ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಕೆಪಿ ಅತಿಥಿ ಗೃಹ ಬಾಗಿಲು ತೆರೆಯುವುದೇ?

Last Updated 22 ಅಕ್ಟೋಬರ್ 2012, 8:05 IST
ಅಕ್ಷರ ಗಾತ್ರ

ಬಾಗಲಕೋಟೆ: ನವನಗರದ ಕಲಾ ಭವನದ ಸಾಂಸ್ಕೃತಿಕ ಸಮುಚ್ಚಯದ ಸಾಹಿತ್ಯ ಭವನಕ್ಕೆ ಹೊಂದಿಕೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ (ಆರ್ ಅಂಡ್ ಆರ್) ಅಧೀನದಲ್ಲಿರುವ `ಅತಿಥಿ ಗೃಹ~ ಸದ್ವಿನಿಯೋಗವಾಗದೇ ಬಾಗಿಲು ಮುಚ್ಚಿಕೊಂಡು ವರ್ಷಗಳೇ ಗತಿಸಿದೆ.
ಆರು ಮಲಗುವ ಕೋಣೆ ಮತ್ತು ಒಂದು ಅಡುಗೆ ಮನೆ ಅತಿಥಿ ಗೃಹದಲ್ಲಿ ಇದ್ದು, ಬಳಕೆಯಾಗದೇ ಕೊಠಡಿಗೆ ಬೀಗ ಹಾಕಲಾಗಿದೆ. ನಿರ್ಮಾಣದ ಉದ್ದೇಶ ಈಡೇರದೇ ಅತಿಥಿ ಗೃಹ ಮೂಲೆ ಗುಂಪಾಗಿದ್ದು, ಸುಣ್ಣ-ಬಣ್ಣ, ನಿರ್ವ ಹಣೆ ಇಲ್ಲದೇ ಯಾರಿಗೂ ಬೇಡದ ಭೂತಬಂಗಲೆಯಾಗಿದೆ.

ಕಸಾಪ ಸುಪರ್ದಿಗೆ?
ಈ ನಡುವೆ ನಿರುಪಯುಕ್ತ ಯುಕೆಪಿ ಅತಿಥಿ ಗೃಹವನ್ನು ಸದ್ಭಳಕೆ ಮಾಡಿ ಕೊಳ್ಳಲು ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಜಿಲ್ಲಾ ಘಟಕ ಆಸಕ್ತಿ ವಹಿಸಿದ್ದು, ಈ ಸಂಬಂಧ ಯುಕೆಪಿ ಆರ್ ಅಂಡ್ ಆರ್  ವ್ಯವಸ್ಥಾಪಕ ನಿರ್ದೇ ಶಕರಿಗೆ ಪತ್ರ ಬರೆದು, ತಮ್ಮ ಸುಪರ್ದಿಗೆ ಕೊಡುವಂತೆ ಮನವಿ ಮಾಡಿದೆ. ಕಸಾಪ ಮನವಿಗೆ ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಕೂಡ ಸಹಮತ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ.

ಈ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ. ವಿಜಯಕುಮಾರ ಕಟಗಿಹಳ್ಳಿಮಠ, ಖಾಲಿ ಇರುವ ಅತಿಥಿಗಳ ವಸತಿ ಕೊಠಡಿ ಗಳು, ಉಪಹಾರ, ಅಡುಗೆ ವಿತರಣಾ ಕೊಠಡಿಯನ್ನು ಸಾಹಿತ್ಯ ಪರಿಷತ್‌ಗೆ ನೀಡುವಂತೆ ಈಗಾಗಲೇ ಮನವಿ ಮಾಡಲಾಗಿದೆ ಎಂದರು.


ಕಸಾಪ ಆಯೋಜಿಸುವ ಸಾಹಿತ್ತಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳಿಗೆ, ಗಣ್ಯ ಸಾಹಿತಿ ಗಳಿಗೆ ವಸತಿ ವ್ಯವಸ್ಥೆಗಾಗಿ ಖಾಸಗಿ ವಸತಿ ಗೃಹ ಅವಲಂಭಿಸಿದೆ.  ಇದು ಪ್ರಯಾಸ ಕರ ಮತ್ತು ಅತ್ಯಂತ ವೆಚ್ಚದಾಯಕ ವಾಗಿದೆ. ಆದ ಕಾರಣ ಖಾಲಿ ಇರುವ ಅತಿಥಿ ಗೃಹವನ್ನು ಪರಿಷತ್‌ಗೆ ಹಸ್ತಾಂತರಿಸಿದರೆ ಬಳಸಿಕೊಳ್ಳುವ ಉದ್ದೇಶವಿದೆ ಎಂದು ಹೇಳಿದರು.

ಅತಿಥಿ ಗೃಹಕ್ಕೆ ಅಗತ್ಯವಿರುವ ಕಾಟ್, ಬೆಡ್, ಅಡುಗೆ ಮತ್ತು ಸ್ವಚ್ಛತಾ ಸಿಬ್ಬಂದಿ ನೇಮಿಸಿಕೊಳ್ಳುವ ಉದ್ದೇಶವಿದೆ, ಇದಕ್ಕೆ ಅಗತ್ಯವಿರುವ ಹಣವನ್ನು ಕಸಾಪ ಬಳಿ ಇರುವ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉಳಿಕೆ ಹಣ (ರೂ. 16ಲಕ್ಷಕ್ಕೆ ಪ್ರತಿ ತಿಂಗಳು ಬರುವ ಬಡ್ಡಿ) ಬಳಸಿಕೊಳ್ಳಲು ಯೋಜಿಸಲಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಮನವಿಗೆ ಯುಕೆಪಿ ಆರ್ ಅಂಡ್ ಆರ್ ಅಧಿಕಾರಿಗಳು ಸ್ಪಂದಿಸಲಿದ್ದಾರೆಯೇ ಎಂಬುದು ಕಾದು ನೋಡಬೇಕಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT