ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಾದಿ ಮತ್ತು ಮೂರು ಮುಖಗಳು

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಖ-1
ಕೆಂದಳಿರಿನ ಬೆರಳ ಹಿಡಿದು ಬರುತಿದೆ ಯುಗಾದಿ. ತೆರೆಯಿರಿ ಮನೆಯ ಕದಗಳನು, ಎದೆಯ ಕದಗಳನೂ.
ನೋಡಿದಿರಾ, ಎಂಥಾ ಅನೀಮಿಯಾ ಕೊಂಬೆಯಲ್ಲೂ ರಕ್ತಸಂಚಾರ! ಗಮನಿಸಿದಿರಾ, ನವೀಕರಣಗೊಂಡ ಋತುಗಳ ಯಾದಿ. ಇದು ಸಂಭ್ರಮದ ಕಾಲ. ಪ್ರಕೃತಿಯ ಸಂಭ್ರಮದೊಂದಿಗೆ ಬದುಕಿನ ಸಂಭ್ರಮವೂ ಸಮೀಕರಣಗೊಳ್ಳುವ ಸಮಯ.

ಹೊಂಗೆ ಹೂವ ತೊಂಗಲಲ್ಲಿ, ಭೃಂಗದ ಸಂಗೀತದಲ್ಲಿ ಚೈತ್ರ ಬಿಡಾರ ಹೂಡಿದ್ದಾನೆ. ಕೋಗಿಲೆಯ ಕಂಠಕ್ಕೆ ವಸಂತ ಮರಳಿದೆ. ಮಾವಿನ ಮರದಲ್ಲಿ ಹಸಿರು ಉಮ್ಮಳಿಸುತ್ತಿದೆ. ಹೊಸ ಜೀವದ ಹುಮ್ಮಸ್ಸಿನಲ್ಲಿ ಪ್ರಕೃತಿಗೆ ಮರಳಿದ ತಾರುಣ್ಯ. ಹೊಸ ಹಾಡಿಗಿದು ಕಾಲ. ಹೊಸ ಕನಸಿಗೆ ಹದಗೊಳ್ಳಲಿ ನೆಲ. ಚಿಮ್ಮಲಿ ಜೀವಜಲ.

ಹಬ್ಬದ ಒಡಲಲ್ಲಿ ಸಂಭ್ರಮದ ಹೂರಣ. ಹಾರುತ್ತ ಹಾರುತ್ತ ದೂರ ತೀರಗಳ ಸೇರಿದವರೆಲ್ಲ ಒಂದೆಡೆ ಸೇರಿ ಸಂಭ್ರಮಿಸಲು ಹಬ್ಬವೊಂದು ಕಾರಣ. ಆಡೋಣ ಸುಖದ ಮಾತು. ಗುನುಗೋಣ ಸುಖದ ಗೀತ. ಜೀಕೋಣ ನೆನಪುಗಳ ಉಯ್ಯಾಲೆ. ನಮ್ಮ ಹೊಸಗಾನದ ಭರದಲ್ಲಿ ತೇಲಿಹೋಗಲಿ ಸಂಕಟದ ಹಾಯಿದೋಣಿ.

ಜಾಗತಿಕ ಜಾತ್ರೆಯ ದಿನಗಳು ನಮ್ಮವು. ಇಲ್ಲಿ ದಿನದಿನವೂ ಹಬ್ಬವೇ, ಒಪ್ಪಿಕೊಳ್ಳೋಣ. ಯಾವುದೋ ಊರಿನ ಮಾವು ವರ್ಷವಿಡೀ ಪೇಟೆಯಲಿ ದೊರೆಯುವುದು, ಸವಿಯೋಣ. ಅಲ್ಲಿನ ಸಂಭ್ರಮಕ್ಕೆ ನಮ್ಮ ದನಿಯನೂ ಕೂಡಿಸೋಣ. ಬದುಕು ಚೆಲುವುಗೊಳ್ಳಲು ಯಾವುದಾದರೇನು ಮಾರ್ಗ? ತೀಡಿಬರಲಿ ಗಾಳಿ ಎಲ್ಲ ಕದ ಕಿಟಕಿಗಳಿಂದ. ಮೊಗೆದುಕೊಳ್ಳೋಣ ಎಲ್ಲೆಡೆಗಳಿಂದ ಜೀವನೋತ್ಸಾಹದ ಅಮೃತ. ಇದೆಲ್ಲದರ ನಡುವೆಯೂ ಯುಗಾದಿಯ ಮರೆಯದಿರೋಣ. ನಮ್ಮೀ ಸಂಭ್ರಮ, ಮಾತು-ಗೀತ, ಹಿನ್ನೋಟ-ಮುನ್ನೋಟ, ಇದೆಲ್ಲದರ ಮಥನದಲಿ ಮಾಡಿಕೊಳ್ಳೋಣ ಸಾಗಬೇಕಾದ ದಾರಿಗೆ ಊರುಗೋಲುಗಳ.

ನಮ್ಮ ಸಂಭ್ರಮಕ್ಕೆ ಅವರದು ಸಹಕಾರ ಹಸ್ತ. ಹಬ್ಬದೂಟಕ್ಕೆ ಇರಲಿಬಿಡಿ ಅವರದೂ ಒಂದು ತುತ್ತು. ಸಂಭ್ರಮಕ್ಕೆ ಸೀಮೆಯಾದರೂ ಯಾವುದು? ವಿಶ್ವಮಾನವ ಸಂದೇಶ ಸಾರಿದ ಭೂಮಿ ನಮ್ಮದು. ವಿಶ್ವಸಂಭ್ರಮಕ್ಕೂ ನೆಲೆಯಾಗೋಣ.

ಹಾಡೋಣ ಮಂಗಳಗೀತೆ- `ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು'.

ಮುಖ-2
ಕೆಂದಳಿರಿನ ಬೆರಳು ಹಿಡಿದು ನರಳುತ್ತಿದೆ ಯುಗಾದಿ. ಅದರ ಕೊರಳಲಿ ಸಾವಿರ ಯಾತನೆಗಳ ಚೀರು.
ಬರಿದಾಗುತ್ತಿದೆ ನೀರು. ಬೋಳಾಗುತ್ತಿದೆ ಉಸಿರು. ಮಗು ಇಲ್ಲೇ ಅಳುತಾ ಇದೆ... ನೀವು ಕಾಣಿರಾ... ನೀವು ಕೇಳಿರಾ...

ಬರಿದಾಗಿದೆ ಸುಗ್ಗಿ ಕಣಜ. ಮಂಕಾಗುತ್ತಿದೆ ಬದುಕಿನ ಹಣತೆ. ಬರಿದಾಗಬೇಕೆ ಮಾನವೀಯತೆಯ ಒರತೆ. ನೆಲದ ಕಾರುಣ್ಯವ ಬಸಿದುಕೊಂಡು ಮೈದುಂಬಿಕೊಂಡಿದೆ ಮಾಮರ. ಅದರಲಿ ಕುಳಿತ ಕೋಗಿಲೆಯ ಕೊರಳಲಿ ಹೊಮ್ಮುತಿದೆ ಶೋಕಗೀತ. ಮಿಡಿಯದಾಗಿದೆ ಕೊಳಲು, ಕಟ್ಟಿಕೊಂಡಿದೆ ಕೊರಳು, ಹುಸಿ ಸಂಭ್ರಮಕ್ಕೆ ದಾಟಿಸಲು ಶಕ್ಯವೇ ಸಂಕಟದ ಕಡಲು.

ಯುಗಾದಿಯೇ, ಹೊಸಿಲಾಚೆಯೇ ನಿಲ್ಲು. ತಟ್ಟದಿರು ಎದೆಯ ಕದ. ನಾವು ಹಾಡುವುದಿಲ್ಲ ಸಂಭ್ರಮದ ಪದ.

ರುಚಿಸುವುದಿಲ್ಲ ಹೋಳಿಗೆಯ ಸ್ವಾದ. ಕೇಳದೇನು ವಸಂತದ ಬಿಕ್ಕು. ಬದುಕಾಗಿದೆ ಸಿಕ್ಕು. ಕಾಣದ ಕೈ ಹಿಚುಕುತಿಹುದು ಕೋಗಿಲೆಯ ಕೊರಳು. ನರಳುವಿಕೆಯೇ ಎಲ್ಲೆಲ್ಲು- ಅರ್ಥ ಇದ್ದೀತೆ ಸಂಭ್ರಮಕ್ಕೆ, ಯುಗಾದಿಯ ಹಾಡಿಗೆ.

ಹಸಿರು ತೋರಿಸುವಿರಿ, ಹಸಿರ ಹಿಂದಿನ ಕೆಂಡ ಕೆಂಪು ನೋಡಿ. ಸಂಭ್ರಮದ ಮಾತಾಡುತ್ತೀರಿ; ನಾಡಿನುದ್ದಕೂ ಅನುರಣಿಸುತಿರುವ ರೋದನಗಳ ಕೇಳಿಸಿಕೊಳ್ಳಿ. ಅಭ್ಯಂಜನದ ಸುಖ ಬಣ್ಣಿಸುತ್ತೀರಿ; ತೀರದ ದಾಹದ ಜೀವಗಳ ತಲ್ಲಣವನ್ನು ಕಾಣಿರಿ. ಇದೆಲ್ಲಕ್ಕೆ ಕಣ್ಣಾಗಿ, ಕಿವಿಯಾಗಿ, ಆಮೇಲೆ ಹೇಳಿ- ಸಂಭ್ರಮಕ್ಕೆ ಯಾವ ಅರ್ಥ?

ಯುಗಾದಿ ಮರಳಿ ಬಂದಿದೆ. ನಮ್ಮ ಬದುಕುಗಳಲ್ಲೋ ಬೇವಷ್ಟೇ ಉಳಿದಿದೆ. ಹಬ್ಬದ ಆಚರಣೆಗೆ ಸಂಭ್ರಮನ್ನೇನೋ ಕಡ ತರಬಬಹುದು. ಆದರೆ, ನಿತ್ಯ ನಮ್ಮ ಸುಡುವ ಸಂಕಟಗಳನು ಎಲ್ಲಿ ಹುಗಿದಿಡುವುದು?

ನಾವೂ ಹಾಡುತ್ತೇವೆ ಎದೆದುಂಬಿ ಗೀತಗಳನು. ಆದರೆ, ನಮ್ಮದು ಭಾವಗೀತೆಯಲ್ಲ- ಚರಮ ಗೀತೆ. ನಿಮ್ಮ ಹಾಡು ನಿಮ್ಮದು. ನಮ್ಮ ಹಾಡು ನಮ್ಮದು. ಹೌದು, ನಾವೂ ಕಟ್ಟುವೆವು ಹೊಸ ನಾಡೊಂದನು, ಬೆವರಿನ ಬೀಡೊಂದನು.

ಮುಖ-3
ಎಡಕ್ಕೆ ಸಂಭ್ರಮದ ಹೊನಲು. ಬಲಕ್ಕೆ ಸೂತಕದ ಹುಯಿಲು. ನಡುವೆ ನಿಂತಿರುವ ಮಧ್ಯಮನಿಗೆ ಎದೆತುಂಬ ದಿಗಿಲು. ಮಧ್ಯಮ ಮಾರ್ಗಿಗಳ ಬಗ್ಗೆ ಎಡಬಲಗಳದು ಸದಾ ಅನುಮಾನದ ಕಣ್ಣು.

ಇವರು ಕದ ಮುಚ್ಚಿಕೊಂಡಿದ್ದಾರೆ. ಅವರೋ ಮನಸ್ಸನ್ನೇ ಮುಚ್ಚಿಕೊಂಡಿದ್ದಾರೆ. ತ್ರಿಶಂಕು ಸ್ಥಿತಿಯಲಿ ಬದುಕಿನದು ತಂತಿಯ ಮೇಲಿನ ಓಟ. ಎಷ್ಟು ಕಾಲ ಈ ನಡಿಗೆ, ಇನ್ನಾದರೂ ಮೂಡುವುದೇ ತದಿಗೆ!

ಸಂಭ್ರಮವೆಂದು ಅವರು ಹಬ್ಬ ಮಾಡಿದರು. ಸೂತಕವೆಂದು ಇವರೂ ಒಟ್ಟುಗೂಡಿದರು. ಅಲ್ಲೊಂದಿಷ್ಟು ಮಾತು, ಇಲ್ಲೊಂದಿಷ್ಟು ಮತಾಪು. ಹೋಳಿಗೆ ಹೊಟ್ಟೆ ತುಂಬಿಸಿತು, ಅಂಬಲಿಯೂ ಹಸಿವೆ ತಣಿಸಿತು. ಹಬ್ಬ ಮುಗಿದ ಮೇಲೆ ಸಭಾಂಗಣ ಖಾಲಿ. ಅಳು ತೀರಿದ ಮೇಲೆ ಅವರವರ ದಾರಿ ಅವರದು. ಮತ್ತದೇ ದಿನ, ಮತ್ತದೇ ಜನ. ದಾರಿ ಯಾವುದಯ್ಯ ವೈಕುಂಠಕೆ...

ಅಮ್ಮಾ ಋತುಮಾತೆ, ದಿಗಿಲಾಗುತಿದೆ ಮನಕೆ. ಅಯ್ಯಾ ಯುಗಾದಿ, ತೋರಯ್ಯಾ ಸಮನ್ವಯದ ಹಾದಿ.

ಯುಗಾದಿ ಪುರುಷ ಪ್ರತ್ಯಕ್ಷನಾಗುವನು. ಆತ ಹೇಳುವನು-

ಸಂಭ್ರಮದ ಮನೆಯಲ್ಲಿದೆ ಬೆಲ್ಲ
ನಿಟ್ಟುಸಿರಿನ ಅಂಗಳದಲ್ಲಿದೆ ಬೇವು
ಬೇವು-ಬೆಲ್ಲ ಸೇರಿದರೆ ಯುಗಾದಿ.
ಅವರ ಬೆಲ್ಲ ಇವರಿಗಿಷ್ಟು
ಇವರ ಬೇವು ಅವರಿಗಿಷ್ಟು
ಹಂಚುವುದು ಕಾಲದ ಕೈ
ಆವರೆಗೆ ತಾಳು ನೀ ರವಷ್ಟು
ಯುಗಾದಿ ಪುರುಷ ಅಂತರ್ಧಾನನಾಗುವನು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT