ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಐಡಿ: ಮುಂದಿನ ವಾರ ನಿರ್ಧಾರ?

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ನಂದನ್ ನಿಲೇಕಣಿ ನೇತೃತ್ವದ ವಿಶಿಷ್ಟ ಗುರುತು ಸಂಖ್ಯೆ ನೀಡಿಕೆ (ಯುಐಡಿ) ಯೋಜನೆ  ಸಂಬಂಧ ಗೃಹ ಸಚಿವಾಲಯ ಹಾಗೂ ಯೋಜನಾ ಆಯೋಗಗಳ ನಡುವೆ ಉದ್ಭವಿಸಿರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ವಿಶಿಷ್ಟ ಗುರುತು ಸಂಖ್ಯೆಗೆ ಸಂಬಂಧಿಸಿದ ಸಂಪುಟ ಸಮಿತಿಯು (ಸಿಸಿಯುಐಡಿ) ಮುಂದಿನ ವಾರ ಸಭೆ ನಡೆಸಲಿದೆ.

ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಗೃಹ ಸಚಿವ ಪಿ.ಚಿದಂಬರಂ, ಯೋಜನಾ ಆಯೋಗದ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ನಂದನ್ ನಿಲೇಕಣಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಯುಐಡಿ ಪ್ರಕ್ರಿಯೆಯು ರಾಷ್ಟ್ರೀಯ ಜನಗಣತಿ ದಾಖಲಾತಿಯ (ಎನ್‌ಪಿಆರ್) ಪುನರಾವರ್ತನೆ ಆಗುವ ಸಂಭವನೀಯತೆ, ಯೋಜನೆಗೆ ತಗುಲುವ ವೆಚ್ಚ, ಆಧಾರ್ ಕಾರ್ಡ್‌ಗಳಿಗಾಗಿ ಸಾರ್ವಜನಿಕರ ನೋಂದಣಿ ಇನ್ನಿತರ ವಿವಾದಾಸ್ಪದ ಅಂಶಗಳ ಬಗ್ಗೆ ಸಮಿತಿ ಚರ್ಚಿಸಲಿದೆ.

ಈ ಯೋಜನೆಯು ಎನ್‌ಪಿಆರ್‌ಗಿಂತ ಸಂಪೂರ್ಣ ಭಿನ್ನ ಎಂಬುದು ಯೋಜನಾ ಆಯೋಗದ ಪ್ರತಿಪಾದನೆ. ಅದು 20 ಕೋಟಿಗಿಂತ ಹೆಚ್ಚು ನಾಗರಿಕರನ್ನು ನೋಂದಣಿ ಮಾಡಲು ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದೆ. ಒಂದೊಮ್ಮೆ ಇದಕ್ಕೆ ಅನುಮತಿ ನೀಡದಿದ್ದರೆ ಯುಐಡಿ ಯೋಜನೆ ಸ್ಥಗಿತಗೊಳ್ಳುತ್ತದೆ ಎಂದು  ಆತಂಕವನ್ನೂ ವ್ಯಕ್ತಪಡಿಸಿದೆ.

ಆಧಾರ್ ಸಂಖ್ಯೆ ಆಧರಿಸಿ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸಬಹುದು. ಸೋರಿಕೆ ತಡೆಗಟ್ಟುವ ಮೂಲಕ ಸರ್ಕಾರ ಭಾರಿ ಪ್ರಮಾಣದ ಸಬ್ಸಿಡಿ ಉಳಿಸಬಹುದು. ಆನ್‌ಲೈನ್ ದೃಢೀಕರಣ ಸೇರಿದಂತೆ ಹಲವು ಸುರಕ್ಷಾ ಕ್ರಮಗಳನ್ನು ಯೋಜನೆ ಒಳಗೊಂಡಿದೆ ಎಂದೂ ಯೋಜನಾ ಆಯೋಗ ಸಮರ್ಥಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT