ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಗೆ ಬಾರದ ಸಚಿವರು!

ಪಕ್ಕದ ಜಿಲ್ಲೆಗಳತ್ತ ಹರಿದು ಬರುವ ಮಂತ್ರಿವರ್ಯರ ದಂಡು
Last Updated 2 ಜುಲೈ 2013, 6:23 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾಗಿ ನಾಲ್ಕು ವರ್ಷಗಳು ಕಳೆದಿವೆ. ಅಲ್ಲಿಂದ ಇಲ್ಲಿಯವರೆಗೆ ಜಿಲ್ಲೆಗೆ ಭೇಟಿ ನೀಡಿದ ಸಚಿವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊರತುಪಡಿಸಿ, ಜಿಲ್ಲೆಗೆ ಭೇಟಿ ನೀಡಿದ ಸಚಿವರು ಅತ್ಯಂತ ವಿರಳ. ಜಿಲ್ಲೆಯಲ್ಲಿ ಹಲವಾರು ಸಮಸ್ಯೆಗಳಿದ್ದರೂ, ಅವುಗಳನ್ನು ಪರಿಹರಿಸಬೇಕಾದ ಸಚಿವರು ಮಾತ್ರ ಬೆಂಗಳೂರಿನಲ್ಲಿಯೇ ಕುಳಿತು ಪರಿಶೀಲನೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 2009 ರ ಡಿಸೆಂಬರ್ 30 ರಂದು ಯಾದಗಿರಿಯನ್ನು ನೂತನ ಜಿಲ್ಲೆಯಾಗಿ ಘೋಷಣೆ ಮಾಡಿತು. ಜಿಲ್ಲಾ ಕೇಂದ್ರದ ಉದ್ಘಾಟನೆಗೆ ಮಾತ್ರ ಅಂದಿನ ಮುಖ್ಯಮಂತ್ರಿಗಳೂ ಸೇರಿದಂತೆ ಅನೇಕ ಸಚಿವರು ಯಾದಗಿರಿಗೆ ಆಗಮಿಸಿದ್ದರು. ಅದಾದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಧ್ವಜಾರೋಹಣಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದರು.

ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಾಲಚಂದ್ರ ಜಾರಕಿಹೊಳಿ, ಸಿ.ಸಿ. ಪಾಟೀಲ ಒಂದೊಂದು ಸಲ ಧ್ವಜಾರೋಹಣ ನೆರವೇರಿಸಿ ಹೋದರು. ನಂತರ ಬಂದ ಮುಮ್ತಾಜ್ ಅಲಿಖಾನ್ ಐದಾರು ತಿಂಗಳು ನಿರಂತರವಾಗಿ ಜಿಲ್ಲೆಗೆ ಭೇಟಿ ನೀಡುತ್ತ ಬಂದರು.

ಜಿಲ್ಲೆಯವರೇ ಆದ ನರಸಿಂಹ ನಾಯಕ (ರಾಜುಗೌಡ) ಜಿಲ್ಲಾ ಉಸ್ತುವಾರಿ ಸಚಿವರಾದರು. ಸುಮಾರು ಒಂದೂವರೆ ವರ್ಷದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ ಜಿಲ್ಲೆಗೆ ಭೇಟಿ ನೀಡಿದರು.

ಇವರನ್ನು ಹೊರತುಪಡಿಸಿದರೆ ಬೇರಾವ ಸಚಿವರೂ ಜಿಲ್ಲೆಯತ್ತ ಮುಖ ಮಾಡಿಯೇ ಇಲ್ಲ ಎನ್ನುತ್ತಾರೆ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಂಗನಗೌಡ ಧನರಡ್ಡಿ.

ಪಕ್ಕದ ಜಿಲ್ಲೆಗಳ ಮೇಲೆ ಪ್ರೀತಿ: ಯಾದಗಿರಿ ರಾಜ್ಯದ 30ನೇ ಜಿಲ್ಲೆ. ಹಾಗೆಯೇ ರಾಜ್ಯದ ಸಚಿವರೂ ಯಾದಗಿರಿಯನ್ನು ಮರೆತವರಂತೆ ಕಾಣುತ್ತಿದೆ. ಪಕ್ಕದ ಜಿಲ್ಲೆಗಳಾದ ರಾಯಚೂರು, ಗುಲ್ಬರ್ಗ, ವಿಜಾಪುರಕ್ಕೆ ಸಚಿವರ ದಂಡೇ ಬರುತ್ತಿದೆ. ಆದರೆ ಯಾವ ಸಚಿವರೂ ಯಾದಗಿರಿಗೆ ಆಗಮಿಸುತ್ತಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಈ ಪರಂಪರೆ ಮುಂದುವರಿದಿದೆ. ಸಚಿವರಾದ ಎಚ್.ಎಸ್.ಮಹದೇವಪ್ರಸಾದ, ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ, ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಹಲವಾರು ಸಚಿವರು ಕಳೆದ ಒಂದು ತಿಂಗಳಲ್ಲಿ ಪಕ್ಕದ ರಾಯಚೂರು ಜಿಲ್ಲೆಗೆ ಭೇಟಿ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲರು, ಆರ್ಸೆನಿಕ್‌ಯುಕ್ತ ನೀರು ಇರುವ ರಾಯಚೂರು ಜಿಲ್ಲೆಯ ಗ್ರಾಮಗಳಿಗೂ ಭೇಟಿ ನೀಡಿದರು. ಆದರೆ ಯಾದಗಿರಿ ಜಿಲ್ಲೆಯಲ್ಲೂ ಆರ್ಸೇನಿಕ್‌ಯುಕ್ತ ನೀರಿರುವ 19 ಗ್ರಾಮಗಳಿದ್ದರೂ, ಜಿಲ್ಲೆಗೆ ಬರುವ ಸೌಜನ್ಯ ತೋರಲಿಲ್ಲ ಎನ್ನುವುದು ಬಿಎಸ್ಸಾರ್ ಕಾಂಗ್ರೆಸ್ ಮುಖಂಡ ಶಂಕ್ರಣ್ಣ ವಣಿಕ್ಯಾಳ ಅವರ ಆರೋಪ.

ಜಿಲ್ಲೆಯಾಗಿರುವುದು ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. ಹೊಸ ಜಿಲ್ಲೆಯಲ್ಲಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ  ಆಯಾ ಖಾತೆಗಳ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಖುದ್ದು ಪರಿಶೀಲಿಸಬೇಕು. ಆದರೆ ಸಚಿವರು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ಹೇಳುತ್ತಾರೆ.

ಸಮಸ್ಯೆಗಳ ಸರಮಾಲೆ: ಜಿಲ್ಲೆಯಾಗಿ ನಾಲ್ಕು ವರ್ಷ ಕಳೆದರೂ, ಸಮಸ್ಯೆಗಳು ಮಾತ್ರ ಪರಿಹಾರ ಕಾಣುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸಮಸ್ಯೆಗಳ ಸರಮಾಲೆಯೇ ಇದೆ. ರಸ್ತೆ, ನೀರು, ಶಿಕ್ಷಕರು, ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿಯ ಕೊರತೆಗಳ ಮಧ್ಯೆ ಜಿಲ್ಲೆ ನಲುಗುತ್ತಿದೆ.

ಜಿಲ್ಲೆಯಲ್ಲಿ 1050 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಇದ್ದರೆ, ವೈದ್ಯರ ಸಂಖ್ಯೆಯೂ ಸಾಕಷ್ಟು ಕಡಿಮೆ ಇದೆ. ಇಷ್ಟಾದರೂ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರು, ಆರೋಗ್ಯ ಸಚಿವರೂ ಒಮ್ಮೆಯೂ ಭೇಟಿ ನೀಡದೇ ಇರುವುದು ಜಿಲ್ಲೆಯ ಬಗ್ಗೆ ಸರ್ಕಾರಗಳಿಗೆ ಇರುವ ಕಾಳಜಿ ತೋರಿಸುತ್ತದೆ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ.

ಜಿಲ್ಲೆಯಲ್ಲಿ ನಾರಾಯಣಪುರ ಜಲಾಶಯವಿದ್ದು, ನೀರಾವರಿ ಕ್ಷೇತ್ರದಲ್ಲೂ ಇನ್ನೂ ಸಮಸ್ಯೆಗಳು ಹಾಗೆಯೇ ಉಳಿದಿವೆ.
ಹಿಂದಿನ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಒಮ್ಮೆಯೂ ಅವರು ಜಿಲ್ಲೆಯ ನೀರಾವರಿ ಯೋಜನೆಗಳ ಪರಿಶೀಲನೆಗೆ ಆಗಮಿಸಲಿಲ್ಲ.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಾದರೂ ಜಿಲ್ಲೆಗೆ ಭೇಟಿ ನೀಡಿದರೆ, ಈ ಭಾಗದ ರೈತರಿಗೆ ನೀರು ಒದಗಿಸುವ ಕಾರ್ಯಕ್ಕೆ ಚಾಲನೆ ಸಿಗಬಹುದು ಎನ್ನುತ್ತಾರೆ ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಘಟಕದ ಮರೆಪ್ಪ ನಾಯಕ ಮಗ್ದಂಪೂರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT