ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ಜಪ್ತಿಗೂ ಸಿಗದ ನವಿಲುಗಳು!

Last Updated 25 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಅಂಗಳದಲ್ಲಿ ಹುಡುಗಿ ಬಿಡಿಸಿದ ಚಂದದ ರಂಗೋಲಿ. ಆ ರಂಗವಲ್ಲಿಯಲ್ಲಿ ಬಣ್ಣದ ನವಿಲುಗಳು. ಮನೆಯಿಂದ ಹೊರಬಿದ್ದ ಇಬ್ಬರು ತರುಣರಿಗೆ ರಂಗೋಲಿಯ ಕಂಡು ಆನಂದ, ಅಚ್ಚರಿ. ಈ ಇಬ್ಬರು ಹುಡುಗರಲ್ಲಿ ಒಬ್ಬನು ಹುಡುಗಿಯನ್ನು ನೋಡಲು ಬಂದವನು, ಮೆಚ್ಚಿಕೊಂಡವನು. ಸಂಭಾವ್ಯ ವಧು ಬಿಡಿಸಿದ ರಂಗೋಲಿ ಅವನಿಗೆ ಮೋರೆಯಲ್ಲಿ ಮಂದಹಾಸವಾಗುತ್ತದೆ. ಗೆಳೆಯ ಉದ್ಗರಿಸುತ್ತಾನೆ- `ಯಾರ ಜಪ್ತಿಗೂ ಸಿಗದ ನವಿಲುಗಳು'. ತಕ್ಷಣ ನೆನಪಾಗುವುದು ದೇವನೂರ ಮಹಾದೇವ ಅವರ `ಒಡಲಾಳ' ಕಥೆ.

`ಒಡಲಾಳ'ದ ಪುಟ್ಟಗೌರಿ ಗೋಡೆಯ ಮೇಲೆ ನವಿಲುಗಳ ಬಿಡಿಸಿದ್ದಾಳೆ. ಆ ನವಿಲುಗಳು ಬಡ ಕುಟುಂಬದ ಸ್ವಾತಂತ್ರ್ಯದ ಅಭಿವ್ಯಕ್ತಿಯೂ ಹೌದು, ಅವರ ಕೈಗೆಟುಕದ ಬಣ್ಣಗಳ ರೂಪಕವೂ ಹೌದು. ಈ ರೂಪಕ ಮೇಲಿನ ರಂಗೋಲಿ ಚಿತ್ರದಲ್ಲಿ ಬೇರೆ ರೂಪದಲ್ಲಿ ಬಳಕೆಯಾಗಿದೆ. ಅಂದಹಾಗೆ, ಇದು `ಬೆಳ್ಳಿಕಿರಣಾ' ಚಿತ್ರದ ಒಂದು ದೃಶ್ಯ.

`ಬೆಳ್ಳಿಕಿರಣಾ' ಕೆ. ಶಿವರುದ್ರಯ್ಯ ನಿರ್ದೇಶನದ ಚಿತ್ರ. ಈ ಬಾರಿಯ ರಾಷ್ಟ್ರಪ್ರಶಸ್ತಿ ಕಣದಲ್ಲಿ ಹಲವರ ಗಮನಸೆಳೆದ ಚಿತ್ರ. ಗೋಡೆಯ ಮೇಲಿನ ಕೈಗೆ ಸಿಗದ ನವಿಲುಗಳಂತೆ ಚಿತ್ರಕ್ಕೆ ಪ್ರಶಸ್ತಿ ದೊರೆಯಲಿಲ್ಲ. ಆ ಚರ್ಚೆ ಬೇರೆ. ಆದರೆ, ರಂಗವಲ್ಲಿಯಲ್ಲಿ ಜೀವತಳೆದ ನವಿಲುಗಳು ಸಿನಿಮಾ ನೋಡಿದ ಸಹೃದಯರ ಎದೆಯಲ್ಲಿ ಕುಣಿಯುವುದನ್ನು ತಪ್ಪಿಸುವುದು ಯಾರಿಗಾದರೂ ಕಷ್ಟ.

ರಂಗೋಲಿಯ ಕಥೆ ಇನ್ನೂ ಇದೆ. ಹುಡುಗ ಹುಡುಗಿಯನ್ನು ಒಪ್ಪಿಕೊಂಡಿದ್ದೇನೋ ಆಯಿತು. ಆದರೆ, ವಧು ಪರೀಕ್ಷೆ ಸಮಯದಲ್ಲಿ ಆಕೆ ನುಡಿಸಿದ ವೀಣಾ ನಾದ ಈಗ ಹುಡುಗನ ಎದೆಯಲ್ಲಿ ಮಿಡಿಯುತ್ತಿದೆ. ಅಂದಹಾಗೆ, ಬ್ರಾಹ್ಮಣರ ಮನೆಯಂಗಳದಲ್ಲಿ ಗೋಪಾಲ ಭಟ್ಟ ಎನ್ನು ಹೆಸರಿನಿಂದ ಗುರುತಾದ ಆ ಹುಡುಗನ ನಿಜವಾದ ಹೆಸರು ಮುನಾವರ್ ಪಾಷ!

`ಬೆಳ್ಳಿಕಿರಣಾ' ಕವಿ ಬಿ.ಆರ್. ಲಕ್ಷ್ಮಣರಾಯರ `ಕಬ್ಬೆಕ್ಕು' ಕಥೆ ಆಧರಿಸಿದ ಸಿನಿಮಾ. ಸರಳವಾಗಿ ಹೇಳುವುದಾದರೆ, ಬ್ರಾಹ್ಮಣ ತರುಣಿಯೊಬ್ಬಳು ಮುಸ್ಲಿಂ ಹುಡುಗನನ್ನು ಮೆಚ್ಚಿ ಮದುವೆಯಾಗುವುದು ಚಿತ್ರದ ಕಥೆ. ಒಲವಿನ ಎದುರು ಧರ್ಮ ಗೋಡೆ ಆಗಬಾರದು ಎನ್ನುವುದು ಸಿನಿಮಾದ ಆಶಯ. ಹುಡುಗಿ ಬಿಡಿಸುವ ನವಿಲುಗಳು ಸ್ವಾತಂತ್ರ್ಯದ ಜೊತೆಗೆ ಪ್ರೇಮದ ಅಭಿವ್ಯಕ್ತಿಗಳೂ ಹೌದು. ಪ್ರೇಮದ ಜೊತೆಗೆ ಗೆಳೆಯರ ಸ್ನೇಹವೂ ಉದಾತ್ತವಾದುದು. ಕಥೆಯಲ್ಲಿನ ಭಿನ್ನ ಕೋಮುಗಳಿಗೆ ಸೇರಿದವರ ಸ್ನೇಹ ಮತ್ತು ಪ್ರೇಮ- ಯಾರ ಜಪ್ತಿಗೂ ಸಿಗದಂತಹುದು.

ಧರ್ಮ ಸಾಮರಸ್ಯವನ್ನು ಬಿಂಬಿಸುವ `ಬೆಳ್ಳಿಕಿರಣಾ' ಕಥೆಯನ್ನು ನಿರ್ದೇಶಕರು ಎಚ್ಚರದಿಂದ ರೂಪಿಸಿದ್ದಾರೆ. ಸಿನಿಮಾ ಕಟ್ಟುವಿಕೆಯಲ್ಲೊಂದು ಸೌಂದರ್ಯಪ್ರಜ್ಞೆಯಿದೆ. ಈ ಸೌಂದರ್ಯದ ಕಾರಣದಿಂದಲೇ ಸಿನಿಮಾ ಭಾಷಣದ ರೂಪ ಅಥವಾ ಕಪ್ಪು ಬಿಳುಪು ಪಾತ್ರಗಳ ಕಥನ ಆಗುವ ಅಪಾಯದಿಂದ ಪಾರಾಗಿದೆ.

ಸಿನಿಮಾದಲ್ಲಿ ಇಬ್ಬರು ಅಪೂರ್ವ ಅಮ್ಮಂದಿರಿದ್ದಾರೆ. ಒಬ್ಬಾಕೆ, ಸಾಬರ ಹುಡುಗನನ್ನೂ ತನ್ನ ಮಗನಂತೆಯೇ ಪ್ರೇಮಿಸುವ ಅಮ್ಮ. `ನಮ್ಮ ಮನೆಯ ಊಟ ರುಚಿಸದಿದ್ದರೆ ಬೇಡ. ಹೋಟೆಲಿನಿಂದ ಮಾಂಸದ ಊಟ ತರಿಸಿಕೊಡುತ್ತೇನೆ' ಎನ್ನುತ್ತಾಳೆ. ಇಂತಹುದೇ ಮಾತೃ ವಾತ್ಸಲ್ಯ ಮುಸ್ಲಿಂ ಕುಟುಂಬದ ಹೆಣ್ಣುಮಗಳದೂ. ಈ ಎರಡು ಕುಟುಂಬಗಳ ನಂಟಿಗೆ ಹೆಣ್ಣೊಬ್ಬಳು ಅಗ್ನಿಪರೀಕ್ಷೆಯಂತೆ ಎದುರಾಗುತ್ತಾಳೆ.

ಈ ತೊಡಕನ್ನು ಮೀರುವ ಅಮ್ಮಂದಿರು `ಒಲವೇ ಜೀವನ ಸಾಕ್ಷಾತ್ಕಾರ' ಎಂದು ಭಾವಿಸುವುದು ಸಿನಿಮಾದ ಸಫಲತೆಯ ಕ್ಷಣ. ಹಾಗೆ ನೋಡಿದರೆ, ಇಲ್ಲಿನ ಗೆಳೆಯರು ವಿದ್ಯಾವಂತರೂ ವಿಚಾರವಂತರೂ ಸ್ನೇಹಪರರೂ ಆದರೂ, `ಈವರೆಗಿನ ತಮ್ಮ ಸಂಬಂಧ ಹುಸಿಗೊಳ್ಳುವುದೇನೋ' ಎಂದು ಅಳುಕುತ್ತಾರೆ. ಆದರೆ, ಅಮ್ಮಂದಿರಿಗೆ ಮಾತ್ರ ಯಾವ ಅಳುಕೂ ಇಲ್ಲ. ಏಕತೆಯ ಬೆಳ್ಳಿಕಿರಣ ಉದಯಿಸಬೇಕಾದುದು ಮನೆಗಳಿಂದ -ಅಮ್ಮಂದಿರಿಂದ- ಎನ್ನುವುದನ್ನು ಸಿನಿಮಾ ಸೊಗಸಾಗಿ ಹೇಳುತ್ತದೆ.

ಅಮಾಯಕ ತರುಣರನ್ನು ದಿಕ್ಕುತಪ್ಪಿಸುವ ಮತೀಯ ಮನಸ್ಸುಗಳ ಉಪಕಥೆಯೊಂದು ಸಿನಿಮಾದಲ್ಲಿದೆ. ಈ ಪ್ರಸಂಗ, ಧಾರ್ಮಿಕ ಹಿನ್ನೆಲೆಯ ಕಾರಣದಿಂದಲೇ ಕೆಲವು ಅಮಾಯಕ ತರುಣರು ಅನುಮಾನದ ಕೆಂಗಣ್ಣುಗಳಿಗೆ ಗುರಿಯಾಗುತ್ತಿರುವ ವರ್ತಮಾನದ ಆತಂಕವನ್ನು ಧ್ವನಿಸುವಂತಿದೆ. ಆದರೆ, ಈ ಎಳೆ ಮುಖ್ಯಕಥೆಯೊಂದಿಗೆ ಅಷ್ಟೇನೂ ಸಶಕ್ತವಾಗಿ ತಳುಕು ಹಾಕಿಕೊಂಡಿಲ್ಲ ಎಂದೇ ಹೇಳಬೇಕು.

`ಬೆಳ್ಳಿಕಿರಣಾ' ಚೆಂದಗೊಳ್ಳುವಲ್ಲಿ ಪಾತ್ರಧಾರಿಗಳ ಕೊಡುಗೆಯೂ ಇದೆ. ಅಲ್ಪಸಂಖ್ಯಾತ ತರುಣರ ತವಕ ತಲ್ಲಣಗಳನ್ನು ಮುನಾವರನ ಪಾತ್ರದಲ್ಲಿ ದಿಲೀಪ್ ರಾಜ್ ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಉಳಿದ ಮುಖ್ಯಪಾತ್ರಗಳಲ್ಲಿ ಸಿದ್ದಾರ್ಥ್, ಅನುಶ್ರೀ, ಗಿರಿಜಾ ಲೋಕೇಶ್ ಗಮನಸೆಳೆಯುತ್ತಾರೆ. ರಂಗೋಲಿಯ ನವಿಲುಗಳ ಚಿತ್ರದ ಸಂದರ್ಭದಲ್ಲಿ ಮುನಾವರನ ಎದೆಗೆ ವೀಣಾಧ್ವನಿ ವರ್ಗಾಯಿಸುವ ಪಿಚ್ಚಳ್ಳಿ ಶ್ರೀನಿವಾಸರ ಸಂಗೀತ ಹಾಗೂ ಆರ್. ಮಂಜುನಾಥ್ ಛಾಯಾಗ್ರಹಣ, ಸುರೇಶ್ ಅರಸು ಅವರ ಸಂಕಲನ ಸಿನಿಮಾ ಸೌಂದರ್ಯ ಹೆಚ್ಚಿಸಿದೆ.
***
`ದಾಟು', `ಭಗವತಿ ಕಾಡು', `ಮಾಗಿಯ ಕಾಲ'- ಹೀಗೆ ತಮ್ಮ ಹಿಂದಿನ ಚಿತ್ರಗಳಲ್ಲೂ ಶಿವರುದ್ರಯ್ಯ ಮಾನವೀಯತೆಯ ಬೆಳ್ಳಿಕಿರಣವನ್ನೇ ಪ್ರತಿಪಾದಿಸಿದ್ದರು. ಈಗ `ಬೆಳ್ಳಿಕಿರಣಾ' ಸರದಿ. ಇದೇನಿದೂ `ಣಾ'ಕಾರ ಎನ್ನುವ ಪ್ರಶ್ನೆಗೆ- `ಅದು ನಿರ್ಮಾಪಕರ ನಿರ್ಧಾರ' ಎನ್ನುವುದು ಅವರ ಉತ್ತರ. ಸಿನಿಮಾದ ಆಶಯಕ್ಕೆ ಒತ್ತು ನೀಡುವ ಕಾರಣಕ್ಕೆ ಈ `ಆ'ಲಾಪ ಇರಬಹುದೇನೊ?

`ಬೆಳ್ಳಿಕಿರಣಾ' ಚಿತ್ರವನ್ನು ಮಾಧ್ಯಮ ಮಿತ್ರರಿಗೆ ತೋರಿಸಿದ ನಂತರ ಶಿವರುದ್ರಯ್ಯ ಸಣ್ಣದೊಂದು ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅವರ ಮಾತುಗಳಲ್ಲಿ ತಮ್ಮ ಸಿನಿಮಾಕ್ಕೆ ದೊರಕಬೇಕಾದ ಮನ್ನಣೆ ದೊರೆಯದೇ ಹೋದುದರ ಕುರಿತು ನೋವಿತ್ತು. ಅಂದಹಾಗೆ, ಮುಂದಿನ ದಿನಗಳಲ್ಲಿ ದೇವನೂರರ ಎಲ್ಲ ಕಥೆಗಳನ್ನು ಆಧರಿಸಿ ಚಿತ್ರವೊಂದನ್ನು ರೂಪಿಸುವ ಕನಸು ಅವರಿಗಿದೆ. ಈ ನಿಟ್ಟಿನಲ್ಲಿ ಅವರು ಸಾಕಷ್ಟು ಪ್ರಯತ್ನವನ್ನೂ ನಡೆಸಿದ್ದಾರೆ. ನವಿಲುಗಳ ಹಂಬಲದ ದಾರಿ ನಿರಂತರವಾದುದು ಎಂದು ಅವರಿಗೆ ಹೇಳಬಹುದೇನೊ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT