ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ: ಬಿ.ಟಿ. ಹತ್ತಿ: ರೈತರ ಅತೃಪ್ತಿ

Last Updated 20 ಜೂನ್ 2012, 9:40 IST
ಅಕ್ಷರ ಗಾತ್ರ

ಯಲಬುರ್ಗಾ:  ತಾಲ್ಲೂಕಿನ ಕಲಕಬಂಡಿ ಗ್ರಾಮದಲ್ಲಿ ಕೆಲ ರೈತರು ಬಿತ್ತನೆ ಮಾಡಿದ ಬನ್ನಿ ಬಿ.ಟಿ-2 ಎಂಬ ಹೆಸರಿನ ಹತ್ತಿ ಬೆಳೆಯ ಬಹಳಷ್ಟು ಬೀಜಗಳು ಮೊಳಕೆಯೊಡೆಯದಿರುವ ಬಗ್ಗೆ ದೂರಿದ್ದಾರೆ.

ಗ್ರಾಮದ ಕರಿಬಸನಗೌಡ ಪಾಟೀಲ, ಚಂದಪ್ಪ ಸಣ್ಣಗ್ಯಾನನಗೌಡ್ರ, ರಮೇಶ ಪೊಲೀಸಪಾಟೀಲ, ಸುರೇಶ ಸಣ್ಣಗ್ಯಾನನಗೌಡ್ರ ಎಂಬುವವರು ಎನ್‌ಎಸ್‌ಸಿ-145 ಬಿಟಿ-2 ಎಂಬ ತಳಿ ಹತ್ತಿ ಬೀಜ ನಾಟಿ ಮಾಡಿದ್ದು ಕಂಪೆನಿ ನಿಗದಿಪಡಿಸಿದ ಮೊಳೆಕೆಯೊಡೆಯುವ ಪ್ರಮಾಣಕ್ಕಿಂತ ಶೇಕಡ 25ರಷ್ಟು ಬೀಜಗಳು ನಾಟಿಲ್ಲ ಎಂದು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆ ಸಿಂಧನೂರಿನ ಮಹಾಲಕ್ಷ್ಮಿ ಎಂಟರ್‌ಪ್ರೈಸಸ್ ಎಂಬ ಬೀಜ ಮಾರಾಟಗಾರರಿಂದ ಮೇ 14ರಂದು ಒಟ್ಟು 11 ಪಾಕೆಟ್‌ಗಳನ್ನು ಖರೀದಿಸಿದ್ದಾರೆ. ಅವರಲ್ಲಿ ಕರಿಬಸನಗೌಡ ಎಂಬ ರೈತ ನಾಲ್ಕು ಪಾಕೆಟ್ ಬೀಜ ನಾಟಿ ಮಾಡಿದ್ದು ಬಹಳಷ್ಟು ಅಂತರದಲ್ಲಿ ಸಸ್ಯಗಳು ಇರುವುದು ಕಂಡುಬಂದಿದೆ.

ಅದನ್ನು ಗಮನಿಸಿದ ಚಂದಪ ಸಣ್ಣಗ್ಯಾನನಗೌಡ್ರ ಎಂಬ ರೈತ ಅಂತರ ಹೆಚ್ಚಾಗುವುದನ್ನು ಗಮನಿಸಿ ಗುಣಿಗೆ ತಲಾ ಎರಡರಂತೆ ಬೀಜ ನಾಟಿ ಮಾಡಿದ್ದರೂ ಸಸ್ಯಗಳ ಅಂತರ ಹೆಚ್ಚಾಗಿದೆ. ರಮೇಶ ಪೊಲೀಸಪಾಟೀಲ, ಸುರೇಶ ಸಣ್ಣಗ್ಯಾನನಗೌಡರ ಹೊದಲ್ಲಿಯೂ ಸಸ್ಯಗಳ ಸಂಖ್ಯೆ ಕಡಿಮೆಯಾಗಿದ್ದನ್ನು ಗಮನಿಸಿ ಬೇರೆ ತಳಿ ಹತ್ತಿ ಬೀಜಗಳನ್ನು ನಾಟಿ ಮಾಡಿರುವುದು  ಕಂಡುಬಂದಿತು.

450 ಗ್ರಾಮ್ ತೂಕದ ಪ್ರತಿ ಬೀಜದ ಪಾಕೆಟ್‌ಗೆ ರೂ 930 ದರದಲ್ಲಿ ಬೀಜ ಖರೀದಿಸಿರುವ ರೈತರು ಬಿತ್ತನೆ, ಕಳೆ, ಗೊಬ್ಬರ ಇತರೆ ಕೆಲಸಕ್ಕೆ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ ಸಸ್ಯಗಳ ಸಂಖ್ಯೆಯೇ ಕಡಿಮೆಯಾಗಿರುವುದರಿಂದ ಕಡಿಮೆ ಇಳುವರಿ ಬರುವುದರಿಂದ ಚಿಂತೆಗೊಳಗಾಗಿದ್ದಾರೆ.

ಮೊಳಕೆಯೊಡೆಯದ ಬಗ್ಗೆ ಬೀಜ ನಾಟಿ ಮಾಡಿದ ಎಂಟು ದಿನಗಳ ನಂತರ ಬೀಜ ಮಾರಾಟಗಾರರ ಗಮನಕ್ಕೆ ತಂದಾಗ ಕೊಪ್ಪಳದಲ್ಲಿರುವ ಕಂಪೆನಿಯ ಪ್ರತಿನಿಧಿಯೊಬ್ಬರು ಜಮೀನು ತಪಾಸಣೆ ನಡೆಸಿ ಹೋಗಿದ್ದು ಈವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಅಂಗಡಿಯವರನ್ನು ಕೇಳಿದರೆ ಕಂಪೆನಿಯವರನ್ನು ಕೇಳಿ ಎಂದು ಹೇಳುತ್ತಿದ್ದಾರೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ ಎಂದು ವಿವರಿಸಿದರು.

ಈ ಹಿಂದೆ ಮೆಕ್ಕೆಜೋಳ ಬೆಳೆಯುತ್ತಿದ್ದರೂ ಅದಕ್ಕೂ ರೋಗ ಬಂದಿದ್ದರಿಂದ ಹಾನಿಯಾಗಿತ್ತು. ಉತ್ತಮ ಇಳುವರಿ, ಕೈತುಂಬ ಹಣ ಬರುತ್ತದೆ, ಅಲ್ಲದೇ ರೋಗ ಬರುವುದಿಲ್ಲ, ಹೆಚ್ಚಿನ ಕೀಟನಾಶಕ ಸಿಂಪಡಿಸುವ ಅಗತ್ಯವಿಲ್ಲ ಎಂದು ಕೆಲವರ ಮಾತು ಕೇಳಿ ಬಿಟಿ ಹತ್ತಿ ಬೆಳೆಗೆ ಮುಂದಾದೆವು. ಆದರೆ ನಿಗದಿತ ಪ್ರಮಾಣದಲ್ಲಿ ಬೀಜಗಳೇ ಮೊಳಕೆಯೊಡೆದಿಲ್ಲ ಎಂದು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT