ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿನಿ ವ್ಯಾಪ್ತಿಗೆ ಇನ್ನೂ 2 ಆರೋಗ್ಯ ಯೋಜನೆ

Last Updated 19 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ವಾಜಪೇಯಿ ಆರೋಗ್ಯಶ್ರೀ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ  ವಿಮಾ ಯೋಜನೆಯನ್ನು ಮೂರು ತಿಂಗಳ ಒಳಗೆ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಟ್ರಸ್ಟ್ ಅಡಿಯಲ್ಲಿ ತರಲಾಗುವುದು ಎಂದು ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಶುಕ್ರವಾರ ಇಲ್ಲಿ ತಿಳಿಸಿದರು.

ಟ್ರಸ್ಟ್‌ನ ಅಧ್ಯಕ್ಷರೂ ಆದ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಯೋಜನಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇದಕ್ಕೆ ಸ್ಪಷ್ಟ ರೂಪ ನೀಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸದ್ಯಕ್ಕೆ 800 ಕಾಯಿಲೆಗಳಿಗೆ `ಯಶಸ್ವಿನಿ~ ಯೋಜನೆ ಮೂಲಕ ಚಿಕಿತ್ಸೆ ಪಡೆಯಲು ಅವಕಾಶವಿದೆ. ಈ ಯೋಜನೆಯನ್ನು ಇನ್ನಷ್ಟು ಕಾಯಿಲೆಗಳಿಗೆ ವಿಸ್ತರಿಸಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ಸಂಪನ್ಮೂಲಗಳ ಅಗತ್ಯವಿದೆ. ಆದ್ದರಿಂದ ಶಾಸಕರು, ಸಂಸದರ ನಿಧಿಯಿಂದ ಶೇ 5ರಷ್ಟು ಹಣವನ್ನು ಟ್ರಸ್ಟ್‌ಗೆ ಪಡೆಯುವ ಸಂಬಂಧ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಚರ್ಚಿಸಲಾಗುವುದು ಎಂದರು.

`ಸಂಪನ್ಮೂಲ ಕ್ರೋಡೀಕರಿಸುವ ನಿಟ್ಟಿನಲ್ಲಿ ಉದ್ದಿಮೆಗಳು, ಸಾಫ್ಟ್‌ವೇರ್ ಕಂಪೆನಿಗಳಿಂದ ನೆರವು ಪಡೆಯಲು ನಿಧಿ ಸ್ಥಾಪಿಸಲಾಗುವುದು. ಅಲ್ಲದೆ ಕಂಪೆನಿಗಳು ಗಳಿಸುವ ಲಾಭದ ಮೇಲೆ ಶೇ 1ರಷ್ಟು ತೆರಿಗೆ ವಿಧಿಸುವ ಉದ್ದೇಶವಿದೆ. ಈ ಬಗ್ಗೆಯೂ ಶೆಟ್ಟರ್ ಅವರೊಂದಿಗೆ ಚರ್ಚೆ ನಡೆಸುತ್ತೇನೆ~ ಎಂದರು.

ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದಲ್ಲಿ ಯಶಸ್ವಿನಿ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ. ಅವರಿಗೆ ಕಾರ್ಯಭಾರದ ಒತ್ತಡ ಇರುವುದರಿಂದ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರನ್ನು ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಮಾಡುವ ಸಂಬಂಧ ಸೂಕ್ತ ತಿದ್ದುಪಡಿ ತರಲಾಗುವುದು ಎಂದರು.

ಯಶಸ್ವಿನಿ ಯೋಜನೆಯಡಿ ಇದುವರೆಗೆ 29.46 ಲಕ್ಷ ಸದಸ್ಯರು ನೋಂದಣಿ ಮಾಡಿಸಿದ್ದಾರೆ. ಅವರಿಂದ ವಂತಿಗೆ ರೂಪದಲ್ಲಿ ಕಳೆದ ವರ್ಷ 45 ಕೋಟಿ ರೂಪಾಯಿ ಸಂಗ್ರಹವಾಗಿದೆ. ಸರ್ಕಾರ 30 ಕೋಟಿ ರೂಪಾಯಿ ಅನುದಾನ ನೀಡಿತ್ತು. ಚಿಕಿತ್ಸೆಗಾಗಿ 60 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿವರಿಸಿದರು.

ರೇಡಿಯೊಥೆರಪಿ ಸೇರ್ಪಡೆ
ರೇಡಿಯೊಥೆರಪಿಯನ್ನು ಹೊಸದಾಗಿ ಯಶಸ್ವಿನಿ ವ್ಯಾಪ್ತಿಗೆ ಸೇರಿಸಲಾಗಿದೆ. ಡಯಾಲಿಸಿಸ್ ಕೂಡ ಇದರ ವ್ಯಾಪ್ತಿಗೆ ತರಬೇಕು ಎಂಬ ಒತ್ತಡವಿದೆ. ಇದಕ್ಕೆ ವರ್ಷಕ್ಕೆ ರೂ 90 ಕೋಟಿ  ಹೆಚ್ಚುವರಿಯಾಗಿ ಅನುದಾನಬೇಕಾಗುತ್ತದೆ. ಇದರ ಸಾಧಕ- ಬಾಧಕಗಳ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ಒಳಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.

ಸಹಕಾರ ಸಪ್ತಾಹ

ನವೆಂಬರ್ 14ರಿಂದ 20ರ ವರೆಗೆ ರಾಜ್ಯದಲ್ಲಿ `ಸಹಕಾರ ಸಪ್ತಾಹ~ ಆಚರಿಸಲಾಗುವುದು ಎಂದು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು.

ಮಹಾಮಂಡಲದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮೈಸೂರಿನಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ನ. 20ರಂದು ಬೆಳಗಾವಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT