ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಪುಷ್ಪೋದ್ಯಮಿ

Last Updated 19 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಅವರು ಅರೆಕಾಲಿಕ ಉಪನ್ಯಾಸಕಿಯಾಗಿದ್ದರು. ಹೀಗಾಗಿ ಸಂಬಳವೂ ಪೂರ್ಣ ಬರುತ್ತಿರಲಿಲ್ಲ. ಎರಡು ವರ್ಷದ ಮಗನ ಸಲುವಾಗಿ, ಅವನ ಭವಿಷ್ಯ ರೂಪಿಸುವುದಕ್ಕಾಗಿ ಅವರು ಛಲ ತೊಟ್ಟರು. ಇದರ ಪರಿಣಾಮ ಅವರು ಸಸ್ಯಶಾಸ್ತ್ರದಲ್ಲಿ ಎಂಎಸ್ಸಿ ಓದಿ ಉಪನ್ಯಾಸಕಿಯಾಗಿದ್ದನ್ನು ಬಿಟ್ಟು ಬ್ಯಾಂಕಿನಿಂದ ಸಾಲ ಪಡೆದು ಪುಷ್ಪೋದ್ಯಮ ಆರಂಭಿಸಿದರು. ಅವರಿಗೆ ಸಾಥಿಯಾಗಿದ್ದು ತ್ರಿ ಸ್ಟಾರ್ ಹೋಟೆಲ್!

ಹೌದು, 1993ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾದ ನವೀನ್ ಹೋಟೆಲಿಗೆ ಹೂವಿನ ಕುಂಡಗಳನ್ನು ಸರಬರಾಜು ಮಾಡುವ ಮೂಲಕ ಹುಬ್ಬಳ್ಳಿಯಲ್ಲಿ ಏಕೈಕ ಮಹಿಳಾ ಪುಷ್ಪೋದ್ಯಮಿಯಾದರು. ಅವರು ಸವಿತಾ ಶಿಗ್ಗಾಂವ.

ಈಗಲೂ ಅವರು ದಿನ ಬಿಟ್ಟು ದಿನ ನವೀನ್ ಹೋಟೆಲಿಗೆ ಹೂವಿನ ಕುಂಡಗಳನ್ನು ಸರಬರಾಜು ಮಾಡುತ್ತಾರೆ. ಆಗ ಒಂದು ಕುಂಡಕ್ಕೆ 100-120 ರೂಪಾಯಿ ಪಡೆಯುತ್ತಿದ್ದ ಅವರು ಈಗ ಒಂದು ಕುಂಡಕ್ಕೆ 150 ರೂಪಾಯಿ ಪಡೆಯುತ್ತಾರೆ ಅಷ್ಟೆ.  ತನ್ನನ್ನು ಉದ್ಯಮಿಯಾಗಿ ರೂಪಿಸಿದ ನವೀನ್ ಹೋಟೆಲ್‌ಗೆ ಋಣಿಯಾಗಿರುವ ಅವರು ಕಡಿಮೆ ದರದಲ್ಲಿ ಕೊಡುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ಹೂವಿನ ಹಾರಗಳೇ ಹೆಚ್ಚು ಪ್ರಚಲಿತವಿದ್ದ ತೊಂಬತ್ತರ ದಶಕದಲ್ಲಿ ಹೂಗುಚ್ಛಗಳನ್ನು ಮಾರುವ ಮೂಲಕ, ಪುಷ್ಪೋದ್ಯಮಕ್ಕೊಂದು ಮಾರುಕಟ್ಟೆ ಒದಗಿಸಿದ ಹೆಗ್ಗಳಿಕೆ ಸವಿತಾ ಶಿಗ್ಗಾಂವ ಅವರದು. ಈಗ ಪ್ರತಿ ತಿಂಗಳು ರೂ. 20-25 ಸಾವಿರ ವಹಿವಾಟು ನಡೆಸುತ್ತಾರೆ. `ಸೀಸನ್‌ನಲ್ಲಿ  ಇದು 50 ಸಾವಿರ ಮೀರುತ್ತದೆ~ ಎನ್ನುತ್ತಾರೆ.

ಇಂಥ ಯಶಸ್ವಿ ಉದ್ಯಮಿಯನ್ನು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಸ್ವ ಸಹಾಯ ಗುಂಪುಗಳಿಗೆ ಹಾಗೂ ಕಿರು ಸಾಲ ಗುಂಪುಗಳಿಗೆ ಕೆನರಾ ಬ್ಯಾಂಕ್ ಏರ್ಪಡಿಸಿದ್ದ ಸಾಲ ವಿತರಣೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಹಿಂದೊಮ್ಮೆ ಅವರು ಕೆನರಾ ಬ್ಯಾಂಕಿನಿಂದ ಸಾಲ ಪಡೆದ ಕಾರಣದ ಜೊತೆಗೆ ಇತರ ಮಹಿಳೆಯರಿಗೆ ಸ್ಫೂರ್ತಿಯಾಗಲಿ ಎನ್ನುವ ಕಾರಣವೂ ಇತ್ತು.

ಅವರು ಪುಷ್ಪೋದ್ಯಮಿಯಾಗುವುದರ ಹಿಂದೆ ದೊಡ್ಡ ಸಂಸ್ಕಾರವಿದೆ. ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಬಿಎಸ್ಸಿ ಓದುವಾಗಲೇ ಮನೆಯ ಅಂಗಳದಲ್ಲಿ ತಮ್ಮ ಸೋದರಿಯರೊಂದಿಗೆ ಗ್ಲ್ಯಾಡೋಲಸ್ ಹೂವುಗಳನ್ನು ಬೆಳೆಸುತ್ತಿದ್ದರು.

ಜೊತೆಗೆ ಹುಬ್ಬಳ್ಳಿಯ ಶಿರೂರು ಪಾರ್ಕ್‌ನಲ್ಲಿ ಅವರ ತಂದೆ ವೀರಪ್ಪ ಶಿಗ್ಗಾಂವ ಅವರ ಐದು ಎಕರೆ ಜಾಗದಲ್ಲಿ ವಿವಿಧ ಹೂಗಳ ಕಸಿ ಮಾಡಿ ಭಿನ್ನವಾದ ಹೂಗಳನ್ನು ಬೆಳೆದರು.
 
ಹೀಗೆ ಹೂವಿನ ತೋಟ ಮಾಡಿ, ಅರಳಿದ ಹೂವುಗಳನ್ನು ನೆರೆಯವರಿಗೆ, ಪರಿಚಿತರಿಗೆ ಕೊಟ್ಟರು. `ಪುಕ್ಕಟೆಯಾಗಿ ಯಾಕೆ ಕೊಡುತ್ತೀರಿ. ಮಾರಾಟ ಮಾಡಿ~ ಎನ್ನುವ ಸಲಹೆಗೆ ಸಮ್ಮತಿಸಿ ನವೀನ್ ಹೋಟೆಲಿಗೆ ಕೊಡಲು ಆರಂಭಿಸಿದರು. ಆ ಹೋಟೆಲಿಗೆ ಬಂದವರು ಹೂವಿನ ಅಲಂಕಾರ ಗಮನಿಸಿ `ಎಲ್ಲಿ ಸಿಗುತ್ತದೆ~ ಎಂದು ವಿಚಾರಿಸಿ, ದೂರವಾಣಿ ಸಂಖ್ಯೆ ಪಡೆದು ಸವಿತಾ ಅವರನ್ನು ಸಂಪರ್ಕಿಸಿದರು.

ಹಾಗೆ ನಿಧಾನವಾಗಿ ಅವರಿಗೆ ವಹಿವಾಟು ಬೆಳೆಯಿತು. ನಂತರ ನವೀನ್ ಹೋಟೆಲಿನಲ್ಲಿ ನಡೆಯುವ ಸಮಾವೇಶ, ಮದುವೆಯ ಸಭಾಂಗಣಗಳನ್ನು ಸಿಂಗರಿಸಿದರು. ಅದು ಗಮನ ಸೆಳೆದು ಹುಬ್ಬಳ್ಳಿಯ ಇತರ ಜನರೂ ತಮ್ಮ ಮದುವೆಯ ಮಂಟಪ ಅಲಂಕರಿಸಲು ಕರೆಯಲಾರಂಭಿಸಿದರು. ನಂತರ ಅವರು `ಫ್ರೆಗ್ರೆನ್ಸ್ ಫ್ಲೋರಿಸ್ಟ್ ` ಎಂಬ ಅಂಗಡಿಯನ್ನು ತಮ್ಮ ವಿದ್ಯಾನಗರದ ಮನೆಯ ಆವರಣದಲ್ಲಿ ಆರಂಭಿಸಿದರು.

ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ. ಈಚೆಗೆ ಹುಬ್ಬಳ್ಳಿಯ ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜಿನ ಎದುರು ಹೊಸ ಅಂಗಡಿಯನ್ನು ಅವರು ತೆರೆದಿದ್ದಾರೆ. ಇದು ರಸ್ತೆ ಬದಿಯೇ ಇರುವುದರಿಂದ ವಹಿವಾಟು ಹೆಚ್ಚಬಹುದು ಎನ್ನುವ ನಿರೀಕ್ಷೆಯೂ ಅವರದು.

ಕಲ್ಯಾಣ ಮಂಟಪ, ಮದುಮಕ್ಕಳನ್ನು ಕೂಡಿಸುವ ಸ್ಥಳ, ಮೊದಲ ರಾತ್ರಿಯ ಮಂಚದ ಅಲಂಕಾರ, ಮದುವೆ ಕಾರಿನ ಅಲಂಕಾರ, ಹೊಸ ಕಾರಿನ ಅಲಂಕಾರ, ಮದುವೆ ವಾರ್ಷಿಕೋತ್ಸವ, ಜನ್ಮದಿನ, ಕಚೇರಿ ಉದ್ಘಾಟನೆ, ಗೃಹ ಪ್ರವೇಶ, ಊಟದ ಟೇಬಲ್, ಶವ ಸಂಸ್ಕಾರ ಹೀಗೆ ಸೀಮಂತದಿಂದ ಹಿಡಿದು ಸಮಾಧಿಯವರೆಗೆ (womb to tomb) ಅವರು ಅಲಂಕರಿಸುತ್ತಾರೆ.

ಹುಬ್ಬಳ್ಳಿಯಲ್ಲದೆ ಹೊಸಪೇಟೆಯ ಖಾಸಗಿ ಕಂಪೆನಿಗೆ ಎರಡು ದಿನಗಳಿಗೊಮ್ಮೆ ಅಲಂಕೃತ ಹೂವಿನ ಕುಂಡಗಳನ್ನು ಕಳಿಸುತ್ತಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿಯಲ್ಲಿ ಬೆಳೆಯುವ ಜರ್ಬೆರಾ ಹೂವುಗಳನ್ನು ಖರೀದಿಸಿ ಶೇ 90ರಷ್ಟು ಹೂವುಗಳನ್ನು ಬೆಂಗಳೂರಿನಿಂದ ತರಿಸುತ್ತಾರೆ. ಹೂವಿನ ತೋಟ ಮಾಡುವ ಯೋಜನೆಯಾಗಲಿ, ಯೋಚನೆಯಾಗಲಿ ಅವರಿಗೆ ಇಲ್ಲ. ಏಕೆಂದರೆ ಐವರು ಕೆಲಸಗಾರರನ್ನು ಇಟ್ಟುಕೊಂಡು ಪುಷ್ಪೋದ್ಯಮ ನೋಡಿಕೊಳ್ಳುವ ಅವರಿಗೆ ಬಿಡುವಿಲ್ಲ.

ಯಾವುದೇ ತರಬೇತಿ ಪಡೆಯದೆ, ಬಣ್ಣ ಬಣ್ಣದ ಹೂಗಳಿಂದ ಶುಭ ಸಮಾರಂಭಕ್ಕೆ ಮೆರುಗು ತರುವ ಅವರು, `ಪುಷ್ಪೋದ್ಯಮಕ್ಕೆ ಅಧಿಕ ಹೂಡಿಕೆ ಬೇಕಿಲ್ಲ. ಆದರೆ ಹೂಗಳ ಆರೈಕೆ ಹಾಗೂ ಅಲಂಕಾರದ ಬಗ್ಗೆ ತಿಳಿವಳಿಕೆ ಇರಬೇಕು. ಜೊತೆಗೆ ತಾಳ್ಮೆ, ಕಾಳಜಿ ಬೇಕು. ಮುಖ್ಯವಾಗಿ ಸಮಯಪ್ರಜ್ಞೆ ಇರಬೇಕು. ಡೆಡ್‌ಲೈನ್ ಮೀರಬಾರದು.

ಕೆಲಸಗಳನ್ನು ಸರಿಯಾಗಿ ಹಂಚಿ, ಕಾರ್ಯಕ್ರಮಗಳ ಹೊತ್ತಿಗೆ ಸಿದ್ಧ ಮಾಡಿಕೊಡುವುದು ಮುಖ್ಯ. ಮಹಿಳೆಯರಿಗೆ ಹೇಳಿಮಾಡಿಸಿದ ಉದ್ಯಮವಿದು. ಹೂಗಳ ಮೂಲಕ ಅಲಂಕಾರದ ಹೊಸ ಹೊಸ ಪ್ರಯೋಗಗಳನ್ನೂ ಮಾಡಬಹುದು~ ಎನ್ನುವ ಸಲಹೆ ಅವರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT