ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಒಲಿಯಲಿದೆ ‘ಹರಿತ್‌ ಪ್ರದೇಶ’

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆಗ್ರಾ (ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಎರಡು ಹಂತದ ಚುನಾ­ವಣೆ ಮುಗಿದಿದೆ. ಮೂರನೇ ಹಂತದಲ್ಲಿ ಹನ್ನೆರಡು ಕ್ಷೇತ್ರಗಳಿಗೆ ಮತದಾನ ನಡೆಯ­ಲಿದೆ. ಈ 33 ಕ್ಷೇತ್ರಗಳಲ್ಲಿ ಬಹುತೇಕ ಪಶ್ಚಿಮ ಉತ್ತರ ಪ್ರದೇಶಕ್ಕೆ ಸೇರಿದ್ದು. ಇದನ್ನು ‘ಹರಿತ್‌ ಪ್ರದೇಶ’ ಎಂದೂ ಕರೆಯ­ಲಾಗುತ್ತದೆ. ಪಶ್ಚಿಮ ಉತ್ತರ ಪ್ರದೇಶ ಯಾರಿಗೆ ಒಲಿಯಲಿದೆ? ಮುಜಫ್ಫರ್‌­ನಗರದ ಕೋಮು ಗಲಭೆ ಬಳಿಕ ಹಿಂದು ಮತಗಳನ್ನು ಒಗ್ಗೂಡಿ­ಸಲು ಬಿಜೆಪಿ ಯಶಸ್ವಿಯಾ­ಗಿದೆಯೇ? ಎನ್ನುವ ಪ್ರಶ್ನೆ ಬಿರುಸಿನ ಚರ್ಚೆಗೆ ಕಾರಣ­ವಾಗಿದೆ.

ಪಶ್ಚಿಮ ಉತ್ತರ ಪ್ರದೇಶಕ್ಕೆ ನಿರ್ದಿಷ್ಟ ಗಡಿಗಳೇನು ಇಲ್ಲ. ಅಂದಾಜಿನ ಮೇಲೆ ಲೋಕಸಭಾ ಕ್ಷೇತ್ರಗಳನ್ನು ಗುರುತಿಸ­ಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ 33 ಕ್ಷೇತ್ರಗಳಲ್ಲಿ ಹತ್ತನ್ನು ಗೆದ್ದು ಸಮಾಜ­ವಾದಿ ಪಕ್ಷ ಮೊದಲ ಸ್ಥಾನ­ದಲ್ಲಿತ್ತು. ಏಳು ಕ್ಷೇತ್ರಗಳನ್ನು ಪಡೆದ ಬಹುಜನ ಸಮಾಜ ಪಕ್ಷ ಎರಡನೇ ಸ್ಥಾನ­ದಲ್ಲಿತ್ತು. ಕಾಂಗ್ರೆಸ್‌ ಬಿಜೆಪಿ ತಲಾ 5 ಕ್ಷೇತ್ರದಲ್ಲಿ ಗೆಲುವು ಪಡೆದಿದ್ದವು. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು.

33 ಲೋಕಸಭಾ ಕ್ಷೇತ್ರಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ಸಂಖ್ಯೆ­ಯನ್ನು ನಿಖರ­ವಾಗಿ ಹೇಳಲು ಸಾಧ್ಯವಿಲ್ಲ­ದಿದ್ದರೂ, 2001ರ ಜನಗಣತಿಯ ಪ್ರಕಾರ ಶೇ 70ರಷ್ಟು ಹಿಂದೂಗಳು, ಉಳಿದ  ಶೇ 30ರಷ್ಟು ಮುಸ್ಲಿಮ­ರಿದ್ದಾರೆ. ಕಳೆದ ಹದಿಮೂರು ವರ್ಷ­ಗಳಲ್ಲಿ ಮುಸ್ಲಿಮರ ಸಂಖ್ಯೆ ಸ್ವಲ್ಪ ಹೆಚ್ಚಿರ­ಬಹುದು ಎನ್ನು­ವುದು ಮುಜಫ್ಫರ್‌ ನಗರದ ‘ಮಾಹಿತಿ ಹಕ್ಕು ಕಾರ್ಯಕರ್ತ’ ಶಾಹಿದ್‌ ಹುಸೇನ್‌ ಅಭಿಪ್ರಾಯ.

ಬಹಳಷ್ಟು ಕ್ಷೇತ್ರಗಳಲ್ಲಿ ಮುಸ್ಲಿಮರು ಶೇ 35ರಷ್ಟಿದ್ದಾರೆ. ಬರೇಲಿ, ರಾಂಪುರ­ದಲ್ಲಿ ಎರಡೂ ಧರ್ಮಗಳ ಜನ ಹೆಚ್ಚು­ಕಡಿಮೆ ಸಮಬಲದಲ್ಲಿದ್ದಾರೆ.  ಜಾಟರು ಹಲವೆಡೆ ಶೇ 25ರಷ್ಟಿದ್ದರೆ, ಕೆಲವೆಡೆ  ಶೇ 20ರಷ್ಟಿದ್ದಾರೆ. ಶೇ 25ರಷ್ಟಿರುವ ಜಾಟವರು (ದಲಿತರು) ಎಲ್ಲೆಡೆ ಚದುರಿ ಹೋಗಿದ್ದಾರೆ. ಶೇ 20ರಷ್ಟು ಇತರೆ ಹಿಂದೂಳಿದ ಜಾತಿಗಳಿವೆ.

ಪಶ್ಚಿಮ ಉತ್ತರ ಪ್ರದೇಶ ಮತ್ತು ನೆರೆಹೊರೆಯ ಜಿಲ್ಲೆಗಳಲ್ಲಿ ಹಿಂದಿನ ಚುನಾವಣೆಯಲ್ಲಿದ್ದ ಪರಿಸ್ಥಿತಿ ಈಗಿಲ್ಲ. ಕಳೆದ ವರ್ಷ ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳಲ್ಲಿ ನಡೆದ ಮತೀಯ ಗಲಭೆ ಬಳಿಕ ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆ ಆಗಿದ್ದಾರೆ. ಮುಜಫ್ಫರ್‌ ನಗರ­ದಲ್ಲಿ ನಡೆದಿದ್ದು ಮುಸ್ಲಿಮರು– ಜಾಟರ ನಡುವಣ ಘರ್ಷಣೆ­ಯಾದರೂ, ಮೇಲ್ಜಾತಿ ಹಿಂದೂಗಳು ಒಗ್ಗೂಡಿದ್ದಾರೆ. ಇದಕ್ಕೆ ಬಿಜೆಪಿ ಪ್ರೇರಕ ಶಕ್ತಿಯಾಗಿ ಕೆಲಸ ಮಾಡಿದೆ.

2009ರ ಲೋಕಸಭೆ ಚುನಾವಣೆ­ಯಲ್ಲಿ ಬಿಜೆಪಿ ಜತೆ ಆರ್ಎಲ್‌ಡಿ  ಸೇರಿ­ಕೊಂಡಿತ್ತು. ಅನಂತರ ಬಿಜೆಪಿ ಸ್ನೇಹ ತ್ಯಜಿಸಿರುವ ಅಜಿತ್‌ಸಿಂಗ್‌, ಕಾಂಗ್ರೆಸ್‌ ‘ಕೈ’ ಕುಲುಕಿದ್ದಾರೆ. ಇವೆರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟಿದೆ. ಗಲಭೆ ಬಳಿಕ ಸಿಟ್ಟಿಗೆದ್ದಿರುವ ಜಾಟ್‌ ಸಮಾಜವನ್ನು ಸಮಾಧಾನಪಡಿಸಲು, ಅದನ್ನು ಇತರೆ ಹಿಂದೂಳಿದ ಜಾತಿಗೆ ಸೇರಿಸಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 5ರಷ್ಟು ಮೀಸಲಾತಿ ಒದಗಿಸಲಾಗಿದೆ. ಅಜಿತ್‌ಸಿಂಗ್‌ ಒತ್ತಾಯದ ಹಿನ್ನೆಲೆಯಲ್ಲಿ ಕೊಡಲಾದ ಮೀಸಲಾತಿ ಆರ್‌ಎಲ್‌ಡಿಗೆ ರಾಜಕೀಯ­ವಾಗಿ ಲಾಭವಾಗಿದೆಯೇ? ಜಾಟರು ಆರ್‌ಎಲ್‌ಡಿ ಬೆಂಬಲಿಸಿ­ದ್ದಾರೆಯೇ ಎನ್ನುವುದು ದಶಲಕ್ಷ ಡಾಲರ್‌ ಪ್ರಶ್ನೆ.

ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟರು ಅದರಲ್ಲೂ ಯುವ ಮತ­ದಾರರು ಬಿಜೆಪಿ ಪರ ಒಲವು ತೋರಿ­ದ್ದಾರೆ. ಅನೇಕರು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದರೆ ಏನಾದರೂ ಮಾಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ‘ಮುಜಫ್ಫರ್‌ ನಗರದ ಗಲಭೆ ಸಮಯ­ದಲ್ಲಿ ಅಜಿತ್‌­ಸಿಂಗ್‌ ನಮ್ಮ ರಕ್ಷಣೆಗೆ ಬರಲಿಲ್ಲ’ ಎಂಬ ಅಸಮಾಧಾನ ಜಾಟ್‌ ಸಮುದಾಯದಲ್ಲಿದೆ.

ಲೋಧರು, ಗುಜ್ಜರರು, ಬ್ರಾಹ್ಮಣರು, ಠಾಕೂರರು ಸೇರಿದಂತೆ ಉಳಿದ ಜಾತಿ­ಗಳನ್ನು ಸಂಘಟಿಸಲಾಗಿದೆ. ದಲಿತರ ಕೇರಿಗೂ ಬಿಜೆಪಿ ನಾಯಕರು ಪ್ರವೇಶ ಮಾಡಿದ್ದಾರೆ. ’ನಾವೆಲ್ಲ ಹಿಂದೂಗಳು ಒಂದಾಗಬೇಕು’ ಎಂದು ಪ್ರಚಾರ ಮಾಡಿ­ದ್ದಾರೆ. ‘ಮುಜಫ್ಫರ್‌ ನಗರದಲ್ಲಿ  ದಲಿತರು ಬಿಜೆಪಿ ಬೆಂಬಲಿಸಿದ್ದಾರೆ. ಬೇರೆ ಕ್ಷೇತ್ರಗಳಲ್ಲೂ ಒಲುವು ತೋರಿದ್ದಾರೆ’ ಎಂದು ಸ್ಥಳೀಯ ಪತ್ರಕರ್ತ ನೀರಜ್ ತ್ಯಾಗಿ ಹೇಳುತ್ತಾರೆ. ಇದನ್ನು ಒಪ್ಪದ ಬಹುಜನ ಸಮಾಜ ಪಕ್ಷದ ಕೆಲವು ಮುಖಂಡರು ದಲಿತರು ಯಾವುದೇ ಕಾರಣಕ್ಕೂ ಮಾಯಾವತಿ ಅವರನ್ನು ಬಿಟ್ಟು ಹೋಗುವುದಿಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ.

‘ಎರಡು ಹಂತದ ಚುನಾವಣೆಯಲ್ಲಿ ದಲಿತರು, ಮುಸ್ಲಿಮರು ಒಟ್ಟಾಗಿ ಬಿಎಸ್‌ಪಿಗೆ ಮತ ಹಾಕಿದ್ದಾರೆ. ಮೂರನೇ ಹಂತದ ಚುನಾವಣೆಯಲ್ಲೂ ಎರಡೂ ಸಮುದಾಯ ಜತೆಯಾಗಿ ಮಾಯಾವತಿ ಬೆಂಬಲಕ್ಕೆ ನಿಲ್ಲಲಿದೆ. ಬಿಎಸ್‌ಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ. ಎಸ್‌ಪಿ, ಕಾಂಗ್ರೆಸ್‌, ಆರ್‌ಎಲ್‌ಡಿಗೆ ಹೆಚ್ಚು ಲಾಭವಾಗುವುದಿಲ್ಲ’ ಎಂದು ಬಿಎಸ್‌ಪಿ ಮುಖಂಡ ಮನೋಜ್‌ ಕುಮಾರ್ ವ್ಯಾಖ್ಯಾನಿಸುತ್ತಾರೆ.

ಬಿಜೆಪಿ ಸೋಲಿಸಲು ಮುಸ್ಲಿಮರು ಒಂದಾಗಿದ್ದಾರೆ. ಕೆಲವು ಕಡೆ ಮುಸ್ಲಿಮರು ಮಾಯಾವತಿ ಪರ, ಕೆಲವು ಕಡೆ ಸಮಾಜವಾದಿ ಪಕ್ಷದ ಕಡೆ ನಿಂತಿದ್ದಾರೆ. ಮುಜಫ್ಫರ್‌ ನಗರದಲ್ಲಿ ಲೋಕಸಭೆ ಹಾಲಿ ಸದಸ್ಯ, ಬಿಎಸ್‌ಪಿ ಅಭ್ಯರ್ಥಿ ಖಾದಿರ್‌ ರಾಣಾ ಅವರನ್ನು ಬೆಂಬಲಿಸಿದರೆ, ಸಹಾರನ್‌ಪುರದಲ್ಲಿ ಇಮ್ರಾನ್‌ ಮಸೂದ್‌ ಬೆಂಬಲಕ್ಕೆ ನಿಂತಿ­ದ್ದಾರೆ. ‘ನಾವು ಸೋಲುವ ಅಭ್ಯರ್ಥಿ­ಗಳನ್ನು ಬೆಂಬಲಿಸಿ, ನಮ್ಮ ವೋಟು ವ್ಯರ್ಥ ಮಾಡುವುದಿಲ್ಲ. ಬಿಜೆಪಿ ಅಧಿ­ಕಾರಕ್ಕೆ ಬರಬಾರದು ಎನ್ನುವು­ದೊಂದೇ ನಮ್ಮ ಗುರಿ. ಹೀಗಾಗಿ ಆ ಪಕ್ಷವನ್ನು ಸೋಲಿಸುವ ಅಭ್ಯರ್ಥಿ ಯಾವುದೇ ಪಕ್ಷ­ದವರಿದ್ದರೂ ಬೆಂಬಲಿಸುತ್ತೇವೆ’ ಎನ್ನು­ತ್ತಾರೆ 28 ವರ್ಷದ ಪರ್ವೀಜ್‌. ‘ನಾವು ಯಾರನ್ನು ಬೆಂಬಲಿಸಬೇಕು ಎನ್ನುವ ತೀರ್ಮಾನ ಅಂತಿಮ ಕ್ಷಣದಲ್ಲಿ ಆಗಲಿದೆ ಎಂದು ಹೇಳುತ್ತಾರೆ  ಫರೂಕಾಬಾದ್‌ ಬೀಡಿ ಅಂಗಡಿ ಮಾಲೀಕ 70 ವರ್ಷದ ಮೊಹಮ್ಮದ್‌ ಇಸ್ಮಾಯಿಲ್‌.

ಹಿಂದೂಗಳು ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆಯೇ? ಮಾಯಾವತಿ ರೂಪಿಸಿ­ರುವ ಮುಸ್ಲಿಂ ಮತ್ತು ದಲಿತ ಸಮೀಕರಣದ ತಂತ್ರ ಫಲಿಸಲಿದೆಯೇ? ಸಮಾಜವಾದಿ ಪಕ್ಷ ಪ್ರಬಲ ಶಕ್ತಿಯಾಗಿ ರೂಪುಗೊಂಡಿದೆಯೇ? ಕಾಂಗ್ರೆಸ್‌– ಆರ್‌ಎಲ್‌ಡಿ ದುರ್ಬಲವಾಗಿ ಕಂಡರೂ, ಮಿತ್ರ ಪಕ್ಷಗಳ ಶಕ್ತಿ ಗುಪ್ತಗಾಮಿನಿ ಆಗಿದೆಯೇ? ಎಂಬ ಪ್ರಶ್ನೆಗಳಿಗೆ ಯಾರ ಬಳಿಯೂ ಖಚಿತವಾದ ಉತ್ತರ ಇಲ್ಲ.

ಉತ್ತರ ಪ್ರದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಪ್ರತಿಯೊಂದು ಜಿಲ್ಲೆಗಳು ಅಭಿವೃದ್ಧಿ ಕಾಣದೆ ಸೊರಗಿವೆ. ಆದರೂ ಇದು ಚುನಾವಣೆ ವಿಷಯವೇ ಅಲ್ಲ. ದೊಡ್ಡ ರಾಜ್ಯದ ಮತದಾರರಿಗೆ ಜಾತಿ, ಧರ್ಮವೇ ಮುಖ್ಯವಾಗುತ್ತಿದೆ. ಅದರ ಮುಂದೆ ಉಳಿದೆಲ್ಲ ಸಮಸ್ಯೆಗಳು ಗೌಣ­ವಾಗುತ್ತಿವೆ. ಪಶ್ಚಿಮ ಉತ್ತರ ಪ್ರದೇಶ, ಸುತ್ತಮುತ್ತಲ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬ ಪ್ರಶ್ನೆಗೆ ಯಾರ ಬಳಿಯೂ ಸದ್ಯಕ್ಕೆ ಉತ್ತರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT