ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿಯಲ್ಲೊಬ್ಬ ಆಧುನಿಕ ಶ್ರವಣಕುಮಾರ

Last Updated 24 ಡಿಸೆಂಬರ್ 2012, 8:44 IST
ಅಕ್ಷರ ಗಾತ್ರ

ಯಾದಗಿರಿ: ಶ್ರವಣಕುಮಾರನ ಕತೆಗಳು ಕೇವಲ ಕೇಳಲಿಕ್ಕಷ್ಟೇ ಸೀಮಿತವಾಗಿ ಉಳಿದಿದೆ. ಶ್ರವಣಕುಮಾರನಿಗೆ ತಂದೆ-ತಾಯಿಯರ ಬಗ್ಗೆ ಇದ್ದ ಪೂಜ್ಯ ಭಾವನೆಯ ಬಗ್ಗೆ ಕೇವಲ ಮಕ್ಕಳಿಗೆ ಕತೆ ಹೇಳಿ ಮುಗಿಸಲಾಗುತ್ತದೆ. ಕತೆ ಕೇಳುವ ಮಕ್ಕಳೂ ಅದನ್ನು ಅಲ್ಲಿಗೆ ಮರೆತು ಬಿಡುತ್ತಾರೆ. ಅದರಲ್ಲಿಯೂ ಆಧುನಿಕ ಕಾಲದಲ್ಲಿ ತಂದೆ-ತಾಯಿಯರ ಬಗ್ಗೆ ಗೌರವ ತೋರುವವರು ಸಿಗುವುದೂ ಬೆರಳೆಣಿಕೆಯಷ್ಟು.

ಇಂತಹ ಕಾಲದಲ್ಲಿಯೂ ಜಿಲ್ಲೆಯ ಅದರಲ್ಲೂ ತಾಲ್ಲೂಕಿನ ಮಗ್ದಂಪೂರದಲ್ಲೊಬ್ಬ ವ್ಯಕ್ತಿ ಶ್ರವಣಕುಮಾರನ ಎಲ್ಲ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ. ತಂದೆ-ತಾಯಿಯರೇ ಸಾಕ್ಷಾತ್ ದೈವ ಎಂದು ನಂಬಿದ್ದಾರೆ. ಚಿತ್ರಗಳಲ್ಲಿರುವ ಹಾಗೂ ದೇವಾಲಯಗಳಲ್ಲಿರುವ ದೇವರಿಗಿಂತ ಕಣ್ಣೆದುರು ಇರುವ ತಂದೆ-ತಾಯಿಯರೇ ದೇವರು ಎಂದು ಪೂಜಿಸುತ್ತ ಬಂದಿದ್ದಾರೆ.

ಹೌದು, ತಾಲ್ಲೂಕಿನ ಮಗ್ದಂಪೂರದ ವೀರಭದ್ರಪ್ಪ ಇಂತಹ ವಿಶಿಷ್ಟ ವ್ಯಕ್ತಿ. ಸತತ 14 ವರ್ಷಗಳಿಂದ ತಂದೆ-ತಾಯಿಯನ್ನು ತೊಟ್ಟಿಲಲ್ಲಿ ಕೂಡ್ರಿಸಿಕೊಂಡು ದೇವರ ದರ್ಶನ ಮಾಡಿಸುತ್ತ ಬಂದಿದ್ದಾರೆ. ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ವಿಶಿಷ್ಟವಾಗಿ ತಂದೆ-ತಾಯಿಯನ್ನು ಪೂಜಿಸುವ ಮೂಲಕ ಕಣ್ಣೆದುರಿಗೆ ಇರುವ ತಂದೆ-ತಾಯಿಯರೇ ನಮ್ಮ ಪಾಲಿನ ದೇವರು ಎಂಬುದನ್ನು ಜನರಿಗೆ ಸಾರಿ ಹೇಳುತ್ತಿದ್ದಾರೆ.

ಮಗ್ದಂಪೂರದ ಹುಸೇನಪ್ಪ (72) ಹಾಗೂ ಅನಂತಮ್ಮ (65) ಅವರ ಏಕೈಕ ಪುತ್ರ ವೀರಭದ್ರಪ್ಪ. ನಿತ್ಯ ತಂದೆ-ತಾಯಿಯ ಪೂಜೆಗೈದು, ಆಶೀರ್ವಾದ ಪಡೆದ ನಂತರವೇ ವೀರಭದ್ರಪ್ಪ ಮುಂದಿನ ಕೆಲಸ ಆರಂಭಿಸುತ್ತಾರೆ. ಅದರಂತೆ ಪ್ರತಿವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ತಂದೆ-ತಾಯಿಯನ್ನು ತೊಟ್ಟಿಲಲ್ಲಿ ಕೂಡ್ರಿಸಿಕೊಂಡು ಊರಿನ ಹನುಮಾನ ದೇವಸ್ಥಾನಕ್ಕೆ ಕರೆದೊಯ್ದು ದರ್ಶನ ಮಾಡಿಸುತ್ತಾರೆ. ಮನೆಗೆ ಮರಳಿದ ನಂತರ ತಂದೆ-ತಾಯಿಯ ಪಾದಪೂಜೆ, ವಿಶೇಷ ಪೂಜೆ ನೆರವೇರಿಸಿ ಆಶೀರ್ವಾದ ಪಡೆಯುತ್ತಾರೆ. ಅಲ್ಲದೇ ಅಂದು ಗ್ರಾಮದ ಜನರಿಗೆ ಊಟ ಹಾಕುತ್ತಾರೆ.

ವೀರಭದ್ರಪ್ಪನಿಗೆ ತಕ್ಕ ಪತ್ನಿಯಾದ ಶಶಿಕಲಾ ಕೂಡ ತನ್ನ ಅತ್ತೆ-ಮಾವಂದಿರನ್ನು ಸಾಕ್ಷಾತ್ ದೇವರೆಂದೇ ಭಾವಿಸಿದ್ದಾರೆ. ಪತಿಯ ಈ ಕಾರ್ಯಕ್ಕೆ ಸಂಪೂರ್ಣ ಬೆಂಬಲವಾಗಿ ನಿಂತಿರುವ ಶಶಿಕಲಾ, ಅತ್ತೆ-ಮಾವಂದಿರ ಸೇವೆ ಅಚ್ಚುಕಟ್ಟಾಗಿ ನೆರವೇರಿಸುತ್ತಾರೆ.

ಮೊದಲು ವೀರಭದ್ರಪ್ಪ ಅವರ ಕುಟುಂಬದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಆದರೆ ಅಂತಹ ಪರಿಸ್ಥಿತಿಯಲ್ಲಿ ಎದೆಗುಂದದ ತಂದೆ-ತಾಯಿ, ವೀರಭದ್ರಪ್ಪ ಅವರನ್ನು ಪದವಿವರೆಗೆ ಓದಿಸಿದರು. ಅದರ ಫಲವಾಗಿಯೇ ಇಂದು ವೀರಭದ್ರಪ್ಪ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ನೌಕರಿ ಮಾಡುತ್ತಿದ್ದಾರೆ.

“ಗುಡ್ಯಾಗಿನ ದೇವ್ರಾ ಪೂಜಿ ಮಾಡೋದಕ್ಕಿನ್ನ ಮನ್ಯಾಗಿನ ಅವ್ವ-ಅಪ್ಪನ ಸೇವಾ ಮಾಡಿದ್ರ ಅದ ದೊಡ್ಡ ಪುಣ್ಯ ನೋಡ್ರಿ. ಅವರ ಆಶೀರ್ವಾದ ಇದ್ರ ಜೀವನ ಸಾರ್ಥಕ ಆಗತೈತಿ. ನಮ್ಮನ್ನ ಹಡದ, ಬೆಳಿಸಿ, ಸಾಲಿ ಕಲಿಸಿ, ಒಂದು ಜೀವನಾ ಕೊಟ್ಟ ತಂದೆ-ತಾಯಿಯ ನಮ್ಮ ಪಾಲಿನ ಖರೇ ದೇವರ ನೋಡ್ರಿ” ಎನ್ನುವಾಗ ವೀರಭದ್ರಪ್ಪ ಅವರ ಮುಖದಲ್ಲಿ ಹೊಸ ಹುಮ್ಮಸ್ಸು ಕಾಣುತ್ತದೆ.

ಇನ್ನು ಹುಸೇನಪ್ಪ ಹಾಗೂ ಅನಂತಮ್ಮ ದಂಪತಿಗೂ ಮಗನನ್ನು ಕಂಡರೇ ಎಲ್ಲಿಲ್ಲದ ಪ್ರೀತಿ. ಮಗ ಯಾವಾಗ ಮನೆಗೆ ಬರುತ್ತಾನೋ ಎಂದು ಕಾದು ಕುಳಿತಿರುತ್ತಾರೆ. ಇಂತಹ ಮಗನನ್ನು ಪಡೆಯಲು ಯಾವ ಜನ್ಮದಲ್ಲಿ ಪುಣ್ಯ ಮಾಡಿದ್ದೇವೋ ಎಂದು ಆನಂದಭರಿತರಾಗಿ ಹೇಳುತ್ತಾರೆ.

ಬದಲಾದ ಸ್ನೇಹಿತ: ವೀರಭದ್ರಪ್ಪನ ಈ ಕಾರ್ಯದಿಂದ ಅನೇಕರು ತಮ್ಮ ತಂದೆ-ತಾಯಿಯರ ಬಗ್ಗೆ ಹೊಂದಿದ್ದ ಮನೋಭಾವವನ್ನು ಬದಲಿಸಿಕೊಂಡಿದ್ದಾರೆ. ವೀರಭದ್ರಪ್ಪ ಅವರ ಸ್ನೇಹಿತ ಬಾಲರಾಜ ಮೊದಲು ತನ್ನ ತಂದೆ-ತಾಯಿಯ ಬಗ್ಗೆ ಗೌರವ ಭಾವನೆ ಹೊಂದಿರಲಿಲ್ಲ. ಆದರೆ ವೀರಭದ್ರಪ್ಪನ ಪೂಜಾ ಕಾರ್ಯದಿಂದ ತನ್ನ ತಂದೆ-ತಾಯಿಯರನ್ನು ಪೂಜಿಸಲು ಆರಂಭಿಸಿದ್ದಾರೆ.

ಪ್ರತಿ ವರ್ಷ ನಡೆಯುವ ವಿಶಿಷ್ಟ ಕಾರ್ಯಕ್ರಮವನ್ನು ವೀಕ್ಷಿಸಲು ವಿವಿಧ ಗ್ರಾಮಗಳಿಂದ ಅಸಂಖ್ಯಾತ ಜನರು ಮಗ್ದಂಪೂರಕ್ಕೆ ಆಗಮಿಸುತ್ತಾರೆ. ವೀರಭದ್ರಪ್ಪನವರ ಸಂತಸದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಅಲ್ಲದೇ ಅವರನ್ನು ಬೆನ್ನು ತಟ್ಟಿ ಶ್ಲಾಘಿಸುತ್ತಾರೆ.

ಆಧುನಿಕ ಕಾಲದಲ್ಲಿ ವಯಸ್ಸಾದ ತಂದೆ-ತಾಯಿಯನ್ನು ವೃದ್ಧಾಶ್ರಮಗಳಿಗೆ ಸೇರಿಸಿ, ಹೆಂಡತಿ, ಮಕ್ಕಳೊಂದಿಗೆ ಚೆನ್ನಾಗಿರಬೇಕು ಎನ್ನುವ ಜನರೇ ಹೆಚ್ಚು. ಇಂತಹ ಜನರಿಗೆ ವೀರಭದ್ರಪ್ಪ ಆದರ್ಶಪ್ರಾಯವಾಗಿ ನಿಲ್ಲುತ್ತಾರೆ ಎಂದು ಗ್ರಾಮದ ಜನರು ಮೆಚ್ಚುಗೆಯಿಂದಲೇ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT