ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ಉದ್ಯೋಗ ಖಾತರಿ ಯೋಜನೆ: ವಿಶ್ವಸಂಸ್ಥೆಯಲ್ಲಿ ಅಡ್ವಾಣಿ ಪ್ರಶಂಸೆ

Last Updated 10 ಅಕ್ಟೋಬರ್ 2012, 9:45 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ವಿರೋಧ ಪಕ್ಷಗಳಿಂದ ಯದ್ವಾತದ್ವ ಟೀಕೆಗಳಿಗೆ ಗುರಿಯಾಗುತ್ತಿರುವ ಯುಪಿಎ ಸರ್ಕಾರಕ್ಕೆ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಂದ ವಿಶ್ವಸಂಸ್ಥೆಯಲ್ಲಿ ಪ್ರಶಂಸೆಯ ಸುರಿಮಳೆ.

ಮಂಗಳವಾರ ನಡೆದ ವಿಶ್ವಸಂಸ್ಥೆಯ 67ನೇ ಮಹಾಸಭೆಯಲ್ಲಿ ಯುಪಿಎ ಸರ್ಕಾರದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ಮಗಾರಾಗ್ರಾ ಉದ್ಯೋಗ ಖಾತರಿ ಯೋಜನೆ-ಎಂಜಿಎನ್ಆರ್ ಇಜಿಎ) ಗ್ರಾಮೀಣ ಜನರಲ್ಲಿ ಶಕ್ತಿತುಂಬುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಗೆ ಪುನಃಶ್ಚೇತನ ನೀಡಲು ನೆರವಾಗಿದೆ ಎಂದು ಅವರು ಬಣ್ಣಿಸಿದರು.

ಗ್ರಾಮೀಣಾಭಿವೃದ್ಧಿಯ ಅಡಿಪಾಯ ಕಾರ್ಯಕ್ರಮ ಎಂದೇ ಬಣ್ಣಿಸಲಾಗಿರುವ  ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಯುಪಿಎ ಸರ್ಕಾರವು 2005ರ ಆಗಸ್ಟ್ ತಿಂಗಳಿನಲ್ಲಿ ಅಂಗೀಕರಿಸಿತ್ತು.

~ಈ ಯೋಜನೆಯು ಜಗತ್ತಿನಲ್ಲೇ ಅತ್ಯಂತ ಬೃಹತ್ತಾದ ಕೆಲಸಕ್ಕಾಗಿ ನಗದು ಕಾರ್ಯಕ್ರಮವಾಗಿದ್ದು 530 ಲಕ್ಷ ಬಡ ಗ್ರಾಮೀಣ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ಉದ್ಯೋಗ ಒದಗಿಸುವ ಮೂಲಕ ಅವರ ಅಗತ್ಯಗಳಿಗೆ ಸ್ಪಂದಿಸುತ್ತಿದೆ. ಈ ಉದ್ಯೋಗದಲ್ಲಿ ಶೇಕಡಾ 50ರಷ್ಟು ಕೆಲಸ ಮಹಿಳೆಯರಿಗೆ ಮೀಸಲಾಗಿದೆ~ ಎಂದು ಅಡ್ವಾಣಿ ಹೇಳಿದರು.

ಈ ಕಾರ್ಯಕ್ರಮವು ಸಾಮಾಜಿಕ ಅಸಮಾನತೆ ನಿವಾರಣೆಯಲ್ಲಿ, ಗ್ರಾಮೀಣ ಜನರಿಗೆ ಶಕ್ತಿ ತುಂಬುವಲ್ಲಿ, ಗ್ರಾಮೀಣ ಮೂಲಸವಲತ್ತು ನಿರ್ಮಾಣ ಮಾಡುವಲ್ಲಿ ಮತ್ತು ಆರ್ಥಿಕ ಬೆಳವಣಿಗೆಗೆ ಚೈತನ್ಯ ತುಂಬುವಲ್ಲಿ ನೆರವಾಗಿದೆ ಎಂದು ಅಡ್ವಾಣಿ ~ಸಾಮಾಜಿಕ ಅಭಿವೃದ್ಧಿ~ ಕುರಿತ ತಮ್ಮ ಭಾಷಣದಲ್ಲಿ ವಿವರಿಸಿದರು.

ವಿಶ್ವಸಂಸ್ಥೆ ಮಹಾಅಧಿವೇಶನದ ವಿವಿಧ ಸಮಾವೇಶಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ತೆರಳಿದ ಭಾರತೀಯ ಸಂಸತ್ ಸದಸ್ಯರ ತಂಡದ ಭಾಗವಾಗಿ ಅಡ್ವಾಣಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

 ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು, ಆರ್ಥಿಕವಾಗಿ ದುರ್ಬಲರಾಗಿರುವ ಗುಂಪುಗಳಿಗೆ, ಅಶಕ್ತರಿಗೆ ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಲ್ಲಿ ನೆರವು ನೀಡುವ ಸಲುವಾಗಿ ಭಾರತ ಹಮ್ಮಿಕೊಂಡಿರುವ ಪ್ರಯತ್ನಗಳನ್ನು ಅಡ್ವಾಣಿ ಪಟ್ಟಿ ಮಾಡಿ ವಿವರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT