ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಸೋಮಣ್ಣ ವಿರುದ್ಧ ತನಿಖೆ

Last Updated 11 ಜುಲೈ 2012, 18:50 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನು ಬಾಹಿರವಾಗಿ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ (ಡಿನೋಟಿಫೈ) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ವಿ.ಸೋಮಣ್ಣ ಅವರ ವಿರುದ್ಧ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಲೋಕಾಯುಕ್ತ ಪೊಲೀಸರಿಗೆ ಬುಧವಾರ ನಿರ್ದೇಶಿಸಿದೆ.

ತನಿಖೆಯ ವರದಿಯನ್ನು ಆಗಸ್ಟ್ 10ರ ಒಳಗೆ ನೀಡುವಂತೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶಿಸಿದ್ದಾರೆ.

ಜ್ಞಾನಭಾರತಿ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಹೋಬಳಿಯ ನಾಗದೇವನಹಳ್ಳಿ ಬಳಿ ಸ್ವಾಧೀನ ಪಡಿಸಿಕೊಂಡಿದ್ದ ಜಮೀನನ್ನು ಕಾನೂನು ಬಾಹಿರವಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವ ಆರೋಪ ಇದಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಕೀಲ ಎಚ್.ಯೋಗೇಂದ್ರ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲು ಮಾಡಿದ್ದಾರೆ.

ಆರೋಪವೇನು: `ಸರ್ವೆ ನಂ. 77ರಲ್ಲಿನ 33 ಗುಂಟೆ ಜಮೀನಿಗೆ ದೇವೇಗೌಡ ಎನ್ನುವವರು ಮಾಲೀಕರಾಗಿದ್ದರು. ಇದನ್ನು ಬಡಾವಣೆ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡು 2010ರಲ್ಲಿ ಬಿಡಿಎ ಅಂತಿಮ ಅಧಿಸೂಚನೆ ಹೊರಡಿಸಿದೆ. ಮಾಲೀಕರಿಗೆ ಪರಿಹಾರ ಕೂಡ ನೀಡಲಾಗಿದೆ.

ಈ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಆಗ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಅವರಲ್ಲಿ ದೇವೇಗೌಡರ ಪತ್ನಿ ಲಿಂಗಮ್ಮ ಕೋರಿಕೊಂಡರು. ಜಮೀನನ್ನು ಸ್ವಾಧೀನ ಪಡಿಸಿಕೊಂಡಿರುವುದು ತಿಳಿದಿದ್ದರೂ ಯಡಿಯೂರಪ್ಪನವರು ಇದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಆದೇಶಿಸಿದ್ದರು. ನಂತರ, ಜಮೀನನ್ನು ಸೋಮಣ್ಣ ಕುಟುಂಬದ ಒಡೆತನದ ವಿಎಸ್‌ಎಸ್ ಎಜುಕೇಷನ್ ಟ್ರಸ್ಟ್‌ಗೆ ಮಾರಾಟ ಮಾಡಲಾಗಿದೆ~ ಎಂದು ಯೋಗೇಂದ್ರ ಆರೋಪಿಸಿದ್ದಾರೆ.

ಈ ದೂರಿನಲ್ಲಿ ಸೋಮಣ್ಣ ಅವರ ಪತ್ನಿ ಶೈಲಜಾ ಹಾಗೂ ಪುತ್ರ ಬಿ.ಎಸ್.ನವೀನ್ ಅವರನ್ನೂ ಆರೋಪಿಯನ್ನಾಗಿಸಲಾಗಿದೆ. ಇವರ ವಿರುದ್ಧವೂ ತನಿಖೆಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT