್ಯಾಯಾಲಯದಲ್ಲಿ ಲೋಕಾಯುಕ್ತ ಪ್ರಕರಣಗಳಿಗೆ ಸಂಬಂಧಿಸಿದ ಪಿಪಿ ಇದ್ದಾರೆ.

ಅವರಿಗೇ ಖಾಸಗಿ ದೂರಿನ ವಿಚಾರಣೆಯ ಹೊಣೆಯನ್ನೂ ಒಪ್ಪಿಸಬಹುದು ಎಂದು ಯಡಿಯೂರಪ್ಪ ಪರ ವಕೀಲರಾದ ರವಿ ಬಿ.ನಾಯ್ಕ ಮತ್ತು ಸಿ.ವಿ.ನಾಗೇಶ್ ವಾದಿಸಿದರು.ಪ್ರಕರಣದಲ್ಲಿ ಪಿಪಿ ಹುದ್ದೆಯನ್ನು ಯಾರು ನಿರ್ವಹಿಸಬೇಕೆಂಬ ಪ್ರಶ್ನೆಗೆ ಸಂಬಂಧಿಸಿದಂತೆ 13ರಂದೇ ವಿಚಾರಣೆ ನಡೆಸುವುದಾಗಿ ನ್ಯಾಯಾಧೀಶರು ಪ್ರಕಟಿಸಿದರು.

ಇದೇ ವೇಳೆ, ಪಿಪಿ ಕುರಿತ ವಿವಾದ ಇತ್ಯರ್ಥ ಆಗುವವರೆಗೆ ಯಡಿಯೂರಪ್ಪ ಅವರಿಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಬೇಕು ಎಂದು ಸಿ.ವಿ.ನಾಗೇಶ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ಈ ವಿಷಯವನ್ನು ಮತ್ತೆ ಮಧ್ಯೆ ತರುವುದು ಬೇಡ ಎಂದು ನ್ಯಾಯಾಧೀಶರು ಸೂಚಿಸಿದರು.

ಬೆಂಬಲಿಗರ ಸಾಥ್!: ಯಡಿಯೂರಪ್ಪ ಅವರಿಗೆ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ ಎಚ್.ಹಾಲಪ್ಪ ಸೇರಿದಂತೆ ಕೆಲ ಶಾಸಕರು ಸಾಥ್ ನೀಡಿದರು. ಹತ್ತು ನಿಮಿಷ ಮೊದಲೇ ಕಟಕಟೆಗೆ ಆಗಮಿಸಿದ ಯಡಿಯೂರಪ್ಪ ಅರ್ಧ ಗಂಟೆಗೂ ಹೆಚ್ಚು ಕಾಲ ಕಟಕಟೆಯಲ್ಲಿ ನಿಂತಿದ್ದರು.

ವಿಚಾರಣೆಗಾಗಿ ಯಡಿಯೂರಪ್ಪ ಅವರು ತಮ್ಮ ಪುತ್ರರೊಂದಿಗೆ ಮಧ್ಯಾಹ್ನ 2.45ಕ್ಕೆ ಕೋರ್ಟ್ ಆವರಣ ಪ್ರವೇಶಿಸುತ್ತಿದ್ದಂತೆಯೇ, ವಿಧಾನ ಸಭೆಯ ಸರ್ಕಾರಿ ಮುಖ್ಯ ಸಚೇತಕ ಡಿ.ಎನ್.ಜೀವರಾಜ್, ಶಾಸಕರಾದ ಎಸ್.ಆರ್.ವಿಶ್ವನಾಥ್, ಎನ್.ಎಸ್.ನಂದೀಶ್ ರೆಡ್ಡಿ, ಲೆಹರ್‌ಸಿಂಗ್ ಮೊದಲಾದವರು ಅವರನ್ನು ಹಿಂಬಾಲಿಸಿದರು. ಇನ್ನೇನು ವಿಚಾರಣೆ ಮುಗಿದು ಹೊರ ಬರಬೇಕು ಎನ್ನುವ ಸಂದರ್ಭದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಪಿ.ಹರೀಶ್, ಎಂ.ಪಿ. ಕುಮಾರಸ್ವಾಮಿ ಅವರೂ ಬಂದರು.

ಬಿಗಿ ಭದ್ರತೆ: ನ್ಯಾಯಾಲಯದ ಆವರಣದ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ನಗರ ಸಿವಿಲ್ ನ್ಯಾಯಾಲಯದ ಪ್ರವೇಶ ದ್ವಾರದಿಂದ ಹಿಡಿದು ಮೂರನೇ ಮಹಡಿಯಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಸಭಾಂಗಣವರೆಗೂ ಪೊಲೀಸರು ಕಣ್ಗಾವಲಿನಿಂದ ಕಾಯುತ್ತಾ ನಿಂತಿದ್ದರು.

ಯಡಿಯೂರಪ್ಪ ಮತ್ತು ಅವರ ಪುತ್ರರು ನ್ಯಾಯಾಲಯಕ್ಕೆ ಆಗಮಿಸುವುದನ್ನು ನೋಡುವ ಕುತೂಹಲದಿಂದ ವಕೀಲರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಹೊರಗೆ ನಿಂತಿದ್ದರು. ನ್ಯಾಯಾಲಯದಿಂದ ಹೊರಬಂದ ಯಡಿಯೂರಪ್ಪ ಕಾರು ಹತ್ತುವ ವೇಳೆ ಅವರ ಬೆಂಬಲಿಗರು, ಕೆಲ ವಕೀಲರು ಅವರ ಪರ ಘೋಷಣೆ ಕೂಗಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT