ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರಿಗೆ ಸಿಗಲಿದೆ ಪುರಸಭೆ ಅಧ್ಯಕ್ಷ ಗಾದಿ?

Last Updated 6 ಸೆಪ್ಟೆಂಬರ್ 2013, 6:34 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ:  ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

23 ಸದಸಯ ಬಲದ ಲಕ್ಷ್ಮೇಶ್ವರ ನಗರಸಭೆಯಲ್ಲಿ 9 ಮಂದಿ ಮಹಿಳೆಯರಿದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್‌ನಿಂದ 10, ಬಿಜೆಪಿಯಿಂದ 3, ಬಿಎಸ್‌ಆರ್ ಕಾಂಗ್ರೆಸ್‌ನಿಂದ 7, ಕೆಜೆಪಿಯಿಂದ 1, ಪಕ್ಷೇತರ 1 ಹಾಗೂ ಅವಿರೋಧವಾಗಿ ಒಬ್ಬ ಸದಸ್ಯರು ಆಯ್ಕೆಯಾಗಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ಹೆಚ್ಚಿದ್ದು ಅಧ್ಯಕ್ಷ ಕುರ್ಚಿಯನ್ನು ಹಿಡಿಯಲು ಈಗಾಗಲೇ ಅದು ಶತಗತಾಯ ಪ್ರಯತ್ನ ನಡೆಸಿದೆ.

ಆದರೆ ಬಿಜೆಪಿ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಸದಸ್ಯರು ಒಗ್ಗೂಡಿ ಅಧ್ಯಕ್ಷ ಕುರ್ಚಿ ತಮ್ಮದಾಗಿಸಿಕೊಳ್ಳಲು ತೆರೆಮರೆಯ ನಾಟಕ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕೆಜೆಪಿಯಿಂದ ಆಯ್ಕೆಯಾದ ಒಬ್ಬ ಸದಸ್ಯ ಹಾಗೂ ಒಬ್ಬ ಪಕ್ಷೇತರ ಸದಸ್ಯ ಮತ್ತು ಅವಿರೋಧವಾಗಿ ಆಯ್ಕೆಯಾಗಿರುವ ಮತ್ತೊಬ್ಬ ಸದಸ್ಯರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅವರ ಬೆಂಬಲ ಯಾರ ಕಡೆಗೆ ಇರುವುದೋ ಅವರಿಗೆ ಅಧಿಕಾರದ ಗದ್ದುಗೆ ದೊರೆಯಲಿದೆ. ಹೀಗಾಗಿ ಈಗ ಎಲ್ಲರ ಚಿತ್ರ ಅವರತ್ತ ನೆಟ್ಟಿದೆ.

ಈಗಾಗಲೇ ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್‌ನ ಎಲ್ಲ ಸದಸ್ಯರು ಒಂದು ಬಾರಿ ಸಭೆ ಸೇರಿ ಅಧ್ಯಕ್ಷ- ಉಪಾಧ್ಯಕ್ಷರ ಕುರ್ಚಿ ಹಿಡಿಯಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದ್ದು ಇದಕ್ಕೆ ಕೆಜೆಪಿ ಸದಸ್ಯರ ಒಪ್ಪಿಗೆಯೂ ಇದೆ ಎನ್ನಲಾಗುತ್ತಿದೆ. ಹೀಗಾದಲ್ಲಿ ಬಿಜೆಪಿ, ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿ ಸದಸ್ಯರ ಸಂಖ್ಯೆ 11 ಆಗುತ್ತದೆ. ಪಕ್ಷೇತರ ಹಾಗೂ ಅವಿರೋಧವಾಗಿ ಆಯ್ಕೆ ಆದ ಇಬ್ಬರ ಸದಸ್ಯರ ಬೆಂಬಲವನ್ನು ಇವರು ಗಳಿಸಿದರೆ ಇವರ ಸದಸ್ಯ ಬಲ 13 ಆಗಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಇವರ ಪಾಲಾಗಲಿವೆ. ಇನ್ನು ಪಕ್ಷೇತರ ಮತ್ತು ಅವಿರೋಧವಾಗಿ ಆಯ್ಕೆಯಾಗಿರುವ ಇಬ್ಬರು ಸದಸ್ಯರಲ್ಲಿ ಒಬ್ಬರ ಬೆಂಬಲ ದೊರೆತರೂ ಸಂಸದ ಶಿವಕುಮಾರ ಉದಾಸಿ ಅವರು ಒಂದು ಮತ ಹಾಕಿದರೆ ಆಗಲೂ ಕಾಂಗ್ರೆಸ್ಸೇತರ ಸದಸ್ಯರು ಅಧಿಕಾರದ ಗದ್ದುಗೆ ಪಡೆಯಬಹುದು.

ಆದರೆ ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರು ಯಾರಿಗೆ ಬೆಂಬಲಿಸಬೇಕು ಎಂಬ ಬಗ್ಗೆ ಸುಳಿವು ಬಿಟ್ಟುಲೊಡದ ಕಾರಣ ಕೊನೆಗಳಿಗೆಯಲ್ಲಿ ಸಂಸದರ ಮತ ಅಗತ್ಯ ಆದರೂ ಆಗಬಹುದು.

ಒಂದು ವೇಳೆ ಪಕ್ಷೇತರ, ಕೆಜೆಪಿ ಹಾಗೂ ಅವಿರೋಧವಾಗಿ ಆಯ್ಕೆಯಾಗಿರುವ ಮೂವರು ಸದಸ್ಯರೂ ಒಮ್ಮತವಾಗಿ ಕಾಂಗ್ರೆಸ್‌ನ್ನು ಬೆಂಬಲಿಸಿದರೆ ಆಗ ಸುಲಭವಾಗಿ ಅಧ್ಯಕ್ಷ- ಉಪಾಧ್ಯಕ್ಷ ಪದವಿ ಕಾಂಗ್ರೆಸ್‌ನ ಮಡಿಲಿಗೆ ಬೀಳಲಿದೆ. ಒಟ್ಟಿನಲ್ಲಿ ಅಧ್ಯಕ್ಷ ಉಪಾಧ್ಯಕ್ಷರು ಯಾರು ಆಗುತ್ತಾರೆ ಎಂಬುದು ಗೊತ್ತಾಗಬೇಕಾದರೆ ಇನ್ನೂ ವಾರ ಕಾಯಲೇಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT