ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಚವಾಡಿ 300 ಕೋಟಿ ಒಡೆಯ

ತುಮಕೂರು ಗ್ರಾಮಾಂತರ ಕ್ಷೇತ್ರದ ಕಣದಲ್ಲಿ ಆಗರ್ಭ ಶ್ರೀಮಂತ
Last Updated 17 ಏಪ್ರಿಲ್ 2013, 11:31 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಚುನಾವಣಾ ಇತಿಹಾಸದಲ್ಲೇ ಆಗರ್ಭ ಶ್ರೀಮಂತ ಅಭ್ಯರ್ಥಿಯೊಬ್ಬ ಕಣಕ್ಕಿಳಿದಿರುವ ದಾಖಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಪಾಲಾಗಿದೆ.

ಇಲ್ಲಿವರೆಗೂ ನಾಮಪತ್ರ ಸಲ್ಲಿಸಿದವರಲ್ಲಿ ಅತ್ಯಂತ ಶ್ರೀಮಂತರ ಸಾಲಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಯಲಚವಾಡಿಯ ಆಡಿಟರ್ ನಾಗರಾಜ್ ಮೊದಲಿಗರಾಗಿದ್ದಾರೆ.

ಮೂಲತಃ ಆಡಿಟರ್ ವೃತ್ತಿಯ ನಾಗರಾಜ್ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ. ಬೆಂಗಳೂರು ನಿವಾಸಿಯಾಗಿದ್ದು, ನಾಗರಾಜ್ ಹಾಗೂ ಪತ್ನಿಯ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ ರೂ.300 ಕೋಟಿ ಮೀರಲಿದೆ. ಪತ್ನಿ ಬಳಿ ಇರುವ ಸ್ಥಿರಾಸ್ತಿ ಮೌಲ್ಯವೇ 199.11 ಕೋಟಿ. 199 ಕೋಟಿ ಒಡತಿಯಾಗಿದ್ದರೂ ಅವರ ಬಳಿ ಕಾರಿಲ್ಲ, ಒಂದು ಲೂನಾ ಮೊಪೆಡ್ ಇರುವುದಾಗಿ ಹೇಳಿಕೊಂಡಿದ್ದಾರೆ.

ಯಲಚವಾಡಿ ಬಳಿ ಇರುವ ಇತರೆ ವಸ್ತುಗಳ ಮೌಲ್ಯವೇ 12.89 ಕೋಟಿಯಾಗಿದ್ದರೆ, ಪತ್ನಿ ಬಳಿ 42.70 ಕೋಟಿ ಮೌಲ್ಯದ ವಸ್ತುಗಳಿವೆ.

ಸೋಮವಾರ ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ಅವರು ನೀಡಿರುವ ಆಸ್ತಿಯ ವಿವರ ರೋಚಕವಾಗಿದೆ. ಆಡಿಟರ್ ನಾಗರಾಜ್ ವಾರ್ಷಿಕ ಆದಾಯ ರೂ.20.79 ಲಕ್ಷವಾದರೆ, ಪತ್ನಿಯದು ರೂ.17 ಲಕ್ಷ. ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆ ಇಲ್ಲ. ಅವರ ಕೈಯಲ್ಲೆಗ ರೂ.1.11 ಲಕ್ಷವಿದೆ. ಪತ್ನಿ 8.9 ಲಕ್ಷ ನಗದು ಹೊಂದಿದ್ದಾರೆ.

ನಾಗರಾಜ್ ಅವರಿಗಿಂತ ಪತ್ನಿಯೇ ಹೆಚ್ಚು ಶ್ರೀಮಂತರು. ವಿವಿಧ ಬ್ಯಾಂಕ್‌ಗಳಲ್ಲಿ ರೂ. 26.49 ಲಕ್ಷ ಠೇವಣಿ ಇರಿಸಿದ್ದರೆ, ಪತ್ನಿ 40.79 ಲಕ್ಷ ಠೇವಣಿ ಹೊಂದಿದ್ದಾರೆ.

ಎಲ್‌ಐಸಿ ಮೇಲೆ ರೂ. 1 ಲಕ್ಷ,  ಮಂಗಳಾಕೇಶವ ಸೆಕ್ಯುರಿಟೀಸ್ ಮೇಲೆ ರೂ. 1.97, ತುಮಕೂರು ಕ್ಲಬ್‌ಗೆ ಮುಂಗಡವಾಗಿ ರೂ. 1 ಲಕ್ಷ ಹೂಡಿಕೆ ಮಾಡಿದ್ದಾರೆ. ಪತ್ನಿ ಎಲ್‌ಐಸಿ ಮೇಲೆ ರೂ. 1 ಲಕ್ಷ ಹಾಗೂ ನಿವೇಶನಗಳ ಮೇಲೆ ಮುಂಗಡವಾಗಿ ರೂ. 23.42 ಕೋಟಿ ಹೂಡಿಕೆ ಮಾಡಿದ್ದರೂ ಅವರ ಬಳಿ ಕಾರಿಲ್ಲ, ಕೇವಲ ಲೂನಾ ಮಾತ್ರವಿದೆ.

ಸ್ಕಾರ್ಫಿಯೋ ವಾಹನದ ಮಾಲೀಕರಾಗಿರುವ ಆಡಿಟರ್ ನಾಗರಾಜ್ ಅವರಿಗೆ ಚಿನ್ನದ ಮೇಲೆ ವ್ಯಾಮೋಹ ಇಲ್ಲ. ಹೀಗಾಗಿ ಅವರ ಬಳಿ ಒಂದು ಗ್ರಾಂ ಚಿನ್ನ ಕೂಡ ಇಲ್ಲ. ಆದರೆ ಅವರ ಪತ್ನಿ  ರೂ. 41 ಲಕ್ಷ ಮೌಲ್ಯದ ಚಿನ್ನಾಭರಣಗಳ ಒಡತಿ. ಹೂಡಿಕೆ, ಆದಾಯ, ಚಿನ್ನಾಭರಣ ಎಲ್ಲ ಸೇರಿದಂತೆ ನಾಗರಾಜ್ ರೂ.41.26 ಕೋಟಿ ಹೊಂದಿದ್ದರೆ, ಅವರ ಪತ್ನಿ ರೂ.24.36 ಕೋಟಿ ಮೌಲ್ಯದ ಯಜಮಾನತಿ.

1999ರಿಂದ 2009 ಅಂದರೆ ಕೇವಲ ಹತ್ತೇ ವರ್ಷದಲ್ಲಿ ನಾಗರಾಜ್ ರೂ.35 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ.

ಕುಣಿಗಲ್‌ನ ವೈ.ಜಿ.ಪುರದಲ್ಲಿ ಒಂದೂವರೆ ಎಕರೆ ಭೂಮಿ, ಬೆಂಗಳೂರು ಉತ್ತರ ಜಿಲ್ಲೆಯ ಹೊಸಹಳ್ಳಿ ಗೊಲ್ಲರಪಾಳ್ಯದಲ್ಲಿ 15 ಗುಂಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಿಂದ್ಲು ಗ್ರಾಮದಲ್ಲಿ 4.19 ಎಕರೆ, ವೈ.ಜಿ.ಪುರದಲ್ಲಿ 20 ಗುಂಟೆ, ಬೆಂಗಳೂರು ಗ್ರಾಮಾಂತರ ಮಾಚೋಹಳ್ಳಿಯಲ್ಲಿ 8 ಗುಂಟೆ, ಬೆಂಗಳೂರು ದಕ್ಷಿಣ ಜಿಲ್ಲೆ ಅಜ್ಜನಹಳ್ಳಿಯಲ್ಲಿ 27.33 ಎಕರೆ, ಜುಜ್ಜನಗುಪ್ಪೆಯಲ್ಲಿ 1 ಎಕರೆ, ಸುಲಿವರದಲ್ಲಿ 4.32 ಎಕರೆ, ಬೆಂಗಳೂರು ಕುರುಬರ ಪಾಳ್ಯದಲ್ಲಿ 3.23 ಎಕರೆ ಹಾಗೂ ತಾವರೆಕೆರೆಯಲ್ಲಿ 3.25 ಎಕರೆ ಭೂಮಿ ಹೊಂದಿದ್ದಾರೆ. ಇಷ್ಟೆಲ್ಲ ಭೂಮಿಯನ್ನು 12.29 ಕೋಟಿ ನೀಡಿ ಖರೀದಿಸಿದ್ದು, ಅಭಿವೃದ್ಧಿಗಾಗಿ 15.50 ಲಕ್ಷ ವೆಚ್ಚ ಮಾಡಿದ್ದಾರೆ. ಪ್ರಸ್ತುತ ಈ ಭೂಮಿಯ ಮಾರುಕಟ್ಟೆ ಮೌಲ್ಯ ರೂ. 35 ಕೋಟಿ ಎಂದು ನಮೂದಿಸಿದ್ದಾರೆ.

ನಾಗರಾಜ್ ಪತ್ನಿ ಕೊಡಿಗೇಹಳ್ಳಿಯಲ್ಲಿ 1.5 ಎಕರೆ, ಹೊಸಹಳ್ಳಿ ಗೊಲ್ಲರಪಾಳ್ಯದಲ್ಲಿ 20 ಗುಂಟೆ, ಮಾಚೋಹಳ್ಳಿಯಲ್ಲಿ 11.25 ಎಕರೆ, ತಿಂದ್ಲುವಿನಲ್ಲಿ 1.2 ಎಕರೆ, ದೊಡ್ಡಬಳ್ಳಾಪುರ ದೇವನಹಳ್ಳಿಯಲ್ಲಿ 3.23 ಎಕರೆ, ಅಜ್ಜನಹಳ್ಳಿಯಲ್ಲಿ 23.15 ಎಕರೆ, ದೊಡ್ಡಮಾರನಹಳ್ಳಿಯಲ್ಲಿ 8.3 ಎಕರೆ, ಸುಲಿವರದಲ್ಲಿ 28.35 ಎಕರೆ, ಕುರುಬರಪಾಳ್ಯದಲ್ಲಿ 1 ಎಕರೆ ಹಾಗೂ ತಾವರೆಕೆರೆಯಲ್ಲಿ 2.39 ಎಕರೆ ಭೂಮಿ ಹೊಂದಿದ್ದಾರೆ. ಇಷ್ಟು ಭೂಮಿಯನ್ನು ಕೇವಲ 3 ವರ್ಷದಲ್ಲಿ (2006ರಿಂದ 2009) ರೂ. 18.40 ಕೋಟಿ ನೀಡಿ ಖರೀದಿಸಿದ್ದಾರೆ. ಭೂಮಿ ಮೇಲೆ 25 ಲಕ್ಷ ಹೂಡಿಕೆ ಮಾಡಿದ್ದು, ಪ್ರಸ್ತುತ ಮಾರುಕಟ್ಟೆ ಮೌಲ್ಯ ರೂ. 52 ಕೋಟಿ.

ಬೆಂಗಳೂರಿನ ಸಜ್ಜೆಪಾಳ್ಯದಲ್ಲಿ ನಾಗರಾಜ್ 25 ಲಕ್ಷ ಬೆಲೆಯ ಮನೆ ಹೊಂದಿದ್ದರೆ, ಪತ್ನಿ ಮಾರೇನಹಳ್ಳಿಯಲ್ಲಿ 1 ಕೋಟಿ ಮೌಲ್ಯದ ಮನೆಯ ಒಡತಿ. ಅವರಿಗೆ ಪಿತ್ರಾರ್ಜಿತವಾಗಿ ರೂ. 12.89 ಕೋಟಿ ಮೌಲ್ಯದ ಆಸ್ತಿ ಬಂದಿದೆ. ನಾಗರಾಜ್ ರೂ. 12.89 ಕೋಟಿ ಸಾಲ ಹೊಂದಿದ್ದರೆ, ಪತ್ನಿ ರೂ. 42.70 ಕೋಟಿ ಸಾಲಗಾತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT