ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ರಾಜ್ಯದ 50ಕ್ಕೂ ಹೆಚ್ಚು ಅಭ್ಯರ್ಥಿ ಆಯ್ಕೆ

Last Updated 4 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2011ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ರಾಜ್ಯದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇಂದ್ರದ ವಿವಿಧ ನಾಗರಿಕ ಸೇವಾ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

ದೇಶದಾದ್ಯಂತ ಒಟ್ಟು 910 ಅಭ್ಯರ್ಥಿಗಳು ಐಎಎಸ್, ಐಎಫ್‌ಎಸ್, ಐಪಿಎಸ್ ಹಾಗೂ ಕೇಂದ್ರ ಸೇವೆಯ `ಎ~ ಮತ್ತು `ಬಿ~ ದರ್ಜೆಯ ಹುದ್ದೆಗಳಿಗೆ ಆಯ್ಕೆ ಆಗಿದ್ದಾರೆ. ಈ ಹುದ್ದೆಗಳಿಗೆ ಯುಪಿಎಸ್‌ಸಿ 2011ರ ಅಕ್ಟೋಬರ್-ನವೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಸಿತ್ತು. ಅದರಲ್ಲಿ ಆಯ್ಕೆ ಆದವರಿಗೆ 2012ರ ಮಾರ್ಚ್- ಏಪ್ರಿಲ್‌ನಲ್ಲಿ ಸಂದರ್ಶನ ನಡೆಸಿತ್ತು. ಇದೀಗ ಫಲಿತಾಂಶ ಪ್ರಕಟಿಸಿದೆ. ರಾಜ್ಯ ಗುಪ್ತದಳ ಐಜಿಪಿ ಗೋಪಾಲ ಬಿ.ಹೊಸೂರು ಅವರ ಪುತ್ರ ಶ್ರೇಯಸ್ ಜಿ.ಹೊಸೂರು 532ನೇ ರ‌್ಯಾಂಕ್ ಪಡೆದು, ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆಯ್ಕೆಯಾದವರಲ್ಲಿ ಮುಖ್ಯ ಪರೀಕ್ಷೆಯಲ್ಲಿ ಕನ್ನಡವನ್ನು ಒಂದು ವಿಷಯವಾಗಿ ತೆಗೆದುಕೊಂಡಿದ್ದಾರೆ ಎಂಬುದು ವಿಶೇಷ.

ಆಯ್ಕೆಯಾದ ರಾಜ್ಯದ ಪ್ರತಿಭೆಗಳು: ಎಸ್. ಸುಹಾಸ್- 91ನೇ ರ‌್ಯಾಂಕ್, ಕೆ. ರಾಕೇಶ್ ಕುಮಾರ್- 100, ಬಿ.ಆರ್.ವರುಣ್-142, ಆರ್. ನವೀನ್ ಕುಮಾರ್-149, ಎಸ್. ಎಂ. ವಿಜಯ್ ಕುಮಾರ್-152, ನಿತೀಶ್ ಪಾಟೀಲ್- 154, ವಿಕ್ರಾಂತ್ ಪಾಟೀಲ್- 222,  ಆರ್. ಯಶಸ್- 237, ಐ. ಪಿ. ದೀಪ್ತಿ- 273, ಕೆ. ಕೃಷ್ಣ- 310, ಸಿದ್ಧಲಿಂಗಯ್ಯ ಎಸ್. ಹಿರೇಮಠ್ -315, ಎಸ್. ಪ್ರದೀಪ್-343, ಸಿ.ಎಸ್.ಪವನ್- 355, ಎಚ್.ಎಸ್.ನಾಡಿಗ್ ವಿಶ್ವಾಸ್- 378, ಡಿ.ಡಿ.ಶಾಮಲಾ-391, ಪಿ.ಎಸ್.ಗಿರೀಶ್- 394ನೇ ರ‌್ಯಾಂಕ್ ಪಡೆದುಕೊಂಡಿದ್ದಾರೆ.

ದೀಪಕ್ ರಾಘು- 395, ಭೀಮಾಶಂಕರ್ ಎಸ್.ಗುಳೇದ- 415, ಎಸ್.ಸಿ.ಅಕ್ಷಯ್- 464, ದೀಪಾ.ಜಿ.ಎಸ್- 482, ಕಾರ್ತಿಕ್ ವಸಂತ್ ಮಾಧವ್ ಹೆಗಡೆ ಕಟ್ಟೆ- 493, ವಿ. ಸತೀಶ್-500, ಬಿ.ಎಸ್.ವರುಣ್-503, ಅಶ್ವಿನ್ ಡಿ. ಗೌಡ- 522,  ಅಕ್ಷಯ ಭಾರದ್ವಾಜ್- 541, ಎ.ಎಚ್.ಹರ್ಷ- 591, ಜಿ.ಎಚ್.ಯತೀಶಚಂದ್ರ- 603, ಎಸ್.ದಿವ್ಯಾ- 606, ವರುಣ್ ರಂಗಸ್ವಾಮಿ- 627, ದೇವೇಂದ್ರ-660, ಎಂ.ಭೂಪತಿರಾಜ್- 661, ರಶ್ಮಿ ರಮೇಶ್ ದೊಡ್ಡಮನೆ- 677, ಡಿ.ಎಸ್.ಸಾಮ್ರಾಟ್ ಗೌಡ- 684, ಅರುಣೋದಯ- 698, ಎಸ್.ಪ್ರಿಯಾಂಕಾ- 711, ಎಚ್.ಇ.ಹರ್ಷ- 765,  ಜಿ.ಸತೀಶ್-768, ಜಿ. ರಾಧಿಕಾ-772, ಆರ್.ಸ್ನೇಹಲ್- 789, ಬಸಪುರಂ ಜಯಣ್ಣ ಕೃಪಾಕರ- 796, ಜೆ.ಯು.ಚಂದ್ರಕಲಾ- 800, ಎಂ.ಎಸ್.ತೇಜ್‌ಕುಮಾರ್, 801, ಜಗದೀಶ್ ಕೆ.ನಾಯಕ್- 804, ರಾಜೀವ್ ಎಸ್.ಕಿತ್ತೂರು- 811, ವನಶ್ರೀ ಹುಲ್ಲಣ್ಣನವರ- 815, ಬಸವರಾಜ್ ಎಂ.ಪಾಟೀಲ್- 816,  ಶಿರೀಷ ಸದಾಶಿವ ಕಾಂಬ್ಳೆ- 846, ಜಿ. ಕಿರಣ್-859,  ಬಿ.ಎ.ಕೇಶವಮೂರ್ತಿ- 867, ಎಂ.ಎಸ್.ಯಶವಂತ ಕುಮಾರ್- 871, ಬಿ.ಆರ್.ಮಹೇಶ್- 902ನೇ ರ‌್ಯಾಂಕ್ ಪಡೆದಿದ್ದಾರೆ. ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ರಾಜ್ಯದಿಂದ ಆಯ್ಕೆಯಾಗಿರುವ ಹಲವರು ದೆಹಲಿ, ಬೆಂಗಳೂರು, ಹೈದರಾಬಾದ್‌ನ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದಾರೆ. ಬೆಂಗಳೂರಿನ ಜೆ.ಎಸ್.ಎಸ್, ಯೂನಿವರ್ಸಲ್ ಕೋಚಿಂಗ್ ಸೆಂಟರ್, ರಾವ್ಸ್, ಸ್ಪರ್ಧಾಚೈತ್ರ, ಹಿಮಾಲಯ, ಕೃಷಿಕ್ ಸಮಾಜ ಸೇರಿದಂತೆ ಕೆಲ ತರಬೇತಿ ಕೇಂದ್ರಗಳಲ್ಲಿ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ಮತ್ತು ತರಬೇತಿ ಪಡೆದಿದ್ದಾರೆ.

ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ಪದವೀಧರರು ಈ ಬಾರಿ ಹೆಚ್ಚಾಗಿ ಆಯ್ಕೆಯಾಗಿದ್ದು, ಬಿ.ಎ ಪದವೀಧರರು ಕಡಿಮೆ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ, ಎಂಜಿನಿಯರಿಂಗ್, ವೈದ್ಯಕೀಯ ವಿಷಯಗಳ ಪದವೀಧರರು ಕನ್ನಡ ಸಾಹಿತ್ಯ, ಸಾರ್ವಜನಿಕ ಆಡಳಿತ, ಸಮಾಜ ಶಾಸ್ತ್ರ, ಇತಿಹಾಸದಂತಹ ಮಾನವಿಕ ಶಾಸ್ತ್ರಗಳನ್ನು ಮುಖ್ಯ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಂಡು ತೇರ್ಗಡೆ ಹೊಂದಿರುವುದು ವಿಶೇಷವಾಗಿದೆ.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉಪ ವಿಭಾಗಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವರು ಸಹ ಕೇಂದ್ರ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ.

ರಾಜ್ಯದಿಂದ ಆಯ್ಕೆಯಾಗಿರುವ ಕೆಲ ಅಭ್ಯರ್ಥಿಗಳು `ಪ್ರಜಾವಾಣಿ~ ಜತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಅವರ ಜತೆ ನಡೆಸಿದ ಚುಟುಕು ಸಂದರ್ಶನದ ವಿವರ ಇಲ್ಲಿದೆ.

ಮೇಜರ್ ಸಿದ್ದಲಿಂಗಯ್ಯ ಎಸ್. ಹಿರೇಮಠ (ರ‌್ಯಾಂಕ್ 315): ವಿಜಾಪುರದ ಮಕನಾಪುರ ಗ್ರಾಮದವರಾದ ಸಿದ್ದಲಿಂಗಯ್ಯ ಅವರು ಎಂಟು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ, ನಂತರ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದ್ದರು. ಅವರು ಪ್ರಸ್ತುತ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ತಂದೆ ನಿವೃತ್ತ ಶಿಕ್ಷಕ ಶಿವಯ್ಯ, ತಾಯಿ ಶಿಕ್ಷಕಿ ಮಲ್ಲಿಕವ್ವ.

ವಿಜಾಪುರದ ಸೈನಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ ಪಡೆದ ಅವರು, ಅಲ್ಲಿನ ಸಂಗನ ಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಬಿ.ಎ (ಎಚ್‌ಇಪಿ) ಪದವಿ ಪಡೆದರು. 2001ರಲ್ಲಿ ಸೇನೆ ಸೇರಿದ ಅವರು ಕಾರ್ಗಿಲ್, ಮಧ್ಯಪ್ರದೇಶ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ.

`ಮುಖ್ಯ ಪರೀಕ್ಷೆಯಲ್ಲಿ ಸಾರ್ವಜನಿಕ ಆಡಳಿತ ಮತ್ತು ಕನ್ನಡ ಸಾಹಿತ್ಯ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದೆ. ಗ್ರಾಮೀಣ ಹಾಗೂ ಬಡ ಜನತೆಗೆ ಸರ್ಕಾರಿ ಸವಲತ್ತುಗಳು ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ನಾನು ನಿಷ್ಠೆಯಿಂದ ಕಾರ್ಯ ನಿರ್ವಹಿಸುವೆ~ ಎಂದು ಅವರು ಹೇಳುತ್ತಾರೆ.

ಕಷ್ಟಪಟ್ಟು ಓದಿದರೆ ಏನನ್ನಾದರೂ ಸಾಧಿಸಬಹುದು. ಛಲ ಮತ್ತು ಪ್ರಾಮಾಣಿಕ ಪ್ರಯತ್ನ ಇರಬೇಕು. ಗ್ರಾಮೀಣ ಪ್ರತಿಭೆಗಳು ತಮ್ಮ ಆತ್ಮ ಸ್ಥೈರ್ಯ ಹೆಚ್ಚಿಸಿಕೊಂಡು ಅಧ್ಯಯನ ನಡೆಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಜಿ. ರಾಧಿಕಾ (ರ‌್ಯಾಂಕ್ 772): ಬೆಂಗಳೂರು ಮೂಲದವರಾದ ರಾಧಿಕಾ ಅವರ ತಂದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (ಬಿಎಂಟಿಸಿ) ಚಾಲಕರಾಗಿ ನಿವೃತ್ತಿ ಹೊಂದಿರುವ ಎನ್. ಗಂಗಪ್ಪ. ತಾಯಿ ಮಂಜುಳಾ. ಪಿಇಎಸ್‌ಐಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಕೋರ್ಸ್ ವ್ಯಾಸಂಗ ಮಾಡಿ ಪದವಿ ಪಡೆದಿರುವ ಅವರು, ನ್ಯಾಷನಲ್ ಇನ್ಶುರೆನ್ಸ್ ಕಂಪೆನಿಯಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 2009ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‌ಸಿ ಪರೀಕ್ಷೆಯತ್ತ ಮನಸ್ಸು ಕೇಂದ್ರೀಕರಿಸಿ ಅಧ್ಯಯನ ಆರಂಭಿಸಿ ಇದೀಗ ಯಶಸ್ಸು ಕಂಡಿದ್ದಾರೆ.

ಈಗಾಗಲೇ ಕೆಪಿಎಸ್‌ಸಿ ನಡೆಸಿರುವ (2010-11) ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜ್ಯ ಲೆಕ್ಕಪತ್ರ ಇಲಾಖೆಯ ಉಪ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ ಸಾರ್ವಜನಿಕ ಆಡಳಿತ ಮತ್ತು ಭೂಗೋಳಶಾಸ್ತ್ರ ಆಯ್ಕೆ ಮಾಡಿಕೊಂಡಿದ್ದ ಅವರು, ದೆಹಲಿಯ ವಾಜೀರಾಮ್ಸ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. `ಈಗ ದೊರೆತಿರುವ ರ‌್ಯಾಂಕಿಂಗ್ ಸಮಾಧಾನ ತಂದಿಲ್ಲ. ಇದೇ 20ರಂದು ನಡೆಯಲಿರುವ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದಾಗಿ~ ಅವರು ತಿಳಿಸುತ್ತಾರೆ.

ಎಚ್.ಈ.ಹರ್ಷ (765) : ಹಾಸನ ಜಿಲ್ಲೆ ದೊಡ್ಡಹೋಬಳಿಯ ಕಬಳಿ ಹೊಸಹಳ್ಳಿ ಗ್ರಾಮದವರಾದ ಹರ್ಷ ಎರಡನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಅವರ ತಂದೆ ಈರೇಗೌಡ, ಹಾಸನದ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ತಾಯಿ ಲಕ್ಷ್ಮಮ್ಮ. ಬಿ.ಇ (ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್) ಪದವೀಧರರಾದ ಅವರು ಮುಖ್ಯ ಪರೀಕ್ಷೆಯಲ್ಲಿ ಸಾರ್ವಜನಿಕ ಆಡಳಿತ ಮತ್ತು ಸಮಾಜಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಜನತೆಗೆ ಸರ್ಕಾರಿ ಸೇವೆ ಮತ್ತು ಸೌಲಭ್ಯಗಳು ದೊರೆಯುವಂತೆ ಮಾಡಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಎಂದು ಅವರು ಹೇಳುತ್ತಾರೆ.

ಡಾ. ಜಗದೀಶ್ ನಾಯಕ್ (ರ‌್ಯಾಂಕ್ 804): ವಿಜಾಪುರದ ಸಿಂಧಗಿ ತಾಲ್ಲೂಕಿನ ಗುತ್ತರಗಿ ಗ್ರಾಮದವರಾದ ಡಾ. ಜಗದೀಶ್ ಅವರ ತಂದೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಟಿ.ನಾಯಕ್, ತಾಯಿ ರುಕ್ಮಬಾಯಿ. ಆಲಮಟ್ಟಿಯಲ್ಲಿ ದ್ವಿತೀಯ ಪಿ.ಯು (ಪಿಸಿಎಂಬಿ) ಪೂರೈಸಿದ ಅವರು ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪಡೆದರು.

ನಾಲ್ಕನೇ ಪ್ರಯತ್ನದಲ್ಲಿ ಅವರಿಗೆ ಈ ಯಶಸ್ಸು ದೊರೆತಿದೆ. ಕೆಪಿಎಸ್‌ಸಿ 2010-11ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅವರು ಉಪ ವಿಭಾಗಾಧಿಕಾರಿಯಾಗಿ ಆಯ್ಕೆ ಕೂಡ ಆಗಿದ್ದಾರೆ. ಸದ್ಯದಲ್ಲಿಯೇ ನೇಮಕಾತಿ ಆದೇಶವನ್ನು ಪಡೆಯಲಿರುವ ಅವರು ಕೇಂದ್ರ ಸೇವೆಗೂ ಆಯ್ಕೆಯಾಗಿದ್ದಾರೆ.

`ಮುಖ್ಯ ಪರೀಕ್ಷೆಯಲ್ಲಿ ನನ್ನ ಆಯ್ಕೆ ಇತಿಹಾಸ ಮತ್ತು ಸಮಾಜ ಶಾಸ್ತ್ರ ವಿಷಯಗಳಾಗಿತ್ತು. ಎಲ್ಲಿಯೂ ತರಬೇತಿ ಪಡೆಯದೆ ಸ್ನೇಹಿತರು ಮತ್ತು ಹಿರಿಯರ ಮಾರ್ಗದರ್ಶನದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು~ ಎಂದು ಅವರು ಸ್ಮರಿಸುತ್ತಾರೆ. ಶಿಕ್ಷಕನ ಮಗನಾಗಿ ಬಡತನದಲ್ಲಿಯೇ ಬೆಳೆದು ಬಂದೆ. ಅದು ನನ್ನಲ್ಲಿ ಛಲ ಹುಟ್ಟಿಸಿತು. ಸತತ ಪ್ರಯತ್ನದಿಂದ ಮೇಲೇರಿದ್ದೇನೆ. 804ನೇ ರ‌್ಯಾಂಕ್ ನನಗೆ ತೃಪ್ತಿ ತಂದಿಲ್ಲ. ಪ್ರಯತ್ನ ಮುಂದುವರೆಸುತ್ತೇನೆ. ದೊರೆಯುವ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಜನ ಸೇವೆ ಮಾಡುತ್ತೇನೆ~ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT