ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರದ ಗ್ರಾಮದೇವಿ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಸಹ್ಯಾದ್ರಿಯ ಹಚ್ಚ ಹಸಿರಿನ ಬೆಟ್ಟ ಗುಡ್ಡಗಳ ನಡುವೆ ಇಳಿಜಾರಿನ ಕಣಿವೆ. ಅಲ್ಲಲ್ಲಿ ಅಸಂಖ್ಯಾತ ಹಳ್ಳಕೊಳ್ಳ, ಜಲಪಾತಗಳು. ಇಂಥ ಪ್ರಾಕೃತಿಕ ಸೌಂದರ್ಯವನ್ನು ತನ್ನೊಡಲಲ್ಲಿ ಇರಿಸಿಕೊಂಡ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕು ಪ್ರವಾಸಿಗರ ನೆಚ್ಚಿನ ತಾಣ.

ಐತಿಹಾಸಿಕ ಹಿನ್ನೆಲೆಯನ್ನೂ ಹೊಂದಿರುವ ಯಲ್ಲಾಪುರದ ಪ್ರಮುಖ ಧಾರ್ಮಿಕ ಕ್ಷೇತ್ರ ಗ್ರಾಮದೇವಿ ದೇವಸ್ಥಾನ. ಇಲ್ಲಿನ ಆಚರಣೆಗಳೂ ವಿಶಿಷ್ಟ. ಪ್ರತಿ ಮೂರು ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಜರುಗುವ ಅತಿ ದೊಡ್ಡ ಜಾತ್ರೆಗಳಲ್ಲಿ ಗ್ರಾಮದೇವಿ ಜಾತ್ರೆಯೂ ಒಂದು.

600 ವರ್ಷಗಳ ಹಿಂದೆ ತಾಲ್ಲೂಕಿನ ನಾರಾಯಣಗೆರೆ ಗ್ರಾಮದಲ್ಲಿ ಹೊಲ ಉಳುಮೆ ಮಾಡುತ್ತಿರುವ ಸಂದರ್ಭದಲ್ಲಿ ರೈತರೊಬ್ಬರಿಗೆ ಸವಕಲಾದ ಎರಡು ಪ್ರತಿಮೆಗಳು ಸಿಕ್ಕಿದವು. ಅವುಗಳನ್ನು ತಂದು `ಕಾಳಮ್ಮ~ ಮತ್ತು `ದುರ್ಗಮ್ಮ~ ಎನ್ನುವ ಹೆಸರಿನೊಂದಿಗೆ ಪ್ರತಿಷ್ಠಾಪಿಸಿದರು.
 
ನಂತರ ನಿತ್ಯ ಪೂಜೆ, ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಗಳು ಆರಂಭವಾದವು. ಕಾಲಾಂತರದಲ್ಲಿ ಇಬ್ಬರೂ ದೇವಿಯರು ಗ್ರಾಮ ದೇವತೆಗಳಾದರು. ಈಗ ಇಬ್ಬರಿಗೂ ಒಂದೇ ಸ್ಥಳದಲ್ಲಿ ಪೂಜೆ ಸಲ್ಲುತ್ತದೆ.

ಮೊದಲೇ ಉಲ್ಲೇಖಿಸಿದಂತೆ ಜಾತ್ರೆ ನಿಮಿತ್ತ ನಡೆಯುವ `ಹೊರ ಮಂಗಳವಾರ~, ದೇವಿಯರ ಲಗ್ನ, ಅನ್ನಬಲಿಯ ಬೇಲಿ, ಕಾಳರಾತ್ರಿಯಲ್ಲಿ ಉತ್ಸವದ ವಿಸರ್ಜನೆ ಮೊದಲಾದ ವಿಶಿಷ್ಟ ಆಚರಣೆಗಳು ಕುತೂಹಲ ಕೆರಳಿಸುತ್ತವೆ. ಹೊರ ಮಂಗಳವಾರ ಜಾತ್ರೆಯ ಪೂರ್ವ ತಯಾರಿಯ ಒಂದು ಭಾಗ.
 
ಅಂದು ಇಡೀ ಪಟ್ಟಣದ ಜನ ಬೆಳಿಗ್ಗೆಯಿಂದ ಸಂಜೆ ವರೆಗೆ ಮನೆಯ ಬಾಗಿಲುಗಳನ್ನು ಮುಚ್ಚಿ ಊರ ಹೊರಗೆ ವಾಸ್ತವ್ಯ ಮಾಡುತ್ತಾರೆ. ಮನೆಯಲ್ಲಿ ದೇವರ ಮುಂದೆ ದೀಪ ಹಚ್ಚಿ ನೈವೇದ್ಯ ಇಟ್ಟು ಬುತ್ತಿ ಕಟ್ಟಿಕೊಂಡು ಊರಾಚೆ ಬಂದು ಕಾಲ ಕಳೆಯುತ್ತಾರೆ.
 
ಇಂಥ ಭಕ್ತರ ಮನೆಗೆ ಗ್ರಾಮದೇವಿ ಬಂದು ಹೋಗುತ್ತಾಳೆ ಎನ್ನುವ ನಂಬಿಕೆಯಿದೆ. ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವುದರಿಂದ ಅಘೋಷಿತ ಬಂದ್‌ನ ವಾತಾವರಣ ಇರುತ್ತದೆ.

ಸೇವಾ ವಿವರ
ಉಡಿ ತುಂಬುವುದು 50 ರೂ.
ಕುಂಕುಮಾರ್ಚನೆ 25 ರೂ.
ಆರತಿ, ಅಕ್ಷತೆ ಪೂಜೆ 10 ರೂ.
ಹರಕೆ ಸೇವೆ 101 ರೂ.
ಅಷ್ಟೋತ್ತರ 10 ರೂ.
ವಿಶೇಷ ದರ್ಶನ ಕಾಣಿಕೆ 100 ರೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT