ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧೋತ್ಪಾದನೆಮತ್ತು ಬುದ್ಧೋತ್ಪಾದನೆ

Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಮಧ್ಯಾಹ್ನ ಸಂಜೆಯಾಗುವ ಹೊತ್ತು. ಬೆಂಗಳೂರು ಅರಮನೆಯ ಆವರಣ. ದೂರದಲ್ಲಿ ಓಡುವ ಸಾರೋಟು... `ಅಂಗುಲಿಮಾಲ' ಚಿತ್ರೀಕರಣ ಸಮಾರೋಪಗೊಂಡದ್ದು ಇಂತಹ ಹವೆಯಲಿ.
ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರ ಪ್ರಕಾರ ಚಿತ್ರದ್ದು ಸಮಕಾಲೀನ ಸಂದರ್ಭಕ್ಕೂ ಹೊಂದಿಕೊಳ್ಳುವಂತಹ ವಸ್ತು.

ಬುದ್ಧನ ಕಾಲದಲ್ಲಿ ನಡೆದಿದೆ ಎನ್ನಲಾದ ಕತೆಯೊಂದು ವರ್ತಮಾನಕ್ಕೆ ತಳಕುಹಾಕಿಕೊಂಡ ಪರಿಯನ್ನು ಅವರು ವಿವರಿಸುತ್ತಾ ಹೋದರು.ಮನುಷ್ಯರ ಬೆರಳುಗಳನ್ನು ಬೇಡುತ್ತಿದ್ದ ಅಂಗುಲಿಮಾಲನಿಗೂ ಇಂದಿನ ಭಯೋತ್ಪಾದಕರಿಗೂ ಹೋಲಿಕೆಯಿದೆ.

ಕತೆ ಅವರೊಳಗೆ ಮೊಳಕೆಯೊಡೆಯಲು ಇದು ಮುಖ್ಯ ಕಾರಣ. ಇಂಥ ಯುದ್ಧೋತ್ಪಾದನೆಯಲ್ಲಿ ಪ್ರಭುತ್ವದ ಪಾಲೂ ಇದೆಯಂತೆ. ಹಾಗಾಗಿ ಚಿತ್ರದುದ್ದಕ್ಕೂ ಪ್ರಭುತ್ವ ಅಣಕದ ವಸ್ತುವಾಗಿದೆಯಂತೆ. ಇಂಥ ವಿದೂಷಕ ರಾಜನಾಗಿ `ಮುಖ್ಯಮಂತ್ರಿ' ಚಂದ್ರು ಕಾಣಿಸಿಕೊಳ್ಳುತ್ತಿದ್ದಾರೆ.

ಹಿಂಸೆ ಅಹಿಂಸೆಗಳ ನಡುವಿನ ದ್ರವ್ಯ ಚಿತ್ರದಲ್ಲಿರುವುದರಿಂದ ಇದನ್ನು ಯುದ್ಧೋತ್ಪಾದನೆಯ ವಿರುದ್ಧ ಬುದ್ಧೋತ್ಪಾದನೆ ಮೆರೆದ ಚಿತ್ರ ಎಂದು ಬರಗೂರು ಬಣ್ಣಿಸಿಕೊಂಡಿದ್ದಾರೆ. ಭಾಗೀರತಿ ಎಪ್ಪತ್ತೈದನೇ ದಿನದತ್ತ ಮುನ್ನಡೆಯುತ್ತಿದ್ದಾಗ ನಿರ್ಮಾಪಕ ಬಿ.ಕೆ. ಶ್ರೀನಿವಾಸ್ ಅವರ ಬಳಿ ಬರಗೂರರು ಅಂಗುಲಿಮಾಲದ ಕತೆ ವರ್ಣಿಸಿದ್ದರು.

ಮೇಷ್ಟ್ರ ಕನಸಿಗೆ ರೆಕ್ಕೆಪುಕ್ಕ ದೊರೆತದ್ದು ಆಗ. `ಅಂಗುಲಿಮಾಲ'ನನ್ನೂ ನೂರರ ಗಡಿ ದಾಟಿಸಿ ಎಂಬ ಒತ್ತಾಸೆ ಶ್ರೀನಿವಾಸರ ಮಾತಿನಲ್ಲಿತ್ತು.ಸಾಯಿಕುಮಾರ್ ಚಿತ್ರದ ನಾಯಕ. ಅರ್ಥಾತ್ `ಅಂಗುಲಿಮಾಲ'. `ಕುಂಕುಮ ಭಾಗ್ಯ' ಚಿತ್ರದಿಂದ ಹಿಡಿದು ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಮಿಂಚಿದ್ದಾರೆ. ಆದರೆ ಇಂಥ ಚಿತ್ರ ಸಿಕ್ಕಿರಲಿಲ್ಲ ಎನ್ನುತ್ತಾ ಖುಷಿಗೊಂಡರು. ಚಿತ್ರೀಕರಣದ ಸಂದರ್ಭದಲ್ಲಿ ಬರಗೂರರು ನಟನೆಯ ಪಾಠ ಹೇಳಿಕೊಡುತ್ತಿದ್ದ ರೀತಿಯನ್ನು ರಸವತ್ತಾಗಿ ವಿವರಿಸಿದರು.

ಇದೇ ಪ್ರಥಮ ಬಾರಿಗೆ ಹಿರಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಹಿರಿಯ ನಟಿ ಜಯಂತಿ ಅವರು ಇದೇ ಮೊದಲ ಸಲ ಬರಗೂರರ ನಿರ್ದೇಶನದಲ್ಲಿ ನಟಿಸಿದ್ದಾರೆ. ಬುದ್ಧನಾಗಿ ಕಾಣಿಸಿಕೊಂಡಿರುವುದು ನಟ ರಘು ಮುಖರ್ಜಿ. ರಾಧಾ ರಾಮಚಂದ್ರ, ಪಲ್ಲಕ್ಕಿ ರಾಧಾಕೃಷ್ಣ ಮತ್ತಿತರರು ತಾರಾಗಣದಲ್ಲಿದ್ದಾರೆ.

ನಾಗರಾಜ್ ಅಡ್ವಾಣಿ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದು ಸಂಕಲನ ಸುರೇಶ್ ಅರಸು ಅವರದ್ದು. ಈಗಾಗಲೇ ಚಿತ್ರದ ಡಬ್ಬಿಂಗ್ ಕಾರ್ಯ ಆರಂಭಗೊಂಡಿದೆ.ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಹಾಗೂ ನಟಿ ಜಯಮಾಲಾ ಚಿತ್ರತಂಡಕ್ಕೆ ಶುಭಕೋರಿದರು.

ಅಂಗುಲಿಮಾಲ, ಜಯಮಾಲಾ!
ಅಂಗುಲಿಮಾಲ ಶೀರ್ಷಿಕೆಯಲ್ಲೇನೂ ವಿವಾದವಿಲ್ಲ ಎಂದರು ಬಿ.ಕೆ.ಶ್ರೀನಿವಾಸ್. ಹಾಗೆನ್ನುತ್ತಾ ಅವರು ಬೊಟ್ಟು ಮಾಡಿದ್ದು ಹಿರಿಯ ನಟಿ ಜಯಮಾಲಾರತ್ತ. ಚಿತ್ರದ ಶೀರ್ಷಿಕೆಯಲ್ಲೂ, ಜಯಮಾಲಾರ ಹೆಸರಿನಲ್ಲೂ `ಮಾಲ' ಇರುವುದರಿಂದ ಇಂಥದ್ದೊಂದು ಪಂಚ್ ಹೊರಹೊಮ್ಮಿತ್ತು. ಸಭೆಯಲ್ಲಿದ್ದವರು ಕ್ಷಣಕಾಲ ನಗೆಗಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT