ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯರಸಂ ಶಿಕ್ಷಣ ಸಂಸ್ಥೆಯ ಯಶೋಗಾಥೆ

Last Updated 18 ಡಿಸೆಂಬರ್ 2013, 5:54 IST
ಅಕ್ಷರ ಗಾತ್ರ

ಸುರಪುರ: ಅವರು ಮೆಕ್ಯಾನಿಕ್ ಎಂಜಿನಿಯರಿಂಗ್‌ನಲ್ಲಿ ರ್‍ಯಾಂಕ್ ವಿದ್ಯಾರ್ಥಿ. ಅರ್ಹತೆಗೆ ತಕ್ಕ ಹುದ್ದೆ ದೊರಕಿತ್ತು. ಪುಣೆಯ ದೊಡ್ಡ ಕಂಪೆನಿಯಲ್ಲಿ ಕೈತುಂಬಾ ಸಂಬಳ ಬರುತ್ತಿತ್ತು. ಆದರೆ, ಅವರ ಮನಸ್ಸು ಮಾತ್ರ ಬೇರೆ ಯಾವುದೋ ವಿಷಯಕ್ಕೆ ತುಡಿಯುತ್ತಿತ್ತು. ಪರಿಣಾಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಊರು ಸೇರಿದರು. ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮಾಜವಾದ ತೊಗಟೆವೀರ ಕ್ಷತ್ರೀಯ ಸಮಾಜಕ್ಕೆ ಸೇರಿದ ಬಸವರಾಜ ಯರಸಂ ಅವರ ಈ ನಡೆ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿತು. ಕೆಲವರು ಅವರಿಗೆ ಕೆಲಸ ಬಿಟ್ಟು ತಪ್ಪು ಮಾಡಿದೆ ಎಂದರು. ಮತ್ತೆ ಕೆಲಸಕ್ಕೆ ಸೇರಿಕೋ ಎಂದು ಮನೆಯವರು ಒತ್ತಡ ಹೇರಿದರು. ಆದರೆ ಬಸವರಾಜ ಮಾತ್ರ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಲಿಲ್ಲ.

ಬಸವರಾಜ ಅವರ ತಂದೆ ತಕ್ಕ ಮಟ್ಟಿಗೆ ಸ್ಥಿತಿವಂತರಾಗಿದ್ದರು. ಹೀಗಾಗಿ ಬಸವರಾಜ ಅವರ ಓದಿಗೆ ಯಾವುದೇ ತೊಡಕು ಬರಲಿಲ್ಲ. ಅವರ ಸಮಾಜದ ಅನೇಕರು ಹಣದ ಕೊರತೆಯಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದು ಬಸವರಾಜ ಅವರ ಮೇಲೆ ಗಾಢ ಪರಿಣಾಮ ಬೀರಿತು. ನಿಂಗಮ್ಮ ಹಣಮಂತಪ್ಪ ಯರಸಂ (ಬಸವರಾಜ ಅವರ ತಂದೆ ತಾಯಿ) ಹೆಸರಿನಲ್ಲಿ 2009ರಲ್ಲಿ ಪಟ್ಟಣ ವ್ಯಾಪ್ತಿಯ ತಿಮ್ಮಾಪುರದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದರು.

ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಗಳಿಸಿದ ಹಣವನ್ನು ಶಾಲೆಗೆ ಹಾಕಿದರು. ಪ್ರತಿನಿತ್ಯ ಶಾಲೆಗೆ ಭೇಟಿ ನೀಡಿ ಅದರ ಬೆಳವಣಿಗೆಗೆ ಸಮಯ ಕೊಟ್ಟರು. ಶಾಲೆ ಈಗ ಎಲ್.ಕೆ.ಜಿಯಿಂದ 5ನೇ ತರಗತಿವರೆಗೆ ನಡೆಯುತ್ತಿದೆ. 150 ಮಕ್ಕಳಿಗೆ ಏಳು ಜನ ಶಿಕ್ಷಕರು ಬೋಧಿಸುತ್ತಿದ್ದಾರೆ. ಶಾಲೆ ಎಲ್ಲ ರಂಗದಲ್ಲೂ ಹೆಸರು ಮಾಡುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಎತ್ತಿದ ಕೈ. ನೃತ್ಯ, ಗಾಯನದಲ್ಲೂ ಸೈ. ವಿವಿಧ ವೇಷಗಳನ್ನು ಧರಿಸಿ ಪಾತ್ರಾಭಿನಯ ಮಾಡುವುದು ಮಕ್ಕಳಿಗೆ ಕರತಲಾಮಲಕ. ಭಾಷಣ, ಪ್ರಬಂಧ, ಚರ್ಚಾ ಸ್ಫರ್ಧೆಗಳಲ್ಲಿ ಮಕ್ಕಳು ಸದಾ ಮುಂದು. ಆಟದಲ್ಲೂ ಮಕ್ಕಳು ಹಿಂದೆ ಬಿದ್ದಿಲ್ಲ. ಅನೇಕ ಮಹನೀಯರು ಶಾಲೆಯ ಮಕ್ಕಳ ಸಾಧನೆ ನೋಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಪ್ರತಿ ಮಗುವಿಗೆ ವೈಯಕ್ತಿಕ ಗಮನ ನೀಡುವುದು. ಮನೆ ಗೆಲಸ ಕೊಡುವುದು. ಹಿಂದೆ ಬಿದ್ದ ಮಕ್ಕಳಿಗೆ ವಿಶೇಷ ಬೋಧನೆ. ಪ್ರತಿ ತಿಂಗಳು ಕಿರು ಪರೀಕ್ಷೆ. ಪ್ರತಿ ಎರಡು ತಿಂಗಳಿಗೊಮ್ಮೆ ಪಾಲಕರ ಸಭೆ ನಡೆಸಿ ಮಗುವಿನ ಪ್ರಗತಿ ನೀಡುವುದು. ಮಕ್ಕಳ ಬೆಳವಣಿಗೆಗೆ ಚರ್ಚೆ ಮಾಡುವುದು. ಇತರ ಚಟುವಟಿಕೆಗಳಿಂದ ಶಾಲೆ ಪ್ರಗತಿಯ ಹಾದಿಯಲ್ಲಿದೆ.

ವಿಷಯವಾರು ಪರಿಣಿತರನ್ನು ಕರೆಸಿ ಅವರಿಂದ ಮಕ್ಕಳಿಗೆ ಪಾಠ ಹೇಳಿಸುವುದು. ಶಾಲೆಯಲ್ಲಿ ಸ್ವಾತಂತ್ರ್ಯ ಯೋಧರ, ದೇಶಭಕ್ತರ, ಗಣ್ಯರ ಜಯಂತಿ ಆಚರಿಸಿ ಮಕ್ಕಳಿಗೆ ದೇಶಾಭಿಮಾನ ಮೂಡಿಸುವುದು. ಮಕ್ಕಳನ್ನು ವನಭೋಜನಕ್ಕೆ ಕರೆದುಕೊಂಡು ಹೋಗುವುದು. ವರ್ಷದಲ್ಲಿ ಎರಡು ಬಾರಿ ಕಾರ್ಯಕ್ರಮ ಏರ್ಪಡಿಸಿ ಗಣ್ಯರನ್ನು ಆಹ್ವಾನಿಸಿ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸುವುದು ಶಾಲೆಯ ಹೆಗ್ಗಳಿಕೆ.

ಬಸವರಾಜ ‘ಯರಸಂ ಫೌಂಡೇಶನ್’ ಸ್ಥಾಪಿಸಿ ಅದರಿಂದ ಬಡ ಮಕ್ಕಳ ಶಾಲಾ ವೆಚ್ಚ ಭರಿಸುತ್ತಿದ್ದಾರೆ. ವಿಶೇಷವಾಗಿ ತಮ್ಮ ತೊಗಟೆವೀರ ಕ್ಷತ್ರಿಯ ಸಮಾಜದ ಬಡ ಮಕ್ಕಳ ಶಿಕ್ಷಣಕ್ಕೆ ಬೆಂಗಾವಲಾಗಿ ನಿಂತಿದ್ದಾರೆ. ಹೀಗೆ ಸಮಾಜ ಸೇವೆಗೆ ತನ್ನತನವನ್ನು ಬಲಿಕೊಟ್ಟ ಬಸವರಾಜ ಇತರರಿಗೆ ಮಾದರಿಯಾಗಿದ್ದಾರೆ. ಎಂಜಿನಿಯರ್ ಬಸವರಾಜ ಅವರಲ್ಲಿ ಅಂಕುರವಾದ ಶೈಕ್ಷಣಿಕ ಪ್ರೇಮ ಸದ್ದಿಲ್ಲದಂತೆ ಉತ್ತಮ ಕೆಲಸ ಮಾಡುತ್ತಿದೆ.

‘ಶಾಲೆಯ ಚಟುವಟಿಕೆಗಳು ಮಾದರಿ’
‘ಬಸವರಾಜ ಅವರು ಶಿಕ್ಷಣ ಕ್ಷೇತ್ರದಲ್ಲಿ ಹೊಂದಿರುವ ಕಾಳಜಿ ಅನನ್ಯ. ಅವರ ಜನಪರ ಕಾಳಜಿ, ಸಮಾಜ ಸೇವೆಯ ತುಡಿತ ಅನುಕರಣೀಯ. ಯರಸಂ ಶಾಲೆಗೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಶಾಲೆಯ ಚಟುವಟಿಕೆಗಳು ಮಾದರಿಯಾಗಿವೆ.’
–ಸುರೇಶ ಸಜ್ಜನ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ

‘ಶಾಲೆ ವಿಶಿಷ್ಟವಾಗಿದೆ’
‘ಯರಸಂ ಶಾಲೆ ಗುರುಕುಲ ಪದ್ಧತಿ ಹೊಂದಿರುವುದು ವಿಶಿಷ್ಟವಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಅವಿನಾಭಾವ ಸಂಬಂಧವಿದೆ. ಮಕ್ಕಳು ಶಾಲೆ ತಪ್ಪಿಸದೆ ಇರುವುದು ಇದಕ್ಕೆ ನಿದರ್ಶನ. ಮಕ್ಕಳಿಗೆ ಸ್ಫೋಕನ್ ಇಂಗ್ಲಿಷ್ ಕೂಡಾ ಹೇಳಿಕೊಡಲಾಗುತ್ತಿದೆ.’
–ಶಾರದಾ ನಾಗಪ್ಪ ಕಟ್ಟಿಮನಿ, ಪುರಸಭೆ ಸದಸ್ಯೆ

‘ಜೀವನದಲ್ಲಿ ದೊಡ್ಡ ಗುರಿ ಇರಬೇಕು’
‘ಜೀವನದಲ್ಲಿ ದೊಡ್ಡ ಗುರಿ ಹೊಂದುವಂತೆ ಮಕ್ಕಳಿಗೆ ಪ್ರೇರೇಪಿಸುವುದು. ಮಕ್ಕಳಲ್ಲಿ ಧನಾತ್ಮಕ ಚಿಂತನೆ, ಪ್ರಯತ್ನ, ಧೈರ್ಯ, ದೇಶಾಭಿಮಾನ ಅತ್ಮವಿಶ್ವಾಸ ಮೂಡಿಸುವ ಕೆಲಸವಾಗಬೇಕು. ಇದೇ ಉದ್ದೇಶವನ್ನು ಇಟ್ಟುಕೊಂಡು ಶಾಲೆ ಆರಂಭಿಸಿದ್ದೇನೆ. ಯಶಸ್ವಿಯಾಗುವ ಆತ್ಮವಿಶ್ವಾಸವೂ ನನ್ನಲ್ಲಿದೆ.’
–ಬಸವರಾಜ ಯರಸಂ, ಸಂಸ್ಥೆಯ ಅಧ್ಯಕ್ಷ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT