ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಮರೂಪಿ ವಿದ್ಯುತ್ ತಂತಿ: ಆತಂಕ

Last Updated 29 ಜುಲೈ 2013, 12:02 IST
ಅಕ್ಷರ ಗಾತ್ರ

ಬಳ್ಳಾರಿ: ಅವು ಚಿಕ್ಕಮಕ್ಕಳು ಓಡಾಡುವ ಜನವಸತಿ ಪ್ರದೇಶಗಳು. ಮುಗ್ಧತೆಯನ್ನೇ ಮೈಗೂಡಿಸಿಕೊಂಡಿರುವ ಮಕ್ಕಳು, ಆಟೋಟದಲ್ಲಿ ತೊಡಗಿದಾಗ ಸಂದಿಗೊಂದಿಗಳಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತ ಅರಿವಿಲ್ಲದೆಯೇ ಆಕಾಶದತ್ತ ಕೈ ಚಾಚಿದರೆ ಅಥವಾ ಕಿಡಿಗೇಡಿತನ ಮಾಡುತ್ತ ಏನಾದರೂ ದುಸ್ಸಾಹಸಕ್ಕೆ ಕೈಹಾಕಿದರೆ ಜೀವವನ್ನೇ ಆಪೋಷನ ತೆಗೆದುಕೊಳ್ಳಬಲ್ಲ ಯಮರೂಪಿ ವಿದ್ಯುತ್ ತಂತಿಗಳು ಕೈಗೇ ಎಟಕುತ್ತವೆ.

ಮನೆಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಕಂಬಗಳಲ್ಲಿನ ತಂತಿಗಳು, ಸರ್ವೀಸ್ ವೈರ್‌ಗಳು ಸುಲಭದಲ್ಲೇ ಕೈಗೆ ಎಟುಕುವಂತಿರುವುದರಿಂದ, ಯಾರೇ ಆದರೂ ವಿದ್ಯುತ್ ಆಘಾತಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಸುರಕ್ಷತೆಯೇ ಇಲ್ಲದಂತಹ ಸ್ಥಿತಿ ಅಲ್ಲಿದೆ.

ಇದು ನಗರದ ಅನೇಕ ಬಡಾವಣೆಗಳಲ್ಲಿ ಕಂಡುಬರುವ ದೃಶ್ಯವಾಗಿದ್ದು, ಇತ್ತೀಚೆಗಷ್ಟೇ ನಗರದ ಹೂವಿನ ಮಾರುಕಟ್ಟೆ ಪ್ರದೇಶದಲ್ಲಿರುವ ಪಿಂಜಾರ್ ಓಣಿಯಲ್ಲಿ ವಿದ್ಯುತ್ ತಂತಿ ಕತ್ತರಿಸಿ ಬಿದ್ದು, ಪ್ರವಹಿಸುತ್ತಿದ್ದ ವಿದ್ಯುತ್‌ನ ಆಘಾತಕ್ಕೆ ಒಳಗಾಗಿ ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದರೂ ಇಂತಹ ಕೈಗೆಟುಕುವ ವಿದ್ಯುತ್ ತಂತಿಗಳನ್ನು ಬದಲಿಸುವ ಕಾರ್ಯ ಆರಂಭವಾಗಿಲ್ಲ.

ನಗರದ ಬೆಂಗಳೂರು ರಸ್ತೆಗೆ ಆಜುಬಾಜು ಇರುವ ಸಿಂದಗಿ ಓಣಿ, ಮೂಲಂಗಿ ಸಂಜೀವಪ್ಪ ಬೀದಿ, ಕಲ್ಮಠ ಬೀದಿ, ಕುದರೆ ಗಾಳಪ್ಪ ಬೀದಿ, ರೆಡ್ಡಿ ಬೀದಿ, ಈಡಿಗರ ಬೀದಿ ಸೇರಿದಂತೆ ಹಳೆಯ ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ತಂತಿಗಳು ನಿತ್ಯವೂ ಅಪಾಯದ ಗಂಟೆ ಬಾರಿಸುತ್ತಿವೆ.

ಒಂದು ಕಂಬದಿಂದ ಇನ್ನೊಂದು ಕಂಬದ ನಡುವಿನ ಅಂತರವೂ ಹೆಚ್ಚಿರುವುದರಿಂದ ವಿದ್ಯುತ್ ತಂತಿಗಳು ಜೋತಾಡುತ್ತಿದ್ದು, ಕೈ ಮೇಲಕ್ಕೆತ್ತಿದರೂ ಕೈಗೇ ತಾಕುತ್ತವೆ.

ಕಬ್ಬಿಣದ ಕಂಬಗಳು: ಎಷ್ಟೋ ಕಡೆ ಈಗಲೂ ಕಬ್ಬಿಣದ ಕಂಬಗಳೇ ರಾರಾಜಿಸುತ್ತಿದ್ದು, ಮಳೆ ಸುರಿಯುವ ಸಂದರ್ಭ ವಿದ್ಯುಚ್ಛಕ್ತಿಯು ಕಂಬ ಬಿಟ್ಟು ನೆಲದಲ್ಲಿ ಪ್ರವಹಿಸಿದ ಭಯಾನಕ ಅನುಭವವೂ ಅನೇಕರಿಗೆ ಆಗಿದೆ.

ಕಬ್ಬಿಣದ ಕಂಬಗಳನ್ನು ಬದಲಾಯಿಸಿ, ಸಿಮೆಂಟ್ ಕಂಬ ಅಳವಡಿಸಬೇಕು ಎಂಬ ನಿಯಮವಿದ್ದರೂ ಹಳೆಯ, ತುಕ್ಕು ಹಿಡಿದ ಕಬ್ಬಿಣದ ಕಂಬಗಳೇ ಅನೇಕ ಕಡೆ ಈಗಲೂ ಇವೆ. ಪಿಂಜಾರ ಓಣಿಯಲ್ಲಿ ಇಬ್ಬರ ಪ್ರಾಣಕ್ಕೇ ಸಂಚಕಾರ ತಂದರೂ ಅಪಾಯ ಒಡ್ಡಿರುವ  ವಿದ್ಯುತ್ ತಂತಿಗಳನ್ನು ಬದಲಿಸುವ ಕೆಲಸಕ್ಕೆ ಕೈಹಾಕದ ಜೆಸ್ಕಾಂ, ಆ ಪ್ರದೇಶಕ್ಕೇ ಹೊಂದಿಕೊಂಡಿರುವ ಈ ಬಡಾವಣೆಗಳತ್ತಲೂ ಗಮನಹರಿಸಿಲ್ಲ. ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದ ನಿವಾಸಿಗಳಾದ  ಎಸ್.ಮಂಜುನಾಥ, ಬಿ.ರಾಮು, ಟಿ.ವಿನಯ್, ಆರ್.ರಮೇಶ್, ಪ್ರಶಾಂತ್, ಚಂದ್ರು, ಶ್ರೀಕಾಂತ್ ಮತ್ತಿತರರು ದೂರಿದ್ದಾರೆ.

ಅಪಾಯದ ಮುನ್ಸೂಚನೆ ನೀಡಿರುವ ಈ ವಿದ್ಯುತ್ ಕಂಬಗಳು, ಕೈಗೆಟುಕುವ ವಿದ್ಯುತ್ ತಂತಿಗಳನ್ನು ಕೂಡಲೇ ಬದಲಿಸಬೇಕು. ಅಲ್ಲದೆ, ಮಹಡಿ ಮನೆಗಳಲ್ಲಿ ವಾಸಿಸುವವರಲ್ಲಿ ನಿತ್ಯವೂ ಭಯದ ವಾತಾವರಣ ಉಂಟುಮಾಡಿರುವ ಕೆಳ ಹಂತದ ಸರ್ವೀಸ್ ವೈರ್ ಮತ್ತು ಅಪಾಯಕಾರಿ ತಂತಿಗಳತ್ತ ದೃಷ್ಟಿ ಹರಿಸಿ, ಗ್ರಾಹಕರ ಸುರಕ್ಷತೆಗೆ ಜೆಸ್ಕಾಂ ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT