ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಾದ್ರೆ ನನಗೇನು?

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

`ವೃತ್ತಿ ಬದುಕಿನಲ್ಲಿ ಮೇಲೆ ಬರಬೇಕು ಎಂದು ಆಸೆ ಇರುವ ಯಾವುದೇ ಕಲಾವಿದೆ ಈ ಕತೆಯನ್ನು ಒಪ್ಪಿಕೊಳ್ಳದೇ ಇರುತ್ತಿರಲಿಲ್ಲ. ಅಂಥ ಸ್ಕ್ರಿಪ್ಟ್ ಈ ಸಿನಿಮಾದ್ದು. ನನ್ನ ವೃತ್ತಿ ಬದುಕಿನಲ್ಲಿ ಇಷ್ಟು ಬೇಗ ಇಂಥ ಶಕ್ತಿಯುತ ಪಾತ್ರದಲ್ಲಿ ನಟಿಸುವ ಅವಕಾಶ ಸಿಗುತ್ತದೆ ಎಂದುಕೊಂಡಿರಲೇ ಇಲ್ಲ.

ಈ ಚಿತ್ರದ ನಾಯಕಿ ಸ್ಟ್ರಾಂಗೆಸ್ಟ್ ವುಮನ್. ಹಿಂದಿನ `ಬೆಂಕಿ-ಬಿರುಗಾಳಿ~ ಚಿತ್ರದ ನನ್ನ ನಟನೆ ಮತ್ತು ಬದ್ಧತೆ ನೋಡಿ ಅದರ ನಿರ್ದೇಶಕರು ನನಗೆ ಈ ಅವಕಾಶ ನೀಡಿದ್ದಾರೆ. ನನ್ನ ನಟನಾ ಸಾಮರ್ಥ್ಯ ತೋರಿಸಲು ಇದೊಂದು ಅವಕಾಶ...~

...ರಿಷಿಕಾ ಸಿಂಗ್ ಮಾತನಾಡುತ್ತಿದ್ದರೆ ಅವರ ಎದುರಿಗೆ ಕುಳಿತಿದ್ದ ಹಿರಿಯ ನಟಿ ಮತ್ತು ರಿಷಿಕಾ ಅಜ್ಜಿ ಪ್ರತಿಮಾ ದೇವಿ, ತಾಯಿ ಅನುರಾಧಾ ಸಿಂಗ್ ಮತ್ತು ಅತ್ತೆ ವಿಜಯಲಕ್ಷ್ಮಿ ಸಿಂಗ್ ಮೌನವಾಗಿ ಆಲಿಸುತ್ತಿದ್ದರು.

`ಯಾರಾದ್ರೆ ನನಗೇನು~ ಚಿತ್ರದ ಮುಹೂರ್ತ ಸಮಾರಂಭ ಅದು. ನಿರ್ದೇಶಕ ಕೆ.ಬಷೀದ್ ಈ ಮೊದಲು `ಬೆಂಕಿ-ಬಿರುಗಾಳಿ~ ಸಿನಿಮಾ ನಿರ್ಮಿಸಿ ನಿರ್ದೇಶಿಸಿದ್ದವರು. ಅವರೀಗ `ಯಾರಾದ್ರೆ ನನಗೇನು?~ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ಅವರಿಗೆ ಶುಭ ಹಾರೈಸಲು ಹಿರಿಯ ನಟ ಅಂಬರೀಷ್, ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಬಂದಿದ್ದರು. ರಿಷಿಕಾ ಪ್ರಧಾನ ಭೂಮಿಕೆಯಲ್ಲಿ ನಟಿಸುತ್ತಿರುವುದರಿಂದ ಅವರ ಕುಟುಂಬವರ್ಗದವರು ಹಾಜರಿದ್ದರು.

ಮಹಿಳಾ ಸಂಘಟನೆಯೊಂದು ಪೋಸ್ಟರೊಂದರಲ್ಲಿನ ರಿಷಿಕಾ ಚಿತ್ರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿತ್ತು. ಅದರ ಬಗ್ಗೆ ಮಾತನಾಡಿದ ರಿಷಿಕಾ, `ಮಹಿಳಾ ಸಂಘಟನೆಯವರು ನಾನು ಸ್ಕಿನ್ ಶೋ ಮಾಡಿದ್ದೇನೆ ಎನ್ನುತ್ತಿದ್ದಾರೆ. ಆದರೆ ಎಲ್ಲಿ ಕಾಣುತ್ತಿದೆ ಸ್ಕಿನ್ ಶೋ~ ಎಂದು ಪ್ರಶ್ನಿಸಿದರು.

`ಅಮ್ಮನ ಬೆಂಬಲ ಇರುವಾಗ ನಾನು ಯಾರಿಗೂ ಹೆದರಬೇಕಿಲ್ಲ~ ಎಂದು ಸಿಡುಕಿದ ಅವರು, `ಚಿತ್ರದ ಸಬ್ಜೆಕ್ಟ್‌ಗೆ ಇಂಥ ದೃಶ್ಯದ ಅಗತ್ಯ ಇದೆ. ನನ್ನನ್ನು ಚಿತ್ರದಲ್ಲಿ ಹೊಡೆದು ಬಡಿದು ಮರಳಿನಲ್ಲಿ ಹೂತು ಹಾಕಿರುತ್ತಾರೆ. ಆಗ ನಾನು ಮರಳಿನಿಂದ ಮೇಲೇಳುತ್ತೇನೆ. ಚಿತ್ರದಲ್ಲಿ ನನ್ನದು ಮೂರು ಶೇಡ್‌ನ ಪಾತ್ರ. ಒಂದು ಕಾಲೇಜು ಹುಡುಗಿ, ನಡುವೆ ನೆಗೆಟಿವ್, ಕ್ಲೈಮ್ಯಾಕ್ಸ್‌ನಲ್ಲಿ ಯಾರೂ ಊಹಿಸಲಾಗದ ತುಂಬಾ ವಿಭಿನ್ನ ಪಾತ್ರ. ಇಂಥ ಸಿನಿಮಾ ನನಗೆ ಸಿಕ್ಕಿರುವುದು ಅದೃಷ್ಟ~ ಎಂದು ಮುಖ ಅರಳಿಸಿದರು.

ನಿರ್ದೇಶಕ ಬಷೀದ್‌ರ ಮಾತು ತೆಲುಗು, ಉರ್ದು, ಹಿಂದಿ ಮಿಶ್ರಣವಾಗಿತ್ತು. `ಕನ್ನಡ ಚಿತ್ರರಂಗದಲ್ಲಿಯೇ ಇದು ಬಿಗ್ ಬಜೆಟ್ ಸಿನಿಮಾ. ಚಿತ್ರದ ಬಜೆಟ್ 15 ಕೋಟಿ ರೂಪಾಯಿ. ಬಾಲಿವುಡ್‌ನ ಮಲ್ಲಿಕಾ ಶೆರಾವತ್ ಮತ್ತು ನಿಶಾ ಕೊಠಾರಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದುವರೆಗೆ ಮಲ್ಲಿಕಾ ಅವರನ್ನು ರೊಮ್ಯಾಂಟಿಕ್ ಪಾತ್ರಗಳಲ್ಲಿ ಮಾತ್ರ ನೋಡಲಾಗಿದೆ. ಇದರಲ್ಲಿ ಅವರಿಗೆ ನೆಗೆಟಿವ್ ಪಾತ್ರ ನೀಡಿರುವೆ.

ನಿಶಾ ಕೊಠಾರಿ ಅವರದು ಪೊಲೀಸ್ ಅಧಿಕಾರಿ ಪಾತ್ರ. ಆಯೇಷಾ ಅವರ ಒಪ್ಪಿಗೆಗೆ ಕಾಯಲಾಗುತ್ತಿದೆ. ತೆಲುಗು, ತಮಿಳು, ಹಿಂದಿಯಲ್ಲೂ ಸಿನಿಮಾ ತಯಾರಿಸುತ್ತಿರುವುದರಿಂದ ಅಲ್ಲಿನ ಜನಪ್ರಿಯ ನಾಯಕರನ್ನು ಆಯ್ಕೆ ಮಾಡಬೇಕಿದೆ. ಕನ್ನಡದಲ್ಲಿ ಡಬ್ಬಿಂಗ್‌ಗೆ ಅವಕಾಶ ಇಲ್ಲದ ಕಾರಣ ಇಲ್ಲಿ ನೇರವಾಗಿ ಸಿನಿಮಾ ನಿರ್ಮಿಸಿ, ನಂತರ ಇತರೆ ಭಾಷೆಗಳಿಗೆ ಡಬ್ ಮಾಡುತ್ತೇವೆ~ ಎಂದರು.

`ರಿಷಿಕಾ ಸಿಂಗ್ ಪ್ರಧಾನ ನಾಯಕಿ. ನನ್ನ ಸಬ್ಜೆಕ್ಟ್‌ಗೆ ರಿಷಿಕಾ ಸೂಕ್ತ ಆಯ್ಕೆ. `ಬೆಂಕಿ-ಬಿರುಗಾಳಿ~ಯಲ್ಲಿ ಅವರ ನಟನೆ ಇಷ್ಟ ಆಯ್ತು. ಅದಕ್ಕೆ ಅವಕಾಶ ನೀಡಿರುವೆ. ಈ ತಿಂಗಳಲ್ಲಿ `ಬೆಂಕಿ-ಬಿರುಗಾಳಿ~ ಬಿಡುಗಡೆಯಾಗುತ್ತಿದೆ. ನಂತರ `ಯಾರಾದ್ರೆ ನನಗೇನು?~ ಚಿತ್ರ ಆರಂಭವಾಗಲಿದೆ. ಆರು ತಿಂಗಳಲ್ಲಿ ಸಿನಿಮಾ ನಿಮ್ಮ ಮುಂದೆ ಇರಲಿದೆ~ ಎಂದರು.

ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲು ನಿರ್ದೇಶಕರ ಬೆಂಬಲಕ್ಕೆ ನಿಂತ ರಿಷಿಕಾ- `ನಿರ್ದೇಶಕರಿಗೆ ಮಾತಿನಲ್ಲಿ ಸಿನಿಮಾದ ಬಗ್ಗೆ ಹೇಳಲು ಆಗುತ್ತಿಲ್ಲ. ಆದರೆ ಅವರ  ಸ್ಕ್ರಿಪ್ಟ್ ಮತ್ತು ತಯಾರಿ ಅದ್ಭುತವಾಗಿದೆ. ಈಗಾಗಲೇ ನಿರ್ದೇಶಕರು ಸಂಭಾಷಣೆ ಬರೆದಿದ್ದಾರೆ. ಅದನ್ನು ಕನ್ನಡಕ್ಕೆ ಅನುವಾದ ಮಾಡುವವರು ಬೇಕು~ ಎಂದು ಹೇಳಿ ಮೇಲೆದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT