ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳ್ಳಂಬೆಳಗ್ಗೆಯ ಚುಮುಚುಮು ಚಳಿಯಲ್ಲಿ ಎದ್ದು ಮಾವಿನ, ಬೇವಿನ ಮರಕ್ಕೆ ನೀರೆರೆದು ಕೈಮುಗಿದು ಅದರ ಟೊಂಗೆ, ಬೇವಿನ ಹೂವು ಕೀಳುವುದರೊಂದಿಗೆ ಯುಗಾದಿ ಸಂಭ್ರಮ ಆರಂಭ. ಇದು ಹಳ್ಳಿಯ ಪದ್ಧತಿ. ಟೊಂಗೆ, ಹೂವಿಗಾಗಿ ಮಾರುಕಟ್ಟೆಗೆ ಧಾವಿಸಬೇಕಾದುದು ಪಟ್ಟಣ ಮಂದಿಯ ಸ್ಥಿತಿ. ಹಳ್ಳಿಯಾದರೇನು, ಪಟ್ಟಣವಾದರೇನು ಎಲ್ಲರ ಉದ್ದೇಶ ಒಂದೇ. ಅದು ವಸಂತನ ಆಗಮನಕ್ಕೆ ಆಗುತ್ತಿರುವ ಸಿದ್ಧತೆ...

ಹಳ್ಳಿಗಳಲ್ಲಿ ಹಬ್ಬ ಹೀಗಿದೆ ನೋಡಿ... ಬೇವಿನ ಟೊಂಗೆ ಮನೆಯ ಮುಂದೆ ತೋರಣದ ರೂಪು ಪಡೆದರೆ, ಬೇವಿನ ಎಲೆ- ಹೂವುಗಳು ನೀರು ಕಾಯಿಸುವ ಹಂಡೆಯೊಳಗೆ ಕೊತಕೊತ ಕುದಿಯುತ್ತವೆ. ಮೈತುಂಬಾ ಎಣ್ಣೆ, ಸೀಗೆಕಾಯಿ ಹಚ್ಚಿಕೊಂಡು ಬೇವು ಬೆರೆತ ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡ್ರೆ `ಆಹಾ'! ಎಂಥ ಉಲ್ಲಾಸ. ಮನೆಯೆಲ್ಲ ಸಾರಿಸಿ, ಮನೆಯ ಮುಂದೆ ಕ್ಯಾಂವಿ ಮಣ್ಣಿನಿಂದ (ಕೆಮ್ಮಣ್ಣು) ಗೆರೆ ಹಾಕಿ, ಅಂಗಳದ ತುಂಬ ರಂಗೋಲಿಯ ಚಿತ್ತಾರ ಹಾಕುವುದನ್ನು ನೋಡುವುದೇ ಅಂದ. ಮಾವಿನ ಮತ್ತು ಬೇವಿನ ಟೊಂಗೆಯ ತೋರಣ, ನಡುವೆ ಸೇವಂತಿಗೆ ಹೂವಿನ ಅಲಂಕರಣ... ಇದನ್ನು ಮನೆಗೆ ಕಟ್ಟಿದರೆ ಯುಗಾದಿ ಹಬ್ಬಕ್ಕೊಂದು ಕಳೆ. ಮುಂದಿನ ಕಾರ್ಯ ದನದ ಕೊಟ್ಟಿಗೆ ಸಾರಿಸುವುದು, ಅದಕ್ಕೂ ಮಾವು-ಬೇವಿನ ತೋರಣದಿಂದ ಅಲಂಕರಿಸುವುದು.

ಇವೆಲ್ಲ ಮುಗಿದ ಮೇಲೆ ಗ್ರಾಮ ದೇವಿಗೆ ವಿಶೇಷ ಪೂಜೆ ಸಿದ್ಧ. ದೇವಿಗೆ ಹೋಳಿಗೆ ನೈವೇದ್ಯ. ತಮ್ಮ ತಮ್ಮ ಮನೆಗಳಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ಗ್ರಾಮದ ಜನರಿಗೆ ಹಂಚುವ ಸಂಪ್ರದಾಯ ಇಂದಿಗೂ ಇದೆ. ಊರ ಜನರೆಲ್ಲಾ ಸೇರಿ ಮಾಡುವ ಹಬ್ಬ ಇದು. ನಂತರ ವಿಶೇಷ ಪಾನಕ ಸೇವನೆ. ಸಕ್ಕರೆ ನೀರಿಗೆ ಬೇವಿನ ಹೂವು, ಮಾವಿನಕಾಯಿ ರಸ, ಬೆಲ್ಲ, ಏಲಕ್ಕಿ, ಗೋಡಂಬಿ, ಬಾದಾಮಿ ಸೇರಿದಂತೆ ಒಣ ಹಣ್ಣುಗಳು (ಡ್ರೈ ಫ್ರೂಟ್ಸ್), ಜೊತೆಗೆ ಕಲ್ಲಂಗಡಿ, ಸೇಬು, ಚಿಕ್ಕು, ಬಾಳೆ ಹಣ್ಣುಗಳ ಮಿಶ್ರಣ ಮಾಡಿ ಪಾನಕ ಮಾಡಿದರೆ ವಾಹ್! ಎಲ್ಲರೂ ಬಾಯಿ ಚಪ್ಪರಿಸಬೇಕು.

ಹೊಸದಾಗಿ ಮದುವೆಯಾದ ಮದುಮಕ್ಕಳನ್ನು ತವರಿಗೆ ಕರೆಸಿ ಆರತಿ ಮಾಡಿ, ಆಹೇರಿ (ಉಡುಗೊರೆ) ಕೊಡುತ್ತಾರೆ. ಭರ್ಜರಿ ಹೋಳಿಗೆ ಅಡುಗೆ ಮಾಡಿ ಅಳಿಯನಿಗೆ ಭಾರೀ ಉಪಚಾರ. ಯುಗಾದಿ ಪಾಡ್ಯ ಆದ ನಂತರ ಎರಡನೇ ದಿನ ತದಿಗೆ. ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ಮುತ್ತೈದೆಯರ ಕಾಲುತೊಳೆದು ಅರಿಶಿಣ ಕುಂಕುಮ ಕೊಟ್ಟು, ಉಡಿತುಂಬಿ, ಕೋಸಂಬರಿ ಪಾನಕ ಕೊಟ್ಟು ಸತ್ಕಾರ ಮಾಡುತ್ತಾರೆ. ಈ ಗೌರಿಯ ಮುಖ್ಯ ವಿಶೇಷ ಅಂದ್ರೆ ಕೋಸಂಬರಿ, ಪಾನಕದ ನೈವೇದ್ಯ. ಲಂಗ-ದಾವಣಿ ಹಾಕಿದ ಪುಟಾಣಿಗಳಾದಿಯಾಗಿ ಎಲ್ಲರೂ ಹೊಸ ವಸ್ತ್ರದಲ್ಲಿ ಮಿರಿಮಿರಿ ಮಿಂಚಿದರೆ, ಸಂಜೆಯ ವೇಳೆ ಕೋಲಾಟದ ಸಂಭ್ರಮ.

ಇಲ್ಲಿ ಹೀಗಿದೆ ಸಂಭ್ರಮ
ಅಂಗಳದಲ್ಲಿ ರಂಗವಲ್ಲಿ ಚಿತ್ತಾರ, ಮನೆಯಲ್ಲಿನ ಹಸುಗಳಿಗೆ ಸಿಂಗಾರ, ಮನೆಮಂದಿಗೆಲ್ಲಾ ಸಡಗರ... ಇದು ಶಿವಮೊಗ್ಗ ಪ್ರಾಂತ್ಯದ ಜನರ ಯುಗಾದಿ ವಿಶೇಷ. ಬೆಳ್ಳಂಬೆಳಿಗ್ಗೆ ಪುರುಷರು ಎತ್ತುಗಳನ್ನು ಸಿಂಗರಿಸಿ ನೇಗಿಲು ಕಟ್ಟಿಕೊಂಡು ಹೊಲಕ್ಕೆ ಹೋಗಿ ಸಾಂಪ್ರದಾಯಿಕವಾಗಿ ಉಳುಮೆ ಮಾಡುತ್ತಾರೆ. ಮಹಿಳೆಯರು ಹೊಸ ದಿರಿಸು ಧರಿಸಿ ಬೇವು ಬೆಲ್ಲವನ್ನು ಮನೆ ಮನೆಗೆ ಹೋಗಿ ಬೀರಿ ಬರುತ್ತಾರೆ. ಸಂಜೆಯ ವೇಳೆ ಚಂದ್ರನ ದರ್ಶನ. ನಂತರ ಹಿರಿಯರಿಂದ ಆಶೀರ್ವಾದ ಪಡೆಯುವುದು ರೂಢಿ. ಹಬ್ಬ ಮುಗಿದರೂ ಒಂದು ವಾರ `ಜೋಕಾಲಿ' ಸಂಭ್ರಮ ಮನೆಮಾಡುವುದು ಇಲ್ಲಿಯ ವಿಶೇಷ.

ಉತ್ತರ ಕನ್ನಡ ಜಿಲ್ಲೆಯ ರೈತಾಪಿ ವರ್ಗದವರು ಹೊಲಕ್ಕೆ ಹೋಗಿ ಗಿಡ ನೆಡುತ್ತಾರೆ. ಹಬ್ಬದ ದಿನ ಭೂಮಿ ಅಗೆಯುವುದು ನಿಷೇಧ. ಇದೇ ಕಾರಣಕ್ಕೆ ಹಿಂದಿನ ದಿನವೇ ಗಿಡ ನೆಡಲು ಸಿದ್ಧತೆ. ಅಂದೇ ಗುಂಡಿಯನ್ನು ಅಗೆದು ಗಿಡ ನೆಡಲು ಸಿದ್ಧತೆ ನಡೆಯುವುದು. ಯುಗಾದಿ ದಿನ ಸಂಜೆ ಚಂದ್ರ ಮತ್ತು ದೇವರಿಗೆ ನೈವೇದ್ಯ ಮಾಡಿದ ಬೇವು ಬೆಲ್ಲ ಸವಿಯುವರು. ಮೈಸೂರು, ಬೆಂಗಳೂರು ಪ್ರಾಂತ್ಯಗಳಲ್ಲಿ ಯುಗಾದಿಗೆ `ಹಿರಿಯರ ಹಬ್ಬ'ದ ಕಳೆ. ಮೃತರಾಗಿರುವ ಕುಟುಂಬ ವರ್ಗದವರ ಸಮಾಧಿಗಳಿಗೆ ಹೋಗಿ ಹಾಲು, ತುಪ್ಪದಿಂದ ಅಂದು ಪೂಜೆ. ನಂತರ ಬೇವು ಬೆಲ್ಲ ಹಂಚಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುವುದು ಇಲ್ಲಿನ ಪದ್ಧತಿ. ದಕ್ಷಿಣ ಕನ್ನಡದಲ್ಲಿ ಯುಗಾದಿಗೆ ವಿಶೇಷ ಸಂಭ್ರಮವೇನೂ ಇಲ್ಲ. ಬೇವು ಬೆಲ್ಲದ ಹಂಚಿಕೆ ಜೊತೆ ಎಣ್ಣೆ ಸ್ನಾನ ಇಲ್ಲಿ ವಿಶೇಷ.

ಹೊನ್ನಾರು ಉತ್ಸವ
ಉತ್ತರ ಕೊಡಗಿನ ಕೆಲವೆಡೆ ಜನಪದ ಸಂಸ್ಕೃತಿಯ ಹೊನ್ನಾರು ಉತ್ಸವ. ಜನಪದ ಸಂಸ್ಕೃತಿಯ ಪ್ರತೀಕ ಈ ಹೊನ್ನಾರು ಉತ್ಸವ ಅರ್ಥಾತ್ ಚಿನ್ನದ ಉಳುಮೆ. ಉತ್ಸವದ ದಿನ ಮುಂಜಾನೆ ರೈತರು ತಮಗೆ ಸೇರಿದ ಎತ್ತು ಹಾಗೂ ದನಕರುಗಳನ್ನು ನದಿಯ ನೀರಿನಿಂದ ತೊಳೆದು ಅವುಗಳ ಗವುಸು ಹಾಗೂ ಕೊಂಬಿಗೆ ವಸ್ತ್ರಾಲಂಕಾರದಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ತಾವು ಹೊಸ ಉಡುಗೆ-ತೊಡುಗೆ ತೊಟ್ಟು ನೇಗಿಲು, ನೊಗ, ಎತ್ತಿನಗಾಡಿಯೊಂದಿಗೆ ಹತ್ಯಾರುಗಳನ್ನು ಒಪ್ಪವಾಗಿ ಜೋಡಿಸಿ ಪೂಜೆ ಸಲ್ಲಿಸುತ್ತಾರೆ.

ಅಂದು ಹೊಸ ಪಂಚಾಂಗದಂತೆ ಗ್ರಾಮದ ಹಿರಿಯ ವ್ಯಕ್ತಿ ನೇಗಿಲು ಮತ್ತು ಭೂಮಿಗೆ ಪೂಜೆ ಸಲ್ಲಿಸಿ ವರ್ಷಧಾರೆ ಉಳುಮೆಗೆ ಚಾಲನೆ ನೀಡುತ್ತಾರೆ. ಬಳಿಕ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಹೊನ್ನಾರುಗಳು ಗ್ರಾಮದ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ನಂತರ ಉಳುಮೆ ಆರಂಭಿಸಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಆ ನಂತರ ರೈತರು ತಮ್ಮ ತಮ್ಮ ಜಮೀನಿಗೆ ತೆರಳಿ ಉಳುಮೆ ಆರಂಭಿಸುತ್ತಾರೆ.

`ಭರಣಿ ಮಳೆಯಲ್ಲಿ ಬಡವ ಏರು ಕಟ್ಟು' ಎಂಬುದು ಬಹಳ ಹಿಂದಿನಿಂದ ಬಂದ ಮಾತು. ಯುಗಾದಿ ಹಬ್ಬದ ಏಳು ದಿನಗಳ ಅಂತರದ ಹಿಂದು-ಮುಂದು ಮುಂಗಾರು ಮಳೆ ಬೀಳುತ್ತದೆ.  ಮುಂಗಾರು ಮಳೆ ಬಿದ್ದ ತಕ್ಷಣ ರೈತರು ಕೃಷಿ ಚಟುವಟಿಕೆ ಆರಂಭಿಸುವುದಿಲ್ಲ. ಆ ಸಂದರ್ಭದಲ್ಲಿ ನೆಲ ನೆನೆಯಲು ಬಿಡುತ್ತಾರೆ. ಈ ನೆಲ ನೆನೆಯುವ ಕ್ರಿಯೆಯಲ್ಲಿ ಸೂಕ್ಷ್ಮ ಜೀವಿಗಳು ಉತ್ಪತ್ತಿಯಾಗಿ ಬೆಳವಣಿಗೆ ಹೊಂದುತ್ತವೆ. ಅವುಗಳು ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ ಸಹಕರಿಸುತ್ತವೆ. ಇಷ್ಟು ಹೊತ್ತಿಗೆ ಹೊಲಕ್ಕೆ ಗೊಬ್ಬರ-ಗೋಡು ಹಾಕುವುದು, ಉದಿ-ಬದು ಭದ್ರಪಡಿಸುವುದು, ಬೇಲಿ ಸವರುವುದು ಮುಂತಾದ ಕೆಲಸಗಳು ಮುಗಿದಿರುತ್ತವೆ. ಇದಾದ ನಂತರ ಬೀಳುವ ಮಳೆಯ ನಂತರ ಸಾಂಪ್ರದಾಯಿಕ ಹೊನ್ನಾರು ಪೂಜೆಯೊಂದಿಗೆ ರೈತರು ಉಳುಮೆ ಕಾರ್ಯವನ್ನು ಆರಂಭಿಸುತ್ತಾರೆ.

`ಬೇವು ಜಾಸ್ತಿ ತಿಂದ್ರ ದೇವರು ಬೆಲ್ಲದಂಥಾ ಸಿಹಿ ಬದುಕ ಕೊಡ್ತಾನ. ಉಗಾದಿ ದಿನಾ ಯಾವ ಕೆಟ್ಟ ಕೆಲ್ಸಾ ಮಾಡಬ್ಯಾಡ್ರಿ, ಕೆಟ್ ಕೆಟ್ ಮಾತಾಡಬ್ಯಾಡ್ರಿ, ಅಳಬ್ಯಾಡ್ರಿ, ಜಗಳಾಡಬ್ಯಾಡ್ರಿ, ಇವತ್ ಏನ್ ಮಾಡ್ತಿರಿ ಅದನ್ನ ವರ್ಷ ಪೂರ್ತಿ ಮಾಡ್ತಿರಿ, ಜ್ವಾಕಿ' ಎಂಬ ಹಿರಿಯರ ನುಡಿಯೊಂದಿಗೆ ಹಬ್ಬಕ್ಕೆ ಶುಭ ವಿದಾಯ.

ಮದ್ಯದ ಗಮ್ಮತ್ತು
ಯುಗಾದಿ ಹಬ್ಬದ ಬೇವು ಬ್ಲ್ಲೆಲ ಸವಿದು, ಹೋಳಿಗೆ ಚಿತ್ರಾನ್ನ ತಿಂದು ಬಾಯೆಲ್ಲಾ ಸವಿಸವಿಯಾದರೆ ಮಾರನೇ ದಿನ ಖಾರ ಖಾರ...! ಮಟನ್ ಬಿರಿಯಾನಿ, ಚಿಲ್ಲಿ- ಪೆಪ್ಪರ್ ಚಿಕನ್, ಫಿಶ್ ಕರಿ, ಫಿಶ್ ಫ್ರೈ ಆಹಾ... ಒಂದೇ ಎರಡೇ ಹತ್ತಾರು ವಿಧಗಳು, ಬಗೆಬಗೆ ರುಚಿಗಳು. ಖಾರಾ ಇದ್ದರೆ ಸಾಕೆ, ತುಂಡುಗಳ ಜೊತೆ ಗುಂಡು ಇಲ್ಲದಿದ್ದರೆ ಹೇಗೆ? ಇದಕ್ಕಾಗಿಯೇ ಬೀರು, ಬ್ರಾಂದಿ, ವಿಸ್ಕಿ... ಅಬ್ಬಬ್ಬಾ...! ಹೂಂ... ಹೂಂ... ಇಷ್ಟಕ್ಕೂ ಮುಗಿದಿಲ್ಲ. ಇದರ ಜೊತೆ ಒಂದು ಕೈಯಲ್ಲಿ ಇಸ್ಪಿಟ್ ಎಲೆಗಳು, ಇನ್ನೊಂದರಲ್ಲಿ ಬೀಡಿ, ಸಿಗರೇಟ್...

ಹೌದು. ಇದು `ಖಾರದ ಹಬ್ಬ'. ಯುಗಾದಿ ಹಬ್ಬದ ಮಾರನೇ ದಿನ ಬಹುತೇಕ ಕಡೆಗಳಲ್ಲಿ ಈ ಹಬ್ಬದ ಆಚರಣೆಯಿದೆ. ಇದಕ್ಕೆ ತಡಕು, ಹೊಸ ತಡಕು, ಹೊಸವರ್ಷದ ತಡಕು ಎಂದೆಲ್ಲಾ ಕರೆಯುತ್ತಾರೆ. ಯುಗಾದಿ ಹಬ್ಬಕ್ಕೆ ಹತ್ತು ಹಲವು ಪೌರಾಣಿಕ ಕಥೆಗಳು. ಹಾಗೆಂದು ಈ ತಡಕು ಹಬ್ಬಕ್ಕೆ ಯಾವ ಕಥೆಗಳೂ ಇದುವರೆಗೆ ಸಿಕ್ಕಿಲ್ಲ. ಈ ಆಚರಣೆಯ ಮೂಲ ಯಾವುದು ಗೊತ್ತಿಲ್ಲ. ಅಂತೂ ಇದು ನಡೆದು ಬಂದಿದೆ. ಮಾಂಸಹಾರಿಗಳು ಮಾತ್ರವಲ್ಲದೇ ಕೆಲವು ಸಸ್ಯಾಹಾರಿ ಮನೆಗಳಲ್ಲೂ ತಡಕು ಇಣುಕು ಹಾಕುತ್ತದೆ. ಯುಗಾದಿ ಹಬ್ಬಕ್ಕೆ ಸಾರ್ವತ್ರಿಕ ರಜೆಯಾದರೆ, ತಡಕು ದಿನ ಕಚೇರಿಗಳಲ್ಲಿ ಸಿಬ್ಬಂದಿಗೆ ತಡಕಾಡಬೇಕು. ಏಕೆಂದರೆ, ಸರ್ಕಾರದ ಹಲವು ಕಚೇರಿಗಳಲ್ಲಿ ಅಲ್ಲೊಂದು, ಇಲ್ಲೊಂದು ಸಿಬ್ಬಂದಿ ಅಷ್ಟೇ. ಈ `ಹಬ್ಬ'ದ ಪ್ರಭಾವ ಎಷ್ಟೆಂದರೆ ಹಳ್ಳಿ ಎಂದರೆ ವಾಕರಿಕೆ ಪಡುವವರೂ ಅಂದು ಹಳ್ಳಿ ಬಸ್ಸು ಹತ್ತಿರುತ್ತಾರೆ.

ಎಲ್ಲೆಡೆ ಮೋಜು ಮಸ್ತಿ
ಮಾಂಸ ತಿನ್ನಲು, ಹೆಂಡ ಕುಡಿಯಲು, ಇಸ್ಪಿಟ್ ಆಟಕ್ಕಷ್ಟೇ ಸೀಮಿತ ಈ ಹಬ್ಬ ಎಂದೇ ನಂಬಿದ್ದಾರೆ ಜನ. ಕೆಲವು ಕಡೆ ಯುಗಾದಿ ಹಬ್ಬದ ಮಾರನೆಯ ದಿನ ಈ ಮೋಜು ಮಸ್ತಿ ನಡೆದರೆ, ಹಳೆ ಮೈಸೂರು ಭಾಗದ ಬಹುತೇಕ ಕಡೆ ಹಬ್ಬದ ಸಂಜೆಯೇ ಆಟ ಶುರು. ಕೋಳಿ- ಕುರಿಗಳ ರುಂಡ- ಮುಂಡ ಎಲ್ಲೆಡೆ ಚೆಲ್ಲಾಡುತ್ತದೆ. ಎತ್ತ ನೋಡಿದರೂ ಜೂಜಿನ ಅಡ್ಡೆ. ಶಕ್ತ್ಯಾನುಸಾರ ಹಣ ಪಣಕ್ಕಿಟ್ಟು ಜೂಜಾಟ. ಇದು ಹಬ್ಬದ ಮೋಜು ತಾನೆ? ಅದಕ್ಕೆ ಪೊಲೀಸರಿಂದಲೂ ಹೆಚ್ಚಿನ ಅಡ್ಡಿ ಇರುವುದಿಲ್ಲ. ಅಂದ ಮೇಲೆ ಕೇಳಬೇಕೆ...? ಇನ್ನು ತಾರಾ ಹೋಟೆಲ್, ರೆಸಾರ್ಟ್‌ಗಳಲ್ಲಂತೂ ಮಾಂಸ ಪ್ರಿಯರಿಗೆ ಅಕ್ಷರಶಃ ಹಬ್ಬ. ಜೊತೆಗೆ ಈ ಬಾರಿ ಚುನಾವಣಾ ಕಾವು ಬೇರೆ. ಹಬ್ಬದ ಹೆಸರ್ಲ್ಲಲಿ ಎಲ್ಲವೂ ಗಪ್‌ಚುಪ್...! ಮಾಂಸದ ವ್ಯಾಪಾರಿಗಳಿಗಂತೂ ಹಬ್ಬವೇ ಹಬ್ಬ. ಮಟನ್, ಚಿಕನ್ ಬೆಲೆ ದುಪ್ಪಟ್ಟಾಗುತ್ತದೆ. ಯುಗಾದಿ ಹಬ್ಬದ ಸಂಭ್ರಮ ಹಿಂದೂಗಳಿಗೆ ಆದರೂ, ಮಾರನೆಯ ದಿನದ ಸಂಭ್ರಮ ಎಲ್ಲ ಧರ್ಮದ ಮಾಂಸ ವ್ಯಾಪಾರಿಗಳಿಗೆ! ಜನರು ಅದೃಷ್ಟದ ಪರೀಕ್ಷೆಗೆ ಜೂಜಾಟ ಆಡಿದರೆ, ಈ ವ್ಯಾಪಾರಿಗಳ ಅದೃಷ್ಟವಂತೂ ಅಂದು ಖುಲಾಯಿಸುತ್ತದೆ.

ಮದ್ಯ, ಮಾಂಸ
ಮಾಂಸದ ಜತೆಗೆ ಮದ್ಯದ ಗಮ್ಮತ್ತು ಇನ್ನೊಂದೆಡೆ. ಮಾಂಸದಂಗಡಿಯವರ ಜೊತೆ ವೈನ್ ಸ್ಟೋರ್‌ನವರಿಗೂ ಅದೃಷ್ಟವೋ ಅದೃಷ್ಟ. ಕಂಠಪೂರ್ತಿ ಕುಡಿದು ಗಲಾಟೆ ಮಾಡುವವರಿಗೂ ಅಂದು ಕಮ್ಮಿ ಇಲ್ಲ. ಅಪರೂಪಕ್ಕೆ ಮದ್ಯ ಸೇವಿಸುವವರದ್ದೇ ಪ್ರತ್ಯೇಕ ಗುಂಪು. ಎಷ್ಟೆಂದರೂ ಹಬ್ಬ ಅಲ್ವಾ? ಆ ದಿನ ಮನೆಯವರಿಂದಲೂ ರಿಯಾಯಿತಿ! ಅದಕ್ಕಾಗಿಯೇ ಹೊರಗಡೆಯಿಂದ ಮದ್ಯ ತಂದು ಹಳ್ಳಿಗಳಲ್ಲಿ ಮಾರಾಟ ಆಗುತ್ತದೆ. ಹಣಕ್ಕಾಗಿ ನಕಲಿ ಮದ್ಯ ಮಾರಾಟ ಮಾಡುವುದೂ ಉಂಟು.

ಇಸ್ಪಿಟ್ ಆಟ ಬರಲ್ವೇ? ಚಿಂತೆ ಯಾಕೆ, ಹುಣಸೆ ಬೀಜ ಸಾಕು. ಹೌದು. ಇಸ್ಟಿಟ್ ಆಟ ಗೊತ್ತಿಲ್ಲದವರಿಗೆ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಹುಣಸೆ ಬೀಜ ಅವರ ಈ ಕೊರತೆ ನೀಗಿಸುತ್ತದೆ. ಹುಣಸೆ ಬೀಜಗಳನ್ನು ಒಂದು ಕಡೆ ತೇಯ್ದು, ಅವುಗಳಿಂದ ಗೆಂಪ (ಪಚ್ಚಿ) ಆಡಲಾಗುತ್ತದೆ. ಒಂದೊಂದು ಅಖಾಡದಲ್ಲೂ ಸಹಸ್ರಾರು ರೂಪಾಯಿಗಳ ವಹಿವಾಟು ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT