ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿನಿ: ವೆಚ್ಚ ಭರಿಸುವ ಚಿಂತನೆ

Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಜನರ ಆರೋಗ್ಯ ವಿಮೆ ಎಂದೇ ಹೆಸರು ಪಡೆದಿರುವ `ಯಶಸ್ವಿನಿ' ಯೋಜನೆಯಡಿ ಇನ್ನು ಮುಂದೆ ಶಸ್ತ್ರಚಿಕಿತ್ಸೆ ಜತೆಗೆ ಅಂಗಾಂಗಳ ಕಸಿ ಸಂದರ್ಭಗಳಲ್ಲಿ ಬಳಸುವ ಕೃತಕ ಉಪಕರಣಗಳ ವೆಚ್ಚವನ್ನೂ ಭರಿಸಲು ಸರ್ಕಾರ ನಿರ್ಧರಿಸಿದೆ.

ಮೊದಲ ಹಂತದಲ್ಲಿ ಹೃದಯ ಮತ್ತು ಮೂಳೆಗೆ ಸಂಬಂಧಿಸಿದ ಕೃತಕ ಉಪಕರಣಗಳ ವೆಚ್ಚ ಭರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಕಿಡ್ನಿ ಸೇರಿದಂತೆ ಇತರ ರೋಗಗಳಿಗೆ ಸಂಬಂಧಿಸಿದ ಉಪಕರಣಗಳ ವೆಚ್ಚ ಭರಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ಜೋಡಿಸುವ ವಾಲ್ವ್ ಮತ್ತು ಸ್ಟಂಟ್ ಹಾಗೂ ದೇಹದ ವಿವಿಧ ಮೂಳೆಗಳನ್ನು ಬದಲಿಸಲು ಉಪಯೋಗಿಸುವ ಕೃತಕ ಉಪಕರಣಗಳ ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ.

ವಾರ್ಷಿಕ ಒಂದು ಲಕ್ಷ ರೂಪಾಯಿವರೆಗಿನ ಶಸ್ತ್ರಚಕಿತ್ಸಾ ವೆಚ್ಚವನ್ನು ಮಾತ್ರ ಯಶಸ್ವಿನಿ ಟ್ರಸ್ಟ್ ಪ್ರಸ್ತುತ ಭರಿಸುತ್ತಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗಳಿಗೆ ಜೋಡಣೆ ಮಾಡುತ್ತಿದ್ದ ಕೃತಕ ಅಂಗಾಂಗಗಳ ವೆಚ್ಚವನ್ನು  ರೋಗಿಯೇ ತನ್ನ ಜೇಬಿನಿಂದ ತುಂಬಬೇಕಿತ್ತು.

ಈ ಬಗ್ಗೆ ಬಡ ರೋಗಿಗಳು ಮಾಡಿದ ಮನವಿಗೆ ಸ್ಪಂದಿಸಿರುವ ಸರ್ಕಾರ ಈ ತಿಂಗಳಲ್ಲಿ ಮಂಡಿಸುವ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.

ಇತ್ತೀಚೆಗೆ ನಡೆದ ಯಶಸ್ವಿನಿ ಟ್ರಸ್ಟ್ ಮತ್ತು ಸಹಕಾರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಯೋಜನೆಗೆ ಅಂತಿಮ ರೂಪ ನೀಡಲಾಗಿದೆ.

ಗ್ರಾಮೀಣ ಭಾಗದ ಸಹಕಾರ ಸಂಘಗಳ ಸುಮಾರು 30 ಲಕ್ಷ ಸದಸ್ಯರು ಈ ಯೋಜನೆಯಡಿ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷ ಸುಮಾರು 80 ಸಾವಿರ ಜನರು ಈ ಯೋಜನೆಯಡಿ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇವರಲ್ಲಿ ಹೃದಯ ಸಂಬಂಧಿ ಮತ್ತು ಮೂಳೆ ರೋಗದ ಸಮಸ್ಯೆ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸುಮಾರು ಎಂಟು ಸಾವಿರ ಮಂದಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಸುಮಾರು ಐದು ಸಾವಿರ ಜನ ಮೂಳೆ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಇಷ್ಟೂ ಮಂದಿಗೆ ಶಸ್ತ್ರಚಿಕಿತ್ಸೆ ವೆಚ್ಚ ಮಾತ್ರ ನೀಡಲಾಗಿದೆ.

ಸದಸ್ಯರ ಹಣ: ಸಹಕಾರ ಸಂಘಗಳ ಸದಸ್ಯರಿಂದ ಕಳೆದ ವರ್ಷ ಸಂಗ್ರಹಿಸಿದ ಶುಲ್ಕ ರೂ52 ಕೋಟಿ. ಇದರಲ್ಲಿ ರೂ10 ಕೋಟಿ ಖರ್ಚಾಗದೆ ಉಳಿದಿದೆ. ಸರ್ಕಾರದ ಕಡೆಯಿಂದಲೂ ರೂ 10 ಕೋಟಿ ಕಳೆದ ವರ್ಷ ಸಂದಾಯ ಆಗಿದೆ. ಟ್ರಸ್ಟ್‌ನಲ್ಲಿ ಹೆಚ್ಚಿನ ಹಣ ಬಾಕಿ ಇದೆ ಎನ್ನುವ ಕಾರಣಕ್ಕೆ ಕೃತಕ ಉಪಕರಣಗಳ ವೆಚ್ಚ ಭರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬದಲಾವಣೆ ಇಲ್ಲ
ಯೋಜನೆ ವ್ಯಾಪ್ತಿಯಲ್ಲಿ ಕೃತಕ ಉಪಕರಣಗಳ ವೆಚ್ಚ ಸೇರಿಸಿದ್ದರೂ ಒಟ್ಟು ವೆಚ್ಚದಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಸದಸ್ಯರೊಬ್ಬರಿಗೆ ವರ್ಷಕ್ಕೆ ಗರಿಷ್ಠ ಒಂದು ಲಕ್ಷ ರೂಪಾಯಿವರೆಗೆ ಖರ್ಚು ಮಾಡಲು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅದು ಈಗಲೂ ಮುಂದುವರಿಯುತ್ತದೆ. ಶಸ್ತ್ರಚಿಕಿತ್ಸೆ ವೆಚ್ಚ ರೂ25 ಸಾವಿರವರೆಗೆ ಇದ್ದರೆ, ಉಪಕರಣ ವೆಚ್ಚ ರೂ75 ಸಾವಿರ ವರೆಗೆ ನೀಡಲು ತೀರ್ಮಾನಿಸಲಾಗಿದೆ.

ವಿದೇಶಿ ಉಪಕರಣ
ರೋಗಿಯ ದೇಹದಲ್ಲಿ ಜೋಡಿಸುವ ಕೃತಕ ಉಪಕರಣಗಳು ದೇಶಿಯವಲ್ಲ. ಬದಲಿಗೆ, ವಿದೇಶದಿಂದ ಆಮದು ಮಾಡಿಕೊಳ್ಳುವ ಉಪಕರಣಗಳಿಗೆ ಹಣ ನೀಡಲು ನಿರ್ಧರಿಸಲಾಗಿದೆ. ತಜ್ಞ ವೈದ್ಯರ ಸಲಹೆ ಮೇರೆಗೆ ಇದಕ್ಕೂ ಸರ್ಕಾರ ಒಪ್ಪಿಗೆ ಸೂಚಿಸಿದೆ.

ದೇಶಿಯ ಉಪಕರಣಗಳ ಜೋಡಣೆಯಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎನ್ನುವ ಕಾರಣಕ್ಕೆ ಆಮದು ಮಾಡಿಕೊಂಡ ಉಪಕರಣಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಗೊತ್ತಾಗಿದೆ.

ನವೀಕರಣ ಆರಂಭ
ಬೆಂಗಳೂರು:ಯಶಸ್ವಿನಿ ಯೋಜನೆಗೆ ಹೆಸರು ನವೀಕರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಸದಸ್ಯರೂ  ತಮ್ಮ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ವಾರ್ಷಿಕ ಶುಲ್ಕ ರೂ 210 ಸಂದಾಯ ಮಾಡುವುದರ ಮೂಲಕ ಸದಸ್ಯತ್ವ ನವೀಕರಿಸಿಕೊಳ್ಳಬಹುದು. ಇದೇ 15ರ ನಂತರ ಹೊಸ ಯಶಸ್ವಿನಿ ಕಾರ್ಡ್‌ಗಳ ವಿತರಣೆ ಆಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT