ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಗೆ ‘ವೈರಸ್’

ಕಾಂಗ್ರೆಸ್‌ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ
Last Updated 8 ಏಪ್ರಿಲ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಕಂಪ್ಯೂಟರ್‌ ವೈರಸ್‌ಗೆ ಹೋಲಿಸಿದ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ‘ಈ ವೈರಸ್‌ ಕಿತ್ತೊಗೆಯದ ಹೊರತು ಈ ದೇಶಕ್ಕೆ ದುರಾಡಳಿತದಿಂದ ಮುಕ್ತಿ ಇಲ್ಲ’ ಎಂದು ಘೋಷಿಸಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ಮೈದಾನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಬೃಹತ್‌ ಚುನಾವಣಾ ಲಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಎಂತಹದ್ದೇ ಬ್ರ್ಯಾಂಡ್‌ನ ದುಬಾರಿ ಕಂಪ್ಯೂಟರ್‌ ಖರೀದಿಸಿದರೂ ಅದರ ಒಳಗೆ ಒಮ್ಮೆ ವೈರಸ್‌ ಹೊಕ್ಕಿದರೆ ಅದು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅದೇ ರೀತಿ ಯುಪಿಎ ಸರ್ಕಾರದೊಳಗೂ ವೈರಸ್‌ ನುಸುಳಿದ್ದು, ಅದನ್ನು ಬೇರು ಸಮೇತ ಕಿತ್ತು ಹಾಕಬೇಕು. ಅದರ ನಂತರವೇ ಈ ದೇಶಕ್ಕೆ ಮುಕ್ತಿ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕಿಕ್ಕಿರಿದು ಸೇರಿದ್ದ ಜನಸ್ತೋಮ ಮೋದಿ ಅವರ ಮಾತಿನ ಮೋಡಿಗೆ ಮರುಳಾಗಿ, ಜೈಕಾರ ಕೂಗಿತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ  ವಿರುದ್ಧ ವ್ಯಂಗ್ಯ ಮಿಶ್ರಿತ ಧಾಟಿಯಲ್ಲಿ ಟೀಕೆ ಮಾಡಿದಾಗ ಜನರಿಂದ ಭಾರಿ ಕರತಾಡನದ ಪ್ರತಿಕ್ರಿಯೆ ಬಂತು.

‘ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ದೇಶದಲ್ಲಿ ಐಟಿ ಕಾಯ್ದೆ ಜಾರಿಗೆ ಬಂತು. ಅದರ ನಂತರವೇ ಆ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದ್ದು. ಈ ಸತ್ಯವನ್ನು ಮರೆಮಾಚಿ ತಮ್ಮ ತಂದೆ ಕಾಲದಲ್ಲಿ ಐಟಿ ಕ್ರಾಂತಿಯಾಯಿತು ಎಂದು ರಾಹುಲ್‌ ಗಾಂಧಿ ಹೇಳುತ್ತಿ­ದ್ದಾರೆ. ಇಂತಹ ವಿಷಯಗಳಲ್ಲಾದರೂ ಯುವರಾಜ ಸತ್ಯ ಹೇಳದೆ, ಜನರನ್ನು ದಾರಿತಪ್ಪಿಸುವ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಟೀಕಿಸಿದರು.

ಒಮ್ಮೆ ಅವಕಾಶ ಕೊಡಿ: ‘ವಾಜಪೇಯಿ ಸರ್ಕಾರದಲ್ಲಿ ಶೇ 40ರಷ್ಟು ಇದ್ದ ಐಟಿ ಉತ್ಪನ್ನಗಳ ರಫ್ತು ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶೇ 9ಕ್ಕೆ ಕುಸಿದಿದೆ. ಇದೇ ಪರಿಸ್ಥಿತಿ ಮುಂದು­ವರಿದರೆ ಮುಂದಿನ ದಿನಗಳಲ್ಲಿ ದೇಶದ ಪರಿಸ್ಥಿತಿ ಅಧೋಗತಿಗೆ ಇಳಿಯಲಿದೆ. ಕನಸು ಕಾಣುವ ಯುವಕರು ನಿರಾಶ­ರಾಗುತ್ತಿದ್ದು, ಇದಕ್ಕೆ ಬಿಜೆಪಿ ಒಂದೇ ಪರ್ಯಾಯ. ದೇಶದಲ್ಲಿ ಕಮಲ ಅರಳಿ­ದರೆ ಇವೆಲ್ಲದಕ್ಕೂ ಉತ್ತರ ಸಿಗಲಿದೆ. ಜನರ ಕನಸುಗಳನ್ನು ನನಸು ಮಾಡುವ ಕಡೆಗೆ ಆಡಳಿತ ಯಂತ್ರವನ್ನು ಕೊಂಡೊ­ಯ್ಯುತ್ತೇನೆ. ಈ ಕಾರಣಕ್ಕೆ ಒಮ್ಮೆ ಬಿಜೆಪಿಗೆ ಮತ ನೀಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT