ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಆಯುಷ್ ವೈದ್ಯರ ಪ್ರತಿಭಟನೆ

Last Updated 21 ಜುಲೈ 2012, 9:55 IST
ಅಕ್ಷರ ಗಾತ್ರ

ಯಾದಗಿರಿ: ತುರ್ತು ಸಂರ್ದಭದಲ್ಲಿ ಆಲೋಪತಿ ಔಷಧ ಬಳಸಲು ಅನುಮತಿ ನೀಡುವಂತೆ ಒತ್ತಾಯಿಸಿ ಆಯುಷ್ ವೈದ್ಯರು ಶುಕ್ರವಾರ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಇಲ್ಲಿಯ ಶಾಸ್ತ್ರಿ ವೃತ್ತದಿಂದ ಮೆರವಣಿಗೆ ನಡೆಸಿದ ನೂರಾರು ಆಯುಷ್ ವೈದ್ಯರು, ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿಗಳ ಮೂಲಕ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ದೇಶದ 12 ರಾಜ್ಯಗಳಲ್ಲಿ ಆಲೋಪತಿ ಔಷಧ ಬಳಸಲು ಆಯುಷ್ ವೈದ್ಯರಿಗೆ ಅನುಮತಿ ನೀಡಲಾಗಿದೆ. ಈ ಕುರಿತು ಸುಪ್ರೀಂ ಕೋರ್ಟ್ ಸಹ ನಿರ್ದೇಶನ ನೀಡಿದ್ದು, ಕರ್ನಾಟಕ ಡ್ರಗ್ಸ್ ಮತ್ತು ಕಾಸ್ಮೇಟಿಕ್ಸ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಆಯಾ ರಾಜ್ಯಗಳು ಆಯುಷ್ ವೈದ್ಯರಿಗೆ ಅಲೋಪತಿ ಔಷಧಿ ಬಳಸಲು ಅನುಮತಿ ನೀಡುವಂತೆ ಸೂಚಿಸಿದೆ. ಆದರೆ ಇಲ್ಲಿಯವರೆಗೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮೇ 30ರಂದು ಬೆಂಗಳೂರಿನಲ್ಲಿ ರಾಜ್ಯದ ಮುಖ್ಯಮಂತ್ರಿ, ಆರೋಗ್ಯ ಸಚಿವರು, ಕಾರ್ಯದರ್ಶಿಗಳು, ಸೇರಿದಂತೆ ಸಂಬಂಧಿಸಿದವರಿಗೆ ಮನವಿ ಸಲ್ಲಿಸಿ, ಜು.20ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಾರದೇ ಇರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ಮುಷ್ಕರ ನಡೆಸಬೇಕಾಗಿದೆ ಎಂದು ತಿಳಿಸಿದರು.
ವೃತ್ತಿ ನಡೆಸುತ್ತಿರುವ ಆಯುಷ್ ವೈದ್ಯರು, ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್ತು, ಹೊಮಿಯೋಪತಿ ಮಂಡಳಿ, ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದಿದ್ದಾರೆ. ಆಯುರ್ವೇದ, ಯುನಾನಿ, ಹೊಮಿಯೋಪತಿ ವೈದ್ಯ ಪದ್ಧತಿಗಳ ಮಂಡಳಿಯಲ್ಲಿ ನೋಂದಾಯಿಸಿಕೊಂಡು ವೃತ್ತಿ ನಡೆಸುತ್ತಿದ್ದಾರೆ. ಈ ಪದವಿ ಪಠ್ಯಕ್ರಮದಲ್ಲಿ ಆಯುರ್ವೇದ, ಯುನಾನಿ, ಹೊಮಿಯೋಪತಿ, ಹಾಗೂ ಅಲೋಪತಿ ವೈದ್ಯ ಪದ್ಧತಿಗಳಿಗೆ ಸಂಬಂಧಪಟ್ಟ ವಿಷಯಗಳ ಅಧ್ಯಯನ ಮಾಡಲಾಗುತ್ತಿದ್ದು, ಕಲಿಕಾ ಅವಧಿಯಲ್ಲಿ ಎರಡೂ ವೈದ್ಯ ಪದ್ಧತಿಗಳಲ್ಲಿ ತರಬೇತಿ ಪಡೆದಿದ್ದಾರೆ. ಅಲ್ಲದೇ ಆಯುಷ್ ವೈದ್ಯ ಪದ್ಧತಿಗಳ ಪಠ್ಯಕ್ರಮವು ದೇಶದಾದ್ಯಂತ ಒಂದೇ ರೀತಿಯಾಗಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರನ್ನು ನೇಮಕ ಮಾಡಿದ್ದು, ಅವರನ್ನು ರಾಷ್ಟ್ರೀಯ ಆರೋಗ್ಯ ಯೋಜನೆಗಳಾದ ಕುಷ್ಠರೋಗ ಹಾಗೂ ಮಲೇರಿಯಾ ನಿರ್ಮೂಲನಾ ಕಾರ್ಯಕ್ರಮದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲೋಪತಿ ವೈದ್ಯರು ಇಲ್ಲದ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರು ಅಲೋಪತಿ ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನು ಗಮನಿಸಿದಾಗ ಸರ್ಕಾರ ತಾತ್ವಿಕವಾಗಿ ಆಯುಷ್ ವೈದ್ಯರು ಅಲೋಪತಿ ಔಷಧಿ ಬಳಸಲು ಒಪ್ಪಿಗೆ ನೀಡಿದಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅಲೋಪತಿ ವೈದ್ಯರ ಕೊರತೆ ಇದ್ದು, ರಾಜ್ಯದ ಸುಮಾರು 40 ಸಾವಿರ ಆಯುಷ್ ವೈದ್ಯರು ಈ ಕೊರತೆ ನೀಗಿಸುತ್ತಿದ್ದಾರೆ.

ಇಂತಹ ವೈದ್ಯರು ಕೆಲವೊಂದು ಅನಿವಾರ್ಯ ಸಂದರ್ಭಗಳಲ್ಲಿ ಅಲೋಪತಿ ಔಷಧಿಗಳನ್ನು ಬಳಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ರೋಗಿಗಳ ಹಿತದೃಷ್ಟಿಯಿಂದ ಆಯುಷ್ ವೈದ್ಯರಿಗೆ ಅಲೋಪತಿ ಔಷಧಿ ಬಳಕೆಗೆ ಅನುಮತಿ ನೀಡುವಂತೆ ಕೋರಿದರೂ, ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುಮತಿ ನೀಡುವವರೆಗೆ ಮುಷ್ಕರ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದರು.

ಭಾರತೀಯ ಆಯುಷ್ ಫೆಡರೇಶನ್ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಡಾ. ವಿಜಯ ಶಿಂಧೆ, ಡಾ. ಸೌದಾಗರ, ಡಾ. ಶರಣರೆಡ್ಡಿ ಕೋಡ್ಲಾ, ಡಾ. ನಾಗರಾಜ ವಾರದ, ಡಾ. ಬಸವರಾಜ ಇಜೇರಿ, ಡಾ. ವೀರಭದ್ರಪ್ಪ ಯಲ್ಹೇರಿ, ಡಾ. ಮಹೇಶರಡ್ಡಿ, ಡಾ. ಮೋಹನರೆಡ್ಡಿ, ಡಾ. ಬಸವರಾಜ ಪಾಟೀಲ, ಡಾ. ಮಲ್ಲಿಕಾರ್ಜುನ, ಡಾ. ಅಯ್ಯಾಳ, ಡಾ. ಶೋಭಾ ಕೊಲ್ಲೂರ, ಡಾ. ಗಾಯಿತ್ರಿ, ಡಾ. ಶೋಭಾರಾಣಿ ಸೇರಿದಂತೆ ನೂರಾರು ವೈದ್ಯರು ಭಾಗವಹಿಸಿದ್ದರು.

ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀಕ್‌ಕುಮಾರ ದೋಖಾ, ಜಿಲ್ಲೆಯ ಬಹುತೇಕ  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅನುಭವ ವೈದ್ಯರ ಕೊರತೆ ಇದೆ. ಆಯುಷ್ ವೈದ್ಯರೆ ಗ್ರಾಮೀಣ ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಅನುಭವವಿಲ್ಲದ ಆಶಾ ಕಾರ್ಯಕರ್ತರಿಗೆ ಸರ್ಕಾರ ಹೆಚ್ಚಿನ ಸೌಲಭ್ಯ, ಅಧಿಕಾರ ನೀಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ಪಡೆದಿರುವ ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಆಲೋಪತಿ ಔಷಧಿ ಬಳಕೆಗೆ ಅನುಮತಿ ನೀಡಿದರೆ, ಇನ್ನು ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು.
ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ, ಆಯುಷ್ ವೈದ್ಯರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT