ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಮ್ಮನ ಸನ್ನಿಧಿಗೆ ಹರಿದುಬಂದ ಭಕ್ತಸಾಗರ

Last Updated 8 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ಸವದತ್ತಿ: ರಾಜ್ಯದ ಮೂಲೆ ಮೂಲೆಗಳಿಂದ ಪುಣ್ಯಕ್ಷೇತ್ರ ಯಲ್ಲಮ್ಮನ ಸನ್ನಿಧಿಗೆ ಹರಿದು ಬಂದ ಭಕ್ತ ಸಾಗರ, ಮುಗಿಲು ಮುಟ್ಟಿದ `ಉಧೋ ಉಧೋ ಯಲ್ಲಮ್ಮ...~ ಉದ್ಘೋಷ; ದೇವಾಲಯದ ತುಂಬೆಲ್ಲ ಭಂಡಾರ, ಅರಿಷಿಣದ ಓಕಳಿಯಾಟ...

`ಭಾರತ ಹುಣ್ಣಿಮೆ~ ದಿನವಾದ ಮಂಗಳವಾರ ಪುಣ್ಯಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ರೇಣುಕಾ ದೇವಿ ದರ್ಶನ ಪಡೆದುಕೊಂಡರು. ಮಹಾರಾಷ್ಟ್ರ, ಗೋವಾ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಂದ ಭಕ್ತರ ದಂಡು ರೇಣುಕಾ ದೇವಿಯ ಸನ್ನಿಧಿಗೆ ಹರಿದು ಬಂದಿತ್ತು.

ದೇವಸ್ಥಾನದ ಆವರಣದಲ್ಲಿ ಭಂಡಾರ, ಅರಿಷಿಣವನ್ನು ತೂರಾಡುತ್ತಿದ್ದ ಕುಣಿದ ಭಕ್ತರು ಯಲ್ಲಮ್ಮನ ಭಜನೆ ಮಾಡಿದರು. ಸಮೀಪದ `ಎಣ್ಣೆ ಹೊಂಡ~ದಲ್ಲಿ ಭಕ್ತರು ಪವಿತ್ರಸ್ನಾನ ಮಾಡಿ ದೇವಿಯ ದರ್ಶನ ಪಡೆದರು. ಸ್ನಾನ ಮಾಡಿದ ಬಳಿಕ ಕೆಲವು ಭಕ್ತರು ದೇವಾಲಯದ ಪ್ರಾಂಗಣದ ಸುತ್ತ ದೀಡ ನಮಸ್ಕಾರ ಹಾಕಿ ಹರಕೆ ತೀರಿಸಿಕೊಂಡರು. ತಾವು ತಂದಿದ್ದ ಸೀರೆಗಳನ್ನು ದೇವಿಗೆ ಅರ್ಪಿಸಿದರು. ಗುಡಿಯ ಪ್ರಾಂಗಣದ ಸುತ್ತಲಿನ ಮಹಡಿಯ ಮೇಲೆ ಹಲವೆಡೆ ಹಚ್ಚಿದ್ದ ದೀಪಕ್ಕೆ ಕರ್ಪೂರಗಳನ್ನು ಹಾಕಿ ಹರಕೆ ತೀರಿಸಿದರು.

ಋಷಿ ಜಮದಗ್ನಿ ಆಶ್ರಮದಲ್ಲಿ ಇದ್ದ `ಕಾಮದೇನು~ ತನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ನಿರಾಶನಾದ ರಾಜ ಕಾರ್ತಿವೀರ್ಯಾರ್ಜನನು `ಹೊಸ್ತಿಲ ಹುಣ್ಣಿಮೆ~ ದಿನದಂದು ತಪಸ್ಸು ಮಾಡುತ್ತಿದ್ದ ಜಮದಗ್ನಿಯ ಶಿರಚ್ಛೇದನ ಮಾಡುತ್ತಾನೆ. ಹೀಗಾಗಿ ಹೊಸ್ತಿಲ ಹುಣ್ಣಿಮೆ ದಿನ ಜಮದಗ್ನಿಯ ಪತ್ನಿ ರೇಣುಕಾ ದೇವಿ ವಿಧವೆಯಾಗುತ್ತಾಳೆ. ಇದರಿಂದ ಸಿಟ್ಟಿಗೆದ್ದ ಪರಶುರಾಮನು, ಪ್ರಪಂಚವನ್ನೆಲ್ಲ ಸುತ್ತಿ ಎಲ್ಲ ಕ್ಷತ್ರೀಯರ ಸಂಹಾರ ಮಾಡುತ್ತಾನೆ.

ಪರಶುರಾಮನು ದವನದ ಹುಣ್ಣಿಮೆ ದಿನ ತನ್ನ ತಂದೆ ಜಮದಗ್ನಿಯ ಜೀವವನ್ನು ಪುನಃ ತರಿಸುವುದರಿಂದ ಅಂದು ರೇಣುಕಾ ದೇವಿ ಮುತ್ತೈದೆಯಾಗುತ್ತಾಳೆ. ಹೊಸ್ತಲ ಹುಣ್ಣಿಮೆಯಿಂದ ದವನದ ಹುಣ್ಣಿಮೆವರೆಗಿನ ಮೂರು ತಿಂಗಳ ಕಾಲ ವಿಧವೆಯಾಗಿರುವ ರೇಣುಕಾ ದೇವಿಗೆ ಸಾಂತ್ವನ ಹೇಳಲು ಸಾವಿರಾರು ಜನರು ಬರುತ್ತಿದ್ದರು. ಮುಂದೆ ರೇಣುಕಾ ದೇವಿಯೇ `ಎಲ್ಲರ ಅಮ್ಮ ಯಲ್ಲಮ್ಮ~ ಆಗುತ್ತಾಳೆ ಎಂಬ ಪ್ರತೀತಿ ಇದೆ. 

ಹೀಗಾಗಿ ಹೊಸ್ತಲ ಹುಣ್ಣಿಮೆಯಿಂದ ದವನದ ಹುಣ್ಣಿಮೆವರೆಗೂ ದೇವಿಯ ದಿನವಾದ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಲಕ್ಷಾಂತರ ಭಕ್ತರು ಯಲ್ಲಮ್ಮನ ಗುಡ್ಡಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ. ಯಲ್ಲಮ್ಮನ ಜಾತ್ರೆಯ ಮುಖ್ಯ ದಿನವಾದ `ಭಾರತ ಹುಣ್ಣಿಮೆ~ ಈ ಬಾರಿ ಮಂಗಳವಾರ ಬಂದಿದ್ದು ವಿಶೇಷವಾಗಿತ್ತು.

ಭಕ್ತಿ ಸಮರ್ಪಣೆ: ಸಾವಿರಾರು ಭಕ್ತರು ದೇವಾಲಯದ ಸುತ್ತ ಒಲೆ ಹೂಡಿ ಕಡಲೆ ಬೇಳೆಯ ಕರಿಗಡುಬು ಸಿದ್ಧಪಡಿಸಿ ಯಲ್ಲಮ್ಮನ ದೇವಿಯ ಹಡ್ಡಲಗಿ (ಮಡಿಲು) ತುಂಬಿ ಪೂಜಿಸಿದರು. ದೇವಾಲಯದ ಆವರಣದ ಸುತ್ತ ಭಂಡಾರ, ಅರಿಷಿಣಗಳನ್ನು ತೂರಾಡಿದರು. ಪರಸ್ಪರ ಭಂಡಾರವನ್ನು ಎರಚುತ್ತ ಯಲ್ಲಮ್ಮನ ಸ್ತುತಿ ಮಾಡಿ ಹರಕೆ ತೀರಿಸಿದರು.

ಸಂಜೆಯವರೆಗೂ ಯಲ್ಲಮ್ಮನ ಸನ್ನಿಧಿಗೆ ಸಂಜೆಯವರೆಗೂ ಭಕ್ತರ ಮಹಾಪೂರ ಹರಿದು ಬರುತ್ತಿತ್ತು.
ಏಪ್ರಿಲ್ 6ರಂದು ನಡೆಯುವ ದವನದ ಹುಣ್ಣಿಮೆಯವರೆಗೂ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆಯಲಿದ್ದಾರೆ.

ಭಾರಿ ಟ್ರಾಫಿಕ್ ಜಾಮ್

 ಭಾರತ ಹುಣ್ಣಿಮೆ ದಿನದ ಅಂಗವಾಗಿ ಮಂಗಳವಾರ ಸುಮಾರು 30 ಸಾವಿರಕ್ಕೂ ಹೆಚ್ಚು ವಾಹನಗಳು ಯಲ್ಲಮ್ಮನ ಗುಡ್ಡಕ್ಕೆ ಆಗಮಿಸಿತ್ತು. ನಾಲ್ಕೈದು ದಿನಗಳಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಚಕ್ಕಡಿ ಗಾಡಿಗಳು ಬಂದಿದ್ದವರು. ಮಂಗಳವಾರ ಸಾವಿರಾರು ಭಕ್ತರು ತಮ್ಮ ವಾಹನಗಳೊಂದಿಗೆ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸಿದ್ದರಿಂದ ಉಂಟಾದ ಟ್ರಾಫಿಕ್ ಜಾಮ್‌ನಿಂದಾಗಿ ಗುಡ್ಡದ ಮೇಲಿನ ಬಸ್‌ನಿಲ್ದಾಣದಿಂದ ಸವದತ್ತಿ ಪಟ್ಟಣಕ್ಕೆ ತಲುಪಲು ಸುಮಾರು ಎರಡು ಗಂಟೆಗಳ ಅವಧಿ ಬೇಕಾಯಿತು.

ಸಾವಿರಾರು ವಾಹನಗಳು ಆಗಮಿಸುತ್ತವೆ ಎಂಬುದನ್ನು ತಿಳಿದಿದ್ದರೂ `ಸಂಚಾರ ನಿರ್ವಹಣೆ~ ಮಾಡುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರಯಾಣಿಕರು ಇಲಾಖೆಯ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT