ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾನಾಗುಂದಿ ಮಾಣಿಕೇಶ್ವರಿ ಮಾತೆ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅದೊಂದು ಅದ್ಭುತ ಬೆಟ್ಟ. ಅಲ್ಲಿ ನೆಲೆಸಿರುವ ಮಾತೆಯ ದರ್ಶನಕ್ಕೆ ಲಕ್ಷಾಂತರ ಹೃದಯಗಳು ತನ್ಮಯತೆಯಿಂದ ಕಾಯುತ್ತವೆ. ಗುರು ಪೌರ್ಣಿಮೆ, ಶಿವರಾತ್ರಿ ಬಂತೆಂದರೆ, ಬೆಟ್ಟದ ತಪ್ಪಲಿನಲ್ಲಿ ಭಕ್ತರ ದಂಡೇ ಸೇರುತ್ತದೆ. ನೆಟ್ಟ ಕಣ್ಣುಗಳು ಮಾತೆಯ ಆಗಮನಕ್ಕಾಗಿ ಹಾತೊರೆಯುತ್ತವೆ.

ಇದೇ ಗುಲ್ಬರ್ಗ ಜಿಲ್ಲೆ ಸೇಡಂ ತಾಲ್ಲೂಕಿನ ಯಾನಾಗುಂದಿಯ ಸೂರ್ಯ ನಂದಿ ಕ್ಷೇತ್ರ. ಯಾದಗಿರಿಯಿಂದ 48 ಕಿ.ಮೀ. ದೂರದಲ್ಲಿದೆ. ಜೀವಂತ ದೇವತೆ ಎಂದೇ ತಿಳಿಯುವ ಮಾತಾ ಮಾಣಿಕೇಶ್ವರಿ ದೇವಿ ನೆಲೆವೀಡು.

ಶ್ರೀರಾಮಚಂದ್ರನು ಲಕ್ಷ್ಮಣನೊಡನೆ ಕೆಲವು ದಿನ ಇಲ್ಲಿದ್ದು, ಶಿವಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸಿದನಂತೆ. ಅದೇ ಶ್ರೀರಾಮೇಶ್ವರ ಮಂದಿರ. ರಾಮ ಮಂದಿರದ ಹಿಂದೆ ಒಂದು ಸುಂದರ ಗುಂಡವಿದ್ದು, ಅದನ್ನು `ಪ್ರದೋಷ ತೀರ್ಥಂ~, `ಪ್ರಯೋಗ ಮಾಧವಂ~ ಎಂದು ಕರೆಯಲಾಗುತ್ತದೆ.

ಮಾತಾ ಮಾಣಿಕೇಶ್ವರಿ ದೇವಿಯವರು 1949 ರಲ್ಲಿ ತಮ್ಮ 15 ನೇ ವಯಸ್ಸಿನಲ್ಲಿ ಯಾನಾಗುಂದಿಗೆ ಆಗಮಿಸಿದರು. 1953 ರಲ್ಲಿ ಕಾಶಿ ಕ್ಷೇತ್ರದಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲಾಯಿತು. 1953 ಡಿಸೆಂಬರ್ 21 ರಂದು ಮಾತೆ ಶಿವಾಲಯದ ಹಿಂದಿನ ಕೋಣೆಯಲ್ಲಿ ಅಘೋರ ತಪಸ್ಸು ಆರಂಭಿಸಿದರು. 1954 ರ ಮಾರ್ಚ್ 3 ರಂದು ತಪಸ್ಸು ಮುಗಿಸಿ ಭಕ್ತರಿಗೆ ದರ್ಶನ ನೀಡಿದರು ಎಂದು ಅನೇಕ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ವರ್ಷಕ್ಕೆ ಎರಡು ಬಾರಿ ಮಾತ್ರ ಮಾತಾ ಮಾಣಿಕೇಶ್ವರಿ ದೇವಿ ದರ್ಶನ ನೀಡುತ್ತಾರೆ. ಕೆಲ ಸಮಯದ ಹಿಂದೆ ಎರಡು ವರ್ಷದ ನಂತರ ದರ್ಶನ ನೀಡಿದ್ದರು. ಇದಕ್ಕಾಗಿ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ಆಂಧ್ರದಿಂದಲೂ ಲಕ್ಷಾಂತರ ಭಕ್ತರ ದಂಡೇ ಸೇರುತ್ತದೆ.

ಶಿವರಾತ್ರಿಯಂದು ದರ್ಶನ ನೀಡುವ ಮಾತಾ ಮಾಣಿಕೇಶ್ವರಿ ದೇವಿಯವರು, ಗುರು ಪೌರ್ಣಿಮೆಯವರೆಗೂ ದರ್ಶನ ಕೊಡುವುದಿಲ್ಲ. ಅಲ್ಲಿಯವರೆಗೆ ತಮ್ಮ ಧ್ಯಾನ ಮಂದಿರದಲ್ಲಿಯೇ ಧ್ಯಾನ ಮಾಡುತ್ತಾರೆ. ವಿಶೇಷ ದರ್ಶನ, ವಿಶೇಷ ಪೂಜೆ ಎಂಬಿತ್ಯಾದಿಗಳಿಗೆ ಇಲ್ಲಿ ಅವಕಾಶವಿಲ್ಲ. ಎಷ್ಟೇ ದೊಡ್ಡ ವ್ಯಕ್ತಿ ಬಂದರೂ, ಮಾತಾಜಿ ಬಯಸಿದರೆ ಮಾತ್ರ ದರ್ಶನ. ಅನೇಕ ರಾಜಕಾರಣಿಗಳು, ಮುಖ್ಯಂತ್ರಿಗಳು ಏಳೆಂಟು ಗಂಟೆ ಕಾಯ್ದು ದರ್ಶನ ಇಲ್ಲದೇ ಮರಳಿದ ಉದಾಹರಣೆಗಳೂ ಇವೆ.

ಹೂವು, ಹಣ್ಣು, ಕಾಯಿಗಳಿಂದ ಮಾತಾಜಿ ಬಲು ದೂರು. ಭಕ್ತರು ತೆಗೆದುಕೊಂಡು ಹೋಗುವ ಹೂವು, ಹಣ್ಣು, ಕಾಯಿಗಳನ್ನು ಸೂರ್ಯನಂದಿ ಕ್ಷೇತ್ರದಲ್ಲಿರುವ ದೇವಾಲಯಗಳಿಗೇ ಅರ್ಪಿಸಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೇ, ಪ್ರಾಣಿಗಳ ಹಿಂಸೆಯನ್ನು ತಡೆಯುವುದಕ್ಕಾಗಿಯೇ ಮಾತಾಜಿ ಅವತರಿಸಿದಂತಿದೆ.
 
ದರ್ಶನದ ಸಮಯದಲ್ಲಿ ಪ್ರಾಣಿಗಳ ಹಿಂಸೆ ಮಾಡಬಾರದು. ಪ್ರಾಣಿಗಳ ಬಗ್ಗೆ ದಯೆ ಇರಬೇಕು ಎಂಬುದನ್ನೇ ಮಾತಾಜಿ ಭಕ್ತರಿಗೆ ಹೇಳುತ್ತಾರೆ. ಅದರಂತೆ ಕ್ಷೇತ್ರಕ್ಕೆ ಬರುವ ಅನೇಕ ಭಕ್ತರು, ಮಾಂಸಾಹಾರದ ಸೇವನೆ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿಯೂ ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT