ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಗಚ್ಚ ಗ್ರಾ.ಪಂ.ಗೆ ಗ್ರಾಮಸ್ಥರಿಂದ ಮುತ್ತಿಗೆ

Last Updated 19 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ಗುತ್ತಲ: ಗ್ರಾಮ ಸಭೆಯಲ್ಲಿ ಆಯ್ಕೆಯಾಗದವರನ್ನು `ಇಂದಿರಾ ಆವಾಸ್~ ಯೋಜನೆಯ ಅಡಿಯಲ್ಲಿ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿರುವ ಕ್ರಮವನ್ನು ಖಂಡಿಸಿ ಮಂಗಳವಾರ ಸಮೀಪದ ಯಲಗಚ್ಚ ಗ್ರಾ.ಪಂ.ಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶ್ರೀನಿಧಿ ದೇಶಪಾಂಡೆ, ಕಳೆದ ಜೂನ್ 24 ರಂದು ಗ್ರಾಮದ ಮಾರುತಿ ದೇವಸ್ಥಾನದಲ್ಲಿ ನಡೆದ ಗ್ರಾಮಸಭೆಯಲ್ಲಿ ಇಂದಿರಾ ಆವಾಸ್ ಯೋಜನೆಗೆ 12 ಫಲಾನುಭವಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇದೇ ದಿನದಂದು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಗ್ರಾ.ಪಂ. ಪಿಡಿಓ ಹಾವೇರಿ ತಾ.ಪಂ. ಕಚೇರಿಗೆ ವರದಿ ಸಲ್ಲಿಸಿದ್ದಾರೆ ಎಂದು ದೂರಿದರು.

ಈ ವರದಿಯನ್ವಯ `ಇಂದಿರಾ ಆವಾಸ್~ ಯೋಜನೆಗೆ ಅಕ್ರಮವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀನಿಧಿ ದೂರಿದರು.

ಯಲಗಚ್ಚ ಗ್ರಾಮದ ಗುಡಿಸಲು ಮನೆ ಹಂಚಿಕೆಯಲ್ಲೂ ಅಕ್ರಮ ನಡೆದಿದ್ದು, ಉಳ್ಳವರಿಗೆ ಮನೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಗ್ರಾ.ಪಂ.ನ ಈ ಅಕ್ರಮಗಳನ್ನೆಲ್ಲಾ ತನಿಖೆ ನಡೆಸಿ ಪಿಡಿಓ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜಪ್ಪ ಹಾಗೂ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ ಅವರಿಗೆ ಮನವಿ ಸಲ್ಲಿಸಿ ಈಗಾಗಲೇ 20 ದಿನಗಳಾಗಿವೆ ಎಂದರು. ಆದರೆ ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮೇಲಾಧಿಕಾರಿಗಳು ಬಂದು ಅರ್ಹ ಫಲಾನುಭವಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

  ಅಧಿಕಾರಿಗಳು ಕಾರ್ಯ ನಿಮಿತ್ತ ಬೇರೆ ಕಡೆಗೆ ಇರುವುದರಿಂದ ಅವರು ಬರುವುದಕ್ಕೆ ಆಗುವುದಿಲ್ಲ. ಆದ್ದರಿಂದ ಕಾನೂನು ಕೈಗೆತ್ತಿಕೊಳ್ಳುವ ಬದಲು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ ಗುತ್ತಲ ಪಿಎಸ್‌ಐ ಜಾಕ್ಸನ್ ಡಿಸೋಜಾ ಪ್ರತಿಭಟನಾಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು.

ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದರೆ ತಾ.ಪಂ. ಕಚೇರಿ ಎದುರಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯರಾದ ನೀಲಪ್ಪ ಕುರಿಯವರ, ಮಲ್ಲೇಶಪ್ಪ ಉಡಚಮ್ಮನವರ, ಮಾಜಿ ಸದಸ್ಯ ಮೂಕಪ್ಪ ದೇಸಾಯಿ, ಮುಖಂಡರಾದ ಕೊಡೆಪ್ಪ ಹೊನ್ನಪ್ಪನವರ, ನಿಂಗಪ್ಪ ತುಕ್ಕಮ್ಮನವರ, ನೀಲಪ್ಪ ರಿತ್ತಿ, ರುದ್ರಪ್ಪ ಮೆಣಸಿನಕಾಯಿ, ಉಡಚಪ್ಪ ಕಳಸಪ್ಪನವರ ಮತ್ತಿತರರು  ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT