ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ವಿಯಾದ ಬೃಹತ್ ಉದ್ಯೋಗ ಮೇಳ

Last Updated 27 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ರಾಜಾಜಿನಗರ 5ನೇ ಬ್ಲಾಕ್‌ನ ವೆಂಕಟ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮುಂದೆ ಭಾನುವಾರ ಉದ್ಯೋಗಾಕಾಂಕ್ಷಿಗಳ ಜಾತ್ರೆ. ಉದ್ಯೋಗದ ಭರವಸೆ ಹೊತ್ತು ಬಂದ ನಿರುದ್ಯೋಗಿಗಳ ದಂಡು.

ಒಂದು ರೀತಿಯ ತುಮುಲ, ಆತಂಕದ ನಡುವೆಯೇ ಸಂದರ್ಶನ ಎದುರಿಸಿದ 3,804 ಉದ್ಯೋಗಾಕಾಂಕ್ಷಿಗಳ ಪೈಕಿ 258 ಮಂದಿ ಸ್ಥಳದಲ್ಲಿಯೇ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದರ ಜತೆಗೆ, ನೇಮಕಾತಿ ಆದೇಶ ಪತ್ರವನ್ನೂ ಕೈಯಲ್ಲಿ ಹಿಡಿದು ಸಂತಸದಿಂದ ಹಿಂತಿರುಗಿದರು.

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ ಹಾಗೂ ಉದ್ಯೋಗ ಮತ್ತು ತರಬೇತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಬೃಹತ್ ಉದ್ಯೋಗ ಮೇಳ~ದಲ್ಲಿ ಕೇವಲ ಸ್ಥಳೀಯರಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಉದ್ಯೋಗಾಕಾಂಕ್ಷಿಗಳು ಪ್ರಯೋಜನ ಪಡೆದುಕೊಂಡರು.

ಬೆಳಿಗ್ಗೆ 8 ಗಂಟೆಯಿಂದಲೇ ಸ್ಥಳಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಉದ್ದನೆಯ `ಕ್ಯೂ~ನಲ್ಲಿ ನಿಂತು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿದರು. ಆನಂತರ ಸಂದರ್ಶನ ಎದುರಿಸಿದರು. 88 ಕಂಪೆನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

19 ಜನ ಅಂಗವಿಕಲರು: ಉದ್ಯೋಗ ಮೇಳದಲ್ಲಿ 19 ಮಂದಿ ಅಂಗವಿಕಲರು ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಉದ್ಯೋಗವನ್ನರಿಸಿ ಬಹಳಷ್ಟು ಸಂಖ್ಯೆಯ ವಿವಾಹಿತರು ಕೂಡ ಮೇಳದಲ್ಲಿ ಭಾಗವಹಿಸಿದ್ದುದು ಎದ್ದು ಕಂಡಿತು.

ಒಬ್ಬೊಬ್ಬರು ಹತ್ತಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದರು. `ಅದೃಷ್ಟವಂತ~ರಿಗೆ ನಾಲ್ಕೈದು ಹುದ್ದೆಗಳು ಹುಡುಕಿಕೊಂಡು ಬಂದವು. ಬೆಂಗಳೂರಿನಲ್ಲಿ ಆರು ತಿಂಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿದ್ದ ಗುಲ್ಬರ್ಗದ ಸಿದ್ದರಾಮ ವಾಸೋಡಿ ಮೇಳದಲ್ಲಿ ಉದ್ಯೋಗ ಪಡೆದುಕೊಂಡರು.

`ನನಗೆ ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ. ಎಲ್ಲಿಗೆ ಹೋದರೂ ಇಂಗ್ಲಿಷ್‌ನಲ್ಲೇ ಪ್ರಶ್ನಿಸುತ್ತಿದ್ದರು. ನಾನು ಕನ್ನಡಿಗ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ಸಿಗಬೇಕು. ಉದ್ಯೋಗಕ್ಕಾಗಿ ಎಲ್ಲೆಲ್ಲೋ ಅಲೆದ ನನಗೆ ಕೊನೆಗೂ ಇಲ್ಲಿ ಉದ್ಯೋಗ ಸಿಕ್ಕಿದ್ದಕ್ಕೆ ಬಹಳ ಸಂತಸವಾಗುತ್ತಿದೆ~ ಎಂದು ಅನಿಸಿಕೆ ಹಂಚಿಕೊಂಡರು.

ಇನ್ನು, ಕೆಲಸ ಸಿಗುತ್ತದೋ ಅಥವಾ ಇಲ್ಲವೋ ಎಂಬ ಅನುಮಾನದಿಂದಲೇ ಬಂದ ಸೋನು, ಬಿ.ಕಾಂ. ವ್ಯಾಸಂಗ ಮುಂದುವರಿಸಲು ಸಾಧ್ಯವಾಗದೆ ಉದ್ಯೋಗವನ್ನರಸಿ ಮೇಳಕ್ಕೆ ಬಂದ ಅನಿಲ್‌ಕುಮಾರ್ ಉದ್ಯೋಗ ಗಿಟ್ಟಿಸಿಕೊಂಡರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಮಾತನಾಡಿ, `ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಎಂಜಿನಿಯರಿಂಗ್ ಪದವೀಧರರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. 3,804 ಅಭ್ಯರ್ಥಿಗಳ ಪೈಕಿ 258 ಮಂದಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ಪತ್ರ ನೀಡಲಾಯಿತು.

824 ಅಭ್ಯರ್ಥಿಗಳು ವಿವಿಧ ತರಬೇತಿಗೆ ಆಯ್ಕೆಯಾದರೆ, ಅರ್ಹತೆ ಆಧಾರದ ಮೇರೆಗೆ ಉದ್ಯೋಗ ನೀಡಲು 513 ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಯಿತು. ಒಟ್ಟು 1600 ಮಂದಿ (ಶೇ 40ರಷ್ಟು) ಮೇಳದ ಪ್ರಯೋಜನ ಪಡೆದುಕೊಂಡಿದ್ದಾರೆ~ ಎಂದು ಹೇಳಿದರು.

ಆಯ್ಕೆಯಾದ ಕೆಲ ಅಭ್ಯರ್ಥಿಗಳಿಗೆ ಸಚಿವರು ನೇಮಕಾತಿ ಆದೇಶ ಪತ್ರ ಹಾಗೂ ಗುಲಾಬಿ ಹೂ ನೀಡಿ ಶುಭ ಹಾರೈಸಿದರು.`ಆಯ್ಕೆಯಾದ ಅಭ್ಯರ್ಥಿಗಳು ಕೀಳರಿಮೆ ತೊರೆದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು~ ಎಂದು ಅವರು ಸಲಹೆ ಮಾಡಿದರು.

ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೇಶವಮೂರ್ತಿ, ಮುಖ್ಯಸ್ಥ ವಿಷ್ಣುಕಾಂತ್ ಚಟಪಲ್ಲಿ, ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ಸದಸ್ಯರಾದ ಜಯರತ್ನ, ರವೀಂದ್ರ, ಮಂಜುನಾಥ್, ಕೃಷ್ಣಪ್ಪ, ಪದ್ಮರಾಜ್, ವೆಂಕಟ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಹಸ್ಮಾ ಮತ್ತಿತರರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT