ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯು ಟರ್ನ್ನಲ್ಲಿ ವಿಜಯ್

Last Updated 2 ಜೂನ್ 2011, 19:30 IST
ಅಕ್ಷರ ಗಾತ್ರ

ಪದ್ಮಾಸನ ಹಾಕಿಕೂತವರು ಮಾತಾಡುತ್ತಾರಲ್ಲ; ಅದೇ ಧಾಟಿಯಲ್ಲಿ ವಿಜಯ್ ಈಗ ಮಾತಿಗೆ ತೊಡಗುತ್ತಾರೆ. ನಡುನಡುವೆ ಅವರು ಆಸನವನ್ನು ತುಸು ಬದಲಿಸಿ, ತಮಾಷೆಯ ಹಳಿಗೆ ಹೊರಳುವುದುಂಟು. ಒಂದೇ ಮಾತಿನಲ್ಲಿ ಹೇಳುವುದಾದರೆ, ಅವರೀಗ `ಯು ಟರ್ನ್~ನಲ್ಲಿದ್ದಾರೆ. ಇಂದು ತೆರೆಕಾಣುತ್ತಿರುವ `ಜಾನಿ ಮೇರಾ ನಾಮ್~ಗೆ `ಯು~ ಸರ್ಟಿಫಿಕೇಟ್ ಸಿಕ್ಕಿದೆ. ವಿಜಯ್ ಇದುವರೆಗೆ ಅಭಿನಯಿಸಿರುವ ಚಿತ್ರಗಳಲ್ಲಿ ಮೊದಲ ಬಾರಿಗೆ ಈ ಸರ್ಟಿಫಿಕೇಟ್ ಪಡೆಯುತ್ತಿರುವ ಚಿತ್ರ ಇದೆಂಬುದು ವಿಶೇಷ.

ಆಕ್ಷನ್ ಪ್ರಧಾನ ಚಿತ್ರಗಳಲ್ಲಿ ಕಾಣಿಸಿಕೊಂಡಿರವ ವಿಜಯ್‌ಗೆ `ಜಾನಿ ಮೇರಾ ನಾಮ್~ ಬೇರೆ ಅಂಗಿಯನ್ನು ತೊಡಿಸಿರುವ ಸಿನಿಮಾ. `ಒಂಥರಾ ಲವಲವಿಕೆಯ ಲವ್ ಸ್ಟೋರಿ ಇದು. ಹಂಗೆ ಮಾಡಿದೀವಿ ಹಿಂಗೆ ಮಾಡಿದೀವಿ ಅಂತೇನೂ ಹೇಳಿಕೊಳ್ಳೋಲ್ಲ. ಸಣ್ಣ ಎಳೆಯೊಂದನ್ನು ಹೇಳಿದ್ದೇವೆ. ಸಿನಿಮಾ ನೋಡಿ ಆಚೆ ಬಂದಮೇಲೆ ಜನರಿಗೆ ವಿಷಯ ಖಂಡಿತ ಕಾಡುತ್ತದೆ. ಇಡೀ ಫ್ಯಾಮಿಲಿ ನೋಡಬಹುದಾದ ಚಿತ್ರವಿದು~ ಎಂಬುದು ವಿಜಯ್ ವ್ಯಾಖ್ಯಾನ.

ಇದೇ ಮೊದಲ ಬಾರಿಗೆ ರಮ್ಯಾ ಈ ಚಿತ್ರದಲ್ಲಿ ವಿಜಯ್‌ಗೆ ಜೋಡಿಯಾಗಿದ್ದಾರೆ. ಅಭಿನಯದಲ್ಲಿ ರಮ್ಯಾ ತೋರುವ ಉತ್ಕಟತೆಯಿಂದ ವಿಜಯ್ ಪಾಠ ಕಲಿತಿದ್ದಾರೆ. `ಅವರು ಕೆಲವೊಂದು ಸೀನ್‌ಗಳಲ್ಲಿ ಆಕ್ಟ್ ಮಾಡುತ್ತಿದ್ದಾರೆ ಅಂತ ಅನ್ನಿಸುತ್ತಲೇ ಇರಲಿಲ್ಲ. ಅಷ್ಟು ಪ್ಯಾಷನೇಟ್ ಆಗಿ ಕೆಲಸ ಮಾಡುತ್ತಿದ್ದರು. ಅವರನ್ನು ನೋಡಿ ನಾನೂ ಸಾಕಷ್ಟು ಕಲಿತೆ~ ಎನ್ನುವ ವಿಜಯ್ ಮುಂದಿನ ವರ್ಷ ಬ್ಯಾನರ್ ಕಟ್ಟಲಿದ್ದಾರೆ ಅರ್ಥಾತ್ ತಮ್ಮದೇ ನಿರ್ಮಾಣ ಸಂಸ್ಥೆ ಹುಟ್ಟುಹಾಕಲಿದ್ದಾರೆ. ಇದು ನಿಜಕ್ಕೂ ಅವರ ಚಿತ್ರ ಬದುಕಿನ `ಯು ಟರ್ನ್~.

ತಮ್ಮ ಸಾಲುಸಾಲು ಚಿತ್ರಗಳು ಸೋತವಲ್ಲ... ಪ್ರಶ್ನೆ ಮುಗಿಯುವಷ್ಟರಲ್ಲೇ ವಿಜಯ್ ಸಮರ್ಥನೆಗೆ ಮುಂದಾಗುತ್ತಾರೆ: `ಮೊದಲಾದರೆ ಒಂದು ಚಿತ್ರ ಕೆಲವೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿತ್ತು. ಈಗ ಒಂದೇ ಏರಿಯಾದ ಮೂರು ಥಿಯೇಟರ್‌ಗಳಿಗೆ ಲಗ್ಗೆಇಡುತ್ತದೆ. ನಿರ್ಮಾಪಕರಿಗೆ ಬೇಗ ಹಣ ಬಾಚಿಹಾಕುವಾಸೆ.

ಮೂರು ವಾರವಾಗುವಷ್ಟರಲ್ಲಿ ನೋಡುವವರೆಲ್ಲಾ ನೋಡಿ ಆಗಿರುತ್ತದೆ. ಆಮೇಲೆ ಚಿತ್ರಮಂದಿರಗಳು ಖಾಲಿ. ಸಿನಿಮಾ ಓಡಲಿಲ್ಲ ಎಂದು ಜನರೇ ಮಾತಾಡಿಕೊಳ್ಳುವಂತೆ ಆಗುತ್ತೆ. ನಿಜವೇನೆಂದರೆ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾಗಳು 25 ದಿನ ಓಡುವುದೂ ಒಂದೇ, ಕಡಿಮೆ ಚಿತ್ರಮಂದಿರಗಳಲ್ಲಿ 75 ದಿನ ಓಡುವುದೂ ಒಂದೇ~.
ತಮ್ಮದೇ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ನಿಟ್ಟಿನಲ್ಲಿ ವಿಜಯ್ ಈಗಾಗಲೇ ಕೆಲವು ಪ್ರತಿಭಾವಂತರನ್ನು ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಮೊದಲ ಸಿನಿಮಾ ಬರಲಿದೆ. ಆ ತಂಡದಲ್ಲಿ ಯಾರೆಲ್ಲಾ ಇದ್ದಾರೆಂಬುದನ್ನು ಮಾತ್ರ ಅವರು ಗುಟ್ಟಾಗಿ ಇಡಬಯಸುತ್ತಾರೆ. ಕೆಲವು ನಿರ್ಮಾಪಕರಿಗೆ ಸಿನಿಮಾ ತರಾತುರಿಯಲ್ಲೇ ಆಗಬೇಕು. ಅಂಥವರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಲೇ ಸ್ವಂತ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಯೋಚನೆಯನ್ನು ಅವರು ಮಾಡಿದ್ದು.

`ನಮ್ಮಲ್ಲಿ ಕೆಲವರಷ್ಟೇ ವೃತ್ತಿಪರ ನಿರ್ಮಾಪಕರಿದ್ದಾರೆ. ಸ್ಕ್ರೀನ್‌ಪ್ಲೇ ಬಗ್ಗೆ ಅವರಿಗೆ ಸ್ಪಷ್ಟವಾದ ಜಡ್ಜ್‌ಮೆಂಟ್ ಇರುತ್ತದೆ. ಇನ್ನು ಕೆಲವರಿಗೆ ಏನೂ ಗೊತ್ತಿರುವುದಿಲ್ಲ. ಬೆನ್ನುಹತ್ತಿ ಕಾಲ್‌ಷೀಟ್ ಪಡೆದು ನಿರ್ದೇಶಕರನ್ನೂ ಪೇಚಾಟಕ್ಕೆ ಸಿಲುಕಿಸಿ ಸಿನಿಮಾ ಮುಗಿಸುತ್ತಾರೆ. ಯಾವ ನಿರ್ಮಾಪಕರು ಶ್ರದ್ಧೆ, ಪ್ರೀತಿಯಿಂದ ಸಿನಿಮಾ ಮಾಡುತ್ತಾರೋ ಅಂಥ ಚಿತ್ರಗಳು ಗೆದ್ದಿವೆ. ಏನೋ ಒಂದು ಸುತ್ತಿದರಾಯಿತು ಎಂದುಕೊಂಡವರ ಚಿತ್ರಗಳು ಸೋತಿವೆ~ ಎಂದು ವಿಜಯ್ ವಿಶ್ಲೇಷಿಸುತ್ತಾರೆ.

`ಜಾನಿ ಮೇರಾ ನಾಮ್~ ಈಗ ಪ್ರೇಕ್ಷಕರ ಮುಂದಿದೆ. `ಜರಾಸಂಧ~ ಚಿತ್ರೀಕರಣ ಇನ್ನೇನು ಮುಗಿಯುತ್ತಾ ಬಂದಿದೆ. ಈ ಎರಡೂ ಚಿತ್ರಗಳ ಬಗ್ಗೆ ಯಾವ ಮಟ್ಟದ ನಿರೀಕ್ಷೆ ಇದೆ ಎಂದು ಕೇಳಿದರೆ, ಎಲ್ಲಾ ಚಿತ್ರಗಳನ್ನೂ ನಾನು ನಿರೀಕ್ಷೆ ಇಟ್ಟುಕೊಂಡೇ ಮಾಡಿರುತ್ತೇನೆ. `ವೀರಬಾಹು~ ಚಿತ್ರದಲ್ಲಿ ನಟಿಸಿದ ನಂತರ ತುಂಬಾ ಒಳ್ಳೆಯ ಅಭಿನಯ ತೆಗೆಸಿದ್ದಾರೆ ಎಂದುಕೊಂಡಿದ್ದೆ. `ಕರಿಚಿರತೆ~ ನೋಡಿ ನಾನೇ ಅತ್ತಿದ್ದೆ.

ಆದರೆ, ಎರಡೂ ಚಿತ್ರಗಳು ಒಳ್ಳೆಯ ರಿಸಲ್ಟ್ ಕೊಡಲಿಲ್ಲ. ನನ್ನ ಮೇಲೆ ನನಗೆ ನಂಬಿಕೆಯಂತೂ ಉಳಿದಿದೆ. ಎಲ್ಲಾ ಚಿತ್ರಗಳನ್ನೂ ನಾನು ನಿರೀಕ್ಷೆಯಿಂದಲೇ ನೋಡುತ್ತೇನೆ~ ಎಂದು ವಿಜಯ್ ಭಾವುಕರಾಗುತ್ತಾರೆ.

`ರಂಗ ಎಸ್ಸೆಸ್ಸೆಲ್ಸಿ~ ಚಿತ್ರದ ನಾಯಕಿ ರಮ್ಯಾ. ಅದರಲ್ಲಿ ವಿಜಯ್ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. `ಜಾನಿ ಮೇರಾ ನಾಮ್~ನಲ್ಲೂ ರಮ್ಯಾ ನಾಯಕಿ. ವಿಜಯ್ ಈಗ ನಾಯಕ. ಇದು ಸಣ್ಣ ಬದಲಾವಣೆಯೇನೂ ಅಲ್ಲ. ನಿರ್ದೇಶಕ ಪ್ರೀತಂ ಗುಬ್ಬಿ ವಿಜಯ್ ಅವರನ್ನು ಗೆಲ್ಲಿಸಿದ್ದಾರೆಯೋ ಇಲ್ಲವೋ ಎಂಬುದು ಕೆಲವೇ ದಿನಗಳಲ್ಲಿ ಸ್ಪಷ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT