ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾಸೀನ್‌ ಕಸ್ಟಡಿ ವಿಸ್ತರಣೆ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಂಡಿಯನ್‌ ಮುಜಾಹಿದೀನ್‌ನ ಬಂಧಿತ ಉಗ್ರ ಯಾಸೀನ್‌ ಭಟ್ಕಳನನ್ನು ನ್ಯಾಯಾಲಯ ಇನ್ನೂ ನಾಲ್ಕು ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಕಸ್ಟಡಿಗೆ ಒಪ್ಪಿಸಿದೆ.

ಸಂಚುಕೋರ ಯಾಸೀನ್‌ ಮತ್ತು ಆತನ ಆಪ್ತ ಸಹಚರ ಅಸಾದುಲ್ಲಾ ಅಖ್ತರ್‌ಗೆ ನೀಡಿದ್ದ ಏಳು ದಿನಗಳ ಕಸ್ಟಡಿ ಮುಗಿದಿದ್ದರಿಂದ ಇಬ್ಬರನ್ನೂ ಮಂಗಳ­ವಾರ ಮುಖಗವುಸು ಹಾಕಿ ನ್ಯಾಯಾ­ಲಯಕ್ಕೆ ಹಾಜರು ಪಡಿಸಲಾಯಿತು.

ಇಂಡಿಯನ್‌ ಮುಜಾಹಿದೀನ್‌ನ ಅಡಗುದಾಣಗಳು ಸೇರಿದಂತೆ  ಆ ಸಂಘಟನೆಯ ಕಾರ್ಯಾಚರಣೆ ಸಂಬಂಧ ಇನ್ನೂ ಸಾಕಷ್ಟು ಮಾಹಿತಿ ಕಲೆ ಹಾಕಬೇಕಿದೆ. ಇದರಿಂದ ಉಗ್ರರ ಸಂಚುಗಳನ್ನು ತಿಳಿದು ಅವನ್ನು ತಡೆಯಲು ಸಾಧ್ಯವಾಗುತ್ತದೆ. ಅಪಾರ ಪ್ರಮಾಣದ ರಹಸ್ಯ ಸಂಕೇತಗಳಿಂದ ಕೂಡಿದ ಇಮೇಲ್‌ಗಳು, ಗುಪ್ತ ಇಮೇಲ್‌ ಐಡಿ ಗಳು, ಚಾಟ್‌ ಐಡಿ ಗಳು  ಇತ್ಯಾದಿಗಳ ಬಗ್ಗೆ ಕೂಲಂಕ­ಷವಾಗಿ ತಿಳಿಯುವ ಅಗತ್ಯವಿದೆ. ಹೀಗಾಗಿ ಯಾಸೀನ್‌ನನ್ನು ಇನ್ನಷ್ಟು ದಿನಗಳ ಕಾಲ ತನ್ನ ಕಸ್ಟಡಿಗೆ ಒಪ್ಪಿಸ­ಬೇಕು ಎಂದು ಎನ್‌ಐಎ ಮನವರಿಕೆ ಮಾಡಿಕೊಟ್ಟಿತು.

ಇದೇ ವೇಳೆ ಹೈದರಾಬಾದ್‌ನ ದಿಲ್‌ಸುಖ್‌ ನಗರದಲ್ಲಿ ಫೆ.21ರಂದು ಸಂಭವಿಸಿದ್ದ ಸ್ಫೋಟಗಳ ಸಂಬಂಧ ತನಿಖೆಗೆ ಒಳಪಡಿಸುವ ಸಲುವಾಗಿ ಅಖ್ತರ್‌ನನ್ನು ತನ್ನ ವಶಕ್ಕೆ ನೀಡುವಂತೆ ಎನ್‌ಐಎ ಹೈದರಾಬಾದ್‌ ಘಟಕ ಕೋರಿತ್ತು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆತನನ್ನು ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ತನ್ನ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಅನುಮತಿ ನೀಡಿತು.

ಅಖ್ತರ್‌ನನ್ನು ಸೆ.19ರಂದು ಅಥವಾ ಅದಕ್ಕೆ ಮುನ್ನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ಎನ್‌ಐಎ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಇದೇ ವೇಳೆ ಕೋರ್ಟ್‌ ಸೂಚಿಸಿತು.

ಗೋವಾದಲ್ಲಿ ಎನ್‌ಐಎ ತಂಡ
ಪಣಜಿ (ಪಿಟಿಐ
): ರಾಷ್ಟ್ರೀಯ ತನಿಖಾ ದಳದ (ಎನ್‌ಐಎ)ಅಧಿಕಾರಿಗಳು ಬಂಧನದಲ್ಲಿರುವ  ಇಂಡಿಯನ್‌ ಮುಜಾಹಿದೀನ್‌ ಉಗ್ರ ಯಾಸೀನ್‌ ಭಟ್ಕಳನ ಜತೆ ಸೋಮವಾರ ಗೋವಾಕ್ಕೆ ಭೇಟಿ ನೀಡಿದ್ದರು.

ಯಾಸೀನ್‌ ಈ ಮುನ್ನ ಅಲ್ಲಿಗೆ ಭೇಟಿ ನೀಡಿದ್ದನಾದ್ದರಿಂದ ಆತನ ಅಲ್ಲಿನ ಕಾರ್ಯಾಚರಣೆ ಬಗ್ಗೆ ಮಾಹಿತಿ ಕಲೆಹಾಕುವುದು ಸೋಮವಾರ ಇಲ್ಲಿ ತಂಗಿದ್ದ ಅಧಿಕಾರಿಗಳ ಉದ್ದೇಶವಾಗಿದೆ.

ಎನ್‌ಐಎ ಅಧಿಕಾರಿಗಳು ಯಾಸೀನ್‌ನನ್ನು ಮಾಪುಸಾ, ಪಣಜಿ, ವಾಸ್ಕೊ ಮತ್ತಿತರ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದರು.

‘ಎನ್‌ಐಎ ಅಧಿಕಾರಿಗಳು ಇಲ್ಲಿಗೆ ಬಂದಿದ್ದು ನಿಜ. ಆದರೆ, ರಾಜ್ಯ ಪೊಲೀಸರೊಂದಿಗೆ ಅವರು ಯಾವ ಮಾಹಿತಿಯನ್ನೂ ಹಂಚಿಕೊಂಡಿಲ್ಲ’ ಎಂದು ಗೋವಾ ಡಿಐಜಿ ಒ.ಪಿ.ಮಿಶ್ರಾ ಸುದ್ದಿಗಾರರಿಗೆ ತಿಳಿಸಿದರು.

ಯಾಸೀನ್‌ ತನ್ನ ಜಾಲಕ್ಕೆ ಇಲ್ಲಿನ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದನೇ ಎಂಬುದನ್ನು ಪತ್ತೆ ಹಚ್ಚುವುದು ತನಿಖಾ ತಂಡದ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರತಿವರ್ಷ 25 ಲಕ್ಷ ಪ್ರವಾಸಿಗರು ಭೇಟಿ ನೀಡುವ ಗೋವಾ ಮೇಲೆ ಉಗ್ರರು ದಾಳಿ ನಡೆಸುವ ಅಪಾಯವಿದೆ ಎಂದು ಕಳೆದ ವರ್ಷಾಂತ್ಯದಲ್ಲಿ ಎಚ್ಚರಿಕೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT