ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎ ನೀತಿಯಿಂದ ದೇಶಕ್ಕೆ ಸಂಕಷ್ಟ: ಸಿಪಿಐ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆರ್ಥಿಕ ನೀತಿಯಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ ಎಂದು ಆರೋಪಿಸಿರುವ ಸಿಪಿಐ,ದೇಶಕ್ಕೆ ಪರ್ಯಾಯ ಆರ್ಥಿಕ ಮತ್ತು ರಾಜಕೀಯ ನೀತಿಯ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದೆ.

2012ರ ಮಾರ್ಚ್ 27ರಿಂದ 31ರವರೆಗೆ ಬಿಹಾರದ ಪಟ್ನಾದಲ್ಲಿ ನಡೆಯಲಿರುವ ಸಿಪಿಐನ 21ನೇ ಕಾಂಗ್ರೆಸ್‌ನಲ್ಲಿ ಪಕ್ಷ ನೂತನ ಆರ್ಥಿಕ ಮತ್ತು ರಾಜಕೀಯ ನೀತಿಯನ್ನು ದೇಶದ ಮುಂದಿಡಲಿದೆ.

ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ, `ಕೇಂದ್ರದ ಯುಪಿಎ ಸರ್ಕಾರ ಹಣದುಬ್ಬರ, ನಿರುದ್ಯೋಗ ಸಮಸ್ಯೆ, ಕೈಗಾರಿಕಾ ಉತ್ಪಾದನೆಯ ಕುಸಿತ ತಡೆಗಟ್ಟುವಲ್ಲಿ ಸೋತಿದೆ. ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ~ ಎಂದು ದೂರಿದರು.

ದೇಶದ ವಿದೇಶಿ ಸಾಲ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 17ರಷ್ಟು ಏರಿಕೆ ಕಂಡಿದೆ. ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧಿಸಲಾಗಿಲ್ಲ. ಖಾಸಗಿ ಸಹಭಾಗಿತ್ವದ ಹೆಸರಿನಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕ ಕ್ಷೇತ್ರದ ಪ್ರಮುಖ ರಂಗಗಳನ್ನು ಖಾಸಗಿಯವರಿಗೆ ನೀಡುತ್ತಿದೆ. ರಾಷ್ಟ್ರದ ಹಣಕಾಸು ಕ್ಷೇತ್ರವನ್ನೂ ಮುಕ್ತವಾಗಿಸುವ ಮಾತು ಪ್ರಧಾನಿಯವರಿಂದ ಬರುತ್ತಿದೆ. ಇದು ರಾಷ್ಟ್ರಹಿತಕ್ಕೆ ಮಾರಕ ಎಂದು ಯುಪಿಎ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೋಮು ಹಿಂಸಾಚಾರ: `ಕೋಮು ಹಿಂಸಾಚಾರ ತಡೆಗಟ್ಟಲು ಕಠಿಣ ಕಾನೂನಿನ ಅಗತ್ಯ ಇದೆ. ಆದರೆ ಅದು ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತಹ ಕಾಯ್ದೆ ಆಗಿರಬಾರದು~ ಎಂದರು.

`ನಿಲುವು ಸರಿಯಲ್ಲ~
: ಗಾಂಧೀವಾದಿ ಅಣ್ಣಾ ಹಜಾರೆ ಪ್ರತಿಪಾದಿಸುತ್ತಿರುವ ಚುನಾವಣಾ ಸುಧಾರಣೆ ಕುರಿತು ಪ್ರತಿಕ್ರಿಯಿಸಿದ ಅವರು, `ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರ ಮತದಾರರಿಗೆ ಇರಬೇಕು ಎಂಬ ಹಜಾರೆ ಅವರ ಪ್ರತಿಪಾದನೆ ಪ್ರಸ್ತುತ ಸ್ಥಿತಿಯಲ್ಲಿ ಪ್ರಾಯೋಗಿಕವಲ್ಲ~ ಎಂದರು.


ಭೂಸ್ವಾಧೀನ ಮಸೂದೆ: `ರೈತರ ಮತ್ತು ಕೃಷಿ ಕ್ಷೇತ್ರದ ಹಿತವನ್ನು ಕಾಯಬಲ್ಲ ಕಠಿಣ ಕಾಯ್ದೆ ಬೇಕು~ ಎಂದ ರಾಜಾ, `ಭೂಸ್ವಾಧೀನ ಮತ್ತು ಪರಿಹಾರ ಮಸೂದೆಯನ್ನು ಸರ್ಕಾರ ಮುಂಗಾರು ಅಧಿವೇಶನದ ಅಂತ್ಯದಲ್ಲಿ ಸಂಸತ್ತಿನ ಮುಂದಿಟ್ಟಿತು.ಇಂಥ ಪ್ರಮುಖ ಮಸೂದೆಯನ್ನು ಅಧಿವೇಶನದ ಆರಂಭದಲ್ಲಿಯೇ ಸಂಸತ್ತಿನ ಮುಂದಿಡಬೇಕಿತ್ತು~ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಸಿಸಿಐ ಉತ್ತರದಾಯಿತ್ವ: ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಾವು ಯಾರಿಗೂ ಉತ್ತರದಾಯಿ ಅಲ್ಲ ಎನ್ನುತ್ತಿವೆ. ಈ ಸಂಸ್ಥೆಗಳನ್ನು ಕೇಂದ್ರ ಕ್ರೀಡಾ ಇಲಾಖೆ ಅಥವಾ ಗೃಹ ಇಲಾಖೆಗೆ ಉತ್ತರದಾಯಿ ಆಗಿರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT