ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಸಾಲುತ್ತೆ 100 ಎಸ್‌ಎಂಎಸ್?

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಎಸ್‌ಎಂಎಸ್~ ಎಂದರೆ ಈಗಿನ ಯುವಜನಕ್ಕೆ ಅದೊಂದು ಬಗೆಯ ಹುಚ್ಚು ಎಂದೇ ಹೇಳಬಹುದು. ಯಾವಾಗ ನೋಡಿದರೂ ಮೊಬೈಲ್ ಕೀಪ್ಯಾಡ್ ಮೇಲೆ ಕೈ ಓಡುತ್ತಲೇ ಇರುತ್ತದೆ.

ಮೊಬೈಲ್ ಇಲ್ಲದ, ಎಸ್‌ಎಂಎಸ್‌ ಕಳುಹಿಸದ ಯುವಜನ ಇಲ್ಲವೇ ಇಲ್ಲ ಎನ್ನಬಹುದು. ಮೊಬೈಲ್ ಕಂಪನಿಗಳಿಗೂ ಇದು ಚೆನ್ನಾಗಿ ಗೊತ್ತು.ಅದಕ್ಕೇ ಅವರು ವಿದ್ಯಾರ್ಥಿಗಳನ್ನು ಆಕರ್ಷಿಸುವ ಸಲುವಾಗಿ ಅವರಿಗೆಂದೇ ಹಲವು ಪ್ಲಾನ್‌ಗಳನ್ನು ರೂಪಿಸಿದ್ದಾರೆ.

ಆದರೆ ಈಗ..`ಎಸ್‌ಎಂಎಸ್~ ಸಂಖ್ಯೆಯನ್ನು ದಿನಕ್ಕೆ 100 ಎಂದು ಮಿತಿಗೊಳಿಸಿರುವ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಕ್ರಮಕ್ಕೆ ಯುವಜನತೆ ರೋಷಗೊಂಡಿದ್ದಾರೆ.

ಟೆಲಿಮಾರ್ಕೆಟಿಂಗ್ ಸಂಸ್ಥೆಗಳ ತಲೆನೋವಿನ `ಎಸ್‌ಎಂಎಸ್~ಗಳನ್ನು ತಡೆಯುವುದೇ ಇದರ ಉದ್ದೇಶ ಎಂದು ಹೇಳಿದ್ದರೂ ಕೂಡ ಅದರಿಂದ ಯುವ ಸಮುದಾಯ ಇನ್ನೂ ಸಮಾಧಾನಗೊಂಡಿಲ್ಲ.

`ಟ್ರಾಯ್~ನ ಈ ನಿರ್ಧಾರದಿಂದ ಹಿರಿಯರ ಮೇಲೆ ಅಷ್ಟೇನೂ ಪರಿಣಾಮ ಬೀರದಿದ್ದರೂ ಯುವಜನರಲ್ಲಿ  ಅತೃಪ್ತಿ, ಅಸಮಾಧಾನಗಳು ಹೆಚ್ಚಿವೆ. 

ಹಿರಿಯರು ಸಾಮಾನ್ಯವಾಗಿ ಮೊಬೈಲ್ ಬಳಸುವುದು ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಮಾತ್ರ. ಆದರೆ, ಯುವಜನ ಹಾಗಲ್ಲ. ಎಸ್‌ಎಂಎಸ್‌ನಲ್ಲಿಯೇ ಮನರಂಜನೆಯನ್ನು ಕಾಣುವವರು ಅವರು.
 
ಹೀಗಾಗಿ ಈ ನಿರ್ಧಾರ ಅವರ ಮೇಲೆ ಗಂಭೀರ ಪರಿಣಾಮ ಬೀರಿದೆ. ಮೊಬೈಲ್ ಕಂಪನಿಗಳಿಗಂತೂ ವಿದ್ಯಾರ್ಥಿಗಳೇ ಜೀವಾಳ.   ಈ ನಿರ್ಧಾರವು ಅವರ  ವಹಿವಾಟು ಮತ್ತು ಸೇವೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳು ಇವೆ.

ಯಾವುದೇ ಕಾಲೇಜಿನ ಕ್ಯಾಂಪಸ್‌ಗೆ ತೆರಳಿ ವಿದ್ಯಾರ್ಥಿಗಳನ್ನು ಮಾತನಾಡಿಸಿದರೆ, ಈ ನಿರ್ಬಂಧದ ವಿರುದ್ಧ ಅವರೆಲ್ಲ ರೋಷ ಕಾರುತ್ತಾರೆ.  100 `ಎಸ್ ಎಂಎಸ್~ಗಳ ಗರಿಷ್ಠ ಮಿತಿ ಖಂಡಿತವಾಗಿಯೂ ಸಾಲದು.

ನಾವು ಕಾಲೇಜಿನೊಳಗೆ ಪ್ರವೇಶಿಸಿದೊಡನೆ ಎಲ್ಲಾ ಸ್ನೇಹಿತರಿಗೆ ಎಸ್‌ಎಂಎಸ್ ಕಳುಹಿಸುತ್ತೇವೆ. ಅಷ್ಟೇ ಅಲ್ಲ, ನಮ್ಮ ಸುತ್ತ ಹಿರಿಯರು ಯಾರಾದರೂ ಇದ್ದರೆ ನಮಗೆ ಮೊಬೈಲ್‌ನಲ್ಲಿ ಮಾತನಾಡಲು ಸಾಧ್ಯವಾಗದು.

ಆಗ `ಎಸ್‌ಎಂಎಸ್ ಮೊರೆ ಹೋಗಲೇ ಬೇಕು. ಅಲ್ಲಿಗೇ ಸುಮಾರು 50 ರಷ್ಟು ಎಸ್‌ಎಂಎಸ್‌ಗಳು ಮುಗಿದು ಬಿಡುತ್ತವೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಳ್ಳುತ್ತಾರೆ.

ನಮ್ಮ ನಡುವಿನ ಮುಖ್ಯ ಸಂವಹನ ಮಾರ್ಗ `ಎಸ್‌ಎಂಎಸ್~ ಆಗಿರುವುದರಿಂದ ದಿನಕ್ಕೆ 300ರಿಂದ 500 `ಎಸ್‌ಎಂಎಸ್~ನ ಮಿತಿ ಇರಲಿ ಎನ್ನುತ್ತಾರೆ ವಿದ್ಯಾರ್ಥಿಗಳು.ಈಗಂತೂ ವಿದ್ಯಾರ್ಥಿಗಳಿಗಾಗಿಯೇ ಇರುವ ಪ್ಲಾನ್‌ಗಳು ತುಂಬಾ ಕಡಿಮೆ.

ಒಂದೆರಡು ವರ್ಷಗಳ ಹಿಂದೆ ಈಗಿರುವುದಕ್ಕಿಂತಲೂ ಹೆಚ್ಚು ಪ್ಲಾನ್‌ಗಳಿದ್ದವು. ಆಗ ಕಂಡು ಬರದ ಸಮಸ್ಯೆ ಈಗ ಏಕೆ ತಲೆದೋರಿದೆ ಎಂದೂ ಯುವಜನ ಪ್ರಶ್ನಿಸುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT