ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧಭೂಮಿಯಲ್ಲಿ ಹೂವು–ಹಾಡು

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಯುದ್ಧಭೂಮಿಯೆಂದರೆ ಕಥೆಗಳ ಸಾಗರ. ಅದರಲ್ಲಿನ ಒಂದು ಹೂವಿನ ಕಥೆಯನ್ನು ಕೆ.ಗಣೇಶನ್ ಕೈಗೆತ್ತಿಕೊಂಡಿದ್ದಾರೆ. ಅದು ಮನಸ್ಸಿಗೆ ಮುದ ನೀಡುವುದಕ್ಕಿಂತ ಹೆಚ್ಚಾಗಿ ದುರಂತದ ಎಸಳುಗಳನ್ನು ಹೊಂದಿದ ಹೂವು. ಇದರ ಹೆಸರೇ– ‘ಯುದ್ಧಭೂಮಿಯಲ್ಲಿ ಒಂದು ಹೂವು’.

‘ಆಶಾಜ್ಯೋತಿ’, ‘ನಾನೇ ಸತ್ಯ’ ಇನ್ನಿತರ ಚಿತ್ರ ನಿರ್ದೇಶಿಸಿ, ಸಾಕಷ್ಟು ಅನುಭವ ಹೊಂದಿರುವ ಗಣೇಶನ್ ಅವರ ಕನಸಿಗೆ ನೀರೆರೆದು ಪೋಷಿಸುತ್ತಿರುವುದು ನಿರ್ಮಾಪಕ ಜೆ.ಸಿ.ಗುರುನಾಥ ಚಲ್ಸಾನಿ. ಇವರು ಈ ಮೊದಲೇ ಗಣೇಶನ್ ನಿರ್ದೇಶನದ ‘ಯಾರೇ ನೀ ಮೋಹಿನಿಯಾ’ ಚಿತ್ರಕ್ಕೆ ಬಂಡವಾಳ ಹಾಕಿದ್ದವರು. ಈಗ ‘...ಒಂದು ಹೂವು’ ಚಿತ್ರವನ್ನು ಕನ್ನಡದ ಜತೆಗೆ ತಮಿಳು ಹಾಗೂ ತೆಲುಗಿನಲ್ಲೂ ನಿರ್ಮಿಸಲಾಗುತ್ತಿದೆ.

ಶ್ರೀಲಂಕಾದ ಒಂದು ಚಾನೆಲ್‌ನಲ್ಲಿ ವಾರ್ತಾ ವಾಚಕಿಯಾಗಿಯಾಗಿದ್ದ ಇಸೈಪ್ರಿಯಾ ಎಂಬಾಕೆಯ ಬದುಕಿನ ಕಥೆ ಇದು. ಶ್ರೀರಾಮ್ ಎಂಬ ಹೋರಾಟಗಾರನನ್ನು ಪ್ರೀತಿಸಿ ಮದುವೆಯಾದ ಈಕೆಗೆ ಗಂಡು ಮಗು ಜನಿಸುತ್ತದೆ. ಆದರೆ ಘೋರ ಯುದ್ಧದ ಸಮಯದಲ್ಲಿ ಆಹಾರ ಸಿಗದೇ ಮಗು ಸಾವನ್ನಪ್ಪಿದರೆ, ಶ್ರೀರಾಮ್ ಯುದ್ಧದಲ್ಲಿ ಸಾವನ್ನಪ್ಪುತ್ತಾರೆ. ಶ್ರೀಲಂಕಾದ ಸೈನಿಕರು ಈಕೆಯನ್ನು ಬಂಧಿಸಿ, ಅತ್ಯಾಚಾರ ನಡೆಸಿ, ಹತ್ಯೆ ಮಾಡುತ್ತಾರೆ. ಈ ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ.

‘ಯುವತಿಯ ಜೀವನ, ದುರಂತ ಅಂತ್ಯವನ್ನು ತೆರೆ ಮೇಲೆ ತರಲಿದ್ದೇನೆ. ಈಗಾಗಲೇ ಶೇ 60ರಷ್ಟು ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಎಲ್ಲರೂ ಹೊಸಬರೇ ಇದ್ದಾರೆ. ಆಂಧ್ರದ ಪ್ರಿಯಾ ಎಂಬಾಕೆ ನಾಯಕಿ ಪಾತ್ರ ಮಾಡುತ್ತಿದ್ದಾರೆ’ ಎಂಬ ವಿವರ ನೀಡಿದ ಗಣೇಶನ್, ಸಿನಿಮಾದ ಜೀವ, ಹೀರೋ, ದೇವರು ಎಲ್ಲಾ ಇಳಯರಾಜ ಎಂದು ಭಾವೋದ್ವೇಗದಿಂದ ಹೇಳಿದರು. ಹಾಗೆ ಹೇಳಲು ಕಾರಣವೆಂದರೆ, ಇಳಯರಾಜ ಒಂದೇ ಬಾರಿಗೆ ಇವರ ಚಿತ್ರಕ್ಕೆ ಸಂಗೀತ ಕೊಡಲು ‘ಓಕೆ’ ಅಂದುಬಿಟ್ಟರಂತೆ!

ಚಿತ್ರರಂಗದಲ್ಲಿ ಸಾಕಷ್ಟು ಅನುಭವವಿರುವ ಗುರುನಾಥ ಹೆಚ್ಚು ಮಾತಾಡಲಿಲ್ಲ. ಗಣೇಶನ್ ಹೊಸ ಯೋಜನೆಗೆ ಹಣ ಹೂಡಲು ಮುಂದಾಗಿದ್ದೇನೆ. ಇಳಯರಾಜ ಸಂಗೀತ ನಿರ್ದೇಶನ ನೀಡಲು ಒಪ್ಪಿರುವುದು ನಮ್ಮ ಅದೃಷ್ಟ ಎಂದು ಕೃತಜ್ಞತೆ ಸಲ್ಲಿಸಿದರು. ಪಾರ್ತಿಬನ್ ಕ್ಯಾಮೆರಾ ಹಿಡಿದಿದ್ದಾರೆ.

ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣಕ್ಕೆಂದು ಬಂದಿದ್ದ ಇಳಯರಾಜ, ಸಂಗೀತ ಕುರಿತು ತಮ್ಮ ಚುಟುಕಾದ ಅನಿಸಿಕೆ ಹಂಚಿಕೊಂಡರು. ಹೊಸಪೀಳಿಗೆಯ ಸೃಜನಶೀಲತೆ ತಮಗಿಷ್ಟ ಎಂದು ಮೆಚ್ಚುಗೆ ಸೂಚಿಸಿದ ಅವರು, ‘...ಒಂದು ಹೂವು’ ಸಿನಿಮಾದ ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡುಬಿಟ್ಟರಂತೆ. ಇದೊಂದು ಮಾನವೀಯತೆಯ ಮುಖವುಳ್ಳ ಚಿತ್ರ. ಹೀಗಾಗಿ ಗಣೇಶನ್‌ ಹೇಳಿದಾಗ ಒಪ್ಪಿಗೆ ಸೂಚಿಸಿದ್ದಾಗಿ ಹೇಳಿದರು. ‘ನಾನು ಯಾಕೆ ಹಾಗೆ ಹೇಳುತ್ತೇನೋ ನನಗೆ ಗೊತ್ತಿಲ್ಲ. ಹ್ಞೂಂ ಅಂದ್ರೆ ಏನಾದ್ರೂ ಆಗ್ಲಿ ಮ್ಯೂಸಿಕ್ ಮಾಡ್ತೀನಿ. ಇಲ್ಲಾ ಅಂದ್ರೆ ಏನೇ ಆದ್ರೂ ಮಾಡೋಲ್ಲ’ ಎಂಬ ತಮ್ಮ ಸ್ವಭಾವವನ್ನು ಬಿಚ್ಚಿಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT