ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿ ಪೃಷ್ಠ ಕೀಲುಗಳ ಶಸ್ತ್ರಚಿಕಿತ್ಸೆ

Last Updated 19 ಜುಲೈ 2012, 8:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡೂ ಭಾಗದ ಪೃಷ್ಠದ ಕೀಲುಗಳ ಸ್ವಾಧೀನ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ನಗರದ ಎಲುಬು, ಕೀಲು ತಜ್ಞ ಡಾ. ಭಾಸ್ಕರ್ ರಾವ್ ಸ್ವದೇಶಿ `ಇಂಡಸ್~ ಜಾಯಿಂಟ್ (ಕೀಲು) ಅಳವಡಿಸುವ ಮೂಲಕ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿದ ಡಾ. ಭಾಸ್ಕರ್ ರಾವ್, ಮಹಾರಾಷ್ಟ್ರದ ಜತ್ ಪಟ್ಟಣದಿಂದ ಬಂದ 56 ವರ್ಷ ವಯಸ್ಸಿನ ಪಾರಗೊಂಡ ವಿಠ್ಠಲ ಕುಂಬಾರ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ  `ಅವಾಸ್ಕ್ಯುಲರ್ ನೆಕ್ರೋಸಿಸ್ ಫಿಮೊರಾಲ್ ಹೆಡ್ (ಎವಿಎನ್)~ ತೊಂದರೆ ಇರುವುದು ಪತ್ತೆಯಾಯಿತು. ಈ ಸಮಸ್ಯೆಯಿಂದ ಪೃಷ್ಠದ ಎರಡೂ ಭಾಗದ ಕೀಲುಗಳು ಸವೆದು ಹೋಗಿದ್ದು, ಅವರಿಗೆ ನಿತ್ಯದ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸತತ ಐದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಭಾರತದಲ್ಲಿ ತಯಾರಾಗುವ `ಇಂಡಸ್ ಜಾಯಿಂಟ್~ ಅಳವಡಿಸಲಾಗಿದೆ ಎಂದು ವಿವರಿಸಿದರು.

ಸಾಮಾನ್ಯವಾಗಿ ಈ ಶಸ್ತ್ರ ಚಿಕಿತ್ಸೆಗೆ ಎಲ್ಲಾ ವೈದ್ಯರು ವಿದೇಶಿ ಕೀಲುಗಳನ್ನು ಅಳವಡಿಸುತ್ತಾರೆ. ವಿದೇಶಿ ಕೀಲು ಒಂದಕ್ಕೆ ರೂ ಮೂರು ಲಕ್ಷಕ್ಕೂ ಹೆಚ್ಚು ಖರ್ಚಾಗುತ್ತದೆ. ಆದ್ದರಿಂದ ಭಾರತದಲ್ಲಿ ಇತ್ತೀಚೆಗೆ ತಯಾರಿಸಲಾಗುತ್ತಿರುವ ಸ್ವದೇಶಿ ಪೃಷ್ಠ ಕೀಲುಗಳನ್ನು ಅಳವಡಿಸುವ ನಿರ್ಧಾರಕ್ಕೆ ಬರಲಾಯಿತು. ಒಂದೇ ಶಸ್ತ್ರಚಿಕಿತ್ಸೆ ಅವಧಿಯಲ್ಲಿ ಎರಡೂ ಭಾಗದ ಪೃಷ್ಠ ಕೀಲು ಅಳವಡಿಸಿರುವುದು ದೇಶದಲ್ಲೇ ಅಪರೂಪ ಎಂದು ಹೇಳಿದರು.

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಕೇವಲ ಒಂದು ದಿನದಲ್ಲೇ ಅವರು ನಡೆಯುವಂತಾದರು. ಚಿಕಿತ್ಸೆಗೆ ಕೇವಲ ರೂ 1.4 ಲಕ್ಷ ಹಣ ಖರ್ಚಾಗಿದ್ದು, ರೋಗಿಗೆ ಹಣ ಹೊಂದಿಸಲು ಹೆಚ್ಚು ತೊಂದರೆ ಆಗಲಿಲ್ಲ ಎಂದು ತಿಳಿಸಿದರು.

ಈ ಶಸ್ತ್ರ ಚಿಕಿತ್ಸೆ ವೈದ್ಯಕೀಯ ವಿಜ್ಞಾನದ ಯಶಸ್ವಿ ಸಂಶೋಧನೆಯಾಗಿದೆ ಎಂದರು. ಶಸ್ತ್ರಚಿಕಿತ್ಸೆಯಲ್ಲಿ ನೆರವು ನೀಡಿದ ಡಾ. ಮಹಾಂತೇಶ್ ಹಾಗೂ ಡಾ. ಪಿ.ವಿ. ನಾಡಗೌಡ ಅವರನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ರೋಗಿ ಪಾರಗೊಂಡ ವಿಠ್ಠಲ ಕುಂಬಾರ ಮಾತನಾಡಿ, ಟೈಲರಿಂಗ್ ಕೆಲಸ ಮಾಡುವ ನನಗೆ ಕಳೆದ ಹಲವು ವರ್ಷಗಳಿಂದ ಹಿಂಭಾಗದ ಕೀಲು ನೋವು ಬರುತ್ತಿತ್ತು. ಕಾಲುಗಳನ್ನು ಅಲುಗಾಡಿಸಲೂ ಆಗುತ್ತಿರಲಿಲ್ಲ. ಇಲ್ಲಿ ಚಿಕಿತ್ಸೆ ಪಡೆದ ನಮ್ಮ ಪರಿಚಯಸ್ಥರೊಬ್ಬರಿಂದ ಬಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಈಗ ಯಾವುದೇ ತೊಂದರೆ ಇಲ್ಲದೆ ನಡೆಯುತ್ತಿದ್ದೇನೆ ಎಂದರು.

 ಏನಿದು `ಇಂಡಸ್~?
`ಇಂಡಸ್ ಹಿಪ್ ಜಾಯಿಂಟ್ ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೇಳಿ ಬರುತ್ತಿದೆ. ಇದು ಭಾರತೀಯ ವೈದ್ಯ ಸಂಶೋಧನೆಯಾಗಿದ್ದು, ಇದನ್ನು ಗುರುತಿಸಲು ಹಿಂದೂ ಮಹಾಸಾಗರದ `ಇಂಡಸ್~ ವ್ಯಾಲಿ ಹೆಸರು ಇಡಲಾಗಿದೆ. ಇದನ್ನು ಕೋಬಾಲ್ಟ್, ಕ್ರೋಮಿಯಮ್ ಮೆಟಲ್‌ನಿಂದ ತಯಾರಿಸಲಾಗಿದ್ದು, ದೇಹದೊಳಗೆ ಸೂಕ್ತವಾಗಿ ಕೂರುತ್ತದೆ~ ಎಂದು ಡಾ. ಭಾಸ್ಕರ್ ರಾವ್ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT