ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುನೈಟೆಡ್ ಕೊಡವ ಆರ್ಗನೈಸೇಷನ್ ಅಸ್ತಿತ್ವಕ್ಕೆ

Last Updated 13 ಜನವರಿ 2011, 10:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡವರ ವಿರುದ್ಧ ನಡೆಯುತ್ತಿರುವ ಅಕ್ರಮ-ಅನ್ಯಾಯ, ಅನಾಚಾರಗಳನ್ನು ಬಯಲಿಗೆಳೆಯುವುದರ ಜತೆಗೆ, ನ್ಯಾಯೋಚಿತ ಬೇಡಿಕೆಗಳಿಗೆ ಸ್ಪಂದಿಸಿ ಜನಾಂಗದ ಅಸ್ತಿತ್ವ ಉಳಿಸಿ-ಬೆಳೆಸುವ ಉದ್ದೇಶದಿಂದ ಇದೀಗ ‘ಯುನೈಟೆಡ್ ಕೊಡವ ಆರ್ಗನೈಸೇಷನ್ (ಯುಕೊ)’ ಎಂಬ ಸಂಸ್ಥೆ ಅಸ್ತಿತ್ವಕ್ಕೆ ಬಂದಿದೆ.

ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಲೋಗೋ ಬಿಡುಗಡೆ ಮಾಡಿ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ತಿಳಿಸಿದ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ‘ಯುಕೊ’ ಸಂಘಟನೆಯು ಸಮಸ್ತ ಕೊಡವರ ಧ್ವನಿಯಾಗಿದ್ದು, ಸಂವಿಧಾನ ಬದ್ಧ ಹಾಗೂ ಪಾರದರ್ಶಕತೆಯೊಂದಿಗೆ ಜನಾಂಗದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ದೃಢ ಸಂಕಲ್ಪ ಹೊಂದಿದೆ ಎಂದು ಹೇಳಿದರು.

‘ಕೊಡವರನ್ನು ಜಾಗೃತಗೊಳಿಸಿ ಸಂಘಟನಾತ್ಮಕವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಲಿದೆ. ಮೊದಲ ಹೆಜ್ಜೆಯಾಗಿ ಎಲ್ಲಾ ಕೊಡವ ಹಿರಿಯರು ಹಾಗೂ ಕಿರಿಯರು, ಸಂಘ- ಸಂಸ್ಥೆಗಳು, ರಾಜಕೀಯ ಮುಖಂಡರು, ಎಲ್ಲಾ ಕೊಡವ ಸಮಾಜಗಳ ಹಾಗೂ ಕೊಡವ ಹಿತ ಚಿಂತಕರಾಗಿರುವ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ದಿಟ್ಟ ಹೆಜ್ಜೆಯನ್ನಿಡಲಿದೆ’ ಎಂದು ಹೇಳಿದರು.

ಸಂಘಟನೆಯ ಕಾರ್ಯ ಯೋಜನೆಗಳು: ಕೊಡಗನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ನಗರೀಕರಣ ಅಥವಾ ಪ್ರವಾಸೋದ್ಯಮದ ಹೆಸರಿನಲ್ಲಿ ಹೊರಗಿನಿಂದ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ, ನಾಡಿನ ಮಣ್ಣನ್ನು ಕೊಡವರಲ್ಲಿಯೇ ಉಳಿಸುವ ನಿಟ್ಟಿನಲ್ಲಿ ದಿಟ್ಟವಾದ ನಿರ್ಧಾರ ಕೈಗೊಳ್ಳುವುದು.

ಕೊಡವ ಸಂಸ್ಕೃತಿ ಹಾಗೂ ಸಂಸ್ಕೃತಿಯ ದ್ಯೋತಕವಾದ ಐನ್‌ಮನೆ, ಕೈಮಡ, ಮಂದ್, ಮಾನಿ, ಕ್ಯಾಕೊಳ, ತೂಟ್‌ಂಗಳ, ಮಚಣಿಕಾಡ್ ಮುಂತಾದ ಹೆಗ್ಗುರುತುಗಳ ಪಾವಿತ್ರ್ಯತೆಯನ್ನು ಉಳಿಸಿ ಕ್ಷೀಣಿಸುತ್ತಿರುವ ಕೊಡವತನವನ್ನು ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು.

ಸರ್ಕಾರ ಹಾಗೂ ಸರ್ಕಾರೇತರ ಸಂಘ- ಸಂಸ್ಥೆಗಳಿಂದ ಕೊಡವರಿಗೆ ಆಗುತ್ತಿರುವ ಅನ್ಯಾಯ- ಅನಾಚಾರಗಳನ್ನು ಸಾಂಘಿಕವಾಗಿ ತಡೆಯುವುದು. ಕೊಡಗಿಗೆ ಮಾರಕವಾಗು ವಂತಹ ಜಲ ವಿದ್ಯುತ್, ಹೈಟೆನ್ಶನ್ ವಿದ್ಯುತ್ ಮಾರ್ಗ ಮುಂತಾದ ಯೋಜನೆಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವುದು. ಕೊಡವರ ಮೇಲೆ ನಿರಂತರವಾಗಿ ನಡೆಯುತ್ತಿರುವ ನಕಲಿ ಜಾತಿ ನಿಂದನೆ ಯಂತಹ ದೌರ್ಜನ್ಯಗಳನ್ನು ಸಂಘಟಿತವಾಗಿ ಎದುರಿಸುವುದು.

ಕೊಡವರ ಮೂಲ ನೆಲೆಯಾದ ಐನ್‌ಮನೆ, ಕೈಮಡ, ಮಂದ್-ಮಾನಿ ಇತ್ಯಾದಿ ಹೆಗ್ಗುರುತುಗಳನ್ನು ಶಾಶ್ವತವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ಸಮರ್ಥ ರೀತಿಯಲ್ಲಿ ವ್ಯವಹರಿಸಿ ಯೋಜನೆಗಳನ್ನು ರೂಪಿಸುವುದು. ಕೊಡವರ ರಾಜಕೀಯ ಹಾಗೂ ರಾಜಕೀಯೇತರ ಮತ್ತು ಸಂವಿಧಾನಬದ್ಧ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸುವುದು.

ಪ್ರವಾಸೋದ್ಯಮದ ಹೆಸರಿನಲ್ಲಿ ಕೊಡಗಿನಲ್ಲಿ ಸಮಾಜಘಾತುಕ ಹಾಗೂ ರಾಷ್ಟ್ರದ್ರೋಹಿ ಶಕ್ತಿಗಳು ಆಸ್ತಿ ಖರೀದಿಸುವ ದಂಧೆ ತಪ್ಪಿಸುವ ನಿಟ್ಟಿನಲ್ಲಿ ಪ್ರಯತ್ನ. ಕೊಡವರನ್ನು ಬುಡಕಟ್ಟು ಜನಾಂಗವೆಂದು ಕೇಂದ್ರ ಸರ್ಕಾರ ಘೋಷಿಸುವ ನಿಟ್ಟಿನಲ್ಲಿ ಸಮರ್ಥವಾದ ಯೋಜನೆ ರೂಪಿಸಿ ಹೋರಾಟ ಕೈಗೊಳ್ಳುವುದು. ಕೊಡಗಿನ ಮೂಲಭೂತ ಸೌಕರ್ಯಗಳ ಅನುಷ್ಠಾನದ ವಿಷಯದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯ ಧೋರಣೆ ಬಗ್ಗೆ ಸಂಘಟಿತ ಹೋರಾಟ ನಡೆಸುವುದು ಸಂಘಟನೆಯ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.

ಸಂಘಟನೆಯ ಸಹ ಸಂಚಾಲಕರಾದ ಮಚ್ಚಮಾಡ ಅನೀಶ್ ಮಾದಪ್ಪ, ಮಾದೇಟಿರ ತಿಮ್ಮಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಮಚ್ಚಾರಂಡ ಜಯಂತಿ ಮುದ್ದಯ್ಯ, ಅಂಜಪರವಂಡ ಅನಿತಾ ತಿಮ್ಮಯ್ಯ ಹಾಗೂ ನಂದೇಟಿರ ಕವಿತಾ ಸುಬ್ಬಯ್ಯ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT