ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಯಶಸ್ಸಿಗೆ ಕಠಿಣ ಪರಿಶ್ರಮವೊಂದೇ ದಾರಿ'

ಯುವ ಅಥ್ಲೀಟ್‌ಗಳಿಗೆ ಸ್ಫೂರ್ತಿ ತುಂಬಿದ ಬಿಂದ್ರಾ, ಗೋಪಿಚಂದ್
Last Updated 17 ಜುಲೈ 2013, 19:45 IST
ಅಕ್ಷರ ಗಾತ್ರ

ಬೆಂಗಳೂರು: `ಮೊದಲ ಸಲ ನಿಮಗೆ ಲಭಿಸುವ ಯಶಸ್ಸು ನಿಮ್ಮನ್ನು ಸಾಕಷ್ಟು ಉತ್ಸಾಹಿಗಳನ್ನಾಗಿ ಮಾಡುತ್ತದೆ. ಮತ್ತೊಂದು ಸಾಧನೆಗೆ ಪ್ರೇರಣೆಯಾಗುತ್ತದೆ. ಕಠಿಣ ಪರಿಶ್ರಮ ಪಡದೇ ಬೇರೆ ದಾರಿಯಿಲ್ಲ. ಯಶಸ್ಸು ಲಭಿಸಿದ ಮೇಲೆ ನೀವು ಪಟ್ಟ ಕಷ್ಟ ನಿಮಗೆ ಗೊತ್ತಾಗುವುದಿಲ್ಲ...'
-ಯುವ ಅಥ್ಲೀಟ್‌ಗಳು ಹಾಗೂ ಸಾಧನೆಯ ಹಾದಿಯಲ್ಲಿ ಹೆಜ್ಜೆ ಹಾಕಿದ  ಕ್ರೀಡಾಪಟುಗಳಿಗೆ ಒಲಿಂಪಿಯನ್ ಶೂಟರ್ ಅಭಿನವ್ ಬಿಂದ್ರಾ ಅವರು ಹೇಳಿದ ಸ್ಫೂರ್ತಿಯ ಮಾತುಗಳು ಇವು.

ಗೋ ಸ್ಪೋರ್ಟ್ಸ್ ಫೌಂಡೇಷನ್ ಆಶ್ರಯದಲ್ಲಿ ನಗರದಲ್ಲಿ ಬುಧವಾರ ನಡೆದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮತನಾಡಿದರು. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

`ಯಾವತ್ತೂ ಒಂದೇ ಗೆಲುವಿಗೆ ಹಾಗೂ ಯಶಸ್ಸಿಗೆ ಸಮಾಧಾನ ಪಟ್ಟುಕೊಳ್ಳಬಾರದು. ಯಶಸ್ಸನ್ನು ಬೆನ್ನಟ್ಟಿ ಹೋಗಬೇಕು. ಗುರಿಮುಟ್ಟುವ ಹಾದಿಯಲ್ಲಿ ಯಾವತ್ತೂ ವಿಶ್ರಮಿಸಬಾರದು' ಎಂದು 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಬಿಂದ್ರಾ ಹೇಳಿದರು. 10ಮೀ. ಏರ್ ರೈಫಲ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದ್ದರು.

ವಿಚಾರ ಸಂಕಿರಣದಲ್ಲಿ ದೇಶದ ವಿವಿಧ ಭಾಗಗಳಿಂದ 61 ಅಥ್ಲೀಟ್‌ಗಳು, ಈಜು, ಟೇಬಲ್ ಟೆನಿಸ್, ಸೈಕ್ಲಿಂಗ್, ಗಾಲ್ಫ್ ಮತ್ತು ಟೆನಿಸ್ ಸೇರಿದಂತೆ ಬೇರೆ ಬೇರೆ ಕ್ರೀಡೆಗಳಲ್ಲಿ ಸಾಧನೆ ಮಾಡಿದವರು ಪಾಲ್ಗೊಂಡಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಹಾದಿಯಲ್ಲಿ ಎದುರಿಸಿದ ಸವಾಲುಗಳ ಬಗ್ಗೆಯೂ ಬಿಂದ್ರಾ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

`ಸಿಕ್ಕ ಪ್ರತಿ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಕಲಿಯಲು ಸಾಕಷ್ಟು ಅವಕಾಶಗಳಿವೆ. ಎಲ್ಲವನ್ನೂ ಉಪಯೋಗಿಸಿಕೊಂಡು ಸಾಧನೆಗೆ ಹಾದಿಯಲ್ಲಿ ಹೆಜ್ಜೆ ಹಾಕಬೇಕು' ಎಂದು ಯುವ ಗಾಲ್ಫರ್ ಎಸ್. ಚಿಕ್ಕರಂಗಪ್ಪ ನುಡಿದರು.

`ನಿಮ್ಮ ತಪ್ಪುಗಳು ಹಾಗೂ ಸೋಲುಗಳ ಬಗ್ಗೆ ಯಾವತ್ತೂ ನಕಾರಾತ್ಮವಾಗಿ ಯೋಚಿಸಬೇಡಿ. ಸೋಲುಗಳಿಂದಲೂ ಪಾಠ ಕಲಿಯಬಹುದು. ಕನಸನ್ನು ಬೆನ್ನು ಹತ್ತಿ ಹೋಗುವ ಹಾದಿಯಲ್ಲಿ ನಿರಾಸೆ,  ಖಿನ್ನತೆ ಸಹಜ. ಸದಾ ನಿಮ್ಮ ಕನಸಿನೊಂದಿಗೆ ಪಯಣಿಸಿ. ಅದರೊಂದಿಗೆ ಜೀವಿಸಿ' ಎಂದು ಗೋಪಿಚಂದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT