ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರೂ ರಾಜೀನಾಮೆ ಕೇಳಲಿಲ್ಲ: ಶ್ರೀನಿವಾಸನ್

Last Updated 2 ಜೂನ್ 2013, 19:44 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ/ ಐಎಎನ್‌ಎಸ್): ಎನ್. ಶ್ರೀನಿವಾಸನ್ ಅಧ್ಯಕ್ಷ ಸ್ಥಾನದಿಂದ `ತಾತ್ಕಾಲಿಕ'ವಾಗಿ ಬದಿಗೆ ಸರಿದಿರಬಹುದು. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಅವರು ಇನ್ನೂ ಪ್ರಬಲ ಶಕ್ತಿಯಾಗಿ ಉಳಿದುಕೊಂಡಿದ್ದಾರೆ.

ಭಾನುವಾರ ಚೆನ್ನೈನಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿಯಲ್ಲಿ ಶ್ರೀನಿವಾಸನ್ ರಾಜೀನಾಮೆ ನೀಡುವರು ಎಂದೇ ಭಾವಿಸಲಾಗಿತ್ತು. ಆದರೆ ಅಂತಹ ಬೆಳವಣಿಗೆ ನಡೆಯಲಿಲ್ಲ.

`ಸಭೆಯಲ್ಲಿ ಚರ್ಚೆಯ ಬಳಿಕ, ತನಿಖೆ ಕೊನೆಗೊಳ್ಳುವವರೆಗೆ ಅಧ್ಯಕ್ಷನ ಕೆಲಸಗಳನ್ನು ಬಿಟ್ಟು ನಿಲ್ಲುವುದಾಗಿ ತಿಳಿಸಿದೆ. ಈ ಅವಧಿಯಲ್ಲಿ ಬಿಸಿಸಿಐ ಕಾರ್ಯನಿರ್ವಹಿಸುವುದು ಅನಿವಾರ್ಯ. ಆದ್ದರಿಂದ ನನ್ನ ಅನುಪಸ್ಥಿತಿಯಲ್ಲಿ ಜಗಮೋಹನ್ ದಾಲ್ಮಿಯ ಅವರನ್ನು ಮಂಡಳಿಯ ದೈನಂದಿನ ಕೆಲಸಗಳನ್ನು ನೋಡಿಕೊಳ್ಳಲು ನೇಮಿಸಲಾಗಿದೆ' ಎಂದು ಶ್ರೀನಿವಾಸನ್ ಸಭೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್‌ನಲ್ಲಿ ನಡೆದ ಹಗರಣಗಳ ಹಿನ್ನೆಲೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ, ಖಜಾಂಚಿ ಅಜಯ್ ಶಿರ್ಕೆ ಮತ್ತು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ರಾಜೀನಾಮೆ ನೀಡಿದ್ದರಿಂದ ಶ್ರೀನಿವಾಸನ್ ರಾಜೀನಾಮೆಗೂ ಒತ್ತಡ ಹೆಚ್ಚಿತ್ತು. ಆದರೆ ರಾಜೀನಾಮೆ ನೀಡುವುದರಿಂದ ಚಾಣಾಕ್ಷ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ.

ಜಗದಾಳೆ, ಶಿರ್ಕೆ ಮತ್ತೆ ಬರುವರು: ಸಂಜಯ್ ಜಗದಾಳೆ ಮತ್ತು ಅಜಯ್ ಶಿರ್ಕೆ ರಾಜೀನಾಮೆ ನಿರ್ಧಾರವನ್ನು ವಾಪಸ್ ಪಡೆದು, ಮಂಡಳಿಯಲ್ಲಿ ಮತ್ತೆ ತಮ್ಮ ಜವಾಬ್ದಾರಿ ನಿರ್ವಹಿಸುವರು ಎಂದು ಶ್ರೀನಿವಾಸನ್ ಹೇಳಿದ್ದಾರೆ.

ಆದರೆ ಶಿರ್ಕೆ ತಮ್ಮ ನಿರ್ಧಾರ ಬದಲಿಸುವುದಿಲ್ಲ ಎಂಬುದನ್ನು ಶ್ರೀನಿವಾಸನ್ ಗಮನಕ್ಕೆ ತಂದಾಗ, `ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಶಿರ್ಕೆ ಮತ್ತು ಜಗದಾಳೆ ವಾಪಾಸಾಗಬೇಕೆಂಬುದು ಕಾರ್ಯಕಾರಿ ಸಮಿತಿಯ ಒಕ್ಕೊರಲಿನ ತೀರ್ಮಾನ. ಇಬ್ಬರೂ ನನ್ನ ಉತ್ತಮ ಗೆಳೆಯರು. ಅವರು ಮಂಡಳಿಗೆ ಮತ್ತೆ ಬರುವರು' ಎಂದು ಉತ್ತರಿಸಿದರು.

`ಶಿರ್ಕೆ ಮತ್ತು ನಾನು ಜೊತೆಯಾಗಿ ಗಾಲ್ಫ್ ಆಡುತ್ತೇವೆ. ಅವರು ನನ್ನ ಉತ್ತಮ ಗೆಳೆಯ' ಎಂದು ಶ್ರೀನಿವಾಸನ್ ಹಾಸ್ಯದ ಧಾಟಿಯಲ್ಲಿ ತಿಳಿಸಿದರು.

ಇನ್ನು ಮುಂದೆ ಬಿಸಿಸಿಐನಲ್ಲಿ ಜಗಮೋಹನ್ ದಾಲ್ಮಿಯ ಅವರ ಪಾತ್ರ ಏನು ಎಂಬ ಪ್ರಶ್ನೆಗೆ, `ಅದು ಮಂಡಳಿಯ ಆಂತರಿಕ ವಿಷಯ. ದಾಲ್ಮಿಯ ಸಾಕಷ್ಟು ಅನುಭವ ಹೊಂದಿದ್ದಾರೆ. ಮಂಡಳಿಯ ನಿಯಮಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದು ಅವರಿಗೆ ತಿಳಿದಿದೆ' ಎಂದರು.

`ಬಿಂದ್ರಾ ಕೂಡಾ ಆಗ್ರಹಿಸಲಿಲ್ಲ'
ಪಂಜಾಬ್ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥ ಐ.ಎಸ್. ಬಿಂದ್ರಾ ಕೂಡಾ ನನ್ನ ರಾಜೀನಾಮೆಗೆ ಆಗ್ರಹಿಸಲಿಲ್ಲ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದ್ದಾರೆ. ಯಾರಾದರೂ ನಿಮ್ಮ ರಾಜೀನಾಮೆಗೆ ಆಗ್ರಹಿಸಿದರೇ ಎಂಬ ಪ್ರಶ್ನೆಗೆ ಅವರು, `ಇಲ್ಲ' ಎಂದು ಉತ್ತರಿಸಿದರು.
`ಸಭೆಯಲ್ಲಿ ಶ್ರೀನಿವಾಸನ್ ರಾಜೀನಾಮೆಗೆ ಆಗ್ರಹಿಸಿದ್ದು ನಾನು ಮಾತ್ರ. ಇತರ ಯಾರಿಗೂ ಅಂತಹ ಧೈರ್ಯ ಇರಲಿಲ್ಲ' ಎಂದು ಸಭೆಯ ಬಳಿಕ ಬಿಂದ್ರಾ ಮಾಧ್ಯಮಗಳಿಗೆ ತಿಳಿಸಿದ್ದರು.

ಮತ್ತೆ ಬಿಸಿಸಿಐ ಇಲ್ಲ: ಶಿರ್ಕೆ, ಜಗದಾಳೆ
ರಾಜೀನಾಮೆ ವಾಪಸ್ ಪಡೆದು ಮತ್ತೆ ಬಿಸಿಸಿಐನಲ್ಲಿ ಕಾರ್ಯನಿರ್ವಹಿಸುವ ಪ್ರಶ್ನೆಯೇ ಇಲ್ಲ ಎಂದು ಸಂಜಯ್ ಜಗದಾಳೆ ಮತ್ತು ಅಜಯ್ ಶಿರ್ಕೆ ಸ್ಪಷ್ಟಪಡಿಸಿದ್ದಾರೆ.

ಜಗದಾಳೆ ಮತ್ತು ಶಿರ್ಕೆ ಕ್ರಮವಾಗಿ ಬಿಸಿಸಿಐ ಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದರು. ಭಾನುವಾರ ನಡೆದ ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು `ನಿರ್ಧಾರ ಬದಲಿಸಿ ಮತ್ತೆ ಬಿಸಿಸಿಐಗೆ ಆಗಮಿಸುವಂತೆ' ಇಬ್ಬರಲ್ಲೂ ಕೋರಿಕೊಂಡಿದ್ದರು.

`ರಾಜೀನಾಮೆ ನಿರ್ಧಾರ ಬದಲಿಸುವಂತೆ ಅವರು ಒಕ್ಕೊರಲಿನಿಂದ ಕೋರಿದ್ದಾರೆ. ಅದಕ್ಕೆ ಸಕಾರಾತ್ಮಕ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಸಾಧ್ಯವಾಗದ್ದಕ್ಕೆ ನನಗೆ ಬೇಸರವಿದೆ' ಎಂದು ಶಿರ್ಕೆ ಪ್ರತಿಕ್ರಿಯಿಸಿದ್ದಾರೆ. `ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯದ್ದು ನನಗೆ ನಿರಾಸೆ ಉಂಟುಮಾಡಿದೆ. ವ್ಯವಸ್ಥೆಯನ್ನು ಹೇಗೆ ಸರಿಪಡಿಸಬಹುದು ಎಂಬುದರ ಕುರಿತು ಚರ್ಚಿಸಬೇಕಿತ್ತು' ಎಂದು ಜಗದಾಳೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT